Morocco Earthquake: ಬೀದಿ ಬೀದಿಯಲ್ಲಿ ಬಿದ್ದಿವೆ ಹೆಣಗಳ ರಾಶಿ...
ಭೀಕರ ಭೂಕಂಪದ ಬಳಿಕ ಅಕ್ಷರಶಃ ನರಕವಾಗಿ ಬದಲಾಗಿರುವ ಮೊರಾಕ್ಕೊ ಸ್ಥಿತಿ ಯಾವ ಶತ್ರುವಿಗೂ ಬೇಡ ಎಂಬಂತಾಗಿದೆ. ಅದ್ರಲ್ಲೂ ಮಕ್ಕಳು, ವೃದ್ಧರು ಸೂರು ಕಳೆದುಕೊಂಡು ಬೀದಿಯಲ್ಲಿ ದಿನ ದೂಡುವಂತಾಗಿದೆ. ಮತ್ತೊಂದ್ಕಡೆ ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿರುವಾಗಲೇ, ಅವಶೇಷದ ಅಡಿಯಲ್ಲಿ ನೂರಾರು ಶವಗಳು ಪತ್ತೆಯಾಗುತ್ತಿವೆ. ಹಾಗಾದ್ರೆ ಮೊರಾಕ್ಕೊ ಭೂಕಂಪಕ್ಕೆ ಈವರೆಗೂ ಬಲಿಯಾದ ಜನರ ಸಂಖ್ಯೆ ಎಷ್ಟು?
ಅಂದಹಾಗೆ ಶುಕ್ರವಾರ ರಾತ್ರಿ ಮೊರಾಕ್ಕೊದಲ್ಲಿ 6.8 ತೀವ್ರತೆ ಭೂಕಂಪ ಸಂಭವಿಸಿತ್ತು. ಇದೇ ಸಂದರ್ಭದಲ್ಲಿ ಭೂಕಂಪನ ತೀವ್ರತೆಗೆ ನೂರಾರು ಕಟ್ಟಡಗಳು ಕುಸಿದು ಬಿದ್ದವು. ಮರ್ರಾಕೆಚ್ ನೈಋತ್ಯಕ್ಕೆ 71 ಕಿಲೋ ಮೀಟರ್ ದೂರದಲ್ಲಿ ಕಂಪನ ಕೇಂದ್ರ ಬಿಂದು ದಾಖಲಾಗಿತ್ತು. ಘಟನೆ ಬೆಳಕಿಗೆ ಬಂದಾಗ 296 ಜನರು ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ಆದರೆ ಒಂದೆರಡು ಗಂಟೆ ಕಳೆಯುವ ಒಳಗೆ ಸಾವಿನ ಸಂಖ್ಯೆ 600ರ ಗಡಿ ದಾಟಿತ್ತು. ಹಾಗೇ ನೋಡ ನೋಡುತ್ತಿದ್ದಂತೆ 800ರ ಗಡಿ ದಾಟಿತ್ತು ಸಾವಿನ ಸಂಖ್ಯೆ ಇಂದು ಬೆಳಗ್ಗೆ 2000ಕ್ಕೂ ಹೆಚ್ಚು ಜನ ಭೂಕಂಪಕ್ಕೆ ಬಲಿಯಾದ ಬಗ್ಗೆ ಮಾಹಿತಿ ಸಿಕ್ಕಿದೆ. ಈವರೆಗೂ 2012 ಜನರ ಶವ ಪತ್ತೆಯಾಗಿದೆ.

ಎಲ್ಲೆಂದರಲ್ಲಿ ರಾಶಿ ಬಿದ್ದ ಶವಗಳು
ಅವರು ಯಾರೂ ತಪ್ಪು ಮಾಡಿರಲಿಲ್ಲ.. ಅವರೆಲ್ಲಾ ಕೆಟ್ಟವರೂ ಅಲ್ಲ.. ಆದರೆ ನೆಮ್ಮದಿ ಹಾಗೂ ಶಾಂತವಾಗಿ ರಾತ್ರಿ ಮಲಗಿದ್ದ ಅವರ ಉಸಿರು ನಿಂತು ಹೋಗಿದೆ. ಪ್ರಕೃತಿ ಮುನಿಸು ಅವರ ಜೀವ ಕಸಿದುಕೊಂಡಿದೆ. ಹೀಗೆ ಮೊರಾಕ್ಕೊ ಭೂಕಂಪದಲ್ಲಿ ಬಲಿಯಾದವರ ಪೈಕಿ ಮಕ್ಕಳ ಸಂಖ್ಯೆಯೇ ಹೆಚ್ಚಾಗಿದೆ. ಅದ್ರಲ್ಲೂ ನೂರಾರು ಕಟ್ಟಡ ಕುಸಿದು ಬಿದ್ದಿರುವ ಹಿನ್ನೆಲೆ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸ್ಥಳೀಯ ಆಸ್ಪತ್ರೆಗಳು ಸಾವಿರಾರು ಜನರಿಂದ ತುಂಬಿ ಹೊಗಿವೆ. ಕಾಲು ಕಳೆದುಕೊಂಡವರು, ಕೈ ಕಳೆದುಕೊಂಡವರು, ಕಣ್ಣು ಕಳೆದುಕೊಂಡವರು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ. ಮತ್ತೊಂದು ಕಡೆ ಬದುಕಿರುವ ಜನರಿಗೆ ಊಟ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಮೊರಾಕ್ಕೊ ಭೂಕಂಪದ ಇತಿಹಾಸ ಇಲ್ಲಿದೆ
ಮತ್ತೊಂದು ಕಡೆ ಭೂಕಂಪನದಲ್ಲಿ ಸೆರೆ ಸಿಕ್ಕ ವಿಡಿಯೋ ಮತ್ತು ಸಿಸಿ ಕ್ಯಾಮೆರಾ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮೊರಾಕ್ಕೊ ಪದೇ ಪದೆ ಭೂಕಂಪನಕ್ಕೆ ತುತ್ತಾಗಿ ಪರದಾಡ್ತಿದೆ. 2004ರಲ್ಲಿ ಈಶಾನ್ಯ ಮೊರಾಕ್ಕೊದಲ್ಲಿ ಸಂಭವಿಸಿದ್ದ ಭೂಕಂಪದಲ್ಲೂ 600ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. 2004ರ ಭೂಕಂಪದಲ್ಲಿ 628 ಜನ ಮೃತಪಟ್ಟು, 926 ಜನ ಗಾಯಗೊಂಡು ಸುಮಾರು 15000 ಜನರು ತಮ್ಮ ಮನೆ ಕಳೆದುಕೊಂಡರು. 1960ರಲ್ಲಿ 5.8 ತೀವ್ರತೆ ಭೂಕಂಪನಕ್ಕೆ 12 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು, 35,000 ಹೆಚ್ಚು ಜನ ಬೀದಿಗೆ ಬಿದ್ದರು. ಹೀಗೆ ಹಲವು ಬಾರಿ ಭೂಕಂಪಕ್ಕೆ ನಲುಗಿದೆ ಮೊರಾಕ್ಕೊ.
ಧೈರ್ಯ ಹೇಳಿರುವ ಭಾರತ
ಮೊರಾಕ್ಕೊ ಉತ್ತರ ಆಫ್ರಿಕಾದ ದೇಶವಾಗಿದ್ದು ಇಲ್ಲಿಗೆ ಹೆಚ್ಚು ಪ್ರವಾಸಿಗರು ಬರುತ್ತಾರೆ. ಹಾಗೇ ಮೊರಾಕ್ಕೊ ಸರ್ಕಾರಕ್ಕೆ ಸಾಕಷ್ಟು ಆದಾಯ ಇದೇ ಪ್ರವಾಸೋದ್ಯಮದ ಮೂಲಕ ಬರುತ್ತದೆ. ಆದರೆ ಭೂಕಂಪ ಎಲ್ಲವನ್ನ ಬಲಿ ಪಡೆದಿದೆ. ಇದೇ ವೇಳೆ ಭಾರತವು ಕೂಡ ಮೊರಾಕ್ಕೊಗೆ ನೆರವು ನೀಡುವ ಭರವಸೆ ನೀಡಿದೆ. ಪ್ರಧಾನಿ ಮೋದಿ ಅವರು, ಎಲ್ಲ ರೀತಿ ನೆರವು ನೀಡಲು ಭಾರತ ಸಿದ್ಧವಾಗಿದೆ. ಈ ಕಷ್ಟದ ಸಂದರ್ಭದಲ್ಲಿ ಜಗತ್ತು ಮೊರಾಕ್ಕೊ ಜೊತೆ ನಿಂತಿದೆ ಎಂದು ನಿನ್ನೆ ಧೈರ್ಯ ತುಂಬಿದ್ದರು.
ಒಟ್ನಲ್ಲಿ ಸಂಕಷ್ಟದಲ್ಲಿ ಇರುವ ಮೊರಾಕ್ಕೊ ಜನಕ್ಕೆ ನೆರವು ನೀಡಬೇಕಿದೆ. ಅತ್ಯಂತ ಭೀಕರ ಸ್ಥಿತಿಯಲ್ಲಿ ಏನು ಮಾಡುವುದು ಎಂಬುದೇ ತಿಳಿಯುತ್ತಿಲ್ಲ. ಎಷ್ಟೋ ಮಕ್ಕಳು ತಮ್ಮ ಅಪ್ಪ & ಅಮ್ಮನ ಕಳೆದುಕೊಂಡಿದ್ದಾರೆ. ಪುಟಾಣಿಗಳು ಏನೂ ತಿಳಿಯದ ಸ್ಥಿತಿ ನಿರ್ಮಾಣವಾಗಿದೆ. ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದವರು ಒಂದು ದಿನದ ಒಳಗೆ ಬೀದಿಗೆ ಬಿದ್ದಿದ್ದಾರೆ. ಹೀಗೆ ಭೀಕರ ಸಂಕಷ್ಟ ಎದುರಾದ ಸಂದರ್ಭದಲ್ಲಿ ಜಗತ್ತು ಸಹಾಯ ಮಾಡುತ್ತದೆ ಎಂಬ ನಿರೀಕ್ಷೆ ಮೊರಾಕ್ಕೊ ಜನರಲ್ಲಿ ಇದೆ.












Click it and Unblock the Notifications