24 ಗಂಟೆಯಲ್ಲಿ 100ಕ್ಕೂ ಹೆಚ್ಚು ಜನರನ್ನು ಕೊಂದ ಇಸ್ರೇಲ್ ಸೇನೆ?
ಇಸ್ರೇಲ್ & ಹಮಾಸ್ ಯುದ್ಧ ಇನ್ನೇನು ನಿಂತೇ ಹೋಯಿತು ಅಂತಾ ಅಂದುಕೊಳ್ಳುವುದರ ಒಳಗಾಗಿ ಮತ್ತೊಮ್ಮೆ ಯುದ್ಧ ಕಿಚ್ಚು ಧಗಧಗಿಸುತ್ತಿದೆ. ಇದರ ಪರಿಣಾಮ ಅಮಾಯಕ ಜನ ಹೆಣವಾಗುತ್ತಿದ್ದಾರೆ. ಹಾಗಾದ್ರೆ ಯುದ್ಧವು ಶುರುವಾಗಿ ಸುಮಾರು 2 ತಿಂಗಳಿಂದ ಇಲ್ಲಿಯವರೆಗು ಎಷ್ಟು ಜನ ಗಾಜಾಪಟ್ಟಿ ಭಾಗದಲ್ಲಿ ಮೃತಪಟ್ಟಿದ್ದಾರೆ ಗೊತ್ತಾ? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.
ಇಸ್ರೇಲ್ ಸೇನೆ ಮತ್ತು ಹಮಾಸ್ ನಡುವೆ ಅಕ್ಟೋಬರ್ 7 ರಂದು ಯುದ್ಧವು ಆರಂಭವಾಗಿತ್ತು, ಹೀಗೆ ಯುದ್ಧ ಆರಂಭವಾದ ನಂತರ ಪರಿಸ್ಥಿತಿ ಕೈಮೀರಿ ಹೋಗಿದೆ. ಈವರೆಗು 15,000ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಜನರು ಯುದ್ಧಕ್ಕೆ ಬಲಿಯಾಗಿ ಜೀವ ಬಿಟ್ಟಿದ್ದು, ಹೀಗೆ ಮೃತಪಟ್ಟವರಲ್ಲಿ ಸಾವಿರಾರು ಮಕ್ಕಳೇ ಸೇರಿದ್ದಾರೆ. ಕೆಲ ದಿನದ ಹಿಂದೆ ತಾತ್ಕಾಲಿಕವಾಗಿ ಕದನ ವಿರಾಮವನ್ನ ಘೋಷಣೆ ಮಾಡಿತ್ತು ಇಸ್ರೇಲ್. ಆದರೆ ದಿಢೀರ್ ಯುದ್ಧ ಶುರುವಾದ ಕಾರಣ ಏನೇನೆಲ್ಲಾ ಆಗುತ್ತೆ ಗೊತ್ತಾ? ಮುಂದೆ ಓದಿ.

ಅನ್ನವಿಲ್ಲದೆ ನರಳುತ್ತಿರುವ ಜನ
ಅಂದಹಾಗೆ ಈಗಿನ ಪರಿಸ್ಥಿತಿಯಲ್ಲಿ ಗಾಜಾಪಟ್ಟಿ ಜನರಿಗೆ ತಿನ್ನಲು ಅನ್ನವಿಲ್ಲ, ಕುಡಿಯೋಕೆ ನೀರು ಕೂಡ ಸಿಗುತ್ತಿಲ್ಲ. ಹೀಗಾಗಿ ಹತ್ತಾರು ಲಕ್ಷ ಜನ, ಗಾಜಾಪಟ್ಟಿ ಒಳಗೆ ನರಳುತ್ತಿದ್ದಾರೆ. ಈ ಮಧ್ಯೆ ಲಕ್ಷಾಂತರ ಜನರು ದಕ್ಷಿಣ ಗಾಜಾಗೆ ಹೋಗಿ, ಜೀವ ಉಳಿಸಿಕೊಳ್ಳಲು ಪ್ರಯತ್ನ ಆರಂಭಿಸಿದ್ದಾರೆ. ಆದರೂ ಪ್ರಯೋಜನಕ್ಕೆ ಬರುತ್ತಿಲ್ಲ ಅತ್ತ ದೇಶ ಬಿಟ್ಟು ಹೋಗೋದಕ್ಕೂ ಆಗದೆ. ಇತ್ತ ಅಲ್ಲೇ ಬದುಕೋದಕ್ಕೂ ಆಗದೆ ನಿತ್ಯವು ನರಳುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಇಸ್ರೇಲ್ ಸೇನೆ ತನ್ನ ದಾಳಿಯನ್ನ ಮತ್ತಷ್ಟು ಪ್ರಬಲವಾಗಿಸಿದೆ. ಆದ್ರೆ ಉಗ್ರರ ವಿರುದ್ಧದ ಈ ಹೋರಾಟದಲ್ಲಿ ಅಮಾಯಕರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಸಾವಿರಾರು ಟನ್ ಬಾಂಬ್ ಬಳಕೆ?
ಹಮಾಸ್ ಉಗ್ರರು ಎಸಗಿದ ಕೃತ್ಯಕ್ಕೆ ಗಾಜಾಪಟ್ಟಿ ಸಾಮಾನ್ಯ ಜನ ನಲುಗಿದ್ದು ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು, ಇಸ್ರೇಲ್ ವಿರುದ್ಧ 5000 ರಾಕೆಟ್ ಉಡಾಯಿಸಿದ್ರು. ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ & ಬಾಂಬ್ ಹಿಡಿದು ಇಸ್ರೇಲ್ ಒಳ ನುಗ್ಗಿದ್ದರು. ರೊಚ್ಚಿಗೆದ್ದ ಇಸ್ರೇಲ್, ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಘಟನೆ ನಡೆದು ಭರ್ಜರಿ 2 ತಿಂಗಳು ಕಳೆದಿದೆ. ಹೀಗೆ 2 ತಿಂಗಳ ಅವಧಿಯಲ್ಲಿ, ತನ್ನ ಶತ್ರುಗಳನ್ನ ನಾಶ ಮಾಡಲು ಇಸ್ರೇಲ್ ಬಳಸಿದ್ದು ಸಾವಿರಾರು ಟನ್ ಬಾಂಬ್ ಎಂಬ ಆತಂಕಕಾರಿ ಮಾಹಿತಿ ಕೂಡ ಸಾಕಷ್ಟು ಭಯ ಹುಟ್ಟಿಸುತ್ತಿದೆ.
ಎಲ್ಲೆಲ್ಲೂ ಆತಂಕದ ವಾತಾವರಣ ನಿರ್ಮಾಣ
ಒಟ್ನಲ್ಲಿ ಯಾರೋ ಮಾಡಿದ ತಪ್ಪಿಗೆ ಅಮಾಯಕರಿಗೆ ಶಿಕ್ಷೆ ಯಾಕೆ? ಅನ್ನೋ ಪ್ರಶ್ನೆಯನ್ನು ಈಗ ಕೇಳಲಾಗುತ್ತಿದೆ. ಇಷ್ಟೆಲ್ಲದರ ಮಧ್ಯೆ ಹಮಾಸ್ & ಇಸ್ರೇಲ್ ಸೇನೆ ನಡುವೆ ಮಾತುಕತೆ ಆರಂಭವಾಗಿತ್ತು. ಆದ್ರೆ ಅದ್ಯಾವುದೂ ಫಲ ನೀಡಿಲ್ಲ, ಸ್ವಲ್ಪ ದಿನಗಳ ಕಾಲ ಯುದ್ಧವನ್ನು ನಿಲ್ಲಿಸಿದ್ದರೂ ಮತ್ತೆ ಹಿಂಸಾಚಾರ ಶುರುವಾಗಿದೆ. ಈ ಹಿನ್ನೆಲೆ ಇನ್ನಷ್ಟು ಜನ ಈ ಯುದ್ಧಕ್ಕೆ ಬಲಿಯಾಗುವುದು ಪಕ್ಕಾ ಎಂಬ ಆತಂಕದ ವಾತಾವರಣ ಸೃಷ್ಟಿಯಾಗಿದೆ.












Click it and Unblock the Notifications