SCO Summit 2023: ಇಂದು ಶಾಂಘೈ ಸಹಕಾರ ಒಕ್ಕೂಟ ಶೃಂಗಸಭೆಯ ಅಧ್ಯಕ್ಷತೆ ವಹಿಸಲಿರುವ ಮೋದಿ
ನವದೆಹಲಿ ಜುಲೈ 4: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಜುಲೈ 4) ನಡೆಯಲಿರುವ ಶಾಂಘೈ ಸಹಕಾರ ಒಕ್ಕೂಟ ಶೃಂಗಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಆರಂಭಗೊಳ್ಳಲಿರುವ ಈ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿದಂತೆ ಎಲ್ಲಾ ಎಂಟು ದೇಶಗಳ ನಾಯಕರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಇರಾನ್ ಕೂಡ ಒಂಬತ್ತನೇ ಸದಸ್ಯ ರಾಷ್ಟ್ರವನ್ನಾಗಿ ಸೇರ್ಪಡೆಗೊಳಿಸಲಾಗುತ್ತಿದೆ.
1996ರಲ್ಲಿ ರೂಪುಗೊಂಡ ಈ ಒಕ್ಕೂಟ ರೂಪಗೊಂಡಿತು. 2017ರಲ್ಲಿ ಭಾರತ ಪೂರ್ಣ ಸದಸ್ಯತ್ವವನ್ನು ಪಡೆಯಿತು. ಈಗ ಎಸ್‌ಸಿಒ ಶೃಂಗಸಭೆಯ ಅಧ್ಯಕ್ಷತೆಯನ್ನು ಮೊದಲ ಬಾರಿಗೆ ಭಾರತ ವಹಿಸುತ್ತಿದೆ. ಭಾರತದೊಂದಿಗೆ ಹಿತ ಶತ್ರುವಿನಂತೆ ವರ್ತಿಸುವ ಚೀನಾವು ಈ ಸಮ್ಮೇಳನದಲ್ಲಿ ಭಾರತವು ಪೂರ್ಣ ಸದಸ್ಯತ್ವ ಪಡೆಯಲು ಸಹಕಾರ ನೀಡಿದ್ದು ವಿಶೇಷ.

ಎಸ್ ಸಿಒನಲ್ಲಿ ಪೂರ್ಣ ಪ್ರಮಾಣದ ಸದಸ್ಯತ್ವ ಸಿಕ್ಕ ನಂತರ, ಏಷ್ಯಾ ಹಾಗೂ ಯೂರೋಪಿಯನ್ ಮಟ್ಟದಲ್ಲಿ ಭಾರತದ ವರ್ಚಸ್ಸು ವೃದ್ಧಿಸಿದಂತಾಗಿದೆ. ಹಾಗಾದರೆ, ಭಾರತಕ್ಕೆ ಸಿಕ್ಕಿರುವ ಎಸ್ ಸಿಒ ಪೂರ್ಣ ಪ್ರಮಾಣದ ಸದಸ್ಯತ್ವದ ಮಹತ್ವವೇನು? ಅದರಿಂದ ಭಾರತಕ್ಕೆ ಆಗುವ ಪ್ರಯೋಜನಗಳೇನು ಎಂಬಿತ್ಯಾದಿ ಮಾಹಿತಿಗಳು ಇಲ್ಲಿ ನಿಮಗಾಗಿ.
ಭಾರತದ ಸಾಧನೆ
2005ರಿಂದ ಎಸ್ ಸಿಒ ಸದಸ್ಯತ್ವಕ್ಕಾಗಿ ಭಾರತ ಕಾತರಿಸುತ್ತಿತ್ತು. ಇದಕ್ಕೆ ಎಸ್ ಸಿಒ ಸದಸ್ಯ ರಾಷ್ಟ್ರಗಳ ಬೆಂಬಲದ ಅತ್ಯಗತ್ಯವಿತ್ತು. ಆದರೆ, ಆ ಪೂರ್ಣ ಪ್ರಮಾಣದ ಸದಸ್ಯತ್ವಕ್ಕಾಗಿ ಭಾರತವು ಆ ಸದಸ್ಯ ರಾಷ್ಟ್ರಗಳ ಮೇಲೆ ಪ್ರಭಾವ ಬೀರುವಷ್ಟರ ಮಟ್ಟಿಗೆ ಬೆಳೆಯಬೇಕಿತ್ತು. ಈಗ, ಎಸ್ ಸಿಒ ಪೂರ್ಣ ಪ್ರಮಾಣದ ಸದಸ್ಯತ್ವದಿಂದ ಅದು ಸಾಧ್ಯವಾದಂತಾಗಿದೆ.

ಭಾರತಕ್ಕೆ ದಕ್ಕಿದ ಅಪರೂಪದ ಅವಕಾಶ
1996ರಲ್ಲಿ ಕಜಕಿಸ್ತಾನ, ಕಿರ್ಗಿಸ್ತಾನ, ರಷ್ಯಾ, ಚೀನಾ ಹಾಗೂ ಉಜ್ಬೇಕಿಸ್ತಾನಗಳು ಈ ಒಕ್ಕೂಟದ ಪೂರ್ಣ ಪ್ರಮಾಣದ ಸದಸ್ಯತ್ವ ಹೊಂದಿದ್ದವು. ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರಗಳು ಈ ಒಕ್ಕೂಟದಲ್ಲಿ ಪರಿವೀಕ್ಷಕ ಸದಸ್ಯ ರಾಷ್ಟ್ರಗಳಾಗಿದ್ದವು. ಈಗ ಈ ಎರಡೂ ರಾಷ್ಟ್ರಗಳಿಗೆ ಪೂರ್ಣ ಪ್ರಮಾಣದ ಸದಸ್ಯತ್ವ ಸಿಕ್ಕಿದೆ.
ಹೆಚ್ಚಿದ ವರ್ಚಸ್ಸು
ಎಸ್ ಸಿಒನಲ್ಲಿ ಪೂರ್ಣ ಪ್ರಮಾಣದ ಸದಸ್ಯತ್ವ ಸಿಕ್ಕ ನಂತರ, ಭಾರತಕ್ಕಾಗಿರುವ ಪ್ರಯೋಜನಗಳು ಹಲವು. ಮೊದಲನೆಯದಾಗಿ, ಈ ಸಂಘಟನೆ ಯುರೇಷಿಯನ್ (ಯೂರೋಪ್ ಹಾಗೂ ಏಷ್ಯಾ ರಾಷ್ಟ್ರಗಳು ಇರುವ) ಸಂಘಟನೆಯಾಗಿರುವುದರಿಂದ ಎರಡೂ ಖಂಡಗಳಲ್ಲಿ ಭಾರತದ ವರ್ಚಸ್ಸು ಅಗಾಧವಾಗಿ ಹೆಚ್ಚುತ್ತಿದೆ. ಸದಸ್ಯ ರಾಷ್ಟ್ರಗಳ ಸಹಕಾರ, ಭಯೋತ್ಪಾದನೆಯ ನಿಗ್ರಹ, ಗಡಿ ಪ್ರದೇಶಗಳಲ್ಲಿ ಸ್ಥಿರತೆ ಕಾಪಾಡುವುದು ಮುಂತಾದ ವಿಚಾರಗಳಲ್ಲಿ ಭಾರತದ ಮಾತಿಗೆ ಸಂಘಟನೆಯಲ್ಲಿ ಮೊದಲಿಗಿಂತಲೂ ಹೆಚ್ಚಿನ ಮಹತ್ವ ಸಿಗುತ್ತಿದೆ.
ಒಕ್ಕೂಟದ ಒಂಬತ್ತನೇ ಸದಸ್ಯ ರಾಷ್ಟ್ರವಾಗಿ ಇರಾನ್ ಸೇರ್ಪಡೆ
ಸದ್ಯ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಎಸ್‌ಸಿಒ ಶೃಂಗಸಭೆಯಲ್ಲಿ ಇರಾನ್ ಅನ್ನು ಒಕ್ಕೂಟದ ಒಂಬತ್ತನೇ ಸದಸ್ಯ ರಾಷ್ಟ್ರವನ್ನಾಗಿ ಸೇರ್ಪಡೆ ಮಾಡಲಾಗುತ್ತಿದೆ. ಈ ಒಕ್ಕೂಟದಲ್ಲಿ ಬೆಲಾರಸ್ ಸೇರ್ಪಡೆಗೆ ರಷ್ಯಾ ಬಲವಾಗಿ ಬೆಂಬಲ ನೀಡಿದೆ. ಇದಲ್ಲದೇ ಅಫ್ಘಾನಿಸ್ತಾನ ಮತ್ತು ಮಂಗೋಲಿಯಾ ದೇಶಗಳು ಕೂಡ ಎಸ್ಸಿಒಗೆ ಸೇರಲು ಬಯಸುತ್ತಿವೆ. ಆದರೆ ಬೆಲಾರಸ್ ಮತ್ತು ಮಂಗೋಲಿಯಾವನ್ನು ವೀಕ್ಷಕ ರಾಜ್ಯಗಳಾಗಿ ಆಹ್ವಾನಿಸಲಾಗಿದೆ. ಮಾಹಿತಿ ಪ್ರಕಾರ, ತುರ್ಕಮೆನಿಸ್ತಾನವನ್ನು ಸಹ ಅತಿಥಿಯಾಗಿ ಆಹ್ವಾನಿಸಲಾಗಿದೆ.












Click it and Unblock the Notifications