ಕೊರೊನಾದಿಂದ 68,313 ಮಂದಿ ಗುಣಮುಖ: ಆದರೂ ಕ್ಷೀಣಿಸದ ಭಯ!
ಮಾರ್ಚ್ 12: ಮಾರಣಾಂತಿಕ ಕೊರೊನಾ ವೈರಸ್ ಸೋಂಕು ವಿಶ್ವದಾದ್ಯಂತ ಹಬ್ಬಿದೆ. ಚೀನಾ, ಇಟಲಿ, ಇರಾನ್, ದಕ್ಷಿಣ ಕೊರಿಯಾ, ಫ್ರಾನ್ಸ್, ಸ್ಪೇನ್, ಜರ್ಮನಿ, ಯು.ಎಸ್.ಎ, ಜಪಾನ್ ಸೇರಿದಂತೆ ವಿಶ್ವದ 124 ದೇಶಗಳಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ.
ಇಲ್ಲಿಯವರೆಗೂ ಕೊರೊನಾ ವೈರಸ್ ಸೋಂಕಿನಿಂದ 4635 ಮಂದಿ ಸಾವನ್ನಪ್ಪಿದ್ದಾರೆ. ಚೀನಾ ಒಂದರಲ್ಲೇ 3169 ಮಂದಿಯನ್ನ ಕೊರೊನಾ ವೈರಸ್ ಬಲಿ ಪಡೆದಿದೆ.
ಕೊರೊನಾ ವೈರಸ್ ನಿಂದ ಮೃತಪಟ್ಟಿರುವವರ ಸಂಖ್ಯೆ ನಾಲ್ಕು ಸಾವಿರ ಗಡಿ ದಾಟಿದೆ ಎಂಬುದು ಆತಂಕ ಪಡುವ ವಿಚಾರವೇನೋ ಹೌದು. ಆದ್ರೆ, ಕೊರೊನಾ ವೈರಸ್ ಸೋಂಕಿನಿಂದ 68,313 ಮಂದಿ ಗುಣಮುಖರಾಗಿದ್ದಾರೆ ಎಂಬ ಸಂಗತಿಯನ್ನು ಖಂಡಿತ ನಿರ್ಲಕ್ಷ್ಯಿಸುವಂತಿಲ್ಲ.
ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ, ಕೊರೊನಾ ಸೋಂಕನ್ನು ಖಂಡಿತ ತಡೆಗಟ್ಟಬಹುದು. ಕೊರೊನಾ ವೈರಸ್ ಬಗ್ಗೆ ಭಯ ಪಡುವುದಕ್ಕಿಂತ ಹೆಚ್ಚಾಗಿ ಎಚ್ಚರಿಕೆ ಮತ್ತು ಜಾಗೃತಿ ವಹಿಸಬೇಕಾಗಿದೆ.

ಕೊರೊನಾ ವೈರಸ್ ನಿಂದ ಚೇತರಿಕೆ ಸಾಧ್ಯ
ಕೊರೊನಾ ವೈರಸ್ ನಿಂದಾಗಿ ರೋಗ ಲಕ್ಷಣಗಳು ವಿವಿಧ ಹಂತದ ಅನಾರೋಗ್ಯಕ್ಕೆ ಕಾರಣವಾಗಬಹುದು. ವಯಸ್ಸಾದವರಿಗೆ ಅದರಲ್ಲೂ ಈಗಾಗಲೇ ಆರೋಗ್ಯ ಸಮಸ್ಯೆ ಇರುವವರಿಗೆ ಕೊರೊನಾ ಸೋಂಕು ತಗುಲಿದರೆ ಅಪಾಯ ಕಟ್ಟಿಟ್ಟಬುತ್ತಿ. ಆದ್ರೆ, ಕೊರೊನಾ ವೈರಸ್ ನಿಂದ ಬಹುಪಾಲು ಮಂದಿಗೆ ಜ್ವರ, ನೆಗಡಿ ಮತ್ತು ಕೆಮ್ಮು ಮಾತ್ರ ಕಾಣಿಸಿಕೊಂಡಿದೆ. ಇಂಥವರು ಕೊರೊನಾ ವೈರಸ್ ನಿಂದ ಬಹುಬೇಗ ಗುಣಮುಖರಾಗಿದ್ದಾರೆ.

ಚೇತರಿಸಿಕೊಳ್ಳಲು ಎಷ್ಟು ದಿನ ಬೇಕು?
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, Mild symptoms ಹೊಂದಿರುವವರು ಎರಡು ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ತೀವ್ರ ಅನಾರೋಗ್ಯಕ್ಕೆ ತುತ್ತಾದವರು ಸಂಪೂರ್ಣವಾಗಿ ಗುಣಮುಖರಾಗಲು ಮೂರರಿಂದ ಆರು ವಾರಗಳ ಕಾಲ ಅವಶ್ಯ.

ಹಲವು ಮಂದಿ ಗುಣಮುಖ
ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡ ಚೀನಾ ದೇಶದಲ್ಲಿ ಇಲ್ಲಿಯವರೆಗೂ ಒಟ್ಟು 80,796 ಪ್ರಕರಣ ಪತ್ತೆಯಾಗಿದೆ. ಅದರಲ್ಲಿ ಈಗಾಗಲೇ, 62808 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ ಚೀನಾದಲ್ಲಿ 4257 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.

ಕಷ್ಟದ ಕೆಲಸ
ಕೊರೊನಾ ವೈರಸ್ ನಿಂದಾಗುವ ಅಪಾಯದ ಬಗ್ಗೆ ಸಾರ್ವಜನಿಕರಿಗೆ ಭಯ ಪಡಿಸದೆ ಜಾಗೃತಿ ಮೂಡಿಸುವುದು ಜಾಗತಿಕ ಆರೋಗ್ಯ ಅಧಿಕಾರಿಗಳಿಗೆ ಕಷ್ಟದ ಕೆಲಸವಾಗಿ ಪರಿಣಮಿಸಿದೆ.












Click it and Unblock the Notifications