ಇಮ್ರಾನ್ ಖಾನ್ ಶತ್ರು ಪಾಕಿಸ್ತಾನಕ್ಕೆ ವಾಪಸ್: ಹೊತ್ತಿಕೊಳ್ಳುತ್ತಾ ಬೆಂಕಿ?
ಇಸ್ಲಾಮಾಬಾದ್: ಅರಾಜಕತೆ ಹಾಗೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪಾಕಿಸ್ತಾನ ವಿಲವಿಲನೆ ಒದ್ದಾಡುತ್ತಿದೆ. ಆದರೂ ಅಲ್ಲಿನ ರಾಜಕೀಯ ನಾಯಕರಿಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಒಂದ್ಕಡೆ ಪಾಕಿಸ್ತಾನದ ಮಾಜಿ ಪ್ರಧಾನಿಯನ್ನೇ ಜೈಲಿಗೆ ಹಾಕಿಸಲು ಪ್ರಯತ್ನಿಸಿ ದ್ವೇಷದ ರಾಜಕಾರಣ ಮಾಡ್ತಿದ್ದಾರೆ. ಈಗ ನೋಡಿದ್ರೆ ಇಮ್ರಾನ್ ಖಾನ್ ಬದ್ಧ ವೈರಿ ಪಾಕಿಸ್ತಾನಕ್ಕೆ ವಾಪಸ್ ಬರೋದು ಬಹುತೇಕ ಪಕ್ಕಾ ಆಗಿದೆ!
ಶತ್ರುಗಳಂತೆ ಕಚ್ಚಾಡಿದ್ದ ಇಮ್ರಾನ್ ಹಾಗೂ ನವಾಜ್ ಶರೀಫ್ ಪಾಕಿಸ್ತಾನ ರಾಜಕೀಯದಲ್ಲಿ ಬದ್ಧ ವೈರಿಗಳು. ದೇಶಬಿಟ್ಟು ಹೊರಗಿರುವ ನವಾಜ್ ಶರೀಫ್ ಮತ್ತೆ ಪಾಕಿಸ್ತಾನಕ್ಕೆ ಎಂಟ್ರಿ ಕೊಡೋದು ಗ್ಯಾರಂಟಿ ಆಗಿದೆ. ಪಾಕಿಸ್ತಾನ ಪಿಎಂ ಶೆಹಬಾಜ್ ಶರೀಫ್ ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ ಪಕ್ಷದ ಸಾಮಾನ್ಯ ಮಂಡಳಿ ಸಭೆ ನಡೆಸುವಾಗ ಈ ಬಗ್ಗೆ ಸುಳಿವು ನೀಡಿದ್ದಾರೆ. ಪಕ್ಷದ ಮುಂದಾಳತ್ವ ವಹಿಸಲು ಹಿರಿಯ ಸಹೋದರ ನವಾಜ್ ಶರೀಫ್ ದೇಶಕ್ಕೆ ಮರಳುವುದನ್ನ ಕಾಯುತ್ತಿದ್ದೇನೆ ಎಂದಿದ್ದಾರೆ ಪಾಕಿಸ್ತಾನ ಹಾಲಿ ಪ್ರಧಾನಿ ಶೆಹಬಾಜ್ ಶರೀಫ್. ಈ ಮೂಲಕ ಪಾಕಿಸ್ತಾನದಲ್ಲಿ ಮತ್ತೆ ಇಮ್ರಾನ್ ಖಾನ್ ಅರೆಸ್ಟ್ ಆಗೋದು ಪಕ್ಕಾ ಎನ್ನಲಾಗ್ತಿದೆ (Imran Khan Arrest).

ನವಾಜ್ ಶರೀಫ್ ಈಗ ಎಲ್ಲಿ?
ಪಾಕಿಸ್ತಾನದ ರಾಜಕಾರಣಿಗಳು ಅದೆಷ್ಟು ಭ್ರಷ್ಟರು ಅಂದ್ರೆ, ಪಾಕಿಸ್ತಾನದ ಬಹುತೇಕ ಮಾಜಿ ಪ್ರಧಾನಿಗಳಿಗೆ ಜೈಲಿನ ದರ್ಶನ ಆಗಿದೆ. ಹೀಗೆ ನವಾಜ್ ಶರೀಫ್ ಕೂಡ ಜೈಲೂಟ ತಿಂದು, ಬೇರೆ ದೇಶದಲ್ಲಿ ವಾಸಿಸುತ್ತಿದ್ದಾರೆ. 2019ರಿಂದ ಲಂಡನ್‌ನಲ್ಲಿರುವ ಮಾಜಿ ಪ್ರಧಾನಿ ನವಾಜ್, ಪನಾಮಾ ಪೇಪರ್ಸ್ ಹಗರಣದ ಹಿನ್ನೆಲೆ ಪಾಕ್‌ಗೆ ಮರಳಿದರೂ ರಾಜಕೀಯ ಪಕ್ಷಗಳ ನೇತೃತ್ವ ವಹಿಸಲು ಆಗುವುದಿಲ್ಲ. ಆದರೆ ಇದನ್ನು ಮರುಪರಿಶೀಲಿಸಲು ಶೆಹಬಾಜ್ ಶರೀಫ್ ಅನುಮತಿ ನೀಡಿದ್ದಾರೆ. ಈ ಮೂಲಕ ಪಾಕ್ ಸುಪ್ರೀಂಕೋರ್ಟ್‌ನಲ್ಲಿ ತಮ್ಮ ವಿರುದ್ಧದ ತೀರ್ಪು ಪ್ರಶ್ನಿಸಲು ನವಾಜ್ ಷರೀಫ್‌ಗೆ ಒಟ್ಟು 60 ದಿನಗಳ ಕಾಲವಕಾಶ ಸಿಕ್ಕಂತಾಗಿದೆ.
ಪಾಕಿಸ್ತಾನ ನೆರವಿಗೆ ನಿಂತ ಚೀನಾ
ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕ್‌ಗೆ ಮತ್ತೆ ಚೀನಾ ನೆರವಿನ ಹಸ್ತ ಚಾಚಿದ್ದು, ನಗದು ಕೊರತೆ ನಿವಾರಿಸಲು ಚೀನಾದಿಂದ 1 ಬಿಲಿಯನ್ ಡಾಲರ್ ಹಣ ಸಾಲ ಸಿಕ್ಕಿದೆ. ಈ ವಿಚಾರ ಸ್ವತಃ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಮೂಲಕ ಕನ್ಫರ್ಮ್ ಆಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ನಿರೀಕ್ಷಿಸುತ್ತಲೇ ಇರುವ ಪಾಕಿಸ್ತಾನಕ್ಕೆ ಈಗ ಚೀನಾ ಸಹಾಯವು ಭರವಸೆ ನೀಡಿದೆ. ಈ ಬಗ್ಗೆ ಮಾತನಾಡಿರುವ ಹಣಕಾಸು ಸಚಿವ ಇಶಾಕ್ ದಾರ್, ಇತ್ತೀಚೆಗೆ ಚೀನಾಕ್ಕೆ ಮರುಪಾವತಿಸಿರುವ 1.30 ಬಿಲಿಯನ್ ಡಾಲರ್ ಹಣವನ್ನು ಚೀನಾದಿಂದ ಮರಳಿ ಪಡೆಯಲಾಗುತ್ತದೆ ಎಂದಿದ್ದಾರೆ.
ಜೀವ ಹೋಗುವಾಗ ಜೀವ ಬಂತು!
ಅಂದಹಾಗೆ ಹಣಕಾಸಿನ ಕೊರತೆ, ಐಎಂಎಫ್ ಜೊತೆ ಒಪ್ಪಂದ ವಿಳಂಬದ ಪರಿಣಾಮವಾಗಿ ಪಾಕಿಸ್ತಾನ ಆರ್ಥಿಕತೆ ಸಂಕಷ್ಟ ಎದುರಿಸಿದೆ. ಸುಸ್ತಿಯಾಗುವ ಅಪಾಯದಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನಕ್ಕೆ ಐಎಂಎಫ್ ಬಿಡುಗಡೆ ಮಾಡುವ ಸಾಲ ನಿರ್ಣಾಯಕ. ಹೀಗಾಗಿ ಪರದಾಡುತ್ತಿದ್ದ ಪಾಕ್ ಸರ್ಕಾರಕ್ಕೆ ಇದೀಗ ಚೀನಾ ರಿಲೀಫ್ ಕೊಟ್ಟಿದೆ. ಚೀನಾ ಕೊಟ್ಟಿರುವ ₹7500 ಕೋಟಿ ಸಾಲ ದೊಡ್ಡ ಸಹಾಯ ಮಾಡಲಿದೆ. ಈ ನಡುವೆ ಅರಾಜಕತೆಯ ತಲ್ಲಣದಲ್ಲೇ ಬೆಚ್ಚಿಬಿದ್ದ ಪಾಕಿಸ್ತಾನಕ್ಕೆ ಚೀನಾ ಹೊಸ ಭರವಸೆ ನೀಡಿದೆ.
ಒಟ್ನಲ್ಲಿ ಆರ್ಥಿಕವಾಗಿ ಬೀದಿಗೆ ಬಿದ್ದಿರುವ ಪಾಕಿಸ್ತಾನದಲ್ಲಿ ರಾಜಕೀಯ ಕೂಡ ಗಬ್ಬೆದ್ದಿದೆ. ಅದಕ್ಕೆ ಸಾಕ್ಷಿ ಎಂಬಂತೆ ಮೇ 9ರಂದು ಇಮ್ರಾನ್ ಖಾನ್ ಅರೆಸ್ಟ್ ಆದ ಬಳಿಕ, ಭುಗಿಲೆದ್ದ ಗಲಭೆ ಪಾಕಿಸ್ತಾನವನ್ನೇ ನಡುಗಿಸಿತ್ತು. ಈಗ ಭ್ರಷ್ಟಾಚಾರ ಆರೋಪದ ಮೇಲೆ ದೇಶಬಿಟ್ಟು ಹೊರಗಿರುವ ಪಾಕ್ ಮಾಜಿ ಪ್ರಧಾನಿ ಹಾಗೂ ಇಮ್ರಾನ್ ಖಾನ್ ಬದ್ಧ ಶತ್ರು ನವಾಜ್ ಷರೀಫ್ ಮತ್ತೆ ಪಾಕಿಸ್ತಾನಕ್ಕೆ ಬರುವ ಸಾಧ್ಯತೆ ಇದೆ. ಹೀಗಾಗಿ ಮತ್ತೊಂದು ಪಾಕಿಸ್ತಾನದಲ್ಲಿ ಹಿಂಸಾಚಾರದ ಬೆಂಕಿ ಹೊತ್ತಿಕೊಳ್ಳುತ್ತಾ? ಅನ್ನೋ ಅನುಮಾನ ಮೂಡಿದೆ.












Click it and Unblock the Notifications