ಹಮಾಸ್ ಮುಖ್ಯಸ್ಥನ ಜೀವ ತೆಗೆದ ಇಸ್ರೇಲ್ ಮಿಲಿಟರಿ, ಮಧ್ಯಪ್ರಾಚ್ಯದಲ್ಲಿ ಹೊಸ ತಲ್ಲಣ!
ಮಧ್ಯಪ್ರಾಚ್ಯ ಕೊತ ಕೊತ ಕುದಿಯುವ ಸಮಯದಲ್ಲೇ ಇಸ್ರೇಲ್ ಮತ್ತಷ್ಟು ರೊಚ್ಚಿಗೇಳುತ್ತಾ ದಾಳಿ ನಡೆಸುತ್ತಿದೆ. ಈ ಪೈಕಿ ಹಮಾಸ್ ನಾಯಕರು & ಮುಖ್ಯಸ್ಥರ ಹತ್ಯೆಗೆ ಇಸ್ರೇಲ್ ಸೇನೆ ಘೋರ ಕಾರ್ಯಾಚರಣೆ ಆರಂಭ ಮಾಡಿದೆ. ಇದರ ಪರಿಣಾಮ ಈಗಾಗಲೇ ನಲುಗಿ ಹೋಗಿರುವ ಗಾಜಾ ಪಟ್ಟಿಯಲ್ಲಿ ಇನ್ನಷ್ಟು ಸಂಚಲನ ಸೃಷ್ಟಿಯಾಗಿದ್ದು, ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆ ಬಗ್ಗೆ ಈಗ ಫೋಟೋಗಳ ಮೂಲಕ ಸಾಕ್ಷಿ ಒದಗಿಸಿದೆ ಇಸ್ರೇಲ್‌ನ ಮಿಲಿಟರಿ. ಹಾಗಾದ್ರೆ ಅಸಲಿಗೆ ಗಾಜಾ ಪಟ್ಟಿಯಲ್ಲಿ ಆಗಿದ್ದೇನು?
ಗಾಜಾ ಪಟ್ಟಿ & ಇಸ್ರೇಲ್ ನಡುವೆ ಆಗಾಗ ಕಿತ್ತಾಟ ನಡೆಯುತ್ತಿತ್ತು, ಆದರೆ 2023ರ ಅಕ್ಟೋಬರ್ 7 ರಂದು ದಿಢೀರ್ ಭೀಕರ ಘಟನೆಯೊಂದು ನಡೆದಿತ್ತು. ಹಮಾಸ್ ಬಂಡುಕೋರರು ಸಾವಿರ ಸಾವಿರ ರಾಕೆಟ್ ಹಾರಿಬಿಟ್ಟು, ಇಸ್ರೇಲ್ ವಿರುದ್ಧ ದಾಳಿ ಮಾಡಿದ್ದರು. ಇದರಿಂದ ಇಸ್ರೇಲ್‌ಗೆ ದೊಡ್ಡ ನಷ್ಟ ಉಂಟಾಗಿತ್ತು. ತಕ್ಷಣ ಈ ದಾಳಿಗೆ ಪ್ರತಿಕ್ರಿಯೆ ನೀಡಿದ್ದ ಇಸ್ರೇಲ್ ಸೇನೆ ಭಾರಿ ದೊಡ್ಡ ಮಟ್ಟದಲ್ಲಿ ಯುದ್ಧ ಸಾರಿತ್ತು ಹೀಗೆ ಇಬ್ಬರ ನಡುವೆ ಶುರುವಾಗಿದ್ದ ಯುದ್ಧ ನೋಡ ನೋಡುತ್ತಲೇ ಒಂದು ವರ್ಷ ಮುಗಿಸಿದ್ದು, ಇದೀಗ ಹಮಾಸ್ ಮುಖ್ಯಸ್ಥನ ಜೀವ ತೆಗೆದಿರುವ ಬಗ್ಗೆ ಇಸ್ರೇಲ್ ಮಹತ್ವದ ಮಾಹಿತಿ ಹಂಚಿಕೊಂಡಿದೆ.

ಗಾಜಾ ಪಟ್ಟಿ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮ
ಇದೀಗ ಗಾಜಾದಲ್ಲಿ ಐಡಿಎಫ್ ಕಾರ್ಯಾಚರಣೆಯ ವೇಳೆ 3 ಜನ ಜೀವ ಬಿಟ್ಟಿದ್ದಾರೆ ಎನ್ನುತ್ತಿದೆ ಇಸ್ರೇಲ್. ಹೀಗೆ ಮೃತಪಟ್ಟ ಮೂವರ ಪೈಕಿ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಕೂಡ ಸೇರಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಅಂತೆ. ಅಲ್ಲದೆ ಮೃತಪಟ್ಟ ವ್ಯಕ್ತಿ ಯಾಹ್ಯಾ ಸಿನ್ವಾರ್ ಎಂಬುದನ್ನ ಗುರುತು ಪತ್ತೆ ಮಾಡಲು ಇದೀಗ ಇಸ್ರೇಲ್ ಮಿಲಿಟರಿ ಹಲವು ಫೋಟೋ ಕೂಡ ರಿಲೀಸ್ ಮಾಡಿದೆ. ಇದು ಗಾಜಾ ಪಟ್ಟಿ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮವಾಗುವ ರೀತಿ ಮಾಡಿದೆ.
ಮತ್ತೊಂದು ಯುದ್ಧದ ಕಾರ್ಮೋಡ!
ಹೌದು, ಸಿರಿಯಾ ಮೇಲೆ ಕೂಡ ಇದೀಗ ಇಸ್ರೇಲ್ ಭೀಕರ ದಾಳಿ ಶುರು ಮಾಡಿದೆ ಎನ್ನುವ ಆರೋಪ ಕೇಳಿಬಂದಿದೆ. ಸಿರಿಯ ದೇಶದ ಲತಾಕಿಯ ಮೇಲೆ ಇಸ್ರೇಲ್ ಪಡೆಗಳು ವಾಯು ದಾಳಿ ನಡೆಸಿದೆ ಎಂಬ ಆರೋಪ ಮಾಡಲಾಗಿದೆ. ಲತಾಕಿಯ ಸಿಟಿಯಲ್ಲಿ ಇರುವ ಸಿರಿಯಾ ದೇಶದ ಶಸ್ತ್ರಾಸ್ತ್ರ ಸಂಗ್ರಹದ ಮೇಲೆ ಗುರಿ ಇಟ್ಟು ಈ ರೀತಿಯಾಗಿ ದಾಳಿ ನಡೆದಿರುವ ಆರೋಪ ಇದಾಗಿದೆ.
ಇದನ್ನೆಲ್ಲ ನೋಡುತ್ತಿದ್ದರೆ ಇಸ್ರೇಲ್ & ಮಧ್ಯಪ್ರಾಚ್ಯ ದೇಶಗಳ ನಡುವೆ ಯುದ್ಧ ಈಗ ಶುರು ಆಗಿದೆಯಾ? ಎಂಬ ಅನುಮಾನ ಮೂಡಿದೆ. ಯಾಕಂದ್ರೆ ಜಗಳ ಶುರುವಾಗಿ 1 ವರ್ಷ ಕಳೆದು ಹೋದರೂ ಪರಿಸ್ಥಿತಿ ಮಾತ್ರ ಸರಿಯಾಗುತ್ತಿಲ್ಲ. ಬದಲಾಗಿ ಮತ್ತಷ್ಟು ಕೈಮೀರಿ ಹೋಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಎದುರಾಗುವ ಆತಂಕ ಇದೆ.












Click it and Unblock the Notifications