Israel warns Iran: ಇರಾನ್ ದೇಶವನ್ನು ಭೂಮಿ ಮೇಲಿಂದ ಅಳಿಸಿಹಾಕುತ್ತೇವೆ- ಇಸ್ರೇಲ್ ಬೆದರಿಕೆಗೆ ಬೆಚ್ಚಿಬಿದ್ದ ಮಧ್ಯಪ್ರಾಚ್ಯ
ಟೆಲ್ ಅವೀವ್, ಅಕ್ಟೋಬರ್ 23: ಇಸ್ರೇಲ್ ಹಮಾಸ್ ಯುದ್ಧ ಮಧ್ಯಪ್ರಾಚ್ಯದಲ್ಲಿ ಭಾರೀ ಕಲ್ಲೋಲವನ್ನೇ ಸೃಷ್ಟಿಮಾಡಿದೆ. ಹಮಾಸ್ ದಾಳಿಯಿಂದ ಶುರುವಾದ ಸಂಘರ್ಷ ಸುತ್ತಲಿನ ದೇಶಗಳಿಗೂ ಹಬ್ಬುತ್ತಿದೆ. ಇಸ್ರೇಲ್ ಬೆಂಬಲಕ್ಕೆ ಅಮೆರಿಕದಂತಹ ಬಲಿಷ್ಠ ರಾಷ್ಟ್ರಗಳು ನಿಂತಿವೆ. ಪ್ಯಾಲೆಸ್ತೀನ್‌ಗೆ ಮುಸ್ಲಿಂ ರಾಷ್ಟ್ರಗಳು ಬೆಂಬಲಿಸಿವೆ. ಇದೇ ವೇಳೆ, ಇರಾನ್ ವಿರುದ್ಧ ಇಸ್ರೇಲ್ ಗುಡುಗಿದೆ.
ಇಸ್ರೇಲ್‌ನ ಹಣಕಾಸು ಸಚಿವ ನಿರ್ ಬರ್ಕತ್ ಅವರು ಇರಾನ್ ಕುರಿತು ಡೈಲಿ ಮೇಲ್‌ಗೆ ಸಂದರ್ಶನ ನೀಡಿದ್ದಾರೆ. ಇರಾನ್ ಮತ್ತು ಲೆಬನಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಹಮಾಸ್‌ನೊಂದಿಗೆ ನಡೆಯುತ್ತಿರುವ ಸಂಘರ್ಷದ ಸಮಯದಲ್ಲಿ ಹಿಜ್ಬುಲ್ಲಾ ಉಗ್ರರು ( ಇರಾನ್ ಬೆಂಬಲಿತ ಸಂಘಟನೆ ) ಉತ್ತರದಿಂದ ಯುದ್ಧವನ್ನು ಪ್ರಾರಂಭಿಸಿದರೆ ಅವರ ವಿರುದ್ಧ ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
'ಇಸ್ರೇಲ್ ಅನ್ನು ಬೇರೆಬೇರೆ ದಿಕ್ಕುಗಳಲ್ಲಿ ಎದುರಿಸುವುದು ಇರಾನ್ ಕಾರ್ಯತಂತ್ರವಾಗಿದೆ. ಒಂದು ವೇಳೆ, ಇರಾನ್ ತಪ್ಪು ಇಟ್ಟಿರುವುದು ಕಂಡುಬಂದರೆ, ನಾವು ನಿರ್ಣಾಯಕ ಕ್ರಮವನ್ನು ಕೈಗೊಳ್ಳುತ್ತೇವೆ. ನಮ್ಮ ಪ್ರತಿಕ್ರಿಯೆಯು ಯಾವುದೇ ನಿರ್ದಿಷ್ಟ ಕಾರ್ಯತಂತ್ರಕ್ಕೆ ಸೀಮಿತವಾಗಿರುವುದಿಲ್ಲ. ಬದಲಿಗೆ ನಾವು ಮೂಲವನ್ನು ಕಿತ್ತುಹಾಕಲು ಮುಂದಾಗುತ್ತೇವೆ' ಎಂದು ತಿಳಿಸಿದ್ದಾರೆ.
'ನಮ್ಮ ಶತ್ರುಗಳಿಗೆ ನಾವು ಸ್ಪಷ್ಟ ಸಂದೇಶವನ್ನು ರವಾನಿಸಲು ಇಚ್ಚಿಸುತ್ತೇವೆ. ನಾವು ಅವರಿಗೆ ತಿಳಿಸಲು ಬಯಸುತ್ತೇವೆ. ಗಾಜಾದಲ್ಲಿ ಏನಾಗುತ್ತಿದೆ ಎಂಬುದನ್ನು ನೀವು ನೋಡುತ್ತಿರಬಹುದು. ನೀವು ನಮ್ಮ ಮೇಲೆ ದಾಳಿ ಮಾಡಿದರೆ ಭೀಕರವಾದ ದಾಳಿಯನ್ನು ಎದುರಿಸುತ್ತೀರಿ. ನಾವು ನಿಮ್ಮನ್ನು ಭೂಮಿಯ ಮುಖದಿಂದ ಅಳಿಸಿ ಹಾಕಲಿದ್ದೇವೆ' ಎಂದು ಇಸ್ರೇಲ್ ಸಚಿವರು ಹೇಳಿದ್ದಾರೆ.
50,000 ಗರ್ಭಿಣಿಯರಿಗಿಲ್ಲ ಆರೋಗ್ಯ ಸೇವೆ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಗಾಜಾದಲ್ಲಿ ಕನಿಷ್ಠ 50,000 ಗರ್ಭಿಣಿಯರು ಅಗತ್ಯ ಆರೋಗ್ಯ ಸೇವೆಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಈ ಐವತ್ತು ಸಾವಿರ ಗರ್ಭಿಣಿಯರಲ್ಲಿ ಸುಮಾರು 5,500 ಗರ್ಭಿಣಿಯರು ಮುಂದಿನ ತಿಂಗಳಲ್ಲಿ ಜನ್ಮ ನೀಡಲಿದ್ದಾರೆ.
ಸುಮಾರು 30 ಆಸ್ಪತ್ರೆಗಳಲ್ಲಿ ವಿದ್ಯುತ್, ನೀರು ಮತ್ತು ಇತರ ಸರಬರಾಜುಗಳ ಕೊರತೆ ಉಂಟಾಗಿದೆ. ಕನಿಷ್ಠ ಏಳು ಆಸ್ಪತ್ರೆಗಳನ್ನು ಮುಚ್ಚಲು ಸೂಚಿಸಲಾಗಿದೆ. ಉಳಿದ ಆಸ್ಪತ್ರೆಗಳಲ್ಲಿ ಎಲ್ಲ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತಿಲ್ಲವೆಂದು ವೈದ್ಯರು ಹೇಳಿದ್ದಾರೆ.
ಇಸ್ರೇಲ್‌ನ ಸೇನೆಯು ಸೋಮವಾರದಂದು ನೆಲದ ಮೂಲಕ ಗಾಜಾದಲ್ಲಿ ದಾಳಿ ಇಟ್ಟಿದೆ. ಇಸ್ರೇಲ್ ಪಡೆಗಳು ರಾತ್ರಿಯಿಡೀ ಗಾಜಾ ಪಟ್ಟಿಗೆ ಸೀಮಿತವಾಗಿ ದಾಳಿಗಳನ್ನು ನಡೆಸಿದೆ. ಹಮಾಸ್ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ಪ್ಯಾಲೆಸ್ತೀನ್ ಗುಂಪು ಹಮಾಸ್ ಉಗ್ರರ ಗುಂಪು ಇಸ್ರೇಲ್‌ನಲ್ಲಿ ನುಸುಳಲು ಪ್ರಯತ್ನಿಸಿದೆ ಎಂದು ತಿಳಿದುಬಂದಿದೆ. ಕೆಲವು ಇಸ್ರೇಲಿ ಮಿಲಿಟರಿ ಉಪಕರಣಗಳನ್ನು ಉಗ್ರರು ನಾಶಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಈ ಕುರಿತು ಇಸ್ರೇಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಕ್ಟೋಬರ್ 7 ರಂದು ಹಮಾಸ್ ಉಗ್ರರು 222 ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ ಎಂದು ಇಸ್ರೇಲ್‌ನ ಮುಖ್ಯ ಮಿಲಿಟರಿ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ತಿಳಿಸಿದ್ದಾರೆ.












Click it and Unblock the Notifications