ರೋಬೋ 'ಚಪಾತಿ' ಯುಎಸ್ಎನಲ್ಲಿ ಸೂಪರ್ 'ಹಿಟ್'
ಸಿಂಗಪುರ, ಆ.8: ಸಿಂಗಪುರದಲ್ಲಿ ನೆಲೆಸಿರುವ ಭಾರತೀಯ ಮೂಲದ ದಂಪತಿಗಳು ವಿನ್ಯಾಸಗೊಳಿಸಿದ ಚಪಾತಿ ಮೇಕರ್ ಈಗ ಯುಎಸ್ಎ ಮಾರುಕಟ್ಟೆ ಯಲ್ಲಿ ಸೂಪರ್ 'ಹಿಟ್' ಆಗಿದೆ. ಅಧಿಕೃತವಾಗಿ ಮಾರುಕಟ್ಟೆಗೆ ಎಂಟ್ರಿ ಕೊಡುವುದಕ್ಕೂ ಮುನ್ನವೇ ಚಪಾತಿ ತಯಾರಿಸುವ ರೋಬೊಟ್‌ಗೆ ಅಮೆರಿಕದಲ್ಲಿ ಭಾರಿ ಬುಕ್ಕಿಂಗ್ ಶುರುವಾಗಿದೆಯಂತೆ.
ಇದೇ ಮೊದಲ ರೀತಿಯದ್ದೆನ್ನಲಾಗಿರುವ ಚಪಾತಿ ತಯಾರಿಸುವ ರೋಬೊಟ್‌ಗೆ ಅಮೆರಿಕದಿಂದ ಭಾರೀ ಪ್ರಮಾಣದ ಮಾರಾಟ ಪೂರ್ವ ಬೇಡಿಕೆ ಬಂದಿರುವುದಾಗಿ 'ದ ಸ್ಟ್ರೈಟ್ಸ್ ಟೈಮ್ಸ್' ವರದಿಯೊಂದು ತಿಳಿಸಿದೆ.
'ರೋಟಿಮ್ಯಾಟಿಕ್' ಎಂಬ ಚಪಾತಿ ತಯಾರಕ ರೋಬೊಟನ್ನು ಭಾರತೀಯ ಮೂಲದ ರಿಶಿ ಇಸ್ರಾನಿ ಹಾಗೂ ಅವರ ಪತ್ನಿ ಪ್ರಣೊತಿ ಅವರು ಸುಮಾರು ಆರು ವರ್ಷಗಳ ಕಾಲ ಸಂಶೋಧನೆ ಮಾಡಿ ಅಭಿವೃದ್ಧಿಪಡಿಸಿರುವ ಈ ರೋಬೊಟ್ ಒಂದು ನಿಮಿಷದ ಅವಧಿಯಲ್ಲಿ ಒಂದು ಬೇಯಿಸಿದ ಚಪಾತಿಯನ್ನು ತಯಾರಿಸುವ ಸಾಮರ್ಥ್ಯ ಪಡೆದಿದೆ.

ಮೊತ್ತಮೊದಲ ಅಡುಗೆಮನೆ ಸಾಧನ
ರೋಟಿಮ್ಯಾಟಿಕ್ ರೋಬೊಟ್ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾದ ಮೊತ್ತಮೊದಲ ಅಡುಗೆಮನೆ ಸಾಧನವಾಗಿದ್ದು, ಅಮೆರಿಕದ ಮಾರುಕಟ್ಟೆಗೆ ಬಿಡುಗಡೆಗೊಳ್ಳಲು ಅಗತ್ಯವಾಗಿರುವ ಆ ರಾಷ್ಟ್ರದ ಪ್ರಮಾಣೀಕರಣಕ್ಕಾಗಿ ಕಾಯಲಾಗುತ್ತಿದೆ. ರೋಟಿಮ್ಯಾಟಿಕ್ ರೋಬೊಟ್‌ಗಳು ಮುಂದಿನ ವರ್ಷದಿಂದ ಅಮೆರಿಕದ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಯಿದೆ.

ಸಿಂಗಪುರದ ಸಚಿವಾಲಯದಿಂದ ವೀಕ್ಷಣೆ
ಇಸ್ತಾನಿ ದಂಪತಿ ತಮ್ಮ ಸಂಶೋಧನೆ ಪ್ರಾಥಮಿಕ ಹಂತದಲ್ಲಿ 'ಝಿಂಪ್ಲಿಸ್ಟಿಕ್' ಸಾಧನವನ್ನು ಅಭಿವೃದ್ಧಿಪಡಿಸಿದ್ದರು. ಚಪಾತಿಯ ದಪ್ಪ, ಮೃದುತ್ವ ಎಣ್ಣೆಯ ಬಳಕೆ ಹಾಗೂ ಹಿಟ್ಟಿನ ಹದಕ್ಕೆ ತಕ್ಕಂತೆ ಈ ಸಾಧನವನ್ನು ಒಗ್ಗಿಸಿಕೊಳ್ಳಬಹುದಾಗಿದೆ ಎಂದು ತಯಾರಕರು ಹೇಳಿದ್ದಾರೆ.

‘ರೋಟಿಮ್ಯಾಟಿಕ್' ರೋಬೊಟ್
ತಲಾ 599 ಯುಎಸ್ ಡಾಲರ್ ಬೆಲೆಬಾಳುವ 'ರೋಟಿಮ್ಯಾಟಿಕ್' ರೋಬೊಟ್‌ಗಳು ಬಳಕೆಗೆ ಹಾಗೂ ಶುಚಿಗೊಳಿಸಲು ಸುಲಭವಾಗಿವೆ ಮತ್ತು ಸುರಕ್ಷಿತವಾಗಿ ಕಳಚಬಹುದಾದ ಬಿಡಿಭಾಗಗಳನ್ನು ಹೊಂದಿವೆ.

ಇಸ್ರಾನಿಯವರು ಓರ್ವ ಉದ್ಯಮಿ
ಇಸ್ರಾನಿಯವರು ಓರ್ವ ಉದ್ಯಮಿಯಾಗಿದ್ದು, ಮೆಕಫಿ ಖರೀದಿಸಿರುವ ಸಿಂಗಾಪುರ ಮೂಲದ ಮೊಬೈಲ್ ಸೆಕ್ಯೂರಿಟಿ ಕಂಪೆನಿ 'ಟೆನ್‌ಕ್ಯೂಬ್'ನ ಮಾಜಿ ಸ್ಥಾಪಕರೂ ಆಗಿದ್ದಾರೆ. ಪ್ರಣೋತಿಯವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ಉತ್ಪನ್ನ ವಿನ್ಯಾಸ ತಜ್ಞರಾಗಿದ್ದಾರೆ. ಹೆಚ್ಚಿನ ಮಾಹಿತಿಗೆ ರೋಟಿಮ್ಯಾಟಿಕ್ ವೆಬ್ ತಾಣ ನೋಡಿ












Click it and Unblock the Notifications