Miracle in China: 55 ದಿನ ಕೋಮಾದಲ್ಲಿದ್ದ ಬಾಲಕ ಎಚ್ಚರವಾಗಿದ್ದು ಹೇಗೆ? ಇಲ್ಲಿದೆ ಮಾಹಿತಿ
ವೈದ್ಯಕೀಯ ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ, ಕೆಲವೊಮ್ಮೆ ಪ್ರೀತಿ ಮತ್ತು ನಂಬಿಕೆಯ ಮುಂದೆ ಸೋಲುತ್ತದೆ ಎಂಬುದಕ್ಕೆ ಚೀನಾದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕಳೆದ ನವೆಂಬರ್‌ನಲ್ಲಿ ಭೀಕರ ಕಾರು ಅಪಘಾತಕ್ಕೆ ತುತ್ತಾಗಿ ಕೋಮಾಗೆ ಜಾರಿದ್ದ 8 ವರ್ಷದ ಲಿಯು ಚುಕ್ಸಿ (Liu Chuxi) ಎಂಬ ಬಾಲಕ, ಬರೋಬ್ಬರಿ 55 ದಿನಗಳ ನಂತರ ತನ್ನ ಸಹಪಾಠಿಗಳ ಧ್ವನಿ ಕೇಳಿ ಪವಾಡಸದೃಶ ರೀತಿಯಲ್ಲಿ ಎಚ್ಚರಗೊಂಡಿದ್ದಾನೆ.
ಘಟನೆ ಹಿನ್ನೆಲೆ:
ಮಧ್ಯ ಚೀನಾದ ಹೂನಾನ್ ಪ್ರಾಂತ್ಯದ ಯುವಿಯಾಂಗ್ ನಗರದ ಲಿಯು, ನವೆಂಬರ್‌ನಲ್ಲಿ ನಡೆದ ಅಪಘಾತದಲ್ಲಿ ತಲೆಗೆ ಮತ್ತು ಶ್ವಾಸಕೋಶಕ್ಕೆ ತೀವ್ರವಾಗಿ ಏಟು ಮಾಡಿಕೊಂಡಿದ್ದನು. ಬಾಲಕ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂದು ವೈದ್ಯರು ಕೈಚೆಲ್ಲಿದ್ದರು. ಆದರೆ ಆತನ ತಾಯಿ ಮಾತ್ರ ಭರವಸೆ ಕಳೆದುಕೊಳ್ಳಲಿಲ್ಲ. ಮಗನಿಗಾಗಿ ಹಲವಾರು ಆಸ್ಪತ್ರೆಗಳನ್ನು ಅಲೆದರು. ಅಂತಿಮವಾಗಿ, ಪರಿಚಿತ ಶಬ್ದಗಳು ಅಥವಾ ಇಷ್ಟದ ಸಂಗೀತ ಮೆದುಳನ್ನು ಚುರುಕುಗೊಳಿಸಬಹುದು ಎಂದು ವೈದ್ಯರೊಬ್ಬರು ನೀಡಿದ ಸಲಹೆ ಪವಾಡಕ್ಕೆ ದಾರಿಯಾಯಿತು.

ವೈದ್ಯರ ಸಲಹೆಯಂತೆ, ತಾಯಿ ಶಾಲೆಯ ಪ್ರಾರ್ಥನೆ ಮತ್ತು ವ್ಯಾಯಾಮದ ಸಂಗೀತವನ್ನು ಪ್ರತಿದಿನ ಬಾಲಕನ ಬೆಡ್ ಪಕ್ಕದಲ್ಲಿ ಹಾಕುತ್ತಿದ್ದರು. ಇದೇ ವೇಳೆ ಲಿಯು ಶಿಕ್ಷಕರು, ಆತನ ಸಹಪಾಠಿಗಳಿಗೆ ವಿಡಿಯೋ ಸಂದೇಶಗಳನ್ನು ಕಳುಹಿಸಲು ಹೇಳಿದರು. "ಚುಕ್ಸಿ, ಬೇಗ ಎದ್ದೇಳು, ಫುಟ್ಬಾಲ್ ಆಡಲು ಹೋಗೋಣ," ಎಂದು ಒಬ್ಬ ಸ್ನೇಹಿತ ಹೇಳಿದರೆ, ಇನ್ನೊಬ್ಬ ಬಾಲಕಿ "ನಾವೆಲ್ಲರೂ ನಿನಗಾಗಿ ಕಾಯುತ್ತಿದ್ದೇವೆ, ಪರೀಕ್ಷೆ ಹತ್ತಿರ ಬರುತ್ತಿದೆ, ಎದ್ದು ಬಾ," ಎಂದು ಕಣ್ಣೀರು ಹಾಕಿದ್ದಳು. ಈ ವಿಡಿಯೋಗಳು ಮತ್ತು ಶಿಕ್ಷಕರ ಪಾಠದ ರೆಕಾರ್ಡಿಂಗ್‌ಗಳೇ ಲಿಯುಗೆ ಮರುಜೀವ ನೀಡಿದವು.
ಸುಮಾರು 45 ದಿನಗಳ ನಂತರ, ಲಿಯು ಕಣ್ಣುರೆಪ್ಪೆಗಳನ್ನು ಅಲುಗಾಡಿಸಲು ಪ್ರಾರಂಭಿಸಿದನು. ಶಿಕ್ಷಕರ ಧ್ವನಿ ಕೇಳಿದಾಗ ನಗಲು ಯತ್ನಿಸಿದನು. ಸರಿಯಾಗಿ 55ನೇ ದಿನದಂದು ಆತ ಸಂಪೂರ್ಣ ಪ್ರಜ್ಞೆಗೆ ಮರಳಿದನು. ಆಸ್ಪತ್ರೆಗೆ ಭೇಟಿ ನೀಡಿದ ಶಿಕ್ಷಕರು, "ನಿನಗೆ ಹೋಮ್‌ವರ್ಕ್‌ನಿಂದ ವಿನಾಯಿತಿ ನೀಡಲಾಗಿದೆ" ಎಂದು ತಮಾಷೆ ಮಾಡಿದಾಗ, ಬಾಲಕ ಕಣ್ಣು ಅಗಲಿಸಿ ಕೈಬೀಸಿದ್ದು ಎಲ್ಲರ ಕಣ್ಣಲ್ಲಿ ಆನಂದಬಾಷ್ಪ ತರಿಸಿತು.
"ಕಾರ್ಮೋಡ ಸರಿದು ಸೂರ್ಯನನ್ನು ನೋಡಿದಂತಾಗಿದೆ. ನಿಜಕ್ಕೂ ಪವಾಡ ನಡೆದಿದೆ" ಎಂದು ಬಾಲಕನ ತಾಯಿ ಭಾವುಕರಾಗಿ ನುಡಿದಿದ್ದಾರೆ. ಸ್ನೇಹಿತರ ಪ್ರೀತಿಯ ಕರೆ ಎಂಥವರನ್ನೂ ಬದುಕಿಸಬಲ್ಲದು ಎಂಬುದನ್ನು ಈ ಪುಟ್ಟ ಮಕ್ಕಳು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.












Click it and Unblock the Notifications