Telegram Messenger: 'ಟೆಲಿಗ್ರಾಂ'ಗೆ ದಿಢೀರ್ ನಿಷೇಧ, ಕಾರಣ ತಿಳಿಯಿರಿ!
ಟೆಲಿಗ್ರಾಂ ಮೆಸೆಂಜರ್ ಇದೀಗ ಮನುಷ್ಯನ ದಿನದ ಅಗತ್ಯತೆಗಳಲ್ಲಿ ಒಂದೆನಿಸಿದೆ. ಅದ್ರಲ್ಲೂ ಟೆಲಿಗ್ರಾಂ ಮೆಸೆಂಜರ್ ಬಗ್ಗೆ ಪರ, ವಿರೋಧದ ಮಾತು ಕೂಡ ಪ್ರತಿಧ್ವನಿಸುತ್ತಿದೆ. ಇನ್ನೂ ಪಾಶ್ಚಿಮಾತ್ಯ ರಾಷ್ಟ್ರಗಳು ಟೆಲಿಗ್ರಾಂ ವಿರುದ್ಧ ಕೆಂಡ ಕಾರುತ್ತಿವೆ. ಆದರೆ ಇದೇ ಹೊತ್ತಲ್ಲೇ ಅದೊಂದು ದೇಶದಲ್ಲಿ ದಿಢೀರ್ 'ಟೆಲಿಗ್ರಾಂ' ಬ್ಯಾನ್ ಆಗಿದೆ. ಅಷ್ಟಕ್ಕೂ ಈಗ ಟೆಲಿಗ್ರಾಂಗೆ ನಿಷೇಧ ಹೇರಿದ ಆ ದೇಶ ಯಾವುದು? ನಿಷೇಧ ಹೇರಿದ್ದು ಯಾಕೆ? ಮುಂದೆ ಓದಿ.
ಟೆಲಿಗ್ರಾಂ ಕುರಿತು ಸಾಕಷ್ಟು ಊಹಾಪೋಹ ಇದೆ, ಅದ್ರಲ್ಲೂ ಜಗತ್ತಿನ ನಾನಾ ದೇಶಗಳಲ್ಲಿ ಟೆಲಿಗ್ರಾಂ ಮೆಸೆಂಜರ್ ಬಳಕೆ ಬಗ್ಗೆ ಹಲವು ರೂಲ್ಸ್ ಇದೆ. ಈಗ ಯುದ್ಧ ಪೀಡಿತ ಇರಾಕ್ ದೇಶದಲ್ಲೂ ಟೆಲಿಗ್ರಾಂ ಬ್ಯಾನ್ ಆಗಿದೆ. ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಸಾಮಾಜಿಕ ಜಾಲತಾಣ ಟೆಲಿಗ್ರಾಂ ನಿಷೇಧಿಸಿದ್ದಾಗಿ ಇರಾಕ್ ಸರ್ಕಾರ ಹೇಳಿಕೆ ನೀಡಿದೆ. ಉನ್ನತ ಅಧಿಕಾರಿ ವರ್ಗದ ಜೊತೆ ಸಭೆ ನಂತರ, ರಾಷ್ಟ್ರೀಯ ಭದ್ರತೆಯ ದೃಷ್ಠಿಯಿಂದ ಈ ಕ್ರಮ ಕೈಗೊಂಡಿದೆ ಸರ್ಕಾರ ಎಂದು ಇರಾಕ್ ಸರ್ಕಾರ ಸಮಜಾಯಿಷಿ ನೀಡಿದೆ. ಇರಾಕ್ ರಾಜಧಾನಿ ಜನರು ಟೆಲಿಗ್ರಾಂ ಸಿಗದೆ ಪರದಾಡುತ್ತಿದ್ದಾರೆ.

ಟೆಲಿಗ್ರಾಂ ವಿರುದ್ಧ ಗಂಭೀರ ಆರೋಪ!
ಆಂತರಿಕ ಗಲಭೆ ಹಾಗೂ ಕಿತ್ತಾಟದ ಪರಿಣಾಮ ಕಳೆದ ಎರಡು ದಶಕದಿಂದ ಇರಾಕ್ ದೇಶ ತತ್ತರಿಸಿ ಹೋಗಿದೆ. ಇಂತಹ ದೇಶದಲ್ಲಿ ನಾಗರಿಕರ ರಕ್ಷಣೆಗೆ ಸೂಕ್ತ ಕಾನೂನು ಇಲ್ಲವೆಂಬ ಆರೋಪ ಕೂಡ ಇದೆ. ಎಲ್ಲಿ ಯಾವ ಕ್ಷಣದಲ್ಲಿ ಬಾಂಬ್ ಬೀಳುತ್ತೋ ಗೊತ್ತಿಲ್ಲ. ಆದರೂ ಅಲ್ಲಿನ ದೇಶ ಈಗ ನೀಡಿರುವ ಸಮಜಾಯಿಷಿ ಬಗ್ಗೆ ಚರ್ಚೆ ಶುರುವಾಗಿದೆ. ಟೆಲಿಗ್ರಾಂನಿಂದ ನಾಗರಿಕರ ವೈಯಕ್ತಿಕ ದತ್ತಾಂಶ ರಕ್ಷಿಸುವ ಸಲುವಾಗಿ ಹೀಗೆ ನಿಷೇಧ ಕ್ರಮ ಕೈಗೊಂಡಿದ್ದೀವಿ ಎಂದಿದೆ ಇರಾಕ್ ಸರ್ಕಾರ. ಹಾಗಾದರೆ ಇರಾಕ್ ಯುವಕರು ಸರ್ಕಾರದ ಕ್ರಮಕ್ಕೆ ಹೇಗೆ ಪರ್ಯಾಯ ಮಾರ್ಗ ಹುಡುಕಿದ್ದಾರೆ ಗೊತ್ತಾ? ಮುಂದೆ ಓದಿ.
ಇರಾನ್ ಪರವಾಗಿ ಇರಾಕ್‌ನಲ್ಲಿ ಕಿಚ್ಚು?
ಜಗತ್ತಿನ ಇತರ ದೇಶಗಳಂತೆ ಇರಾಕ್‌ನಲ್ಲಿ ಕೂಡ ಟೆಲಿಗ್ರಾಂ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಅದರಲ್ಲೂ ಯುವಕರು ಟೆಲಿಗ್ರಾಂ ಮೆಸೆಂಜರ್ ಮೇಲೆ ಸಾಕಷ್ಟು ಅವಲಂಬಿತರಾಗಿ ಜೀವನ ನಡೆಸುತ್ತಿದ್ದರು. ಆದರೆ ಟೆಲಿಗ್ರಾಂ ಮೆಸೆಂಜರ್‌ನಲ್ಲಿ ಗ್ರೂಪ್‌ಗಳನ್ನ ರಚಿಸಿ ಇರಾನ್ ಪರ ಸುದ್ದಿ ಪ್ರಸಾರ ಮಾಡಲಾಗುತ್ತಿತ್ತು ಎಂದು ಇರಾಕ್ ಆರೋಪಿಸಿದೆ. ಅಲ್ಲದೆ ಸರ್ಕಾರಿ ಸಂಸ್ಥೆ ಹಾಗೂ ಬಳಕೆದಾರರ ಮಾಹಿತಿ ಸೋರಿಕೆ ಬಗ್ಗೆ ಮಾಹಿತಿ ಪಡೆಯಲು ಟೆಲಿಗ್ರಾಂ ಸಂಸ್ಥೆ ಜತೆ ಚರ್ಚೆಗೆ ಯತ್ನಿಸಿದರೂ ವರ್ಕೌಟ್ ಆಗಲಿಲ್ಲ. ಇದು ಸಮಾಜದ ಶಾಂತಿ ಹಾಗೂ ರಾಷ್ಟ್ರೀಯ ಭದ್ರತೆಯ ದೃಷ್ಠಿಯಿಂದ ಒಳ್ಳೆಯದಲ್ಲ, ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇರಾಕ್ ಹೇಳಿದೆ.
ಅಡ್ಡದಾರಿ ಹುಡುಕಿದ ಯುವಕರು!
ಯಾವುದೇ ವೆಬ್‌ಸೈಟ್, ಯಾವುದೇ ದೇಶದಲ್ಲಿ ಬ್ಯಾನ್ ಆದರೂ ಅದನ್ನು ಹುಡುಕೋದಕ್ಕೆ ವಾಮಮಾರ್ಗ ಬಳಸಲಾಗುತ್ತೆ. ಇದಕ್ಕೆ ಡಾರ್ಕ್ ವೆಬ್ ಉದಾಹರಣೆ ಎನ್ನಬಹುದು. ಹೀಗೆ ಇರಾಕ್ ಸರ್ಕಾರ ಟೆಲಿಗ್ರಾಂ ಬ್ಯಾನ್ ಮಾಡಿದ್ದರೂ ಟೆಲಿಗ್ರಾಂ ಬಿಟ್ಟು ಇರಲಾರದ ಯುವ ಸಮೂಹ, ಬೇರೆ ಬೇರೆ ಮಾರ್ಗದ ಮೂಲಕ ಟೆಲಿಗ್ರಾಂ ಮೆಸೆಂಜರ್ ಬಳಸುತ್ತಿದ್ದಾರೆ. ಹೀಗೆ ಇರಾಕ್ ರಾಜಧಾನಿಯಲ್ಲಿ ಒಂದು ಮೆಸೆಂಜರ್ ಅಪ್ಲಿಕೇಷನ್ ಸಾಕಷ್ಟು ಗೊಂದಲ ಸೃಷ್ಟಿ ಮಾಡಿದೆ. ಆದರೆ ಈಗ ಅಡ್ಡದಾರಿ ಹಿಡಿದ ತನ್ನ ದೇಶದ ಯುವಕರಿಗೆ ಇರಾಕ್ ಸರ್ಕಾರ ಯಾವ ರೀತಿ ಪಾಠ ಹೇಳುತ್ತೆ ಅಂತಾ ಕಾದು ನೋಡಬೇಕು.

ಒಟ್ನಲ್ಲಿ ಟೆಲಿಗ್ರಾಂ ಮೆಸೆಂಜರ್ ಮತ್ತೊಮ್ಮೆ ಚರ್ಚೆಯ ವಿಷಯವಾಗಿದೆ. ಈ ಹಿಂದೆಯೂ ಇದೇ ರೀತಿ ಆರೋಪಗಳು ಕೇಳಿಬಂದಿದ್ದವು, ಆದರೂ ಟೆಲಿಗ್ರಾಂ ಮೆಸೆಂಜರ್ ಮೇಲೆ ಈ ರೀತಿ ಆರೋಪಗಳು ಪರಿಣಾಮ ಬೀರಿಲ್ಲ. ಈಗಲೂ ಇರಾಕ್‌ನಲ್ಲಿ ಇಂತಹ ಗಂಭೀರವಾದ ಆರೋಪ ಕೇಳಿಬಂದಿದ್ದು, ಮುಂದೆ ಏನಾಗುತ್ತೋ ಕಾದು ನೋಡಬೇಕು.












Click it and Unblock the Notifications