‘ಯುದ್ಧ ನಿಲ್ಲಬಾರದು, ಇದು ನನ್ನ ಆಜ್ಞೆ!’ ಹಿಂಗೆ ಹೇಳಿದ್ಯಾರು?
ಹಮಾಸ್ ಉಗ್ರರು & ಇಸ್ರೇಲ್ ನಡುವೆ ಸುಡು ಸುಡುವ ಯುದ್ಧ ನಡೆಯುತ್ತಿದೆ. ಯುದ್ಧದ ಬಿರುಗಾಳಿಗೆ ಒಂದು ಅಂತ್ಯ ಹಾಡಲು ಎಲ್ಲರೂ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಈ ಎಲ್ಲಾ ಅಡೆತಡೆ ಮಧ್ಯೆ ಇಸ್ರೇಲ್ ಪ್ರಧಾನಿ ನೀಡಿರುವ ಅದೊಂದು ಹೇಳಿಕೆ ಈಗ ಯುದ್ಧದ ಕಿಚ್ಚಿಗೆ ತುಪ್ಪ ಸುರಿದಿದೆ! ಹಾಗಾದರೆ ಇಸ್ರೇಲ್ ಪ್ರಧಾನಿ ಹೇಳಿದ್ದೇನು?
ಯಾವುದೇ ಕಾರಣಕ್ಕೆ ಹಮಾಸ್ ವಿರುದ್ಧ ಕಾರ್ಯಾಚರಣೆ ನಿಲ್ಲಲ್ಲ ಎಂದು ಗುಡುಗುತ್ತಾ, ಭೀಕರ ದಾಳಿ ಮುಂದುವರಿಸಿರುವ ಇಸ್ರೇಲ್ ಸೇನೆ, ರಕ್ತಪಾತ ಮುಂದುವರಿಸಿದೆ. ಈ ತಿಕ್ಕಾಟದಲ್ಲಿ ಜನ ಜೀವ ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುವ ಸಮಯಕ್ಕೇ ಇಸ್ರೇಲ್ ಪಿಎಂ ನೀಡಿರುವ ಹೇಳಿಕೆ ಹಲ್‌ಚಲ್ ಎಬ್ಬಿಸಿದೆ. ಹಾಗೇ ಮಧ್ಯಪ್ರಾಚ್ಯ ಭಾಗದಲ್ಲಿ ಇನ್ನೂ ಒಂದು ಭೀಕರ ಯುದ್ಧ ಸ್ಫೋಟಗೊಳ್ಳುವ ಸೂಚನೆ ಈ ಮೂಲಕ ಹೊರಬಿದ್ದಿದೆ. ಹಾಗಾದ್ರೆ ಇದೀಗ ಇಸ್ರೇಲ್ ಪ್ರಧಾನಿ ನೀಡಿರುವ ಆ ಹೇಳಿಕೆ ಎಂತಹದ್ದು? ಮುಂದೆ ಓದಿ.

ಉಗ್ರರ ಬಿಲಗಳ ಮೇಲೆ ಭೀಕರ ದಾಳಿ?
ಅಂದಹಾಗೆ ಇದೀಗ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೀಡಿರುವ ಪ್ರತ್ಯುತ್ತರವನ್ನ ನೋಡುವುದಾದರೆ, 'ಹಮಾಸ್ ಸರ್ವನಾಶ ಆಗುವವರೆಗು ಈ ದಾಳಿ ನಿಲ್ಲೋದಿಲ್ಲ' ಎಂದು ಮತ್ತೆ ಮತ್ತೆ ಹೇಳಿದ್ದಾರೆ. ಉತ್ತರ ಗಾಜಾದಲ್ಲಿರುವ ಇಸ್ರೇಲ್ ಪಡೆಗಳ ಶಿಬಿರಕ್ಕೆ ಭೇಟಿ ನೀಡಿದ ಬೆಂಜಮಿನ್, ಸರ್ಕಾರ ಶೀಘ್ರ ಯುದ್ಧ ನಿಲ್ಲಿಸಲಿದೆ ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದಿದ್ದಾರೆ. ಹಾಗೇ ನಾವು ಈ ರೀತಿ ದಾಳಿ ಮಾಡದೇ ಇದ್ದರೆ ಹಮಾಸ್ ತಮ್ಮಲ್ಲಿ ಇದೀಗ ಒತ್ತೆಯಾಳಾಗಿ ಇರಿಸಿಕೊಂಡ, ನಮ್ಮ ಜನರನ್ನ ಬಿಡಿಸಿಕೊಳ್ಳಲು ಆಗಲ್ಲ. ಹೀಗಾಗಿ ಈ ಯುದ್ಧ ಅತ್ಯಗತ್ಯ ಎಂದಿದ್ದಾರೆ. ನಾವು ದಾಳಿ ನಿಲ್ಲಿಸಲ್ಲ ಕೊನೇವರೆಗೂ ಯುದ್ಧ ಮುಂದುವರಿಸುತ್ತೇವೆ ಎಂದಿದ್ದಾರೆ ಇಸ್ರೇಲ್ ಪ್ರಧಾನಿ.

ಸಾವಿನ ಸಂಖ್ಯೆ ಎಷ್ಟು ಗೊತ್ತಾ?
ಗಾಜಾಪಟ್ಟಿ ಸೇರಿ ಪ್ಯಾಲೆಸ್ತೀನ್‌ನಲ್ಲಿ ಈವರೆಗೆ 20,000 ನಾಗರಿಕರು ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಈ ಪೈಕಿ ಮಕ್ಕಳ ಸಾವಿನ ಸಂಖ್ಯೆ ಹೆಚ್ಚಾಗಿದ್ದು ಆಕ್ರೋಶ ಹೆಚ್ಚಾಗಲು ಪ್ರಮುಖ, ಕಾರಣ ಕೂಡ ಆಗಿದೆ. ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ಮೊದಲಿಗೆ ಸುಮಾರು 5000ಕ್ಕೂ ರಾಕೆಟ್ ಮೂಲಕ ದಾಳಿ ನಡೆಸಿದ್ದರು. ಪ್ರತಿಯಾಗಿ ಇಸ್ರೇಲ್ ಕೂಡ ದಾಳಿ ಆರಂಭಿಸಿತ್ತು. ಹೀಗೆ ಹಮಾಸ್ ಉಗ್ರರು ಹಾಗೂ ಇಸ್ರೇಲ್ ಮಧ್ಯೆ ಸುಮಾರು 80 ದಿನದಿಂದ ಈ ತಿಕ್ಕಾಟ ನಡೆಯುತ್ತಿದೆ.
ಅಮೆರಿಕದ ನಾಯಕರಿಗೆ ಫುಲ್ ಟೆನ್ಷನ್!
ಅಧ್ಯಕ್ಷೀಯ ಚುನಾವಣೆಗೆ ಅಮೆರಿಕದಲ್ಲಿ ಕ್ಷಣಗಣನೆ ಆರಂಭವಾಗಿದೆ. ಆದ್ರೆ ಹೀಗೆ ಅಧ್ಯಕ್ಷೀಯ ಚುನಾವಣೆ ಹತ್ತಿರವಾಗುತ್ತಿರುವ ಸಮಯಕ್ಕೇ ಜೋ ಬೈಡನ್ ಅವರಿಗೆ ಭಾರಿ ಹಿನ್ನಡೆ ಮಾಡುತ್ತಿದೆ ಯುದ್ಧ. ಒಂದು ಕಡೆ ರಷ್ಯಾ & ಉಕ್ರೇನ್ ಯುದ್ಧದಲ್ಲಿ ಅಮೆರಿಕ ಉಕ್ರೇನ್ ಪರವಾಗಿ ನಿಂತಿದೆ. ಇನ್ನೊಂದು ಕಡೆ ಹಮಾಸ್ & ಇಸ್ರೇಲ್ ಕಾಳಗದಲ್ಲಿ ಇಸ್ರೇಲ್ ಪರ ಬ್ಯಾಟ್ ಬೀಸುತ್ತಿದೆ ಅಮೆರಿಕ. ಆದ್ರೆ ಇದೆಲ್ಲಾ ಅಮೆರಿಕದಲ್ಲಿ ಬೈಡನ್‌ಗೆ ಉಲ್ಟಾ ಆಗುತ್ತಿದ್ದು, ಅಧ್ಯಕ್ಷೀಯ ಚುನಾವಣೆ ಮೇಲು ಪರಿಣಾಮ ಬೀರುವ ಸಾಧ್ಯತೆ ಇದೆ.












Click it and Unblock the Notifications