ಭಾರತದ ವೈದ್ಯಕೀಯ ಸಂಶೋಧನೆಗಾಗಿ ಮೈಕ್ರೋಗ್ರ್ಯಾವಿಟಿ ಗಮನ ಹರಿಸಿದ ಇಸ್ರೋ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ( ಇಸ್ರೋ) ಮುಖ್ಯಸ್ಥರಾದ ಎಸ್ ಸೋಮನಾಥ್ ಅವರು ನವೆಂಬರ್ 22, ಶುಕ್ರವಾರದಂದು ಭಾರತ ಸೂಕ್ಷ್ಮ ಗುರುತ್ವಾಕರ್ಷಣಾ (ಮೈಕ್ರೋಗ್ರ್ಯಾವಿಟಿ) ಕ್ಷೇತ್ರದಲ್ಲಿ ಅನ್ವೇಷಣೆ ಮತ್ತು ಹೂಡಿಕೆ ನಡೆಸಲು ಆಸಕ್ತಿ ಮತ್ತು ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ. ಅವರು 2024ರ ರಕ್ಷಾ ಸಮಾವೇಶದಲ್ಲಿ ಮಾತನಾಡುತ್ತಾ, ಬಾಹ್ಯಾಕಾಶ ಮತ್ತು ಮೈಕ್ರೋಗ್ರ್ಯಾವಿಟಿಗೆ ಸಂಬಂಧಿಸಿದ ವೈದ್ಯಕೀಯ ಸಂಶೋಧನೆಯ ಕುರಿತು ಹೆಚ್ಚುತ್ತಿರುವ ಆಸಕ್ತಿಯ ಕುರಿತು ಮಾತನಾಡಿದರು.
ಬಾಹ್ಯಾಕಾಶದಂತಹ ಅತ್ಯಂತ ಕನಿಷ್ಠ ಗುರುತ್ವಾಕರ್ಷಣೆಯ ಪ್ರದೇಶಗಳಲ್ಲಿ ವಸ್ತುಗಳು ಹೇಗೆ ವರ್ತಿಸುತ್ತವೆ ಎನ್ನುವುದನ್ನು ಸೂಕ್ಷ್ಮ ಗುರುತ್ವಾಕರ್ಷಣಾ (ಮೈಕ್ರೋಗ್ರ್ಯಾವಿಟಿ) ಸಂಶೋಧನೆಗಳು ಅಧ್ಯಯನ ನಡೆಸುತ್ತವೆ. ಆ ಮೂಲಕ ವೈದ್ಯಕೀಯ, ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಪ್ರಮುಖ ಸಾಧನೆಗಳಿಗೆ ಅವಕಾಶ ಕಲ್ಪಿಸುತ್ತವೆ. ಇಸ್ರೋ ಈ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ, ಲಸಿಕೆ ಉತ್ಪಾದಕರೂ ಸೇರಿದಂತೆ, ವಿವಿಧ ಹೂಡಿಕೆದಾರರೊಡನೆ ಸಕ್ರಿಯವಾಗಿ ಸಮಾಲೋಚನೆ ನಡೆಸುತ್ತಿದೆ ಎಂದು ಸೋಮನಾಥ್ ಹೇಳಿದ್ದಾರೆ. ಇಂತಹ ಸಹಯೋಗಗಳನ್ನು ಸಾಧಿಸುವ ಮೂಲಕ, ಭಾರತ ವೈಜ್ಞಾನಿಕ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವ ಗುರಿ ಹೊಂದಿದೆ.

ಸೂಕ್ಷ್ಮ ಗುರುತ್ವಾಕರ್ಷಣೆ: ತೂಕ ರಹಿತ ತೇಲುವಿಕೆ
ಸೂಕ್ಷ್ಮ ಗುರುತ್ವಾಕರ್ಷಣೆ (ಮೈಕ್ರೋಗ್ರ್ಯಾವಿಟಿ) ಎಂದರೆ ವಸ್ತುಗಳು ಅಥವಾ ಜನರು ತೂಕ ರಹಿತರಾಗಿ ಕಂಡುಬರುವ ಸ್ಥಿತಿಯಾಗಿದೆ. ಈ ಕಾರಣದಿಂದಲೇ ಬಾಹ್ಯಾಕಾಶದಲ್ಲಿ ವಸ್ತುಗಳು ಮತ್ತು ಗಗನಯಾತ್ರಿಗಳು ತೇಲುವಂತೆ ಕಂಡುಬರುತ್ತಾರೆ. ಆದರೆ, ಮೈಕ್ರೋಗ್ರ್ಯಾವಿಟಿಯನ್ನು (ಸೂಕ್ಷ್ಮ ಗುರುತ್ವಾಕರ್ಷಣೆ) ಬಾಹ್ಯಾಕಾಶದ ವಾತಾವರಣದಾಚೆಗೂ ಬೇರೆ ರೀತಿಗಳಲ್ಲೂ ಗಮನಿಸಬಹುದು. ಇಲ್ಲಿ ಮೈಕ್ರೋ (ಸೂಕ್ಷ್ಮ) ಎಂದರೆ ಅತ್ಯಂತ ಸಣ್ಣ ಎಂಬ ಅರ್ಥ ಹೊಂದಿದೆ. ಸೂಕ್ಷ್ಮ ಗುರುತ್ವಾಕರ್ಷಣೆ ಎಂದರೆ, ಗುರುತ್ವಾಕರ್ಷಣೆ ಅತ್ಯಂತ ದುರ್ಬಲವಾಗಿರುವ ಸನ್ನಿವೇಶವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಗಗನಯಾತ್ರಿಗಳು ತಮ್ಮ ಬಾಹ್ಯಾಕಾಶ ನೌಕೆಯ ಒಳಗೆ ಅಥವಾ ಬಾಹ್ಯಾಕಾಶ ನಡಿಗೆಯ ಸಂದರ್ಭದಲ್ಲಿ ತೇಲುತ್ತಾ ಸಾಗಲು ಸಾಧ್ಯವಾಗುತ್ತದೆ. ಬಹಳ ತೂಕದ ವಸ್ತುಗಳನ್ನೂ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಅತ್ಯಂತ ಸುಲಭವಾಗಿ ಸಾಗಿಸಲು ಸಾಧ್ಯವಾಗುತ್ತದೆ.
ಉದಾಹರಣೆಗೆ, ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ನೂರಾರು ಕೆಜಿ ತೂಕ ಹೊಂದಿರುವ ವಸ್ತುಗಳನ್ನು ಕೇವಲ ತಮ್ಮ ಬೆರಳ ತುದಿಗಳನ್ನು ಬಳಸಿ ಸಾಗಿಸಲು ಸಾಧ್ಯವಾಗುತ್ತದೆ. ಸೂಕ್ಷ್ಮ ಗುರುತ್ವಾಕರ್ಷಣೆಯನ್ನು (ಮೈಕ್ರೋಗ್ರ್ಯಾವಿಟಿ) ಕೆಲವು ಬಾರಿ ಶೂನ್ಯ ಗುರುತ್ವಾಕರ್ಷಣೆ (ಜೀರೋ ಗ್ರ್ಯಾವಿಟಿ) ಎಂದು ಕರೆಯಲಾಗುತ್ತದಾದರೂ, ಈ ಪದ ತಪ್ಪು ಮಾಹಿತಿ ನೀಡಬಲ್ಲದು.
ಬಾಹ್ಯಾಕಾಶ ಕಾರ್ಯಾಚರಣೆ: ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಣಾಮಗಳು
ಸೂಕ್ಷ್ಮ ಗುರುತ್ವಾಕರ್ಷಣೆ (ಮೈಕ್ರೋಗ್ರ್ಯಾವಿಟಿ) ವಿಜ್ಞಾನಿಗಳಿಗೆ ಮಾನವರು ಮತ್ತು ವಸ್ತುಗಳು ಬಾಹ್ಯಾಕಾಶದಲ್ಲಿ ಹೇಗೆ ವರ್ತಿಸುತ್ತಾರೆ ಎನ್ನುವುದನ್ನು ತಿಳಿಯಲು ನೆರವಾಗುತ್ತದೆ. ಮಾನವರ ದೇಹದ ಮೇಲೆ ಮೈಕ್ರೋಗ್ರ್ಯಾವಿಟಿ ಬಹಳಷ್ಟು ಪರಿಣಾಮ ಬೀರುತ್ತದೆ. ಉದಾಹರಣೆಗೆ, ಗುರುತ್ವಾಕರ್ಷಣೆಯ ಬಲ ಮಾನವರ ದೇಹವನ್ನು ಕೆಲಸ ಮಾಡುವಂತೆ ಮಾಡದಿದ್ದರೆ, ಸ್ನಾಯುಗಳು ಮತ್ತು ಮೂಳೆಗಳು ಕಾಲ ಕ್ರಮೇಣ ಬಲಹೀನವಾಗುತ್ತವೆ.
ಬಾಹ್ಯಾಕಾಶ ನಿಲ್ದಾಣದಲ್ಲಿ ಜೀವಿಸುವ ಗಗನಯಾತ್ರಿಗಳು ಹಲವಾರು ತಿಂಗಳುಗಳ ಕಾಲ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ವಾಸಿಸುತ್ತಾರೆ. ಅದೇ ರೀತಿ, ಗಗನಯಾತ್ರಿಗಳು ಮಂಗಳ ಗ್ರಹದತ್ತ ಸಾಗಿದರೆ, ಅಲ್ಲಿಗೆ ಸಾಗುವಾಗ ಮತ್ತು ಮರಳುವ ಪ್ರಯಾಣದ ಸಂದರ್ಭದಲ್ಲಿ ಹಲವಾರು ತಿಂಗಳುಗಳ ಕಾಲ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಕಳೆಯಬೇಕಾಗುತ್ತದೆ. ಆದ್ದರಿಂದ, ಇಂತಹ ಯೋಜನೆಗಳನ್ನು ಕೈಗೊಳ್ಳುವಾಗ, ಗಗನಯಾತ್ರಿಗಳ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಮೈಕ್ರೋಗ್ರ್ಯಾವಿಟಿಯ ಪರಿಣಾಮಗಳನ್ನು ಅಧ್ಯಯನ ಮಾಡಬೇಕಾಗುತ್ತದೆ.
ನಾಸಾದ ಪ್ರಕಾರ, ಹಲವಾರು ವಸ್ತುಗಳು ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ವಿಭಿನ್ನವಾಗಿ ವರ್ತಿಸುತ್ತವೆ. ಉದಾಹರಣೆಗೆ, ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಬೆಂಕಿ ಭಿನ್ನವಾಗಿ ಉರಿಯುತ್ತದೆ. ಗುರುತ್ವಾಕರ್ಷಣೆಯ ಎಳೆತವಿಲ್ಲದೆ, ಅದು ಹೆಚ್ಚು ದುಂಡಗೆ ಉರಿಯುತ್ತದೆ. ಅದರೊಡನೆ, ಹರಳುಗಳು ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ (ಮೈಕ್ರೋಗ್ರ್ಯಾವಿಟಿ) ಹೆಚ್ಚು ಪರಿಣಾಮಕಾರಿಯಾಗಿ ಬೆಳೆಯುತ್ತವೆ. ಗುರುತ್ವಾಕರ್ಷಣೆಯ ಅಲಭ್ಯತೆಯಲ್ಲಿ ವಸ್ತುಗಳು ಹೆಚ್ಚು ಪರಿಪೂರ್ಣ ರೂಪ ಹೊಂದಬಲ್ಲವು. ಇಂತಹ ಪ್ರಯೋಗಗಳು ವಿಜ್ಞಾನಿಗಳಿಗೆ ಭೂಮಿಯಲ್ಲಿ ಅಧ್ಯಯನ ಮಾಡಲು ಕಷ್ಟಕರವಾದ, ಅಥವಾ ಅಸಾಧ್ಯವಾದ ಸಂಶೋಧನೆಗಳನ್ನು ನಡೆಸಲು ಅನುವು ಮಾಡಿಕೊಡುತ್ತವೆ.
ಬಾಹ್ಯಾಕಾಶ ಮತ್ತು ಆರೋಗ್ಯ ವ್ಯವಸ್ಥೆಯ ನಡುವೆ ಸಹಯೋಗ ವೃದ್ಧಿ
ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆಗಳು ಬಾಹ್ಯಾಕಾಶದಲ್ಲಿ ಜೈವಿಕ ತಂತ್ರಜ್ಞಾನದ ಸಂಶೋಧನೆಗಳನ್ನು ನಡೆಸುವ ನಿಟ್ಟಿನಲ್ಲಿ ಎಂಒಯು ಸಹಿ ಹಾಕಿವೆ. ಈ ಸಹಯೋಗ, ಭಾರತದ ಮಹತ್ವಾಕಾಂಕ್ಷಿ ಮಾನವ ಸಹಿತ ಬಾಹ್ಯಾಕಾಶ ಯೋಜನೆಯಾದ ಗಗನಯಾನ ಯೋಜನೆಗೆ ಬೆಂಬಲ ನೀಡುವ ಗುರಿ ಹೊಂದಿದೆ ಎಂದು ಸೋಮನಾಥ್ ವಿವರಿಸಿದ್ದಾರೆ. ಈ ಸಂಶೋಧನೆ ಮಾನವ ಸಹಿತ ಬಾಹ್ಯಾಕಾಶ ಯಾತ್ರೆಯಲ್ಲಿ ಉಂಟಾಗುವ ಸವಾಲುಗಳ ಕುರಿತು ಮಾಹಿತಿ ಮತ್ತು ಪರಿಹಾರಗಳನ್ನು ಒದಗಿಸಲು ನೆರವಾಗಲಿದೆ.
ಬಾಹ್ಯಾಕಾಶದಲ್ಲಿ ದೈಹಿಕ ದ್ರವಗಳ ಬದಲಾವಣೆಯ ನಿರ್ವಹಣೆ
ಈ ಸಂಶೋಧನೆ ಸೂಕ್ಷ್ಮ ಗುರುತ್ವಾಕರ್ಷಣೆಗೆ ಮಾನವ ದೇಹ, ಅದರಲ್ಲೂ ದೈಹಿಕ ದ್ರವಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ನೆರವಾಗಲಿದೆ ಎಂದು ಸೋಮನಾಥ್ ಹೇಳಿದ್ದಾರೆ. ಮೈಕ್ರೋಗ್ರ್ಯಾವಿಟಿಯಲ್ಲಿ, ಗುರುತ್ವಾಕರ್ಷಣೆಯ ಎಳೆತವಿಲ್ಲದೆ ದೈಹಿಕ ದ್ರವಗಳು ದೇಹದ ಮೇಲ್ಭಾಗಕ್ಕೆ, ಅಂದರೆ ತಲೆಯ ಕಡೆಗೆ ಸಾಗುತ್ತವೆ. ಇದರಿಂದಾಗಿ ಕಣ್ಣುಗಳ ಮೇಲೆ ಒತ್ತಡ ಹೆಚ್ಚಾಗಿ, ದೃಷ್ಟಿಯ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ. ಸೂಕ್ತ ಮುಂಜಾಗ್ರತಾ ಕ್ರಮಗಳು ಅಥವಾ ಪರಿಹಾರೋಪಾಯಗಳನ್ನು ಹೊಂದಿರದಿದ್ದರೆ, ಗಗನಯಾತ್ರಿಗಳು ಮೂತ್ರಪಿಂಡದ ಕಲ್ಲಿನ ಸಮಸ್ಯೆ (ಕಿಡ್ನಿ ಸ್ಟೋನ್) ಎದುರಿಸುವ ಅಪಾಯಗಳಿವೆ. ಇದಕ್ಕೆ ಬಾಹ್ಯಾಕಾಶದಲ್ಲಿ ಉಂಟಾಗುವ ಹೆಚ್ಚಿನ ನಿರ್ಜಲೀಕರಣ ಮತ್ತು ಮೂಳೆಗಳಿಂದ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಬಿಡುಗಡೆಯಾಗುವುದು ಕಾರಣವಾಗಿದೆ.
ಆರೋಗ್ಯ ಉಪಕರಣಗಳ ಉತ್ಪಾದನೆಯಲ್ಲಿ ನಾವೀನ್ಯತೆ
ಸೋಮನಾಥ್ ಅವರು ಆಸ್ಪತ್ರೆಗಳಲ್ಲಿ ಬಳಸುವ ಉಪಕರಣಗಳಲ್ಲಿನ ಸಮಸ್ಯೆಯೊಂದರತ್ತ ಗಮನ ಸೆಳೆದಿದ್ದು, ಅವುಗಳಲ್ಲಿ ಹೆಚ್ಚಿನವು ಭಾರತದಲ್ಲಿ ನಿರ್ಮಿತವಾಗಿರುವ ಉಪಕರಣಗಳಲ್ಲ ಎಂದಿದ್ದಾರೆ. ಇವುಗಳ ಪೈಕಿ ಬಹಳಷ್ಟು ತಂತ್ರಜ್ಞಾನಗಳನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿ ಪಡಿಸಬಹುದು ಎಂದು ಸೋಮನಾಥ್ ಅಭಿಪ್ರಾಯ ಪಟ್ಟಿದ್ದು, ಅವುಗಳನ್ನು ಭಾರತದಲ್ಲಿ ಯಾಕೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಅವರು ಇದನ್ನು ರಾಕೆಟ್‌ಗಳು ಮತ್ತು ಉಪಗ್ರಹಗಳ ನಿರ್ಮಾಣದಲ್ಲಿ ಇಸ್ರೋದ ಪಯಣಕ್ಕೆ ಹೋಲಿಸಿದ್ದಾರೆ.
ಆರಂಭದಲ್ಲಿ, ಇಸ್ರೋ ಬಿಡಿಭಾಗಗಳು ಮತ್ತು ಅವಶ್ಯಕ ವಸ್ತುಗಳನ್ನು ವಿವಿಧ ಪೂರೈಕೆದಾರರಿಂದ ಸಂಗ್ರಹಿಸಿ, ಅವುಗಳನ್ನು ಭಾರತದಲ್ಲಿ ಜೋಡಿಸುತ್ತಿತ್ತು. ಆದರೆ, ಕಾಲ ಕಳೆದಂತೆ ಇಸ್ರೋ ಸ್ಥಳೀಯ ಸಂಸ್ಥೆಗಳೊಡನೆ ಸಹಯೋಗ ಹೊಂದಿ, ಔದ್ಯಮಿಕ ಉತ್ಪಾದನೆಯನ್ನು ದೇಶೀಯವಾಗಿ ನಡೆಸಲು ಪ್ರಯತ್ನ ನಡೆಸಿತು. ಇದರ ಪರಿಣಾಮವಾಗಿ, ಭಾರತ ಇಲೆಕ್ಟ್ರಾನಿಕ್ ಬಿಡಿಭಾಗಗಳು, ಮಿಶ್ರಲೋಹಗಳು, ಸಾಮಗ್ರಿಗಳು, ಕನೆಕ್ಟರ್‌ಗಳು, ರಾಸಾಯನಿಕಗಳು ಮತ್ತು ಅಂಟುಗಳನ್ನು ದೇಶೀಯವಾಗಿ ಉತ್ಪಾದಿಸಲು ಆರಂಭಿಸಿತು. ಇಂದು ಅವಶ್ಯಕವಾದ 90% ವಸ್ತುಗಳನ್ನು ಭಾರತದೊಳಗಿನಿಂದಲೇ ಸಂಗ್ರಹಿಸಲಾಗುತ್ತಿದೆ.
ಈಗ ಉಪಸ್ಥಿತವಿರುವ ವ್ಯವಸ್ಥೆ ರಕ್ಷಣಾ ಮತ್ತು ಏರೋಸ್ಪೇಸ್ ವಲಯಗಳ ಆಧುನಿಕ ತಂತ್ರಜ್ಞಾನಕ್ಕೆ ಬೆಂಬಲ ಒದಗಿಸುತ್ತದೆ. ಇಂತಹದ್ದೇ ವಿಧಾನವನ್ನು ಆರೋಗ್ಯ ಕ್ಷೇತ್ರ, ರೋಗ ನಿರ್ಣಯ, ಮತ್ತು ಆಸ್ಪತ್ರೆ ಉಪಕರಣಗಳ ವಿಚಾರಕ್ಕೂ ಅನ್ವಯಿಸಬೇಕು ಎಂದು ಸೋಮನಾಥ್ ಅಭಿಪ್ರಾಯ ಪಟ್ಟಿದ್ದಾರೆ. ವೈದ್ಯಕೀಯ ಉತ್ಪನ್ನಗಳನ್ನು ದೇಶೀಯವಾಗಿ ವಿನ್ಯಾಸಗೊಳಿಸಿ, ಇಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿ, ಅವಶ್ಯಕ ಬೇಡಿಕೆಗಳನ್ನು ಪೂರೈಸಬಹುದು ಎಂದು ಅವರು ವಿವರಿಸಿದ್ದಾರೆ.
ಭಾರತೀಯ ಕಂಪನಿಗಳು ಒರಿಜಿನಲ್ ಇಕ್ವಿಪ್ಮೆಂಟ್ ಮ್ಯಾನುಫಾಕ್ಚರರ್ (ಒಇಎಂ) ಗಳೊಡನೆ ಸಹಯೋಗ ಸಾಧಿಸಿ, ಉತ್ಪಾದನಾ ಪ್ರಕ್ರಿಯೆಯನ್ನು ಭಾರತದಲ್ಲೇ ನಡೆಸಬಹುದು ಎಂದು ಸೋಮನಾಥ್ ಸಲಹೆ ನೀಡಿದ್ದಾರೆ. ಇದರಿಂದಾಗಿ ಆಧುನಿಕ ಉತ್ಪಾದನಾ ವಿಧಾನ ಬಳಕೆಯಾಗಿ, ಖರ್ಚು ಕಡಿಮೆಯಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಬಾಹ್ಯಾಕಾಶ ಮತ್ತು ಸೂಕ್ಷ್ಮ ಗುರುತ್ವಾಕರ್ಷಣೆಗೆ (ಮೈಕ್ರೋಗ್ರ್ಯಾವಿಟಿ) ಸಂಬಂಧಿಸಿದಂತೆ ವೈದ್ಯಕೀಯ ಸಂಶೋಧನೆಗಳ ಕುರಿತು ಈಗ ಆಸಕ್ತಿ ಹೆಚ್ಚಾಗುತ್ತಿದೆ ಎನ್ನುವುದನ್ನು ಸೋಮನಾಥ್ ಒಪ್ಪಿದ್ದಾರೆ. ಅವರ ಪ್ರಕಾರ, ಈ ಕ್ಷೇತ್ರ ಭವಿಷ್ಯದಲ್ಲಿ ಸಂಶೋಧನೆಗೆ ಹೆಚ್ಚಿನ ಅವಕಾಶ ಒದಗಿಸಲಿದೆ.












Click it and Unblock the Notifications