ಉಕ್ರೇನ್‌ಗೆ ನ್ಯಾಟೋದಿಂದ ಶಸ್ತ್ರಾಸ್ತ್ರ ಪೂರೈಕೆ: ಪುಟಿನ್
ಮಾಸ್ಕೋ, ಫೆಬ್ರವರಿ 8: ಉಕ್ರೇನ್‌ಗೆ ನ್ಯಾಟೋ ಪಡೆಗಳು ಶಸ್ತ್ರಾಸ್ತ್ರ ಪೂರೈಕೆ ಮಾಡಿವೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ರಷ್ಯಾ-ಫ್ರೆಂಚ್ ಮಾತುಕತೆಗಳ ನಂತರ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ವ್ಲಾಡಿಮಿರ್ ಪುಟಿನ್ ನ್ಯಾಟೋದಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ಗೆ ಪೂರೈಕೆ ಮಾಡಲಾಗುತ್ತಿದೆ. ಇದರ ಜೊತೆಗೆ ಮಿಲಿಟರಿ ತಜ್ಞರನ್ನು ಉಕ್ರೇನ್‌ಗೆ ನ್ಯಾಟೋ ಕಳುಹಿಸಿದೆ ಎಂದು ಆರೋಪಿಸಿದ್ದಾರೆ.
ಉಕ್ರೇನ್ ಸೈನ್ಯದ ಆಧುನೀಕರಣಕ್ಕೆ ನ್ಯಾಟೋ ಪ್ರಯತ್ನಿಸುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಈ ವಿಚಾರದ ಬಗ್ಗೆ ನಾನು ಮಾತನಾಡಿದ್ದೇನೆ. ಯೂರೋಪ್ ಮತ್ತು ಉಕ್ರೇನ್‌ನಲ್ಲಿ ಶಾಂತಿ ನೆಲೆಸಲು ಮಾತುಕತೆಗಳನ್ನು ನಡೆಸುವುದಾಗಿ ಅವರು ಹೇಳಿದ್ದಾರೆ ಎಂದು ಪುಟಿನ್ ಭರವಸೆ ವ್ಯಕ್ತಪಡಿಸಿದ್ದಾರೆ.

ಡೊನ್ಬಾಸ್ನಲ್ಲಿ ಈಗಿರುವ ಸಮಸ್ಯೆಯ ಶಾಂತಿಯುತವಾಗಿ ಇತ್ಯರ್ಥ ಮಾಡಿಕೊಳ್ಳಲು ಉಕ್ರೇನ್ ನಿರಾಕರಿಸಿದೆ. ಮಿನ್ಸ್ಕ್ ಒಪ್ಪಂದದ ನಿಯಮಗಳನ್ನು ಉಕ್ರೇನ್ ಅನುಸರಿಸುತ್ತಿಲ್ಲ. ಈ ಒಪ್ಪಂದಗಳನ್ನು ರದ್ದು ಮಾಡಲು ಉಕ್ರೇನ್ ಮುಂದಾಗಿದೆ ಎಂದು ಪುಟಿನ್ ಹೇಳಿದ್ದಾರೆ.
ನೆರೆಯ ಉಕ್ರೇನ್ ಮೇಲೆ ರಷ್ಯಾದ ದಾಳಿ ಸಾಧ್ಯತೆ ದಟ್ಟವಾಗುತ್ತಿದ್ದು, ಯುದ್ಧದ ಕಾರ್ಮೋಡ ಆವರಿಸಿದೆ. ಇದರ ಬೆನ್ನಲ್ಲೇ, ದಾಳಿಗೆ ಅಗತ್ಯವಾದ ಒಟ್ಟಾರೆ ಸೇನೆಯ ಪೈಕಿ ಶೇ.70ರಷ್ಟನ್ನು ಈಗಾಗಲೇ ರಷ್ಯಾ ಉಕ್ರೇನ್ ಗಡಿಯಲ್ಲಿ ರವಾನಿಸಿದೆ ಎಂದು ಅಮೆರಿಕದ ಗುಪ್ತಚರ ಪಡೆಗಳು ಹೇಳಿವೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಕೂಡ 2000 ಯೋಧರ ಪಡೆಯನ್ನು ನ್ಯಾಟೋ ಪಡೆಗಳಿಗೆ ಸಹಾಯ ನೀಡಲು ರವಾನಿಸಿದೆ. ಇದು ತ್ವೇಷ ಪರಿಸ್ಥಿತಿಯ ಸಂಕೇತವಾಗಿದೆ.
ರಷ್ಯಾ ಸಜ್ಜು: ಈಗಾಗಲೇ ರಷ್ಯಾ ಸೇನೆ ಉಕ್ರೇನ್ ಗಡಿಯಲ್ಲಿ 1 ಲಕ್ಷದಷ್ಟು ಸೈನಿಕರು ಮತ್ತು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಜ್ಜುಗೊಳಿಸಿದೆ. ಮುಂದಿನ ಕೆಲ ದಿನಗಳಲ್ಲಿ ಇಲ್ಲಿ ಮೈಕೊರೆವ ಹಿಮ ಆವರಿಸಿಕೊಳ್ಳಲಿದ್ದು, ರಷ್ಯಾ ತನ್ನ ಸೇನಾ ಬಲವನ್ನು ಹೆಚ್ಚಿಸಲು ನೆರವು ನೀಡಲಿದೆ.
ಸದ್ಯದ ಅಂದಾಜಿನ ಪ್ರಕಾರ ದಾಳಿಗೆ ಅಗತ್ಯವಾದ ಸೇನೆಯ ಪೈಕಿ ಶೆ.70ರಷ್ಟನ್ನು ರಷ್ಯಾ ಈಗಾಗಲೇ ಗಡಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇಟ್ಟಿದೆ. ಒಂದು ವೇಳೆ ದಾಳಿ ನಡೆದಿದ್ದೇ ಹೌದಾದಲ್ಲಿ ಕನಿಷ್ಠ 50 ಸಾವಿರ ನಾಗರಿಕರು ಸಾವನ್ನಪ್ಪಲಿದ್ದಾರೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಹೇಳಿದೆ.
ಅಮೆರಿಕ ಸೇನೆ ರವಾನೆ: ಈ ನಡುವೆ ಸಂಭವನೀಯ ಯುದ್ಧದ ವೇಳೆ ರಷ್ಯಾದ ಮೇಲೆ ಪ್ರತಿದಾಳಿ ನಡೆಸಲು ಸೇನೆಯನ್ನು ಕಳುಹಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಈಗಾಗಲೇ ಘೋಷಣೆ ಮಾಡಿರುವರಾದರೂ, ನ್ಯಾಟೋ ಪಡೆಯ ಬಾಧ್ಯತೆಯನ್ನು ಪೂರೈಸುವ ಸಲುವಾಗಿ 2000 ಯೋಧರನ್ನು ಯುರೋಪ್‌ಗೆ ರವಾನಿಸಿದೆ. ಅವರು ಜರ್ಮನಿ ಮತ್ತು ಪೋಲೆಂಡ್‌ಗೆ ಬಂದು ಇಳಿದಿದ್ದಾರೆ ಎಂದು ಅಮೆರಿಕ ಸೇನೆ ಮಾಹಿತಿ ನೀಡಿದೆ.
ಸೋವಿಯತ್ ಒಕ್ಕೂಟದ ಭಾಗಗಳಾಗಿದ್ದ ರಷ್ಯಾ ಮತ್ತು ಉಕ್ರೇನ್ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿವೆ. ಗಡಿಯುದ್ದಕ್ಕೂ ಉಭಯ ದೇಶಗಳು ಲಕ್ಷಾಂತರ ಸೈನಿಕರನ್ನು ನಿಯೋಜನೆ ಮಾಡಿವೆ.
ರಷ್ಯಾ-ಉಕ್ರೇನ್ ಬಿಕ್ಕಟ್ಟಿಗೆ ಏನು ಕಾರಣ?
- ಉಕ್ರೇನ್‌ಗೆ ನ್ಯಾಟೋ ದೇಶಗಳು ಶಸ್ತ್ರಾಸ್ತ್ರ ಮತ್ತು ಇತರೆ ಮಿಲಿಟಿ ನೆರವು ನೀಡುತ್ತಿರುವುದನ್ನು ರಷ್ಯಾ ತೀವ್ರ ವಿರೋಧಿಸುತ್ತಿದೆ
- ಉಕ್ರೇನ್‌ಗೆ ನ್ಯಾಟೋದ ಪಾಲುದಾರ ಸ್ಥಾನಮಾನ ಪ್ರಸ್ತಾಪಕ್ಕೆ ರಷ್ಯಾದ ತೀವ್ರ ವಿರೋಧ. ಪ್ರಸ್ತಾಪ ಹಿಂಪಡೆವಂತೆ ಬೆದರಿಕೆ
- ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಉಕ್ರೇನ್ ಯುರೋಪ್ ಒಕ್ಕೂಟದತ್ತ ವಾಲುತ್ತಿರುವುದು ರಷ್ಯಾ ಆಕ್ರೋಶಕ್ಕೆ ಕಾರಣ
- ಉಕ್ರೇನ್‌ನಲ್ಲಿ ತನ್ನ ಕೈಗೊಂಬೆ ಸರ್ಕಾರ ರಚಿಸುವ ರಷ್ಯಾ ಯತ್ನಕ್ಕೆ ಅಮೆರಿಕ, ಯುರೋಪ್ ದೇಶಗಳ ಅಡ್ಡಗಾಲು ಪ್ರಯತ್ನ












Click it and Unblock the Notifications