ಚುನಾವಣೆ ಸಮಯದಲ್ಲೇ ಮಾಜಿ ಪ್ರಧಾನಿಗೆ ಶಾಕ್: ಇಮ್ರಾನ್ ಖಾನ್ ಜಾಮೀನು ಅರ್ಜಿ ರಿಜೆಕ್ಟ್!
ಒಬ್ಬ ಮಾಜಿ ಪ್ರಧಾನಿ ಜೀವನ ಹೇಗೆ ಇರಬಹುದು ಹೇಳಿ? ಅಕಸ್ಮಾತ್ ಆ ವ್ಯಕ್ತಿಗೆ, ಇನ್ನೂ ಚಿಕ್ಕ ವಯಸ್ಸು ಆಗಿದ್ರೆ ಮತ್ತೊಂದು ರೌಂಡ್ ಪ್ರಧಾನಿ ಆಗಲು ಬಯಸಬಹುದು. ಇಲ್ಲವೇ, ಸಕ್ರಿಯ ರಾಜಕಾರಣ ಬಿಟ್ಟು ನೆಮ್ಮದಿಯಾಗಿ ನಿವೃತ್ತ ಜೀವನ ನಡೆಸಲು ಯತ್ನಿಸಬಹುದು. ಆದ್ರೆ ಇಲ್ಲೊಂದು ದೇಶವಿದೆ, ಈ ಘನಂದಾರಿ ದೇಶದಲ್ಲಿ ಬಹುತೇಕ ಪ್ರತಿಯೊಬ್ಬ ಮಾಜಿ ಪ್ರಧಾನಿ ಕೂಡ ಜೈಲಿನ ಕಂಬಿ ಎಣಿಸಿ ಬಂದಿದ್ದಾರೆ!
ಜೈಲಿಗೆ ಹೋಗುವುದು ಅನಿವಾರ್ಯ ಸ್ಥಿತಿ ಅನ್ನಬಹದು, ಯಾಕಂದ್ರೆ ಜೈಲಿಗೆ ಹೋಗುವಾಗ ಎಂತಹ ಗಟ್ಟಿ ಮನಸ್ಸಿನ ವ್ಯಕ್ತಿ ಕೂಡ ಬೆಚ್ಚಿಬಿದ್ದು ನರಳುತ್ತಾನೆ. ಏಕೆಂದರೆ ಅದು ಕಷ್ಟದ ಕೆಲಸ ಹಾಗೂ ಮನುಷ್ಯನ ಸ್ವಾತಂತ್ರ್ಯ ಅಂತ್ಯವಾಗಿರುತ್ತದೆ. ಇನ್ನು 4 ಗೋಡೆಗಳ ನಡುವೆ ವರ್ಷಗಳ ಕಾಲ ಬದುಕುವುದು ಅದೆಷ್ಟು ಕಷ್ಟ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೂ ಪಾಕಿಸ್ತಾನ ಎನ್ನುವ ದೇಶದಲ್ಲಿ ಮಾಜಿ ಪ್ರಧಾನಿಗಳು ಜೈಲು ಸೇರೋದು ಪ್ಯಾಷನ್ ಆಗಿದೆ! ಇದೇ ರೀತಿ ಜೈಲು ಸೇರಿ ಜೀವ ಭಯದಲ್ಲಿ ಒದ್ದಾಡುತ್ತಿರುವ ಇಮ್ರಾನ್ ಖಾನ್ ಬಗ್ಗೆ ಬಿಗ್ ಇದೀಗ ಅಪ್‌ಡೇಟ್ ಸಿಕ್ಕಿದೆ.

ಅರೆರೆ ಜೈಲೂಟ ಗ್ಯಾರಂಟಿ...
ಹೌದು, ಮೊದಲಿಗೆ ಭ್ರಷ್ಟಾಚಾರ ಆರೋಪದಡಿ ಜೈಲಿಗೆ ಸೇರಿದ್ದ ಇಮ್ರಾನ್‌ಗೆ ರಿಲೀಫ್ ಸಿಕ್ಕಿತ್ತು. ಆದರೆ ರಿಲೀಸ್ ಆಗುತ್ತಿದ್ದಂತೆ ಅವರನ್ನು ಮತ್ತೆ ಬಂಧಿಸಲಾಗಿತ್ತು. ಭ್ರಷ್ಟಾಚಾರ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಇಮ್ರಾನ್ ಖಾನ್ ಆಗಸ್ಟ್ 5ರಿಂದ ಪಂಜಾಬ್ ಪ್ರಾಂತ್ಯದ ಅಟ್ಟೋಕ್ ಕಾರಾಗೃಹದಲ್ಲಿ ಇದ್ದರು. ಆದರೆ ಆಗಸ್ಟ್ 29ರಂದು ಇಸ್ಲಾಮಾಬಾದ್ ಹೈಕೋರ್ಟ್ ಭ್ರಷ್ಟಾಚಾರ ಪ್ರಕರಣದ ಶಿಕ್ಷೆ ತೀರ್ಪನ್ನೇ ಅಮಾನತು ಮಾಡಿತ್ತು. ಈ ಘಟನೆ ಬಳಿಕ ಪಾಕಿಸ್ತಾನದ ರಹಸ್ಯ ದಾಖಲೆ ಸೋರಿಕೆ ಪ್ರಕರಣದಡಿ ಇಮ್ರಾನ್ ಜೈಲಿನಲ್ಲಿಯೇ ಉಳಿಯುವ ಸ್ಥಿತಿ ನಿರ್ಮಾಣವಾಗಿದೆ. ಇಂತಿಪ್ಪ ಇಮ್ರಾನ್‌ಗೆ ಈಗ ಮತ್ತಷ್ಟು ದಿನ ಜೈಲೂಟ ಗ್ಯಾರಂಟಿ ಆಗಿದೆ.
ಚುನಾವಣೆ ಸಮಯದಲ್ಲೂ ಜೈಲು ಫಿಕ್ಸ್?
ಅಂದಹಾಗೆ ಅಧಿಕೃತ ರಹಸ್ಯ ಕಾಯ್ದೆ ಉಲ್ಲಂಘನೆ ಪ್ರಕರಣದಲ್ಲಿ (ಸೈಫರ್) ಜೈಲು ಸೇರಿರುವ ಇಮ್ರಾನ್‌ಗೆ ಇಸ್ಲಾಮಾಬಾದ್ ಹೈಕೋರ್ಟ್ ಆಘಾತ ನೀಡಿದೆ. ತಮ್ಮ ವಿರುದ್ಧ ದಾಖಲಿಸಿರುವ ಮೊದಲ ಎಫ್‌ಐಆರ್ ರದ್ದುಗೊಳಿಸಲು ಮತ್ತು ಜಾಮೀನು ಮಂಜೂರು ಮಾಡಲು ಇಮ್ರಾನ್ ಅರ್ಜಿ ಸಲ್ಲಿಸಿದ್ದರು. ಆದರೆ ಇಮ್ರಾನ್ ಖಾನ್ ಮಾಡಿದ್ದ ಮನವಿಯನ್ನು ಇಸ್ಲಾಮಾಬಾದ್ ಹೈಕೋರ್ಟ್ ರಿಜೆಕ್ಟ್ ಮಾಡಿದೆ. ಈ ಮೂಲಕ ಚುನಾವಣೆ ಸಮಯದಲ್ಲೇ ಇಮ್ರಾನ್ ಖಾನ್ ಜೈಲಿನಿಂದ ಹೊರಗೆ ಬರೋದು ಡೌಟ್ ಆಗಿದೆ.

ಈ ಕೇಸ್‌ನಲ್ಲಿ ಆಗಿದ್ದೇನು ಅಂದ್ರೆ, ವಾಷಿಂಗ್ಟನ್‌ನ ಪಾಕ್ ರಾಯಭಾರ ಕಚೇರಿ ಕಳುಹಿಸಿದ್ದ ರಾಜತಾಂತ್ರಿಕ ಗೌಪ್ಯ ಮಾಹಿತಿಯನ್ನ (ಸೈಫರ್) ಇಮ್ರಾನ್ ಅನಧಿಕೃತವಾಗಿ ಬಹಿರಂಗಪಡಿಸಿ ನಿಯಮ ಉಲ್ಲಂಘನೆ ಮಾಡಿದ ಆರೋಪ ಕೇಳಿಬಂದಿತ್ತು. ಹೀಗಾಗಿಯೇ ಇಮ್ರಾನ್ ಖಾನ್ ಮತ್ತೆ ಜೈಲು ಸೇರಿದ್ದರು. ಇದೇ ಆಗಸ್ಟ್ ತಿಂಗಳಲ್ಲಿ ಮತ್ತೊಮ್ಮೆ ಕಂಬಿ ಹಿಂದೆ ಬಿದ್ದರು.
ಇಮ್ರಾನ್ ಖಾನ್ ರಣತಂತ್ರ ಫ್ಲಾಪ್?
ಮತ್ತೊಂದು ಕಡೆ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ ಅಂದ್ರೆ ಪಿಟಿಐ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಈ ಕೇಸ್‌ನಿಂದ ಬಚಾವ್ ಆಗಲು ಹಲವು ತಂತ್ರ ಅನುಸರಿಸಿದ್ದರು. ಆ ಪ್ರಯತ್ನದ ಭಾಗವಾಗಿ, ಸೈಫರ್ ಕೇಸ್ ಎಫ್‌ಐಆರ್ ರದ್ದುಗೊಳಿಸಲು & ಜಾಮೀನು ಮಂಜೂರು ಮಾಡಿ ಎಂದು ಕೋರಿಕೆ ಸಲ್ಲಿಸಿದ್ದರು ಇಮ್ರಾನ್. ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಇಮ್ರಾನ್ ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು. ಈ ವಿಚಾರಣೆಯನ್ನು ಅಕ್ಟೋಬರ್ 16ರಂದೇ ಪೂರ್ಣಗೊಳಿಸಿದ್ದ ಮುಖ್ಯ ನ್ಯಾಯಮೂರ್ತಿ ಅಮೀರ್ ಫಾರೂಕ್, ಕಾಯ್ದಿರಿಸಿದ್ದ ತೀರ್ಪನ್ನ ಈಗ ಪ್ರಕಟಿಸಿದ್ದು ಇಮ್ರಾನ್ ಖಾನ್‌ಗೆ ಜೈಲೂಟ ಫಿಕ್ಸ್ ಆಗಿದೆ.
ಪಾಕಿಸ್ತಾನದಲ್ಲಿ ಇನ್ನೇನು ಕೆಲ ತಿಂಗಳಲ್ಲಿ ಸಂಸತ್ ಚುನಾವಣೆಗೆ ಮತದಾನ ನಡೆಯಲಿದೆ. ಇದೇ ಸಂದರ್ಭದಲ್ಲಿ ಇಮ್ರಾನ್ ಖಾನ್ ಹೊರಗೆ ಬರುವುದು ಕಷ್ಟವಾಗುತ್ತಿದೆ. ಅಲ್ಲದೆ ಈ ನಡುವೆ, ಮಾಜಿ ಪ್ರಧಾನಿ ಹಾಗೂ ಭ್ರಷ್ಟಾಚಾರ ಆರೋಪಿ ನವಾಜ್ ಷರೀಫ್ ಪಾಕಿಸ್ತಾನಕ್ಕೆ ವಾಪಸ್ ಬಂದಿದ್ದಾರೆ. ಮತ್ತೊಂದು ಕಡೆ ಇಮ್ರಾನ್ ಖಾನ್ ಜಾಮೀನು ಅರ್ಜಿ ತಿರಸ್ಕರಿಸಿದೆ ಇಸ್ಲಾಮಾಬಾದ್ ಹೈಕೋರ್ಟ್. ಹೀಗೆ ಮುಂದೆ ಏನಾಗುತ್ತೆ? ಅಂತಾ ಕಾದು ನೋಡಬೇಕಿದೆ. ಆದರೆ ಪಾಕಿಸ್ತಾನದ ಪರಿಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡವಾಗಿದೆ.












Click it and Unblock the Notifications