ಅಲಾಸ್ಕದಲ್ಲಿ 8.2 ತೀವ್ರತೆಯ ಭಾರೀ ಭೂಕಂಪ, ಸುನಾಮಿ ಎಚ್ಚರಿಕೆ
ಅಲಾಸ್ಕ, ಜನವರಿ 23: ಅಲಾಸ್ಕ ಕರಾವಳಿಯಲ್ಲಿ ಮಂಗಳವಾರ ಬೆಳಿಗ್ಗೆ (ಸ್ಥಳೀಯ ಕಾಲಮಾನ) ಭಾರೀ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 8.2 ದಾಖಲಾಗಿದೆ.
ಭೂಕಂಪದ ಬೆನ್ನಿಗೆ ಕರಾವಳಿಯಲ್ಲಿರುವ ಜನರಿಗೆ ತೀರ ಪ್ರದೇಶದಿಂದ ದೂರ ತೆರಳುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಅಮೆರಿಕಾ ಭೂಗರ್ಭ ಇಲಾಖೆಯ ಮಾಹಿತಿಗಳ ಪ್ರಕಾರ ಚಿನಿಯಾಕ್ ನಿಂದ 256 ಕಿಲೋಮೀಟರ್ ದೂರದಲ್ಲಿ 10 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರವಿತ್ತು.
ತೀರ ಪ್ರದೇಶದಲ್ಲಿದ್ದರೆ ಒಳನಾಡಿಗೆ ತೆರಳಿ ಮತ್ತು ಎತ್ತರದ ಪ್ರದೇಶಗಳಿಗೆ ಹೋಗಿ ಎಂದು ಅಲಾಸ್ಕಾ ಮತ್ತು ಬ್ರಿಟಿಷ್ ಕೊಲಂಬಿಯಾದ ಜನರಿಗೆ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿದೆ. ಭೂಕಂಪದಿಂದ ಸುನಾಮಿ ಏಳುವ ಸಾಧ್ಯತೆಗಳು ಹೆಚ್ಚಾಗಿವೆ ಅಥವಾ ಈಗಾಗಲೇ ಎದ್ದಿರಬಹುದು ಎಂದು ಎಚ್ಚರಿಕೆಯಲ್ಲಿ ತಿಳಿಸಲಾಗಿದೆ.

ಅಲಾಸ್ಕ ಮತ್ತು ಕೆನಡಾಗೆ ಸುನಾಮಿ ಎಚ್ಚರಿಕೆ ನೀಡಲಾಗಿದ್ದು ಅಮೆರಿಕಾದ ಪಶ್ಚಿಮ ಕರಾವಳಿ ಮತ್ತು ಹವಾಯಿ ದ್ವೀಪದಲ್ಲಿ ಸುನಾಮಿ ಸಾಧ್ಯತೆಗಳ ಮೇಲೆ ನಿಗಾ ಇಡಲಾಗಿದೆ.
ಜಪಾನ್ ಹವಾಮಾನ ಇಲಾಖೆಯು ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದು ಸುನಾಮಿ ಮುನ್ನೆಚ್ಚರಿಕೆ ಮಾತ್ರ ನೀಡಿಲ್ಲ.












Click it and Unblock the Notifications