ಮುಳುಗುತ್ತಿದೆಯಂತೆ ದೈತ್ಯ ನಗರ ನ್ಯೂಯಾರ್ಕ್: ನಾಸಾ ಬಿಚ್ಚಿಟ್ಟಿದೆ ಭಯಾನಕ ಮಾಹಿತಿ- ಇದರ ಹಿಂದಿನ ಕಾರಣ ತಿಳಿಯಿರಿ
ನ್ಯೂಯಾರ್ಕ್, ಸೆಪ್ಟೆಂಬರ್ 29: ಅಮೆರಿಕದ ದೈತ್ಯ ನಗರವೆಂದೇ ಹೆಸರುವಾಸಿಯಾಗಿರುವ ನ್ಯೂಯಾರ್ಕ್ ಮುಳುಗಲು ಆರಂಭಿಸಿದೆ ಎಂದು ನಾಸಾ ಭಯಾನಕ ಮಾಹಿತಿಯನ್ನು ಹೊರಹಾಕಿದೆ. ಇತ್ತೀಚಿನ ನಾಸಾ ವರದಿಯ ಪ್ರಕಾರ, ನ್ಯೂಯಾರ್ಕ್ ನಗರವು ಮುಳುಗುವ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೆಲ ಪ್ರಮುಖ ಪ್ರದೇಶಗಳು ಇತರ ಪ್ರದೇಶಗಳಿಗಿಂತ ವೇಗವಾಗಿ ಮುಳುಗುತ್ತಿವೆ ಎಂದು ನಾಸಾ ಅಧ್ಯಯನದಿಂದ ತಿಳಿದುಬಂದಿದೆ.
2016 ರಿಂದ 2023 ರ ವರೆಗಿನ ಅತ್ಯಂತ ಕ್ಷಿಪ್ರ ಲಂಬವಾದ ಭೂ ಚಲನೆಯನ್ನು ನ್ಯೂಯಾರ್ಕ್ ನಗರದ ನೆರೆಹೊರೆ ಪ್ರದೇಶಗಳು ಕಂಡಿವೆ ಎಂದು ಅಧ್ಯಯನ ಹೇಳಿದೆ.
ಕ್ವೀನ್ಸ್ ಕೌಂಟಿ ಪ್ರದೇಶದಲ್ಲಿರುವ ಲಾಗಾರ್ಡಿಯಾ ವಿಮಾನ ನಿಲ್ದಾಣ ಮತ್ತು ಅರ್ಥರ್ ಆಶೆ ಸ್ಟೇಡಿಯಂಗಳು ( ಯುಎಸ್ ಓಪನ್ ನಡೆಯುವ ಪ್ರಖ್ಯಾತ ಮೈದಾನ ) ಪ್ರತಿ ವರ್ಷ ಮುಳುಗುತ್ತಿರುವುದು ಕಂಡುಬಂದಿದೆ.

ಲಾಗಾರ್ಡಿಯಾದ ರನ್‌ವೇಗಳು ಮತ್ತು ಅರ್ಥರ್ ಆಶ್ ಸ್ಟೇಡಿಯಂ ಪ್ರತಿ ವರ್ಷಕ್ಕೆ ಕ್ರಮವಾಗಿ 3.7 ಮತ್ತು 4.6 ಮಿಲಿಮೀಟರ್‌ಗಳಷ್ಟು ಮುಳುಗುತ್ತಿರುವುದು ಕಂಡುಬಂದಿದೆ. ಈ ಎರಡೂ ಸ್ಥಳಗಳನ್ನು ಭೂಕುಸಿತದ ಪ್ರದೇಶಗಳಲ್ಲಿ ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇವುಗಳು ವೇಗವಾಗಿ ಮುಳುಗಲು ಕಾರಣವಾಗಿರಬಹುದು ಎಂದು ಅಧ್ಯಯನ ಹೇಳಿದೆ.
ಲಾಗಾರ್ಡಿಯಾ ಮತ್ತು ಆರ್ಥರ್ ಆಶೆ ಜೊತೆಗೆ, ಇಂಟರ್‌ಸ್ಟೇಟ್ 78 ಸಹ ವೇಗವಾಗಿ ಮುಳುಗುತ್ತಿದೆ ಎಂದು ತಿಳಿದುಬಂದಿದೆ. ಇಂಟರ್‌ಸ್ಟೇಟ್ 78 ಎನ್ನುವುದು ಮ್ಯಾನ್‌ಹ್ಯಾಟನ್‌ನಿಂದ ನ್ಯೂಜೆರ್ಸಿಗೆ ಸಂಪರ್ಕ ಕಲ್ಪಿಸುವ ಹೋಲೆಂಡ್ ಸುರಂಗದ ಮಾರ್ಗವಾಗಿದೆ.
ಇಂಟರ್‌ಸ್ಟೇಟ್ 78 ನಗರದ ಉಳಿದ ಭಾಗಗಳಿಗಿಂತ ಸುಮಾರು ಎರಡು ಪಟ್ಟು ವೇಗವಾಗಿ ಮುಳುಗುತ್ತಿದೆ ಎಂದು ಅಧ್ಯಯನವು ಹೇಳಿದೆ.

ಸ್ಯಾಂಡಿ ಚಂಡಮಾರುತದಂತಹ ಪ್ರಬಲ ಚಂಡಮಾರುತಗಳ ಸಂದರ್ಭ ಸಮುದ್ರ ಮಟ್ಟಗಳಲ್ಲಿ ಏರಿಕೆ ಕಂಡುಬರುತ್ತದೆ. ಇದು ಸ್ಥಳಗಳ ಮುಳುಗುವಿಕೆಯನ್ನು ಹೆಚ್ಚಿಸುತ್ತದೆ. ಇದರಿಂದ ನೆರೆಹೊರೆಯ ಪ್ರದೇಶಗಳ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟಾಗಬಹುದು ಎಂದು ವರದಿಯಾಗಿದೆ.
ನ್ಯೂಯಾರ್ಕ್ ನಗರದ ಮುಳುಗುವಿಕೆಯು ನಿಧಾನ ಗತಿಯಲ್ಲಿದೆ ಎಂಬುದನ್ನು ಹೇಳಲಾಗುತ್ತದೆ. ಆದರೆ, ಸ್ಯಾಂಡಿಯಂತಹ ಪ್ರಬಲ ಚಂಡಮಾರುತಗಳ ಸಂದರ್ಭ ಸಮುದ್ರ ಮಟ್ಟದಲ್ಲಿ ಭಾರೀ ಏರಿಕೆ ಕಂಡುಬರುತ್ತದೆ. ಇದು ವಿನಾಶಕಾರಿಯಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
'ಸಮುದ್ರದ ಪ್ರವಾಹದಿಂದ ಕರಾವಳಿಯಲ್ಲಿ ವಾಸಿಸುತ್ತಿರುವ ಜನಸಂಖ್ಯೆ ಮತ್ತು ಸ್ವತ್ತುಗಳನ್ನು ರಕ್ಷಿಸುವುದು ನ್ಯೂಯಾರ್ಕ್ ನಗರದ ಆಡಳಿತಕ್ಕೆ ಸವಾಲಾಗಿದೆ' ಎಂದು ಸಂಶೋಧಕರು ತಿಳಿಸಿದ್ದಾರೆ.

'ಸಮುದ್ರ ಮಟ್ಟದಲ್ಲಿ ನೈಸರ್ಗಿಕ ವ್ಯತ್ಯಾಸಗಳು ಕಂಡುಬರುತ್ತವೆ. ಇದು ವಿನಾಶಕಾರಿ ಬಿರುಗಾಳಿಗಳನ್ನು ಹುಟ್ಟುಹಾಕುತ್ತದೆ. ಇದರ ಸಂಯೋಜಿತ ಪರಿಣಾಮವು ವಿನಾಶಕಾರಿ ಹಂತಕ್ಕೆ ತಲುಪಬಹುದು' ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಈ ಸಂಶೋಧನೆಯು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೇಯ ಹಿಂದಿನ ವರದಿಯನ್ನು ಆಧರಿಸಿದೆ. ನ್ಯೂಯಾರ್ಕ್ ನಗರವು ತನ್ನದೇ ಭಾರವಾದ ತೂಕದ ಕಾರಣದಿಂದಾಗಿ ನಿಧಾನವಾಗಿ ಮುಳುಗುತ್ತಿದೆ ಎಂದು ಸರ್ವೇ ಬಹಿರಂಗಪಡಿಸಿದೆ.
ಸುಮಾರು 1.7 ಟ್ರಿಲಿಯನ್ ಪೌಂಡ್‌ಗಳಷ್ಟು ತೂಕದ 1 ಮಿಲಿಯನ್ ಕಟ್ಟಡಗಳನ್ನು ನ್ಯೂಯಾರ್ಕ್ ಹೊಂದಿದೆ. ಇದು ನಗರಕ್ಕೆ ಹೆಚ್ಚು ಅಪಾಯವನ್ನು ತಂದೊಡ್ಡಿದೆ.
ನ್ಯೂಯಾರ್ಕ್‌ನಲ್ಲಿ ವೇಗವಾಗಿ ಮುಳುಗುತ್ತಿರುವ ಇತರ ಪ್ರದೇಶಗಳೆಂದರೆ, ಗವರ್ನರ್ಸ್ ಐಲ್ಯಾಂಡ್‌ನ ದಕ್ಷಿಣದ ಪ್ರದೇಶ, ಮಿಡ್‌ಲ್ಯಾಂಡ್ ಮತ್ತು ಸ್ಟೇಟನ್ ಐಲೆಂಡ್‌ನ ಸೌತ್ ಬೀಚ್ ಹಾಗೂ ದಕ್ಷಿಣ ಕ್ವೀನ್ಸ್ ಕರಾವಳಿ ನೆರೆಹೊರೆ ಪ್ರದೇಶಗಳು. ಹೀಗಾಗಿ ಅಮೆರಿಕನ್ನರಲ್ಲಿ ಹೊಸ ಟೆನ್ಷನ್ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಈ ರೀತಿ ಸಮುದ್ರದ ನೀರಿನ ಕಾಟ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.












Click it and Unblock the Notifications