ನವಾಜ್ ಷರೀಫ್ ತಮ್ಮ ಶೆಹ್ಬಾಜ್ ಷರೀಫ್ ಪಾಕಿಸ್ತಾನದ ಮುಂದಿನ ಪಿಎಂ
ಇಸ್ಲಮಾಬಾದ್, ಜುಲೈ 28: ಪಾಕಿಸ್ತಾನದ ನಿರ್ಗಮಿತ ಪ್ರಧಾನಿ ನವಾಜ್ ಷರೀಫ್ ತಮ್ಮ ಶೆಹ್ಬಾಜ್ ಷರೀಫ್ ಅಲ್ಲಿನ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಅವರು ಪಾಕಿಸ್ತಾನದ ಪಂಜಾಬ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಷರೀಫ್ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸುಪ್ರೀಂ ಕೋರ್ಟ್, ಷರೀಫ್ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ಜುಲೈ 28ರ ಬೆಳಗ್ಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ, ಷರೀಫ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

2013ರ ಜೂನ್ 5ರಂದು ನವಾಜ್ ಷರೀಫ್ ಅವರು, ಮೂರನೇ ಬಾರಿಗೆ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅದಕ್ಕಿಂತಲೂ ಹಿಂದೆ, 1997ರಿಂದ 1999ರವರೆಗೆ, 1990ರಿಂದ 1993ರವರೆಗೆ ಅವರು ಪ್ರಧಾನಿಯಾಗಿದ್ದರು.
2015ರಲ್ಲಿ ಜಗತ್ತಿನ ನಾನಾ ದೇಶಗಳ ಖ್ಯಾತಿವೆತ್ತ ವ್ಯಕ್ತಿಗಳ ಭ್ರಷ್ಟಾಚಾರ ಹಾಗೂ ಕರಾಳ ಮುಖಗಳನ್ನು ಅನಾವರಣ ಮಾಡಿದ್ದ 'ಪನಾಮಾ ಪೇಪರ್ಸ್' ಎಂಬ ಹೆಸರಿನ ತನಿಖಾ ವರದಿಯಲ್ಲಿ ನವಾಜ್ ಷರೀಫ್ ಹಾಗೂ ಅವರ ಕುಟುಂಬ ಸದಸ್ಯರು ಭ್ರಷ್ಟಾಚಾರದಿಂದ ಭಾರೀ ಆಸ್ತಿ ಮಾಡಿರುವ ಬಗ್ಗೆ ಪ್ರಸ್ತಾಪಿಸಲಾಗಿತ್ತು.












Click it and Unblock the Notifications