Kamala Harris: ಮಹಿಳೆಯರ ಮತಗಳನ್ನೂ ಸೆಳೆಯುವಲ್ಲಿ ಕಮಲಾ ಹ್ಯಾರಿಸ್ ವಿಫಲ- ಡೊನಾಲ್ಡ್ ಟ್ರಂಪ್ ಗೆಲುವು ಬಹುತೇಕ ಖಚಿತ
US Elections Result 2024: ಅಧ್ಯಕ್ಷ ಪಟ್ಟಕ್ಕಾಗಿ ಅಮೆರಿಕದಲ್ಲಿ ನಡೆಯುತ್ತಿರುವ ಚುನಾವಣೆಯು ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ಅವರು ಸತತ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಿರುವ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಸೋಲಿನ ಹತ್ತಿರಕ್ಕೆ ಜಾರುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಈಗ ಫಲಿತಾಂಶ ಹೊರಬಂದಿರುವ ಬಹುತೇಕ ಕೌಂಟಿಗಳಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುನ್ನಡೆಯನ್ನು ಸಾಧಿಸುತ್ತಲೇ ಬಂದಿದ್ದಾರೆ. ವಿಪರ್ಯಾಸವೆಂದರೆ, ಚುನಾವಣೆಗೂ ಮುನ್ನ ಅಮೆರಿಕದ ಮಹಿಳೆಯರು ಕಮಲಾ ಹ್ಯಾರಿಸ್ ಪರ ಒಲವು ಹೊಂದಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಹೊರಬರುತ್ತಿರುವ ಫಲಿತಾಂಶವನ್ನು ಗಮನಿಸಿದರೆ ಮಹಿಳೆಯರೇ ಕಮಲಾ ಹ್ಯಾರಿಸ್ ಪರ ಇಲ್ಲವೆಂದು ತಿಳಿದುಬರುತ್ತದೆ.

ಚುನಾವಣೋತ್ತರ ಸಮೀಕ್ಷೆಗಳಲ್ಲಿಯೇ ಈ ಸುಳಿವು ದೊರೆತಿತ್ತು ಎಂದು ಅಮೆರಿಕದ ಮಾಧ್ಯಮಗಳು ವಿಶ್ಲೇಷಿಸಿವೆ. ಈ ಚುನಾವಣೆಯಲ್ಲಿ ಪುರುಷರು ಹಾಗೆಯೇ ಮಹಿಳೆಯರು ಮತ ಚಲಾಯಿಸಿದ್ದಾರೆ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.
ಈಗ ಬಂದಿರುವ ಹಾಗೂ ಹಿಂದಿನ ಫಲಿತಾಂಶವನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ, ಕಳೆದ ಬಾರಿ ಜೋ ಬೈಡನ್ ಅವರಿಗೆ ಬಂದಿದ್ದ ಮಹಿಳೆಯರ ಮತಗಳೂ ಸಹ ಕಮಲಾ ಹ್ಯಾರಿಸ್ ಅವರಿಗೆ ಬಂದಿಲ್ಲವೆಂದು ತಿಳಿದುಬರುತ್ತದೆ. ಜೋ ಬೈಡನ್ ಕಳೆದ ಬಾರಿ ಶೇ 57 ರಷ್ಟು ಮಹಿಳೆಯರ ಮತಗಳು ದೊರೆತಿದ್ದವು. ಆದರೆ, ಕಮಲಾ ಹ್ಯಾರಿಸ್ ಅವರಿಗೆ ಶೇ 54 ರಷ್ಟು ಮಹಿಳೆಯರು ಮತಗಳನ್ನು ಚಲಾಯಿಸಿದ್ದಾರೆ ಎಂದು ಅಂಕಿಅಂಶಗಳು ಹೇಳಿವೆ.
ಡೊನಾಲ್ಡ್ ಟ್ರಂಪ್ ಅವರು ಉತ್ತರ ಕೆರೊಲಿನಾ ಮತ್ತು ಜಾರ್ಜಿಯಾ ರಾಜ್ಯದಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಅಮೆರಿಕ ಅಧ್ಯಕ್ಷರನ್ನು ಚುನಾಯಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಐದು ರಾಜ್ಯಗಳಲ್ಲಿ ಟ್ರಂಪ್ ಅವರು ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಪೆನ್ಸಿಲ್ವೇನಿಯಾ ಹಾಗೂ ಮಿಚಿಗನ್ ರಾಜ್ಯಗಳಲ್ಲಿ ಟ್ರಂಪ್ ಅವರು ಮುನ್ನಡೆ ಸಾಧಿಸಿದ್ದು, ಫಲಿತಾಂಶಗಳು ಅಂತಿಮವಾಗಿಲ್ಲ.
ಈ ಬಾರಿಯ ಚುನಾವಣೆಯಲ್ಲಿ ಸುಮಾರು 86 ಮಿಲಿಯನ್ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. 60 ವರ್ಷದ ಕಮಲಾ ಹ್ಯಾರಿಸ್ ಅವರು ಜುಲೈನಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದರು. ಅವರು ಜೋ ಬೈಡನ್ ನೇತೃತ್ವದ ಸರ್ಕಾರದಲ್ಲಿ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಜೋ ಬೈಡನ್ ಅವರು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದರು. ರಿಪಬ್ಲಿಕನ್ ಪಕ್ಷದಿಂದ ಮರು ಆಯ್ಕೆ ಬಯಸಿ ಸತತ ಮೂರನೇ ಬಾರಿಗೆ ಡೊನಾಲ್ಡ್ ಟ್ರಂಪ್ ಕಣದಲ್ಲಿದ್ದಾರೆ.












Click it and Unblock the Notifications