ಪಾಕಿಸ್ತಾನ ಧಗಧಗ, ಪಾಕ್ ಸೇನೆಗೆ ಭಗಭಗ!
ಕರಾಚಿ/ರಾವಲ್ಪಿಂಡಿ: ಇಮ್ರಾನ್ ಖಾನ್ ಬಂಧನದ ನಂತರ ಪಾಕಿಸ್ತಾನದಲ್ಲಿ ಹೊತ್ತಿರುವ ಬೆಂಕಿ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಕಂಡ ಕಂಡ ಕಡೆ ಬೆಂಕಿ ಇಡುತ್ತಿರುವ ಇಮ್ರಾನ್ ಬೆಂಬಲಿಗರು ಪಾಕಿಸ್ತಾನವನ್ನ ಅಕ್ಷರಶಃ ನರಕ ಮಾಡಿದ್ದಾರೆ. ಇದೇ ಹೊತ್ತಲ್ಲಿ ಇಮ್ರಾನ್ ಖಾನ್ ಫ್ಯಾನ್ಸ್‌ಗೆ ಬಿಗ್ ಶಾಕ್ ಕೊಟ್ಟುಬಿಟ್ಟಿದೆ ಹೈಕೋರ್ಟ್. ಇಮ್ರಾನ್ ಜೈಲಿಂದ ಹೊರಗೆ ಬರೋದೆ ಡೌಟ್ ಆಗಿದೆ.
ನಿನ್ನೆ ವಿಚಾರಣೆ ಅಂತಾ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಹಾಜರಾಗಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನವಾಗಿತ್ತು. ಪಾಕಿಸ್ತಾನಿ ಅರೆಸೈನಿಕ ಪಡೆ ಇಮ್ರಾನ್ ಖಾನ್ ಅವರನ್ನ ಅರೆಸ್ಟ್ ಮಾಡಿತ್ತು. ಇದು ಇಡೀ ಪಾಕಿಸ್ತಾನದ ನೆಮ್ಮದಿ ಕೆಡಿಸಿ ಹಾಕಿದೆ. ಅದರಲ್ಲೂ ಇಮ್ರಾನ್ ಅವರನ್ನ ಬಂಧಿಸಿದ್ದ ರೀತಿ ಎಲ್ಲರನ್ನೂ ರೊಚ್ಚಿಗೆಬ್ಬಿಸಿದೆ. ಮತ್ತೊಂದ್ಕಡೆ ಇಮ್ರಾನ್ ಬಂಧನದ ಬಗ್ಗೆ ಇಸ್ಲಾಮಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಈ ಮೂಲಕ ಹೊತ್ತಿ ಉರಿಯುತ್ತಿರುವ ಪಾಕ್‌ಗೆ ಪೆಟ್ರೋಲ್ ಸುರಿದಂತಾಗಿದೆ.

ಇಮ್ರಾನ್ ರಿಲೀಸ್ ಆಗಲ್ಲ ಗ್ಯಾರಂಟಿ!
ಹೌದು, ಇಮ್ರಾನ್ ಖಾನ್ ಬಂಧಿಸಿದ್ದು ಸರಿಯಾಗಿದೆ ಎಂದು ಇಸ್ಲಾಮಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ಇಮ್ರಾನ್ ಬಂಧಿಸಿತ್ತು. ಅರೆಸೈನಿಕ ಪಡೆ ಯೋಧರು ಎತ್ತಾಕ್ಕೊಂಡು ಹೋಗಿದ್ದರು. ಈ ಬಗ್ಗೆ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಅರ್ಜಿಯನ್ನ ಸಲ್ಲಿಸಿತ್ತು. ಬಂಧನವು ಕಾನೂನಿಗೆ ವಿರುದ್ಧವಾಗಿದೆ. ಹೀಗಾಗಿ ಇಮ್ರಾನ್ ಅವರನ್ನು ಬಿಡುಗಡೆಗೊಳಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
15 ನಿಮಿಷದಲ್ಲೇ ಸರ್ಕಾರಕ್ಕೆ ನೋಟಿಸ್!
ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷವು ಇಮ್ರಾನ್ ಖಾನ್ ಬಿಡುಗಡೆಗೆ ಆಗ್ರಹಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಇಸ್ಲಾಮಾಬಾದ್ ಹೈಕೋರ್ಟ್, ತಕ್ಷಣ ಕ್ರಮ ಕೈಗೊಂಡಿತ್ತು. ಮುಖ್ಯ ನ್ಯಾಯಮೂರ್ತಿ ಆಮೇರ್ ಫಾರೂಕ್ ಅರ್ಜಿ ವಿಚಾರಣೆ ಆರಂಭಿಸಿದ್ದರು. ಆಗ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಿ, ಕೇವಲ 15 ನಿಮಿಷದಲ್ಲಿ ಹೈಕೋರ್ಟ್ ಎದುರು ಹಾಜರಾಗಲು ಸೂಚಿಸಿದ್ದರು. ತಕ್ಷಣ ಬಂದ ಅಧಿಕಾರಿಗಳನ್ನ ವಿಚಾರಣೆ ನಡೆಸಿ, ಎರಡೂ ಬಣದ ವಾದ-ಪ್ರತಿವಾದ ಆಲಿಸಿ ತೀರ್ಪು ನೀಡಲಾಗಿದೆ.

ಪ್ರಜೆಗಳ ಮೇಲೆ ಗುಂಡಿನ ದಾಳಿ
ಇಮ್ರಾನ್ ಖಾನ್ ಕ್ರಿಕೆಟ್ ಆಡುವಾಗ ಎಷ್ಟು ಫೇಮಸ್ ಆಗಿದ್ರೋ, ಈಗಲೂ ಅಷ್ಟೇ ಬೆಂಬಲಿಗರು ಮತ್ತು ಅಭಿಮಾನಿ ಬಳಗ ಹೊಂದಿದ್ದಾರೆ. ಹೀಗಾಗಿ ಇಮ್ರಾನ್ ಅರೆಸ್ಟ್ ಆಗುತ್ತಿದ್ದಂತೆ ಪಾಕಿಸ್ತಾನದಲ್ಲಿ ಕಾಡ್ಗಿಚ್ಚು ಧಗ ಧಗಿಸುತ್ತಿದೆ. ಆದರೆ ಇದನ್ನ ಕಂಟ್ರೋಲ್ ಮಾಡಲು ಪಾಕ್ ಸೇನೆ ಕೈಯಲ್ಲಿ ಆಗುತ್ತಿಲ್ಲ. ಹೀಗಾಗಿ ಅಮಾಯಕ ಜನರ ಮೇಲೂ ಗುಂಡು ಹಾರಿಸುತ್ತಾ, ಪ್ರತಿಭಟನೆ ಕಂಟ್ರೋಲ್ ಮಾಡಲು ಉಗ್ರ ದಾರಿ ಕಂಡುಕೊಂಡಿದೆ. ಪಾಕ್ ಸೇನೆ ಹಾರಿಸಿದ ಗುಂಡಿಗೆ ಹಲವರು ಜೀವ ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಇಮ್ರಾನ್‌ಗೆ ಜೈಲೂಟ ಗ್ಯಾರಂಟಿ
ಜೈಲು ಸೇರಿರುವ ಇಮ್ರಾನ್ ಖಾನ್ ಜೀವಂತವಾಗಿ ಹೊರಗೆ ಬರ್ತಾರಾ? ಇಮ್ರಾನ್ ಖಾನ್ ಕಥೆ ಮುಂದೇನು? ಹೀಗೆ ಪಾಕಿಸ್ತಾನ ಮಾಜಿ ಪಿಎಂ ಇಮ್ರಾನ್ ಖಾನ್ ಅವರ ಅಭಿಮಾನಿಗಳು ಬೆಂಬಲಿಗರು ಭಯದಲ್ಲೇ ಪ್ರಶ್ನೆ ಕೇಳುತ್ತಿದ್ದಾರೆ. ಆದರೆ ಉತ್ತರ ಹೇಳುವ ಮುಖಗಳು ಮಾತ್ರ ಕಾಣುತ್ತಲೇ ಇಲ್ಲ. ಈ ನಡುವೆ ವಿಚಾರಣೆಗೆ ಬಂದ ಇಮ್ರಾನ್ ಖಾನ್ ಅವರನ್ನ ಪಾಕಿಸ್ತಾನದ ಅರೆಸೇನಾ ಪಡೆ ಬಂಧಿಸಿದ್ದು ಯಾಕೆ? ಇದು ಹೇಗೆ ಸಾಧ್ಯ? ಎಂಬ ಪ್ರಶ್ನೆ ತೀವ್ರವಾಗಿದೆ. ಆದರೆ ಇಮ್ರಾನ್ ಅರೆಸ್ಟ್ ಆಗಿದ್ದು ಸರಿ ಎಂದು ಇಸ್ಲಾಮಾಬಾದ್ ಹೈಕೋರ್ಟ್ ಡಬಲ್ ಶಾಕ್ ಕೊಟ್ಟಿದೆ.

ಒಟ್ನಲ್ಲಿ ಪಾಕಿಸ್ತಾನ ಧಗಧಗ ಹೊತ್ತಿ ಉರಿಯುತ್ತಿದ್ದರೆ, ಈ ಹಿಂಸಾಚಾರ ನಿಭಾಯಿಸಲು ಪಾಕ್ ಸೇನೆಗೆ ಭಗಭಗ ಅಂತಿದೆ. ಒಂದು ಕಡೆ ಸಮಾಧಾನ ಮಾಡಿದ್ರೆ ಮತ್ತೊಂದ್ಕಡೆ ಬೆಂಕಿ ಹೊತ್ತಿಕೊಳ್ಳುತ್ತಿದೆ. ಹೀಗಾಗಿ ಎಲ್ಲಾ ಕಡೆ ಸೆಕ್ಯೂರಿಟಿ ಟೈಟ್ ಮಾಡಲಾಗಿದೆ. ಪಾಕಿಸ್ತಾನದ ಪ್ರಮುಖ ನಗರಗಳಾದ ಕರಾಚಿ & ರಾವಲ್ಪಿಂಡಿ ಸೇರಿದಂತೆ ಪಾಕ್ ರಾಜಧಾನಿಯಲ್ಲಿ ಎಲ್ಲೆಲ್ಲೂ ಪಾಕಿಸ್ತಾನಿ ಸೈನಿಕರನ್ನ ನಿಯೋಜಿಸಲಾಗಿದೆ. ಆದರೂ ಪಾಕ್ ನರಕವಾಗಿ ಬದಲಾಗಿದ್ದು, ಪರಿಸ್ಥಿತಿ ಕಂಟ್ರೋಲ್‌ಗೆ ಸಿಗುತ್ತಿಲ್ಲ.












Click it and Unblock the Notifications