ಸುಸ್ತಾದ 7 ವರ್ಷದ ಮಗನನ್ನ ಪರ್ವತದ ಮಧ್ಯದಲ್ಲೇ ಬಿಟ್ಟು ಟ್ರೆಕ್ಕಿಂಗ್ ಮುಂದುವರಿಸಿದ ತಂದೆ: ನೆಟ್ಟಿಗರ ಭಾರಿ ಆಕ್ರೋಶ
ಟೋಕಿಯೋ: ಜಪಾನ್‌ನ ಅತಿ ಎತ್ತರದ ಹಾಗೂ ಅತ್ಯಂತ ಪ್ರಸಿದ್ಧ ಮೌಂಟ್ ಫ್ಯೂಜಿ ಪರ್ವತ ಟ್ರೆಕ್ಕಿಂಗ್ ಪ್ರಿಯರ ಪಾಲಿನ ಸ್ವರ್ಗ ಅಂತಾನೆ ಹೇಳಬಹುದು. ಆದರೆ, ಇಲ್ಲಿಗೆ ಚಾರಣಕ್ಕೆ ಬಂದಿದ್ದ ತಂದೆಯೊಬ್ಬರು ಕೇವಲ ಪರ್ವತ ಹತ್ತಬೇಕು ಎನ್ನುವ ಹುಚ್ಚಿನಲ್ಲಿ, ಸುಸ್ತಾದ ತನ್ನ 7 ವರ್ಷದ ಮಗನನ್ನ ಪರ್ವತದ ಮಧ್ಯದಲ್ಲೇ ಒಂಟಿಯಾಗಿ ಬಿಟ್ಟುಹೋದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ಹೌದು, ಸುರಿಯುವ ಮಳೆ ಹಾಗೂ ಕೊರೆಯುವ ಚಳಿಯ ನಡುವೆ ಬೆಚ್ಚಿಬಿದ್ದಿದ್ದ ಬಾಲಕನನ್ನ ಸ್ಥಳೀಯರ ಹಾಗೂ ಪೊಲೀಸರ ನೆರವಿನಿಂದ ರಕ್ಷಿಸಲಾಗಿದ್ದು, ಈ ಘಟನೆ ಇದೀಗ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ವರದಿಗಳ ಪ್ರಕಾರ, 48 ವರ್ಷದ ಜಪಾನಿ ವ್ಯಕ್ತಿಯೊಬ್ಬರು ಗುರುವಾರ ಮುಂಜಾನೆ ತನ್ನ ಇಬ್ಬರು ಮಕ್ಕಳೊಂದಿಗೆ ಮೌಂಟ್ ಫ್ಯೂಜಿಯ ಫ್ಯೂಜಿನೋಮಿಯಾ ಟ್ರಯಲ್ ಮಾರ್ಗದಲ್ಲಿ ಟ್ರೆಕ್ಕಿಂಗ್ ಆರಂಭಿಸಿದ್ದರು. ಅವರೊಂದಿಗೆ ಒಂದನೇ ತರಗತಿಯಲ್ಲಿ ಓದುತ್ತಿದ್ದ 7 ವರ್ಷದ ಕಿರಿಯ ಮಗ ಹಾಗೂ ಹೈಸ್ಕೂಲ್‌ನಲ್ಲಿ ಓದುತ್ತಿರುವ ಹಿರಿಯ ಮಗನಿದ್ದ. ಸಮುದ್ರ ಮಟ್ಟದಿಂದ ಸುಮಾರು 2,490 ಮೀಟರ್ ಎತ್ತರದಲ್ಲಿರುವ 6ನೇ ಸ್ಟೇಷನ್ ಬಳಿ ತಲುಪುವಷ್ಟರಲ್ಲಿ ಕಿರಿಯ ಮಗನಿಗೆ ವಿಪರೀತ ಸುಸ್ತಾಗಿದೆ.
"ನನಗೆ ಸುಸ್ತಾಗುತ್ತಿದೆ, ಮುಂದೆ ನಡೆಯಲು ಸಾಧ್ಯವಿಲ್ಲ" ಎಂದು ಬಾಲಕ ಹೇಳಿದ್ದಾನೆ. ಈ ವೇಳೆ ಮಗನಿಗೆ ಸಾಂತ್ವನ ಹೇಳಿ ವಿಶ್ರಾಂತಿ ನೀಡಬೇಕಿದ್ದ ತಂದೆ, ಬದಲಿಗೆ "ನೀನು ಇಲ್ಲೇ ಕಾಯುತ್ತಿರು" ಎಂದು ಹೇಳಿ ಆತನನ್ನ ಅಲ್ಲಿಯೇ ಒಂಟಿಯಾಗಿ ಬಿಟ್ಟು, ಹಿರಿಯ ಮಗನೊಂದಿಗೆ ಶಿಖರದತ್ತ ತನ್ನ ಚಾರಣ ಮುಂದುವರಿಸಿದ್ದಾನೆ. ಸ್ಥಳೀಯರು ಹೇಳುವ ಪ್ರಕಾರ ಬೆಳಗಿನ ಜಾವ 4:30ರ ಸುಮಾರಿಗೆ ಆತ ಮಗನನ್ನ ಬಿಟ್ಟು ಹೋಗಿದ್ದ ಎನ್ನಲಾಗಿದೆ.
ಫ್ಯೂಜಿನೋಮಿಯಾ ಟ್ರಯಲ್‌ನಲ್ಲಿ ಬಾಲಕನ ರಕ್ಷಣೆ
ಬೆಳಗ್ಗೆ 7:40ರ ಸುಮಾರಿಗೆ ಪರ್ವತದ ಹವಾಮಾನ ದಿಢೀರ್ ಬದಲಾಗಿದೆ. ಮಂಜು ಮುಸುಕಿದ ವಾತಾವರಣದೊಂದಿಗೆ ಮಳೆ ಸುರಿಯಲಾರಂಭಿಸಿದೆ. ಈ ವೇಳೆ ಆ ಮಾರ್ಗದಲ್ಲಿರುವ ಗುಡಿಸಲೊಂದರ ಸಿಬ್ಬಂದಿಗೆ ಮಳೆಯಲ್ಲೇ ಬೆಂಚ್ ಮೇಲೆ ಒಂಟಿಯಾಗಿ ಕುಳಿತಿದ್ದ ಬಾಲಕನನ್ನ ಕಂಡು ಆತಂಕವಾಗಿದೆ. ತಕ್ಷಣವೇ ಬಾಲಕನನ್ನ ಗುಡಿಸಲಿನ ಒಳಗೆ ಕರೆದೊಯ್ದು ಬೆಚ್ಚಗಿನ ಆಶ್ರಯ ನೀಡಿದ ಸಿಬ್ಬಂದಿ, ಜಪಾನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಆ ಹೊತ್ತಿಗಾಗಲೇ 8ನೇ ನಿಲ್ದಾಣದತ್ತ ತಲುಪಿದ್ದ ತಂದೆಯನ್ನ ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ. "ಚಾರಣವನ್ನ ಕೂಡಲೇ ಕೈಬಿಟ್ಟು, ಮೊದಲು ನಿಮ್ಮ ಮಗನ ಬಳಿ ಹಿಂದಿರುಗಿ" ಎಂದು ಪೊಲೀಸರು ಆತನಿಗೆ ಖಡಕ್ ಸೂಚನೆ ನೀಡಿದ್ದಾರೆ. 6ನೇ ನಿಲ್ದಾಣದಿಂದ 8ನೇ ನಿಲ್ದಾಣಕ್ಕೆ ಹೋಗಲು ಸುಮಾರು 3 ಗಂಟೆ ಬೇಕಾಗುತ್ತದೆ. ಪೊಲೀಸರ ಎಚ್ಚರಿಕೆ ಬಳಿಕ ಕೆಳಗೆ ಬಂದ ತಂದೆಗೆ ಬಾಲಕನನ್ನ ಸುರಕ್ಷಿತವಾಗಿ ಒಪ್ಪಿಸಲಾಗಿದೆ.
ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ
ಪೊಲೀಸರು ತಂದೆಯ ಬೇಜವಾಬ್ದಾರಿಯನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪರ್ವತಾರೋಹಣ ಪೂರ್ಣಗೊಳಿಸಲಾಗದಿದ್ದರೂ ಚಿಂತೆಯಿಲ್ಲ, ಆದರೆ ಚಿಕ್ಕ ಮಗುವನ್ನ ಒಂಟಿಯಾಗಿ ಬಿಡುವುದು ಅಕ್ಷಮ್ಯ ಅಪರಾಧ ಎಂದು ಎಚ್ಚರಿಸಿದ್ದಾರೆ. ತನ್ನ ತಪ್ಪಿನ ಅರಿವಾದ ತಂದೆ, "ನಾನು ತಪ್ಪು ನಿರ್ಧಾರ ತೆಗೆದುಕೊಂಡೆ, ಇದಕ್ಕಾಗಿ ತೀವ್ರವಾಗಿ ಪಶ್ಚಾತ್ತಾಪ ಪಡುತ್ತಿದ್ದೇನೆ" ಎಂದು ಪೊಲೀಸರ ಬಳಿ ಕ್ಷಮೆ ಕೇಳಿದ್ದಾನೆ. ಆದರೆ, ಈ ಘಟನೆ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆತನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.


Click it and Unblock the Notifications
