ವಿಶ್ವಸಂಸ್ಥೆ ಮುಖ್ಯಸ್ಥರನ್ನೇ ರಾಜೀನಾಮೆಗೆ ಒತ್ತಾಯಿಸಿದ ಇಸ್ರೇಲ್- ಕೋಪದ ಭರದಲ್ಲಿ ಪ್ರಮಾದ ಎಸಗುತ್ತಿದೆಯಾ ಯಹೂದಿ ರಾಷ್ಟ್ರ?
ಟೆಲ್ ಅವೀವ್, ಅಕ್ಟೋಬರ್ 25: ಗಾಜಾ ಪಟ್ಟಿಯಲ್ಲಿ ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಆಗುತ್ತಿದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಆರೋಪಿಸಿದ್ದಾರೆ. ಹಮಾಸ್ ದಾಳಿಗೆ ಪ್ರತಿಕ್ರಿಯೆಯಾಗಿ ಗಾಜಾ ಪಟ್ಟಿಯಲ್ಲಿ ನಾಗರಿಕರನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸುತ್ತಿದೆ ಎಂದು ಗುಟೆರೆಸ್ ಹರಿಹಾಯ್ದಿದ್ದಾರೆ. ಈ ಹೇಳಿಕೆ ವಿರುದ್ಧ ಕಿಡಿ ಕಾರಿರುವ ಇಸ್ರೇಲ್, ವಿಶ್ವಸಂಸ್ಥೆ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೇ ನೀಡಬೇಕೆಂದು ಒತ್ತಾಯಿಸಿದೆ.
ಭದ್ರತಾ ಮಂಡಳಿಯ ಉನ್ನತ ಮಟ್ಟದ ಸಭೆ ನಡೆಸಿರುವ ಗುಟೆರೆಸ್ ಗಾಜಾ ಪಟ್ಟಿಯಲ್ಲಿ ಆಗುತ್ತಿರುವ ಉಲ್ಲಂಘನೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

'ಅಕ್ಟೋಬರ್ 7 ರಂದು ಹಮಾಸ್ ಉಗ್ರಗಾಮಿಗಳು ನಡೆಸಿದ ಭಯಾನಕ ಹಿಂಸಾಚಾರಕ್ಕೆ ಯಾವುದೇ ಕ್ಷಮೆ ಇಲ್ಲ. ಆದರೆ, ಇಸ್ರೇಲ್ ಪ್ಯಾಲೆಸ್ಟೀನಿಯನ್ನರ ವಿರುದ್ಧ ಸಾಮೂಹಿಕ ಶಿಕ್ಷೆ ನೀಡುತ್ತಿರುವುದು ಸರಿಯಲ್ಲ' ಎಂದು ಹೇಳಿದ್ದಾರೆ.
'ಗಾಜಾದಲ್ಲಿ ಸಂಭವಿಸುತ್ತಿರುವ ಅಂತರಾಷ್ಟ್ರೀಯ ಮಾನವೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಗಳ ಬಗ್ಗೆ ನಾನು ತೀವ್ರವಾಗಿ ಕಳವಳಗೊಂಡಿದ್ದೇನೆ. ನಾನು ಸ್ಪಷ್ಟವಾಗಿ ಹೇಳುತ್ತೇನೆ. ಸಶಸ್ತ್ರ ಸಂಘರ್ಷದಲ್ಲಿ ಯಾವುದೇ ದೇಶವು ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಮೀರಬಾರದು' ಎಂದು ಗುಟೆರೆಸ್ ತಿಳಿಸಿದ್ದಾರೆ.

ಹಮಾಸ್ ದಾಳಿಗಳು ಒಂದೇ ದಿನದಲ್ಲಿ ಸಂಭವಿಸಿಲ್ಲ. ಏಕೆಂದರೆ ಪ್ಯಾಲೆಸ್ಟೀನಿಯನ್ನರು 56 ವರ್ಷಗಳ ಕಾಲ ಉಸಿರುಗಟ್ಟಿಸುವ ಸನ್ನಿವೇಶದಲ್ಲಿ ಬದುಕಿದ್ದಾರೆ ಎಂದು ಗುಟೆರೆಸ್ ಹೇಳಿದ್ದಾರೆ.
ಗುಟೆರಸ್ ಅವರ ಈ ಹೇಳಿಕೆಗಳು ಇಸ್ರೇಲಿ ವಿದೇಶಾಂಗ ಸಚಿವ ಎಲಿ ಕೊಹೆನ್ ಅವರನ್ನು ಕೆರಳಿಸಿದೆ. ಇಸ್ರೇಲ್ ಇತಿಹಾಸದಲ್ಲಿ ಇಂತಹ ಮಾರಣಾಂತಿಕ ದಾಳಿಯನ್ನು ನಾವು ಕಂಡಿಲ್ಲ. ಹಮಾಸ್ ದಾಳಿಯಲ್ಲಿ ಚಿಕ್ಕ ಮಕ್ಕಳು ಸೇರಿದಂತೆ ಅಮಾಯಕ ನಾಗರಿಕರ ಹತ್ಯೆಯಾಗಿದೆ ಎಂದು ಕೊಹೆನ್ ತಿಳಿಸಿದ್ದಾರೆ.
'ಮಿಸ್ಟರ್ ಜನರಲ್ ಗುಟೆರಸ್, ನೀವು ಯಾವ ಜಗತ್ತಿನಲ್ಲಿ ವಾಸಿಸುತ್ತಿದ್ದೀರಿ?' ಎಂದು ಕೊಹೆನ್ ಪ್ರಶ್ನಿಸಿದ್ದಾರೆ.
ವಿಶ್ವಸಂಸ್ಥೆಯ ಇಸ್ರೇಲ್‌ನ ರಾಯಭಾರಿ ಗಿಲಾಡ್ ಎರ್ಡಾನ್ ಅವರು ಗುಟೆರೆಸ್ ಅವರಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ.

ಹಮಾಸ್ ಉಗ್ರಗಾಮಿಗಳು ಅಕ್ಟೋಬರ್ 7 ರಂದು ಇಸ್ರೇಲ್‌ಗೆ ನುಗ್ಗಿ ಕನಿಷ್ಠ 1,400 ಜನರನ್ನು ಕೊಂದರು. 220 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ತೆಗೆದುಕೊಂಡರು ಹೋದರು ಎಂದು ಇಸ್ರೇಲಿ ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೆ ಪ್ರತೀಕಾರದ ದಾಳಿ ನಡೆಸುತ್ತಿರುವ ಇಸ್ರೇಲ್ 5,700 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರನ್ನು ಹತ್ಯೆ ಮಾಡಿದೆ. ಹೆಚ್ಚಾಗಿ ನಾಗರಿಕರು ಗಾಜಾ ಪಟ್ಟಿಯಾದ್ಯಂತ ಕೊಲ್ಲಲ್ಪಟ್ಟಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ತಿಳಿಸಿದೆ.
ಇಸ್ರೇಲ್‌ಗೆ ಅಮೆರಿಕ ಸೇರಿದಂತೆ ಹಲವು ದೇಶಗಳು ಬೆಂಬಲ ವ್ಯಕ್ತಪಡಿಸಿವೆ. ರಷ್ಯಾ, ಚೀನಾ, ಇರಾನ್ ಸೇರಿದಂತೆ ಕೆಲ ಮುಸ್ಲಿಂ ದೇಶಗಳು ಪ್ಯಾಲೇಸ್ತೀನ್‌ಗೆ ಬೆಂಬಲ ನೀಡಿವೆ.
ಗಾಜಾ ಪಟ್ಟಿಯಲ್ಲಿ ದಾಳಿಯನ್ನು ಮುಂದುವರಿಸಿದರೆ ಪರಿಣಾಮ ನೆಟ್ಟಗಿರಲ್ಲವೆಂದು ಇರಾನ್ ಎಚ್ಚರಿಕೆ ನೀಡಿದೆ. ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್ ಉಗ್ರರನ್ನು ಎದುರಿಸುತ್ತಿರುವ ಇಸ್ರೇಲ್ ಉತ್ತರದಲ್ಲಿ ಹಿಸ್ಬುಲ್ಲಾ ಉಗ್ರರನ್ನು ಎದುರಿಸುವ ಪರಿಸ್ಥಿತಿ ಬಂದೊದಗಿದೆ.
ಹಿಸ್ಬುಲ್ಲಾ ಉಗ್ರರಿಗೆ ಇರಾನ್ ಬೆಂಬಲವಾಗಿ ನಿಂತಿದೆ. ಇಸ್ರೇಲ್ ನಡೆಸುತ್ತಿರುವ ಪ್ರತಿಕಾರದ ದಾಳಿಯು ಮಧ್ಯಪ್ರಾಚ್ಯದಲ್ಲಿ ಘೋರ ರಕ್ತಪಾತಕ್ಕೆ ಕಾರಣವಾಗುತ್ತಿರುವುದಂತೂ ಸತ್ಯವಾಗಿದೆ.












Click it and Unblock the Notifications