Japan Earthquake: 6.9 ತೀವ್ರತೆಯ ಭೂಕಂಪ: ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ!
ನೈಋತ್ಯ ಜಪಾನ್‌ನ ಕ್ಯುಶು ಪ್ರದೇಶದಲ್ಲಿ ಸೋಮವಾರ (ಜನವರಿ 13) ರಾತ್ರಿ 9:19ಕ್ಕೆ 6.9 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಭೂಕಂಪ ಸಂಭವಿಸಿ 24 ಗಂಟೆಗಳಲ್ಲಿ ಕ್ಯುಶುವಿನ ಮಿಯಾಝಾಕಿ ಪ್ರಾಂತ್ಯದಲ್ಲಿ ಮತ್ತು ಹತ್ತಿರದ ಕೊಚ್ಚಿ ಪ್ರಾಂತ್ಯದಲ್ಲಿ ಸುನಾಮಿ ಎಚ್ಚರಿಕೆಗಳನ್ನು ನೀಡಲಾಗಿದೆ.
ಭೂಕಂಪ ಕ್ಯುಶು ಪ್ರದೇಶದ 30 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ್ದು, ಒಂದು ಮೀಟರ್ ಎತ್ತರದ ಅಲೆಗಳು ಅಪ್ಪಳಿಸುವ ಎಚ್ಚರಿಕೆ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೊಚ್ಚಿಯ ಕರಾವಳಿ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಇಲ್ಲಿಯವರೆಗೆ ಯಾವುದೇ ಹಾನಿಯ ವರದಿಗಳಾಗಿಲ್ಲ.

ಸುನಾಮಿ ಎಚ್ಚರಿಕೆ ನೀಡಿದ ಮಿಯಾಝಾಕಿ ನಗರದಲ್ಲಿ ಸುಮಾರು 400,000 ಜನ ವಾಸವಿದ್ದಾರೆ. ಈ ಸ್ಥಳದಲ್ಲಿ 20 ಸೆಂಟಿಮೀಟರ್ ಎತ್ತರದ ಸಮುದ್ರ ಅಲೆಗಳು ಅಪ್ಪಳಿಸುವ ಎಚ್ಚರಿಕೆ ನೀಡಲಾಗಿದೆ. ರಿಂಗ್ ಆಫ್ ಫೈರ್ ಎಂದು ಕರೆಯಲ್ಪಡುವ ಜಪಾನ್‌ನಲ್ಲಿ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತಲೇ ಇರುತ್ತವೆ.
ರಿಂಗ್ ಆಫ್ ಫೈರ್ ಎಂದರೇನು?
ರಿಂಗ್ ಆಫ್ ಫೈರ್ ಪೆಸಿಫಿಕ್ ಮಹಾಸಾಗರದ ಉದ್ದಕ್ಕೂ ಸಾಗುವ ನೂರಾರು ಜ್ವಾಲಾಮುಖಿಗಳು ಮತ್ತು ಭೂಕಂಪನ ಸ್ಥಳಗಳ ಸರಮಾಲೆಯಾಗಿದೆ. ಇದು ಅರ್ಧವೃತ್ತ ಅಥವಾ ಕುದುರೆ ಲಾಳದ ಆಕಾರದಲ್ಲಿರುತ್ತದೆ. ಸುಮಾರು 40,250 ಕಿಲೋಮೀಟರ್‌ಗಳಷ್ಟು ವಿಸ್ತರಿಸಿರುತ್ತದೆ. ನ್ಯಾಷನಲ್ ಜಿಯಾಗ್ರಫಿಕ್ ವರದಿಯ ಪ್ರಕಾರ, ಯುರೇಷಿಯನ್, ಉತ್ತರ ಅಮೇರಿಕನ್, ಜುವಾನ್ ಡಿ ಫುಕಾ, ಕೊಕೊಸ್, ಕೆರಿಬಿಯನ್, ನಾಜ್ಕಾ, ಅಂಟಾರ್ಕ್ಟಿಕ್, ಇಂಡಿಯನ್, ಆಸ್ಟ್ರೇಲಿಯನ್, ಫಿಲಿಪೈನ್ ಮತ್ತು ಇತರ ಪ್ರದೇಶಗಳು ರಿಂಗ್ ಆಫ್ ಫೈರ್ ಸ್ಥಳಗಳಾಗಿವೆ.
ಇವೆಲ್ಲ ಪ್ರದೇಶಗಳಿಗೂ ರಿಂಗ್ ಆಫ್ ಫೈರ್ ಸುತ್ತುವರೆದಿದೆ. ಇದು ಯುಎಸ್ಎ, ಇಂಡೋನೇಷ್ಯಾ, ಮೆಕ್ಸಿಕೊ, ಜಪಾನ್, ಕೆನಡಾ, ಗ್ವಾಟೆಮಾಲಾ, ರಷ್ಯಾ, ಚಿಲಿ, ಪೆರು ಮತ್ತು ಫಿಲಿಪೈನ್ಸ್ ಸೇರಿದಂತೆ ಇನ್ನೂ 15 ದೇಶಗಳ ಮೂಲಕ ಹಾದುಹೋಗುತ್ತದೆ.
ರಿಂಗ್ ಆಫ್ ಫೈರ್ ಭೂಕಂಪಗಳಿಗೆ ಏಕೆ ಗುರಿಯಾಗುತ್ತದೆ?
ಭೂಖಂಡಗಳ ಪರಸ್ಪರ ಘರ್ಷಣೆಯಿಂದಾಗಿ ಈ ಭಾಗದಲ್ಲಿ ಸದಾ ಕಾಲ ಒಂದಿಲ್ಲೊಂದು ಕಡೆ ಭೂಕಂಪಗಳು ಸಂಭವಿಸುತ್ತಿರುತ್ತವೆ. ರಿಂಗ್ ಆಫ್ ಫೈರ್‌ನಲ್ಲಿ ಜ್ವಾಲಾಮುಖಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಭೂಖಂಡಗಳ ಅಂಚುಗಳು ಸಾಕಷ್ಟು ಒರಟಾಗಿರುವುದರಿಂದ, ಇವುಗಳು ಚಲಿಸುತ್ತಲೇ ಇರುವಾಗ ಅವು ಒಂದಕ್ಕೊಂದು ಸಿಲುಕಿಕೊಳ್ಳುತ್ತವೆ. ಫಲಕವು ಸಾಕಷ್ಟು ದೂರ ಚಲಿಸಿದಾಗ ಮತ್ತು ಅಂಚುಗಳು ಸಡಿಲವಾದಾಗ ಭೂಕಂಪ ಸಂಭವಿಸುತ್ತದೆ.
ಜಪಾನ್ ನಾಲ್ಕು ಟೆಕ್ಟೋನಿಕ್ ಫಲಕಗಳ ಪರಸ್ಪರ ಕ್ರಿಯೆಯಿಂದಾಗಿ ಭೂಕಂಪಗಳನ್ನು ಅನುಭವಿಸುತ್ತದೆ. ಪೆಸಿಫಿಕ್ ಫಲಕ, ಫಿಲಿಪೈನ್ ಸಮುದ್ರ ಫಲಕ, ಓಖೋಟ್ಸ್ಕ್ ಫಲಕ ಮತ್ತು ಯುರೇಷಿಯನ್ ಫಲಕ.
ಬೆಂಕಿಯ ಉಂಗುರದಲ್ಲಿ ಇಷ್ಟೊಂದು ಜ್ವಾಲಾಮುಖಿಗಳು ಏಕೆ ಇವೆ?
ಬೆಂಕಿಯ ಉಂಗುರದಲ್ಲಿ ಜ್ವಾಲಾಮುಖಿಗಳ ಅಸ್ತಿತ್ವವು ಟೆಕ್ಟೋನಿಕ್ ಫಲಕಗಳ ಚಲನೆಯಿಂದಾಗಿಯೂ ಆಗಿದೆ. ಅನೇಕ ಜ್ವಾಲಾಮುಖಿಗಳು ಸಬ್ಡಕ್ಷನ್ ಎಂದು ಕರೆಯಲ್ಪಡುವ ಪ್ರಕ್ರಿಯೆಯ ಮೂಲಕ ರೂಪುಗೊಂಡಿವೆ. ಎರಡು ಫಲಕಗಳು ಪರಸ್ಪರ ಡಿಕ್ಕಿ ಹೊಡೆದಾಗ ಮತ್ತು ಭಾರವಾದ ಫಲಕವನ್ನು ಇನ್ನೊಂದರ ಕೆಳಗೆ ತಳ್ಳಿದಾಗ, ಆಳವಾದ ಕಂದಕ ಸೃಷ್ಟಿಯಾಗಿ ಜ್ವಾಲಾಮುಖಿಗಳು ಸಂಭವಿಸುತ್ತವೆ.












Click it and Unblock the Notifications