ಕಮಲಾ ಹ್ಯಾರಿಸ್ ಅಧಿಕೃತ ಎಂಟ್ರಿ: ಡೊನಾಲ್ಡ್ ಟ್ರಂಪ್‌ಗೆ ಶುರುವಾಯ್ತಾ ಭಯ?
ಕಮಲಾ ಹ್ಯಾರಿಸ್ & ಡೊನಾಲ್ಡ್ ಟ್ರಂಪ್ ನಡುವೆ ರಣಕಾಳಗ ಏರ್ಪಟ್ಟಿದೆ. ಇದೇ ಕಾರಣಕ್ಕೆ ಈಗ ತಿಕ್ಕಾಟ ಕೂಡ ಜೋರಾಗಿದ್ದು, ಗೆಲುವಿಗಾಗಿ ಭರ್ಜರಿ ಫೈಟಿಂಗ್ ಶುರುವಾಗಿದೆ. ಹೀಗಿದ್ದಾಗ ಅಧಿಕೃತವಾಗಿ ಕಮಲಾ ಹ್ಯಾರಿಸ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದು, ಇದು ಡೊನಾಲ್ಡ್ ಟ್ರಂಪ್ ಗೆಲುವಿಗೆ ಅಡ್ಡಿ ಮಾಡುವ ಆತಂಕ ಟ್ರಂಪ್ ಅಭಿಮಾನಿ ಬಳಗಕ್ಕೆ ಇದೀಗ ಕಾಡತೊಡಗಿದೆ.
2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಇಡೀ ಜಗತ್ತಿನ ಮೇಲೆ ದೊಡ್ಡ ಪರಿಣಾಮವನ್ನು ಬೀರಬಹುದು. ಯಾಕಂದ್ರೆ ಈ ಬಾರಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಕ್ರಾಂತಿಕಾರಿಯಾದ ನಿರ್ಧಾರಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ದಟ್ಟವಾಗಿದೆ. ಕೆಲವೇ ಕೆಲವು ದಿನಗಳ ಹಿಂದೆ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆ ರೇಸ್‌ನಲ್ಲಿ ಮುಂದೆ ಇದ್ದು, ಇನ್ನೇನು ಗೆಲ್ಲುವುದು ಕೂಡ ಫಿಕ್ಸ್ ಎನ್ನುವ ಮಟ್ಟಿಗೆ ವಿಶ್ವಾಸ ಮೂಡಿಸಿದ್ದರು. ಹೀಗಿದ್ದಾಗ ದಿಢೀರ್ ಜೋ ಬೈಡನ್ ಚುನಾವಣೆಗೆ ಗುಡ್‌ಬೈ ಹೇಳಿ, ಕಮಲಾ ಹ್ಯಾರಿಸ್ ಅವರಿಗೆ ಚಾನ್ಸ್ ಕೊಟ್ಟರು.

ಭಾರತ ಮೂಲದ ಕಮಲಾ ಹ್ಯಾರಿಸ್!
ಜೋ ಬೈಡನ್ ಬದಲು ಕಮಲಾ ಹ್ಯಾರಿಸ್ ಅವರು ಟ್ರಂಪ್ ವಿರುದ್ಧ ಹೋರಾಟ ನಡೆಸುವರು ಎಂಬ ವಿಚಾರ ಗೊತ್ತಾಗಿದ್ದೇ ತಡ, ಡೊನಾಲ್ಡ್ ಟ್ರಂಪ್ ಅವರಿಗೆ ಭಯ ಕಾಡುತ್ತಿದೆ. ಯಾಕೆ ಅಂದ್ರೆ ಕಮಲಾ ಹ್ಯಾರಿಸ್ ಅವರ ತಾಯಿ ಭಾರತ ಮೂಲದವರು & ಕಮಲಾ ತಂದೆ ಅಲ್ಲೇ ಪಕ್ಕದ ಜಮೈಕಾ ಮೂಲದವರು. ಹೀಗಾಗಿ ಕಮಲಾ ಅವರಿಗೆ ಇದೀಗ ಒಂದು ಕಡೆ ಆಫ್ರಿಕನ್ ಅಮೆರಿಕನ್ & ಭಾರತೀಯರ ಬೆಂಬಲ ಸಿಗುವುದು ಬಹುತೇಕ ಪಕ್ಕಾ ಆಗಿದೆ.
ಹೀಗಾಗಿಯೇ ಈಗ ಡೊನಾಲ್ಡ್ ಟ್ರಂಪ್ ಅವರ ಗೆಲುವು ತುಂಬಾ ಕಷ್ಟ ಎನ್ನಲಾಗುತ್ತಿದೆ. ಕೆಲವೇ ದಿನಗಳ ಹಿಂದೆ ಡೊನಾಲ್ಡ್ ಟ್ರಂಪ್ ಗೆಲ್ಲುವ ಕುದುರೆ ಆಗಿದ್ದರು, ಇದೀಗ ಸೋಲಿಗೆ ಹತ್ತಿರ ಆಗುತ್ತಿದ್ದಾರೆ. ಈ ಸಮಯದಲ್ಲೇ ಕಮಲಾ ಹ್ಯಾರಿಸ್ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಯಾಗಿ ನಾಮಪತ್ರವನ್ನ ಕೂಡ ಸಲ್ಲಿಸಿದ್ದಾರೆ!
ಮಾಹಿತಿ ತಿಳಿಸಿದ ಕಮಲಾ ಹ್ಯಾರಿಸ್!
ಈ ಬಗ್ಗೆ 'ಎಕ್ಸ್' ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ಕಮಲಾ ಅವರು ಮಾಹಿತಿ ಹಂಚಿಕೊಂಡು, ನಾನು ಅಮೆರಿಕ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಉಮೇದುವಾರಿಕೆ ಅಧಿಕೃತವಾಗಿ ಘೋಷಿಸುವ ಪತ್ರಗಳಿಗೆ ಸಹಿ ಹಾಕಿದ್ದೀನಿ ಎಂದಿದ್ದಾರೆ. ನವೆಂಬರ್‌ನಲ್ಲಿ ಜನಶಕ್ತಿ ಅಭಿಯಾನ ಗೆಲ್ಲುತ್ತದೆ ಎಂದು ಕಮಲಾ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನವೆಂಬರ್ 5ಕ್ಕೆ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಈಗಾಗಲೇ ಕುತೂಹಲದ ಘಟ್ಟ ತಲುಪಿ ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ.












Click it and Unblock the Notifications