Kim Jong Un: ಸರ್ವಾಧಿಕಾರಿಗೆ ಸೋಲು ಗೆಲುವಿನ ಮೆಟ್ಟಿಲು, ಹುಷಾರ್!
ಸಿಯೋಲ್: ಉತ್ತರ ಕೊರಿಯಾ ಮತ್ತೊಮ್ಮೆ ಗುಡುಗಲು ಸಜ್ಜಾಗಿದೆ. ಅದರಲ್ಲೂ ಮಿಲಿಟರಿ ಉಪಗ್ರಹ ಉಡಾವಣೆ ಮೂಲಕ ಶಾಕ್ ಕೊಡಲು ಸಜ್ಜಾಗಿದೆ. ಕಳೆದ ಮೇ ತಿಂಗಳಲ್ಲಿ ಇದೇ ರೀತಿ ಮಿಲಿಟರಿ ಸ್ಯಾಟಲೈಟ್ ಉಡಾವಣೆಗೆ ಯತ್ನಿಸಿದ್ದ ಉತ್ತರ ಕೊರಿಯಾ ಸೋತಿತ್ತು. ಈಗ ಮತ್ತೊಮ್ಮೆ ತನ್ನ ಪ್ರಯತ್ನಕ್ಕೆ ಕೈಹಾಕಲು ಸಜ್ಜಾಗಿದೆ. ಈ ಬಗ್ಗೆ ದಕ್ಷಿಣ ಕೊರಿಯಾ ಭಯ ಹೊರಹಾಕಿದೆ.
ಉತ್ತರ ಕೊರಿಯಾ ಮಿಲಿಟರಿ ಉಪಗ್ರಹ ಉಡಾವಣೆಗೆ ಹಲವು ವರ್ಷದಿಂದ ಪ್ರಯತ್ನಿಸಿದೆ. ಆದ್ರೆ ಅದು ಸಾಧ್ಯವಾಗಿಲ್ಲ ಹೀಗಾಗಿ ಸಾಕಷ್ಟು ದಿನದಿಂದ ಉಡಾವಣೆಗೆ ಕಾದು ಕುಳಿತಿತ್ತು. ಮೇನಲ್ಲಿ ಉಡಾವಣೆ ಮಾಡಿದ್ದ ಉತ್ತರ ಕೊರಿಯಾದ ಮೊದಲ ಮಿಲಿಟರಿ ಸ್ಯಾಟಲೈಟ್ ಫೇಲ್ ಆಗಿ, ತೀವ್ರ ಮುಖಭಂಗ ಎದುರಾಗಿತ್ತು. ಲಾಂಚ್ ಮಾಡಿದ ಕೆಲವೇ ನಿಮಿಷದಲ್ಲಿ ಅದು ಸಮುದ್ರಕ್ಕೆ ಬಿದ್ದು ಹೋಗಿತ್ತು. ಆದರೆ ಈ ಸೋಲಿಗೆ ಸೇಡು ತೀರಿಸಿಕೊಳ್ಳಲು ಉತ್ತರ ಕೊರಿಯಾ ಕಾದು ಕುಳಿತು, ಆಗಸ್ಟ್ ಕೊನೆಯಲ್ಲಿ ಇಲ್ಲ ಅಂದ್ರೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಮತ್ತೊಮ್ಮೆ ಈ ಸಾಹಸ ಮಾಡಲು ಸಜ್ಜಾಗಿದೆ ಎಂದು ದಕ್ಷಿಣ ಕೊರಿಯಾ ಆರೋಪಿಸಿದೆ.

ಸೋಲಿನಿಂದ ಸರ್ವಾಧಿಕಾರಿಗೆ ಶಾಕ್..!
ಉತ್ತರ ಕೊರಿಯಾ ತಂತ್ರಜ್ಞಾನದ ವಿಚಾರದಲ್ಲಿ ಅಷ್ಟೊಂದು ಮುಂದೆ ಇಲ್ಲ. ಹೀಗಾಗಿಯೇ 2ನೇ ಹಂತದಲ್ಲಿ ಇಂಜಿನ್ ಸಮಸ್ಯೆಯಿಂದ ಸೋತು ಹೋಗಿತ್ತು. ಚೋಲಿಮಾ-1 ರಾಕೆಟ್ ಮೊದಲ ಹಂತದ ಹಾರಾಟವನ್ನು ಪೂರ್ಣಗೊಳಿಸಿತ್ತು. ಆದರೆ 2ನೇ ಹಂತದಲ್ಲಿ ಇಂಜಿನ್ ಕೈಕೊಟ್ಟಿದ್ದ ಪರಿಣಾಮ ಸರ್ವಾಧಿಕಾರಿಯ ಲೆಕ್ಕಾಚಾರವೆ ಉಲ್ಟಾ ಆಗಿತ್ತು. ಕಿಮ್ ಜಾಂಗ್ ಉನ್ ನಿರ್ಮಿಸಿದ್ದ ಕನಸಿನ ಉಪಗ್ರಹ ಸಮುದ್ರಕ್ಕೆ ಬಿದ್ದಿತ್ತು. ಕೂಡಲೇ ಅದನ್ನು ಉತ್ತರ ಕೊರಿಯಾ ಸೇನೆ ಎಳೆದು ತಂದು ಹೊಸ ಪ್ರಯತ್ನದಲ್ಲಿ ನಿರತವಾಗಿತ್ತು. ಇದೀಗ ಉತ್ತರ ಕೊರಿಯಾದ ಶತ್ರು ದಕ್ಷಿಣ ಕೊರಿಯಾ ನೀಡಿರುವ ಮಾಹಿತಿ ಪ್ರಕಾರ ಸೆಪ್ಟೆಂಬರ್ 9ಕ್ಕೆ ಮತ್ತೆ ಉತ್ತರ ಕೊರಿಯಾ ತನ್ನ ಮಿಲಿಟರಿ ಉಪಗ್ರಹ ಉಡಾಯಿಸುವ ಸಾಧ್ಯತೆ ಇದೆ.
ಸರ್ವಾಧಿಕಾರಿಗೆ ಉಪಗ್ರಹದ ಮೇಲೂ ಹುಚ್ಚು
ಕಿಮ್ ಜಾಂಗ್ ಉನ್ ಕಳೆದ ತಿಂಗಳು ಹಲವು ಕ್ಷಿಪಣಿ ಪ್ರಯೋಗ ನಡೆಸಿದ್ದ. ಆ ಪೈಕಿ ಕೆಲವು ಮಿಸೈಲ್‌ಗಳು ಅಮೆರಿಕದ ಪ್ರಮುಖ ನಗರಗಳ ಮೇಲೆಯೂ ಕ್ಷಣಮಾತ್ರದಲ್ಲಿ ದಾಳಿ ಮಾಡುವ ಸಾಮರ್ಥ್ಯ ಹೊಂದಿವೆ. ಯುರೋಪ್ ದೇಶಗಳಿಗೂ ಹೊಸ ಕ್ಷಿಪಣಿಯ ಭಯ ಶುರುವಾಗಿತ್ತು. ಹೀಗೆ ತನ್ನ ಕ್ಷಿಪಣಿಗಳ ಮೂಲಕ ಭಯ ಹುಟ್ಟಿಸುವ ಸರ್ವಾಧಿಕಾರಿಗೆ ಉಪಗ್ರಹದ ಮೇಲೂ ಹುಚ್ಚು ಹಿಡಿದಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ತನ್ನ ಮೊದಲ ಮಿಲಿಟರಿ ಉಪಗ್ರಹವನ್ನ ಉಡಾಯಿಸಲು ಉತ್ತರ ಕೊರಿಯಾ ಶಪಥ ಮಾಡಿದೆ.

ಎಚ್ಚರಿಕೆ ನೀಡಿರುವ ದೊಡ್ಡಣ್ಣ ಅಮೆರಿಕ
ಉತ್ತರ ಕೊರಿಯಾ ಏನೇ ಮಾಡಿದರೂ ಮೊದಲು ಅಪಾಯ ಎದುರಾಗುವುದು ಈ ಜಗತ್ತಿನ ದೊಡ್ಡಣ್ಣ ಎಂಬ ಬಿರುದು ಪಡೆದಿರುವ ಅಮೆರಿಕಗೆ. ಈಗಲೂ ಅಷ್ಟೇ ಉತ್ತರ ಕೊರಿಯಾದ ಮಿಲಿಟರಿ ಉಪಗ್ರಹದ ಬಗ್ಗೆ ಅಮೆರಿಕ ಎಚ್ಚರಗೊಂಡಿದೆ. ಕೆಲವು ತಿಂಗಳ ಹಿಂದೆ ಎಚ್ಚರಿಕೆ ಸಂದೇಶ ರವಾನಿಸಿತ್ತು ಅಮೆರಿಕ. ಈಗ ಮತ್ತೊಮ್ಮೆ ತನ್ನ ಉಪಗ್ರಹ ಉಡಾವಣೆಗೆ ಉತ್ತರ ಕೊರಿಯಾ ಸಜ್ಜಾಗುತ್ತಿರುವ ಬೆನ್ನಲ್ಲೇ ಮತ್ತೆ ಅಮೆರಿಕ ಆಕ್ರೋಶ ಹೊರಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಟ್ನಲ್ಲಿ ತನ್ನ ವಿಚಿತ್ರ ರೂಲ್ಸ್ ಹಾಗೂ ವಿಚಿತ್ರ ವರ್ತನೆ ಮೂಲಕ ಭಯ ಹಟ್ಟಿಸುತ್ತಿರುವ ಉತ್ತರ ಕೊರಿಯಾ ಅಧ್ಯಕ್ಷ ಅಲಿಯಾಸ್ ಸರ್ವಾಧಿಕಾರಿ ಮತ್ತೊಂದು ಶಾಕ್ ಕೊಟ್ಟಿದ್ದಾನೆ. ಕಿಮ್ ಜಾಂಗ್ ಉನ್ ನೇತೃತ್ವದಲ್ಲಿ ಉತ್ತರ ಕೊರಿಯಾ ಉಪಗ್ರಹ ಉಡಾಯಿಸಲು ಸಿದ್ಧತೆ ನಡೆಸಿದೆ. ದಕ್ಷಿಣ ಕೊರಿಯಾ ತನ್ನ ರಹಸ್ಯ ಮಾಹಿತಿದಾರರ ಮೂಲಕ ತರಿಸಿಕೊಂಡಿರುವ ಸುದ್ದಿ ಪ್ರಕಾರ, ಭಾಗಶಃ ಸೆಪ್ಟೆಂಬರ್ 9ಕ್ಕೆ ಮತ್ತೆ ಉತ್ತರ ಕೊರಿಯಾ ಮಿಲಿಟರಿ ಉಪಗ್ರಹ ಉಡಾಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಜಪಾನ್ ಮತ್ತು ದಕ್ಷಿಣ ಕೊರಿಯಾ ಅಲರ್ಟ್ ಆಗಿವೆ. ಅಪ್ಪಿತಪ್ಪಿ ತಮ್ಮ ದೇಶದ ಮೇಲೆ ಉಪಗ್ರಹದ ತುಣುಕು ಬೀಳಬಹುದು ಎಂಬ ಭಯ ಅವರನ್ನು ಕಾಡುತ್ತಿದೆ.












Click it and Unblock the Notifications