ಇಸ್ರೇಲ್ ವಿರುದ್ಧ ಭೀಕರ ಯುದ್ಧ ನಡೆಸಲು ತೊಡೆತಟ್ಟಿದ ಇರಾನ್?
ಇಸ್ರೇಲ್ ವಿರುದ್ಧ ಇರಾನ್ ಅಕ್ಷರಶಃ ರೊಚ್ಚಿಗೆದ್ದು ಗುಡುಗುತ್ತಿದೆ, ಪರಿಸ್ಥಿತಿ ಕೈಮೀರಿ ಹೋಗಿ ಯುದ್ಧ ನಡೆಯುತ್ತೆ ಅಂತಾ ಆತಂಕ ಮೂಡಿರುವ ಸಮಯದಲ್ಲೇ ಕಿರಿಕ್ ಶುರುವಾಗಿದೆ. ಈ ಸಮಯದಲ್ಲೇ, ಹಮಾಸ್ ಮುಖ್ಯಸ್ಥನ ಜೀವ ತೆಗೆದಿರುವ ಇಸ್ರೇಲ್ ವಿರುದ್ಧ ದಾಳಿ ಮಾಡಲು ಇರಾನ್ ಸರ್ವೋಚ್ಛ ನಾಯಕ ಮಹತ್ವದ ಆದೇಶ ನೀಡಿದ್ದಾರೆ. ಹಾಗಾದ್ರೆ ಈ ಯುದ್ಧದಿಂದ ಜಗತ್ತು ಸರ್ವನಾಶ ಆಗುತ್ತಾ? ಬನ್ನಿ ತಿಳಿಯೋಣ.
ಇರಾನ್ & ಇಸ್ರೇಲ್ ನಡುವೆ ಜಗಳ ಇವತ್ತು, ನಿನ್ನೆಯದಲ್ಲ. ಹಲವು ವರ್ಷಗಳಿಂದ ಕೂಡ ಇದೇ ರೀತಿ ಎರಡೂ ದೇಶಗಳು ಕಿತ್ತಾಡುತ್ತಿವೆ. ಆದರೆ ಕಳೆದ 10-15 ವರ್ಷದಿಂದ ಈ ಜಗಳ ವಿಕೋಪಕ್ಕೆ ಹೋಗಿ ಕೈಮೀರುತ್ತಿದೆ. ಹೀಗಿದ್ದಾಗಲೇ ಕೆಲವು ತಿಂಗಳ ಹಿಂದೆ ಇಸ್ರೇಲ್ ವಿರುದ್ಧ ರೊಚ್ಚಿಗೆದ್ದ ಇರಾನ್ ನೇರವಾಗಿ ದಾಳಿ ಮಾಡಿತ್ತು. ಈ ಘಟನೆ ನಡೆದು ಕೆಲವು ದಿನಗಳಲ್ಲೇ ಮತ್ತೊಮ್ಮೆ ಇಬ್ಬರ ನಡುವೆ ನೇರ ಯುದ್ಧ ಶುರುವಾಗಿದೆ. ಹಮಾಸ್ ಮುಖ್ಯಸ್ಥನ ಹತ್ಯೆಯ ನಂತರ ಇರಾನ್ ಇದೀಗ ರೊಚ್ಚಿಗೆದ್ದು ಇಸ್ರೇಲ್ ವಿರುದ್ಧ ದಾಳಿಗೆ ಮುಂದಾಗಿದೆ.

ಹಮಾಸ್ ಮುಖ್ಯಸ್ಥನ ಹತ್ಯೆಗೆ ಪ್ರತಿಕಾರ?
ಹೌದು ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆ ಕೊಲೆಗೆ ಪ್ರತೀಕಾರವಾಗಿ ಇಸ್ರೇಲ್ ವಿರುದ್ಧವೇ ದಾಳಿ ಮಾಡುವಂತೆ ಮಹತ್ವದ ಆದೇಶವನ್ನ ನೀಡಿದ್ದಾರಂತೆ ಇರಾನ್ ಪರಮೋಚ್ಛ ನಾಯಕ. ಅಂದಹಾಗೆ ಹಮಾಸ್ ಮುಖ್ಯಸ್ಥನ ಕೊಲೆ ಇದೀಗ ಭಾರಿ ಗೊಂದಲ ಸೃಷ್ಟಿಸಿದ್ದು ಎಲ್ಲೆಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಇರಾನ್‌ನ ನೂತನ ಅಧ್ಯಕ್ಷರ ಪ್ರಮಾಣ ವಚನಕ್ಕೆ ತೆರಳಿ, ಆ ಸಮಾರಂಭ ಮುಗಿಸಿಕೊಂಡು ವಾಪಸ್ ಬಂದ ಹಮಾಸ್ ಮುಖ್ಯಸ್ಥ ಹನಿಯೆ ಕೊಲೆ ಮಾಡಿದ್ರು.
ಹಮಾಸ್ ಮುಖ್ಯಸ್ಥನ ಹತ್ಯೆ ಹಿಂದೆ ಇಸ್ರೇಲ್ ಕೈವಾಡ ಇದೆ ಎಂದು ಆರೋಪ ಮಾಡಲಾಗಿದೆ. ಇರಾನ್ ರಾಜಧಾನಿ ಟೆಹರಾನ್‌ನ ಮನೆಯಲ್ಲಿ ಹೀಗೆ ಕೊಲೆ ಮಾಡಲಾಗಿದೆ. ಹಾಗೇ ದಾಳಿಯ ಸಮಯದಲ್ಲಿ ಇತರ ಅಧಿಕಾರಿಗಳನ್ನು ಕೂಡ ಕೊಲ್ಲಲಾಗಿದೆ. ಈವರೆಗೂ ದಾಳಿ ಹೇಗೆ ಆಯ್ತು? ಎಂಬ ಬಗ್ಗೆ ಸಂಪೂರ್ಣ ಮಾಹಿತಿ ನೀಡಿಲ್ಲ. ಹೀಗಿದ್ದಾಗಲೇ ಇಸ್ರೇಲ್ ವಿರುದ್ಧ ಇರಾನ್ ಈಗ ಯುದ್ಧಕ್ಕೆ ಸಜ್ಜಾಗಿದೆ ಎಂಬ ಸಂಚಲನ ಸೃಷ್ಟಿಸುವ ಮಾಹಿತಿ ಹೊರಬಿದ್ದಿದೆ.
ದಾಳಿ ಎದುರಿಸಲು ಇಸ್ರೇಲ್ ಸಜ್ಜು?
ಇರಾನ್ ರಾಜಧಾನಿಗೆ ನುಗ್ಗಿ ಹೀಗೆ ಕೊಲೆ ಮಾಡಿರುವ ಘಟನೆ ಸಂಬಂಧ, ಇರಾನ್ ರಾಷ್ಟ್ರೀಯ ಭದ್ರತಾ ಮಂಡಳಿ ತುರ್ತು ಸಭೆ ನಡೆಸಿತು. ಇರಾನ್ ಸರ್ವೋಚ್ಛ ನಾಯಕ ಖಮೇನಿ, ಸಭೆಗೆ ಬಂದಿದ್ದ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಈ ವೇಳೆ ದಾಳಿಗೆ ಕೂಡ ಆದೇಶ ನೀಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ದಾಳಿ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಇರಾನ್ ಪ್ಯಾರಾ ಮಿಲಿಟರಿ ರೆವಲ್ಯೂಷನರಿ ಗಾರ್ಡ್ ತಿಳಿಸಿದೆ. ಹಾಗೇ ಮತ್ತೊಂದು ಕಡೆ ಇಸ್ರೇಲ್ ಸೇನೆ ಕೂಡ ಸಂಭಾವ್ಯ ದಾಳಿ ಎದುರಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ ಎನ್ನಲಾಗಿದೆ.












Click it and Unblock the Notifications