Israel Strikes Syria: ಸಿರಿಯಾದ ಎರಡು ಪ್ರಮುಖ ಏರ್‌ಪೋರ್ಟ್ ಮೇಲೆ ಇಸ್ರೇಲ್ ದಾಳಿ- ಮಹಾಯುದ್ಧದತ್ತ ಯಹೂದಿಗಳ ಹೆಜ್ಜೆ
ಮಾಸ್ಕಸ್, ಅಕ್ಟೋಬರ್ 12: ಅಕ್ಟೋಬರ್ 6ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ಆರಂಭಿಸಿದೆ. ಇದಕ್ಕೆ ಪ್ರತ್ಯುತ್ತರವಾಗಿ ಇಸ್ರೇಲ್ ಯುದ್ಧವನ್ನು ಘೋಷಿಸಿದೆ. ಗಾಜಾ ಪಟ್ಟಿಯನ್ನು ಅಕ್ಷರಶಃ ನರಕವನ್ನಾಗಿ ಮಾಡಿರುವ ಇಸ್ರೇಲ್‌ನ ಕೆಂಗಣ್ಣು ಸಿರಿಯಾದ ಮೇಲೆ ನೆಟ್ಟಿದೆ. ಸಿರಿಯಾ ದೇಶದ ಎರಡು ಪ್ರಮುಖ ವಿಮಾನ ನಿಲ್ದಾಣಗಳ ಮೇಲೆ ಇಸ್ರೇಲ್ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಯಹೂದಿಗಳ ಈ ನಡೆ ಮಹಾಯುದ್ಧಕ್ಕೆ ಪ್ರೇರಣೆಯಾಗುವ ಎಲ್ಲ ಸಾಧ್ಯತೆಗಳೂ ಇವೆ.
ಗುರುವಾರ ಸಿರಿಯಾದ ಎರಡು ಪ್ರಮುಖ ವಿಮಾನ ನಿಲ್ದಾಣಗಳ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಈ ವಿಮಾನ ನಿಲ್ದಾಣಗಳಲ್ಲಿನ ಎಲ್ಲ ಸೇವೆಗಳೂ ಸ್ಥಗಿತಗೊಂಡಿವೆ ಎಂದು ಸಿರಿಯನ್ ಸರ್ಕಾರಿ ಮಾಧ್ಯಮ ತಿಳಿಸಿದೆ.

ರಾಜಧಾನಿ ಡಮಾಸ್ಕಸ್ ಮತ್ತು ಉತ್ತರ ಸಿರಿಯಾದ ಇನ್ನೊಂದು ಪ್ರಮುಖ ನಗರವಾದ ಅಲೆಪ್ಪೊದ ವಿಮಾನ ನಿಲ್ದಾಣಗಳ ಮೇಲೆ ಇಸ್ರೇಲ್ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಇಸ್ರೇಲ್ ದಾಳಿಯಿಂದ ವಿಮಾನಗಳು ಸ್ಥಗಿತಗೊಂಡಿವೆ. ಇವೆರಡೂ ವಿಮಾನ ನಿಲ್ದಾಣಗಳನ್ನು ಸಿರಿಯಾ ಸರ್ಕಾರ ನಡೆಸುತ್ತದೆ.
'ಎರಡೂ ವಿಮಾನ ನಿಲ್ದಾಣಗಳ ಮೇಲೆ ಒಂದೇ ಸಮಯದಲ್ಲಿ ದಾಳಿ ನಡೆಸಲಾಗಿದೆ. ಇದರಿಂದ ಲ್ಯಾಂಡಿಂಗ್ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ' ಎಂದು ಮಿಲಿಟರಿ ಮೂಲವನ್ನು ಉಲ್ಲೇಖಿಸಿ ಸರ್ಕಾರಿ ಮಾಧ್ಯಮ ವರದಿ ಪ್ರಕಟಿಸಿದೆ.

ಗಾಜಾದಲ್ಲಿ ಹಮಾಸ್‌ನೊಂದಿಗಿನ ಸಂಘರ್ಷದಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಇಸ್ರೇಲ್ ಹತಾಶ ಪ್ರಯತ್ನ ನಡೆಸಿದೆ ಸಿರಿಯನ್ ಸರ್ಕಾರ ಹೇಳಿದೆ.
ಸಿರಿಯಾದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲದ ಯುದ್ಧದ ವಾತಾವರಣವಿತ್ತು. ಆ ಸಮಯದಲ್ಲಿ ಇಸ್ರೇಲ್ ಹಲವಾರು ಭಾರಿ ವೈಮಾನಿಕ ದಾಳಿಗಳನ್ನು ಮಾಡಿತ್ತು.
ಇರಾನ್ ಬೆಂಬಲಿತ ಪಡೆಗಳು ಮತ್ತು ಲೆಬನಾನಿನ ಹಿಜ್ಬುಲ್ಲಾ ಹೋರಾಟಗಾರರು ಸಿರಿಯಾದಲ್ಲಿ ಅಡಗಿಕೊಂಡಿದ್ದಾರೆ. ಅವರು ಇಸ್ರೇಲ್ ವಿರುದ್ಧ ಮಸಲತ್ತು ಮಾಡುತ್ತಾರೆ ಎನ್ನುವುದು ಇಸ್ರೇಲ್ ವಾದವಾಗಿದೆ.

ಶನಿವಾರದಂದು ನೂರಾರು ಹಮಾಸ್ ಬಂದೂಕುಧಾರಿಗಳು ಗಾಜಾ ಗಡಿಯ ಮೂಲಕ ಇಸ್ರೇಲ್‌ಗೆ ನುಗ್ಗಿ 1,200 ಜನರನ್ನು ಕೊಂದದ್ದಾರೆ. ಆ ನಂತರ ನಡೆಯುತ್ತಿರುವ ಹಮಾಸ್ ಮತ್ತು ಇಸ್ರೇಲ್ ಯುದ್ದವು ಆರನೇ ದಿನಕ್ಕೆ ಕಾಲಿಟ್ಟಿದೆ. ಇದರ ನಡುವೆಯೇ ಸಿರಿಯಾದ ಮೇಲೆ ಇಸ್ರೇಲ್ ದಾಳಿ ನಡೆಸಿರುವುದು ಮಧ್ಯಪ್ರಾಚ್ಯದಲ್ಲಿ ಸಂಘರ್ಷವನ್ನು ಇನ್ನಷ್ಟು ಉಲ್ಬಣ ಮಾಡುವ ಮುನ್ಸೂಚನೆಗಳು ಕಂಡುಬಂದಿವೆ.
ಇಸ್ರೇಲ್‌ಗೆ ಬ್ಲಿಂಕೆನ್ ಭೇಟಿ
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರೊಂದಿಗೆ ಟೆಲ್ ಅವಿವ್‌ನ ಕಿರಿಯಾದಲ್ಲಿ ಸಭೆ ನಡೆಸಿದ್ದಾರೆ.
ಈಗಿನ ಪರಿಸ್ಥಿತಿ ಮತ್ತು ಮುಂದಿನ ಕಾರ್ಯಾಚರಣೆಗಳಿಗೆ ಅಗತ್ಯವಿರುವ ಮಿಲಿಟರಿ ನೆರವಿನ ಬಗ್ಗೆ ಇಬ್ಬರು ನಾಯಕರು ಚರ್ಚಿಸಿದ್ದಾರೆ.
ಇದೇ ವೇಳೆ, ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ನೆತನ್ಯಾಹು ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಯುದ್ಧದಿಂದ ಹಾನಿಗೊಳಗಾದ ರಾಷ್ಟ್ರಕ್ಕೆ ಅಮೆರಿಕದ ಬೆಂಬಲ ಇದ್ದೇ ಇರುತ್ತದೆ. ಗಾಜಾ ಮೂಲದ ಭಯೋತ್ಪಾದಕರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬೇಕಿದೆ. ಆದರೆ, ಪ್ಯಾಲೇಸ್ಟಿನಿಯನ್ ನಾಗರಿಕರ ಜೀವಗಳನ್ನು ರಕ್ಷಿಸಬೇಕು ಎಂದು ಇಸ್ರೇಲ್‌ಗೆ ತಿಳಿಸಿದ್ದಾರೆ.
'ನಾನು ಇಸ್ರೇಲ್‌ಗೆ ನೀಡುವ ಸಂದೇಶವಿದು. ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಸಾಕಷ್ಟು ಬಲಶಾಲಿಯಾಗಿರಬಹುದು. ಆದರೆ, ಅಮೆರಿಕಾ ಇರುವ ವರೆಗೆ ನೀವು ಎಂದಿಗೂ ಏಕಾಂಗಿಯಲ್ಲ. ನಾವು ಯಾವಾಗಲೂ ನಿಮ್ಮ ಜೊತೆಯಲ್ಲಿರುತ್ತೇವೆ' ಎಂದು ಬ್ಲಿಂಕನ್ ಹೇಳಿದ್ದಾರೆ.












Click it and Unblock the Notifications