ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣ ಶೇ 50ರಷ್ಟು ಏರಿಕೆ
ಜೂರಿಕ್, ಜೂನ್ 28: ಕಪ್ಪುಹಣಕ್ಕೆ ನಿಯಂತ್ರಣ ಹಾಕುವ ಸರ್ಕಾರದ ಪ್ರಯತ್ನಗಳ ನಡುವೆಯೂ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಇರಿಸುವ ಹಣದ ಪ್ರಮಾಣ ಶೇ 50ರಷ್ಟು ಹೆಚ್ಚಾಗಿದೆ.
2017ರಲ್ಲಿ ಭಾರತೀಯ ಸಿರಿವಂತರು ಸ್ವಿಸ್ ಬ್ಯಾಂಕುಗಳಲ್ಲಿ 7 ಸಾವಿರ ಕೋಟಿ ರೂ. ಹಣ ಇರಿಸಿದ್ದಾರೆ ಎಂದು ಸ್ವಿಸ್ ರಾಷ್ಟ್ರೀಯ ಬ್ಯಾಂಕ್ ಬಿಡುಗಡೆ ಮಾಡಿರುವ ಮಾಹಿತಿ ತಿಳಿಸಿದೆ.
ಸ್ವಿಸ್ ಬ್ಯಾಂಕುಗಳಲ್ಲಿ ಎಲ್ಲ ವಿದೇಶ ಗ್ರಾಹಕರು ಇರಿಸುವ ಒಟ್ಟಾರೆ ಮೊತ್ತವು ಮೂರು ಪಟ್ಟು ಏರಿಕೆಯಾಗಿದ್ದು, 2017ರಲ್ಲಿ 100 ಲಕ್ಷ ಕೋಟಿ ಹಣ ಇರಿಸಲಾಗಿದೆ ಎಂದು ವರದಿ ತಿಳಿಸಿದೆ.

ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಇರಿಸಿರುವ ಹಣದ ಮಾಹಿತಿ ನೀಡುವಂತೆ ಭಾರತ ಸರ್ಕಾರ ಬ್ಯಾಂಕುಗಳಿಗೆ ಮನವಿ ಮಾಡುತ್ತಿದೆ. ಆದರೆ, ಗೋಪ್ಯತೆ ಕಾಪಾಡಿಕೊಳ್ಳುವ ಸಲುವಾಗಿ ಮಾಹಿತಿ ದೊರಕುತ್ತಿಲ್ಲ.
2016ರಲ್ಲಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರು ಇರಿಸುವ ಹಣದ ಪ್ರಮಾಣ ಶೇ 45ರಷ್ಟು ಕುಸಿತವಾಗಿತ್ತು. ಆ ವರ್ಷ 4,500 ಕೋಟಿ ರೂಪಾಯಿ ಹಣ ಜಮೆಯಾಗಿತ್ತು. 1987ರಿಂದ ಬ್ಯಾಂಕುಗಳ ಪ್ರಾಧಿಕಾರ ಹಣದ ಮಾಹಿತಿ ವಿವರ ನೀಡಲು ಆರಂಭಿಸಿದ ಬಳಿಕ ಇದು ಅತಿ ಕಡಿಮೆ ಮೊತ್ತವಾಗಿತ್ತು.
2006ರ ಅಂತ್ಯದ ವೇಳೆಗೆ 23,000 ಕೋಟಿ ರೂ. ಹಣವನ್ನು ಭಾರತೀಯರು ಸ್ವಿಸ್ ಬ್ಯಾಂಕ್‌ನಲ್ಲಿ ಇರಿಸಿದ್ದು ಇದುವರೆಗಿನ ಗರಿಷ್ಠ ಮೊತ್ತವಾಗಿದೆ. ಆದರೆ, ದಶಕದಿಂದ ಈಚೆಗೆ ಅದರ ಹತ್ತನೇ ಒಂದು ಭಾಗ ಮಾತ್ರ ಹಣ ಜಮೆಯಾಗುತ್ತಿದೆ.












Click it and Unblock the Notifications