10 ವರ್ಷಗಳ ಬಳಿಕ ಮಾಲೀಕಳ 30ನೇ ಹುಟ್ಟುಹಬ್ಬದಂದೇ ಮನೆಗೆ ಮರಳಿದ ಮುದ್ದಿನ ಬೆಕ್ಕು ಚಾರ್ಲಿ!
ಕೆಲವರಿಗೆ ಈ ಸಾಕುಪ್ರಾಣಿಗಳಾದ ಕೋಳಿ, ನಾಯಿ, ಬೆಕ್ಕುಗಳ ಮೇಲೆ ಅಪಾರ ಪ್ರೀತಿ ಇರುತ್ತದೆ. ಒಮ್ಮೆ ಅವು ನಮ್ಮಿಂದ ದೂರವಾದರೆ ಉಂಟಾಗುವ ನೋವು ಅಷ್ಟಿಷ್ಟಲ್ಲ. ಆದರೆ, ಯುಕೆ ವೇಲ್ಸ್‌ನಲ್ಲಿ ವಾಸವಾಗಿರುವ ಇಬ್ಬರು ಸಹೋದರಿಯರ ಬಾಳಿನಲ್ಲಿ ನಿಜಕ್ಕೂ ಒಂದು ಅಚ್ಚರಿಯ ಪವಾಡವೇ ನಡೆದಿದೆ.
ಬರೋಬ್ಬರಿ 10 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ತಮ್ಮ ಮುದ್ದಿನ ಬೆಕ್ಕು ಚಾರ್ಲಿ, ಅಚ್ಚರಿಯ ರೀತಿಯಲ್ಲಿ ಮರಳಿ ಬಂದಿದೆ. ಅದು ಕೂಡ ಸಹೋದರಿ ಲೂಸಿ ರಾಬರ್ಟ್‌ಸನ್ ಅವರ 30ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಎಂಬುದು ಈ ಘಟನೆಯ ವಿಶೇಷತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಲೂಸಿ ರಾಬರ್ಟ್‌ಸನ್ ಹಾಗೂ ಹನ್ನಾ ಡೇವಿಸ್ ಎಂಬ ಸಹೋದರಿಯರಿಗೆ ಪಶುವೈದ್ಯರೊಬ್ಬರಿಂದ ಬಂದ ಒಂದು ಅನಿರೀಕ್ಷಿತ ಕರೆ ಅವರ ಜೀವನದ ಅತಿದೊಡ್ಡ ಖುಷಿಗೆ ಕಾರಣವಾಗಿದೆ.
10 ವರ್ಷಗಳಿಂದ ನಾಪತ್ತೆಯಾಗಿದ್ದ ಬೆಕ್ಕು: ಚಾರ್ಲಿ ಕಳೆದುಹೋಗಿದ್ದೆಲ್ಲಿ?
ಚಾರ್ಲಿ ಎಂಬ ಮುದ್ದಿನ ಬೆಕ್ಕು 2016ರ ಏಪ್ರಿಲ್‌ನಲ್ಲಿ ನಾಪತ್ತೆಯಾಗಿತ್ತು. ಆಗ ಅದಕ್ಕೆ ಕೇವಲ ಮೂರು ವರ್ಷ ವಯಸ್ಸಾಗಿತ್ತು. ಚಾರ್ಲಿ ಹೆಚ್ಚಾಗಿ ಮನೆಯಿಂದ ಹೊರಗೆ ಓಡಾಡಿಕೊಂಡಿರುವ ಬೆಕ್ಕಾಗಿತ್ತು. ಒಮ್ಮೆ ಸಹೋದರಿ ಹನ್ನಾ ಡೇವಿಸ್ ಅವರು ನ್ಯೂಬ್ರಿಡ್ಜ್‌ನಿಂದ ಅಬರ್‌ಕಾರ್ನ್‌ಗೆ ವಾಸ್ತವ್ಯ ಬದಲಾಯಿಸಿದಾಗ, ಚಾರ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಕುಟುಂಬವು ಹಲವಾರು ತಿಂಗಳುಗಳ ಕಾಲ ಅದೆಷ್ಟೇ ಹುಡುಕಿದರೂ ಬೆಕ್ಕಿನ ಸುಳಿವು ಸಿಕ್ಕಿರಲಿಲ್ಲ.
"ನಮ್ಮ ಬೆಕ್ಕು ಮರಳಿ ಸಿಗದಿರುವುದು ನಮಗೆ ತೀವ್ರ ನೋವು ತಂದಿತ್ತು. ಅದು ಯಾವುದಾದರೂ ವಾಹನಕ್ಕೆ ಸಿಲುಕಿ ಅಪಘಾತಕ್ಕೀಡಾಗಿರಬಹುದು ಅಥವಾ ಬದುಕೇ ಇರಲಿಕ್ಕಿಲ್ಲ ಎಂದು ನಾವು ಆತಂಕಗೊಂಡಿದ್ದೆವು. ಆದರೂ ಅದರ ಮೇಲಿನ ಭರವಸೆ ಕಳೆದುಕೊಂಡಿರಲಿಲ್ಲ" ಎಂದು ಲೂಸಿ ರಾಬರ್ಟ್‌ಸನ್ ಬಿಬಿಸಿ ರೇಡಿಯೋ ವೇಲ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ನೋವನ್ನ ಹಂಚಿಕೊಂಡಿದ್ದಾರೆ.
ಪಶುವೈದ್ಯರ ಕರೆ ಮತ್ತು ಮೈಕ್ರೋಚಿಪ್ ನೆರವು: ಪತ್ತೆಯಾಗಿದ್ದು ಹೇಗೆ?
ವರ್ಷಗಳುರುಳಿದರೂ ಚಾರ್ಲಿಯ ನೆನಪು ಅವರನ್ನ ಕಾಡುತ್ತಲೇ ಇತ್ತು. ಆದರೆ, ಇತ್ತೀಚೆಗೆ ಸ್ಥಳೀಯ ವ್ಯಕ್ತಿಯೊಬ್ಬರಿಗೆ ಈ ಬೆಕ್ಕು ಪೊದೆಗಳಲ್ಲಿ ವಾಸಿಸುತ್ತಿರುವುದು ಕಂಡುಬಂದಿದೆ. ಆ ವ್ಯಕ್ತಿಯು ಹಲವಾರು ವಾರಗಳ ಕಾಲ ಈ ಅನಾಥ ಬೆಕ್ಕಿಗೆ ಆಹಾರ ನೀಡಿ ಪೋಷಿಸಿದ್ದಾರೆ. ಬಳಿಕ ಹೆಚ್ಚಿನ ತಪಾಸಣೆಗಾಗಿ ಬೆಕ್ಕನ್ನ ಸ್ಥಳೀಯ ಪಶುವೈದ್ಯರ ಬಳಿಗೆ ಕರೆದೊಯ್ದಿದ್ದಾರೆ.
ಪಶುವೈದ್ಯರು ಬೆಕ್ಕಿನ ಮೈಲಿದ್ದ ಮೈಕ್ರೋಚಿಪ್ ಅನ್ನು ಸ್ಕ್ಯಾನ್ ಮಾಡಿದಾಗ, ಅದರಲ್ಲಿ ಹನ್ನಾ ಡೇವಿಸ್ ಅವರ ಮೊಬೈಲ್ ಸಂಖ್ಯೆ ಪತ್ತೆಯಾಗಿದೆ. ತಕ್ಷಣವೇ ಅವರು ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ವಿಷಯ ಕೇಳಿದ ತಕ್ಷಣ ಸಹೋದರಿಯರಿಗೆ ಆಶ್ಚರ್ಯ ತಡೆಯಲಾಗಲಿಲ್ಲ. ಸ್ವತಃ ಪಶುವೈದ್ಯರಿಗೂ ಈ ಬೆಕ್ಕು 10 ವರ್ಷಗಳಿಂದ ನಾಪತ್ತೆಯಾಗಿತ್ತು ಎಂಬ ವಿಚಾರ ತಿಳಿದು ತೀವ್ರ ಅಚ್ಚರಿಯಾಗಿದೆ.
ಹುಟ್ಟುಹಬ್ಬದ ದಿನ ಅಚ್ಚರಿ
ಲೂಸಿ ಅವರ 30ನೇ ಹುಟ್ಟುಹಬ್ಬದ ದಿನದಂದೇ ಈ ಸಿಹಿಸುದ್ದಿ ಸಿಕ್ಕಿರುವುದು ಇಡೀ ಕುಟುಂಬದಲ್ಲಿ ಸಂತಸದ ವಾತಾವರಣ ನಿರ್ಮಾಣ ಮಾಡಿದೆ. "ಇದು ನನ್ನ ಜೀವನದ ಅತ್ಯಂತ ಖುಷಿಯ ಘಟನೆ. 10 ವರ್ಷಗಳ ಹಿಂದೆ ನನ್ನ ಸಹೋದರಿ ಕಳೆದುಕೊಂಡಿದ್ದ ಮುದ್ದಿನ ಕೂಸು ಇಂದು ಮರಳಿ ಸಿಕ್ಕಿದೆ. ಇಂದು ಸಂಜೆ ನಾವು ಆಕೆಯನ್ನು ಕರೆತರಲು ಹೋಗುತ್ತಿದ್ದೇವೆ" ಎಂದು ಲೂಸಿ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ವಿಶೇಷವೆಂದರೆ, 10 ವರ್ಷಗಳ ಕಾಲ ಮನೆಯಿಂದ ದೂರವಿದ್ದರೂ ಚಾರ್ಲಿ ಸಂಪೂರ್ಣ ಆರೋಗ್ಯವಾಗಿದೆ. ಅದಕ್ಕೆ ಯಾವುದೇ ರೀತಿಯ ಗಂಭೀರ ಆರೋಗ್ಯ ಸಮಸ್ಯೆಗಳಿಲ್ಲ. ಇಷ್ಟು ವರ್ಷಗಳ ಕಾಲ ಈ ಬೆಕ್ಕು ಎಲ್ಲಿತ್ತು, ಹೇಗೆ ಬದುಕಿತ್ತು ಎಂಬುದು ನಿಗೂಢವಾಗಿಯೇ ಉಳಿದಿದ್ದರೂ, ತಮ್ಮ ಮುದ್ದಿನ ಪ್ರಾಣಿ ಮರಳಿ ಬಂದಿರುವ ಖುಷಿಯಲ್ಲಿ ಈ ಸಹೋದರಿಯರು ತೇಲಾಡುತ್ತಿದ್ದಾರೆ.


Click it and Unblock the Notifications
