ವಿವಾದಗಳ ಸರದಾರ ಇಟಲಿ ಮಾಜಿ ಪ್ರಧಾನಿ ಸಿಲ್ವಿಯೊ ಇನ್ನಿಲ್ಲ
ರೋಮ್: ಸಾಮಾನ್ಯವಾಗಿ ಪ್ರಧಾನಿ ಹುದ್ದೆ ಪಡೆದವರು ತಮ್ಮ ಉತ್ತಮ ಕೆಲಸ, ಕಾರ್ಯ ಹಾಗೂ ನಡತೆಯಿಂದ ಜನರ ಮನಸ್ಸನ್ನು ಗೆಲ್ಲುತ್ತಾರೆ. ಹಾಗೂ ಇದೇ ಕಾರಣಕ್ಕೆ ಫೇಮಸ್ ಕೂಡ ಆಗಿರ್ತಾರೆ. ಆದರೆ ವಿವಾದಗಳ ಮೂಲಕ ಜಗತ್ತಿನಾದ್ಯಂತ ಸದ್ದು ಮಾಡಿದ್ದ ಇಟಲಿ ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ಅನಾರೋಗ್ಯ ಕಾರಣ ಇಂದು ನಿಧನರಾಗಿದ್ದಾರೆ.
ಲೈಂಗಿಕ ಹಗರಣ & ಭ್ರಷ್ಟಾಚಾರ ಆರೋಪಗಳಿಂದ ಪ್ರಧಾನಿ ಸ್ಥಾನದಿಂದ ಕೆಳಗಿಳಿದಿದ್ದ ಇಟಲಿ ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ (Silvio Berlusconi) ಇಟಲಿ ಇತಿಹಾಸದಲ್ಲೇ ವಿವಾದಾತ್ಮಕ ಹೆಸರು. ಯುರೋಪ್ ಒಕ್ಕೂಟದ ಪ್ರಬಲ ರಾಷ್ಟ್ರಗಳ ಪೈಕಿ ಒಂದಾಗಿರುವ ಇಟಲಿಯನ್ನ ಒಟ್ಟು 9 ವರ್ಷ ಕಾಲ ಆಳಿದ್ದರು ಈ ವಿವಾದಾತ್ಮಕ ಪಿಎಂ. ತನ್ನ ಆಡಳಿತ ಅವಧಿಯಲ್ಲಿ ಸಿಲ್ವಿಯೊ ಬೆರ್ಲುಸ್ಕೋನಿ ಮಾಡಿಕೊಳ್ಳದ ಕಾಂಟ್ರವರ್ಸಿ ಇಲ್ಲ ಹಾಗೂ ತನ್ನ ಎದುರಾಳಿಗಳಿಗೆ ಅಕ್ಷರಶಃ ಬೆನ್ನುಬಿಡದೆ ಕಾಡಿದ್ದರು ಅನ್ನೋ ಆರೋಪ ಕೂಡ ಸಿಲ್ವಿಯೊರ ವಿರುದ್ಧ ಇತ್ತು. ಹಾಗಾದ್ರೆ ಇಟಲಿ ಮಾಜಿ ಪ್ರಧಾನಿ ಮೃತಪಟ್ಟಿದ್ದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

9 ವರ್ಷ ಕಾಲ ಪ್ರಧಾನಿ ಪಟ್ಟ
ಹೌದು, 1994 ಮತ್ತು 2011ರ ನಡುವೆ ಒಟ್ಟು 9 ವರ್ಷ ಕಾಲ ಮೂರು ಬಾರಿ ಇಟಲಿ ಪ್ರಧಾನ ಮಂತ್ರಿಯಾಗಿದ್ದರು ಸಿಲ್ವಿಯೊ ಬೆರ್ಲುಸ್ಕೋನಿ. ಇದೀಗ 86ನೇ ವಯಸ್ಸಿನಲ್ಲಿ ನಿಧನರಾಗಿರುವ ಸಿಲ್ವಿಯೊ ಬೆರ್ಲುಸ್ಕೋನಿಗೆ 33 ವರ್ಷದ ಗೆಳತಿ ಮಾರ್ಟಾ ಫಾಸಿನಾ ಇದ್ದು. ಇಬ್ಬರು ಮಾಜಿ ಪತ್ನಿಯರು ಮತ್ತು ಐವರು ಮಕ್ಕಳನ್ನು ಅಗಲಿದ್ದಾರೆ ಸಿಲ್ವಿಯೊ. ಸಿಲ್ವಿಯೊ ಕಳೆದ ತಿಂಗಳಷ್ಟೇ ಆಸ್ಪತ್ರೆಗೆ ದಾಖಲಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದರು. ಡಿಸ್ಚಾರ್ಜ್ ಆದ ನಂತರ ಸಾಲು ಸಾಲು ಆರೋಗ್ಯ ಸಮಸ್ಯೆಗಳು ಇಟಲಿ ಮಾಜಿ ಪ್ರಧಾನಿಯನ್ನ ಕಾಡಿದ್ದವು. ಹೀಗೆ ಆರೋಗ್ಯ ಸಮಸ್ಯೆಯಿಂದ ಸಿಲ್ವಿಯೊ ಬೆರ್ಲುಸ್ಕೋನಿ ಪ್ರಾಣಬಿಟ್ಟಿದ್ದಾರೆ ಎನ್ನಲಾಗಿದೆ.
ಕ್ಯಾನ್ಸರ್ ಸಮಸ್ಯೆಯಿಂದ ನರಳಾಟ
ಸಿಲ್ವಿಯೊ ಬೆರ್ಲುಸ್ಕೋನಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರಬಂದ 3 ವಾರದ ಬಳಿಕ ರಕ್ತ ಕ್ಯಾನ್ಸರ್ ಪರೀಕ್ಷೆಗೆ ಇದೇ ಶುಕ್ರವಾರದಂದು ಮತ್ತೆ ದಾಖಲಾಗಿದ್ರು. ಆದರೆ ವಿಧಿಯ ನಿರ್ಧಾರ ಬೇರೆಯೇ ಆಗಿತ್ತು. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೆ ಇಟಲಿಯ ಮಿಲನ್ ಸ್ಯಾನ್ ರಾಫೆಲ್ ಆಸ್ಪತ್ರೆಯಲ್ಲಿ ಇಟಲಿ ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ನಿಧನರಾಗಿದ್ದಾರೆ ಎಂದು ಇಟಲಿ ಮಾಧ್ಯಮಗಳು ವರದಿ ಮಾಡಿವೆ. ಈ ಮೂಲಕ ಇಟಲಿಯ ಅತ್ಯಂತ ವಿವಾದಾತ್ಮ ಪ್ರಧಾನಿಗಳಲ್ಲಿ ಒಬ್ಬರು ಅಂತಾನೆ ಫೇಮಸ್ ಆಗಿದ್ದ ನಾಯಕನೊಬ್ಬ ದುರಂತ ಅಂತ್ಯವನ್ನ ಕಂಡಿದ್ದಾರೆ. ಸಿಲ್ವಿಯೊ ಅಭಿಮಾನಿಗಳು ಈ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಬೆನ್ನು ಬಿಡದೆ ಕಾಡಿತ್ತು ಅನಾರೋಗ್ಯ
ಅಷ್ಟಕ್ಕೂ ಸಿಲ್ವಿಯೊ ಬೆರ್ಲುಸ್ಕೋನಿಗೆ ಅಪರೂಪದ ರಕ್ತದ ಕ್ಯಾನ್ಸರ್ ಇದೆ ಎಂದು ವೈದ್ಯರು ತಪಾಸಣೆ ವೇಳೆ ತಿಳಿಸಿದ್ದರು. ಇದರ ಜೊತೆ ಸಿಲ್ವಿಯೊ ಬೆರ್ಲುಸ್ಕೋನಿ ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಸಿಲ್ವಿಯೊ. ಸಿಲ್ವಿಯೋ ಅವರು ಇಟಲಿ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿಯ ಸಮ್ಮಿಶ್ರ ಸರ್ಕಾರದಲ್ಲಿ ಕಿರಿಯ ಸಚಿವರಾಗಿ ಹಾಗೂ ಬಲಪಂಥೀಯ ಫೋರ್ಜಾ ಇಟಾಲಿಯಾ ಪಕ್ಷದ ಮುಖ್ಯಸ್ಥರಾಗಿ ಕೂಡ ಗುರಿತಿಸಿಕೊಂಡಿದ್ದರು. ಕೊನೆಗೆ ಇಟಲಿ ಪ್ರಧಾನಿ ಪಟ್ಟಕ್ಕೂ ಏರಿದ್ದರು.
ಆದರೆ ಪದೇ ಪದೆ ಕಾಡುತ್ತಿದ್ದ ಅನಾರೋಗ್ಯ ಸಿಲ್ವಿಯೊ ಬೆರ್ಲುಸ್ಕೋನಿಗೆ ರಾಜಕೀಯದಲ್ಲಿ ಕೂಡ ಹಿನ್ನಡೆ ತಂದಿತ್ತು. ಇವರು 2016ರಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದರು. ಬಳಿಕ 2020ರಲ್ಲಿ ಕೊರೊನಾ ಸೋಂಕು ಕೂಡ ಸಿಲ್ವಿಯೊ ಬೆರ್ಲುಸ್ಕೋನಿಗೆ ವಕ್ಕರಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗೆ ವಿವಾದಗಳ ಮೂಕವೇ ಸದ್ದು ಮಾಡಿದ್ದ ಮಾಜಿ ಪಿಎಂ ಒಬ್ಬರು ಅಸುನೀಗಿದ್ದು (Silvio Berlusconi Death), ಯುರೋಪ್‌ನ ಪ್ರಮುಖ ನಾಯಕರು ಸಂತಾಪ ಸೂಚಿಸಿದ್ದಾರೆ. ಇನ್ನು ಅಂತ್ಯ ಸಂಸ್ಕಾರಕ್ಕೂ ಇಟಲಿ ಸರ್ಕಾರ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.












Click it and Unblock the Notifications