ಅಮೆರಿಕದಲ್ಲಿ ಅನಿವಾಸಿ ಭಾರತೀಯರ ಜೊತೆ ಪ್ರಧಾನಿ ಮೋದಿ ಚರ್ಚೆ: ಭರ್ಜರಿ ತಯಾರಿ ನಡೆಸಿದ ಭಾರತೀಯರು!
ವಾಷಿಂಗ್ಟನ್: ಪ್ರಧಾನಿ ಮೋದಿ ಅವರ ಬಹುನಿರೀಕ್ಷಿತ ಅಮೆರಿಕ ಪ್ರವಾಸಕ್ಕೆ ಕ್ಷಣಗಣನೆ ಶುರುವಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಪ್ರಥಮ ಮಹಿಳೆ ಜಿಲ್ ಬೈಡನ್ ಅವರ ಆಹ್ವಾನದ ಮೇರೆಗೆ ಪಿಎಂ ನರೇಂದ್ರ ಮೋದಿ ಜೂನ್ 21ರಿಂದ 24ರವರೆಗೂ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅನಿವಾಸಿ ಭಾರತೀಯರ ಜೊತೆಗು ಮಹತ್ವದ ಚರ್ಚೆ ನಡೆಯಲಿದ್ದು, ಭಾರತೀಯರಲ್ಲಿ ಸಂಭ್ರಮ ಮನೆಮಾಡಿದೆ.
ಪ್ರಧಾನಿ ಮೋದಿ ಭೇಟಿಯ ಸಂದರ್ಭದಲ್ಲಿ ಮೊದಲಿಗೆ ಅಮೆರಿಕದ ಅಧ್ಯಕ್ಷರು ಆಯೋಜನೆ ಮಾಡಿರುವ ಔತಣ ಕೂಟ ಕಾರ್ಯಕ್ರಮ ನಡೆಯಲಿದೆ. ಪ್ರಮುಖವಾಗಿ ಬೈಡನ್ ಕುಟುಂಬ ಪ್ರತ್ಯೇಕ ಔತಣ ಕೂಟಕ್ಕೆ ವ್ಯವಸ್ಥೆ ಮಾಡುತ್ತಿದೆ. ಔತಣ ಕೂಟದ ಬಳಿಕ ಹಲವು ಪ್ರಮುಖ ಕಾರ್ಯಕ್ರಮದಲ್ಲಿ ಪಿಎಂ ಮೋದಿ ಭಾಗವಹಿಸಲಿದ್ದಾರೆ. ಆ ಪೈಕಿ ಅನಿವಾಸಿ ಭಾರತೀಯರ ಜೊತೆ ಮಾತುಕತೆ ನಡೆಯಲಿದೆ. ಭಾರತದಿಂದ ಹೋಗಿ, ಅಮೆರಿಕದಲ್ಲಿ ನೆಲೆಸಿ ಭಾರತದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ. ಅನಿವಾಸಿ ಭಾರತೀಯರ ಜೊತೆಗೆ ಪ್ರಧಾನಿ ಮೋದಿ ಮಹತ್ವದ ಚರ್ಚೆ ನಡೆಸಲಿದ್ದಾರೆ. (PM Modi In America).

ಭಾರತೀಯರ ಜೊತೆ ಮೋದಿ ಮಾತುಕತೆ!
ಹೌದು, ಜೂನ್ 22ರಂದು ಅಮೆರಿಕನ್ ಕಾಂಗ್ರೆಸ್ ಜಂಟಿ ಅಧಿವೇಶನ ಉದ್ದೇಶಿಸಿ ಮೋದಿ ಐತಿಹಾಸಿಕ ಭಾಷಣ ಮಾಡಲಿದ್ದಾರೆ. ಒಟ್ಟು 2ನೇ ಬಾರಿಗೆ ಅಮೆರಿಕನ್ ಕಾಂಗ್ರೆಸ್ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುತ್ತಿರುವ ಏಕೈಕ ಭಾರತದ ಪ್ರಧಾನಿ ಮೋದಿ. ಈ ಕಾರಣಕ್ಕೆ ಮೋದಿ ಅವರ ಅಮೆರಿಕ ಪ್ರವಾಸ ಸಾಕಷ್ಟು ವಿಶೇಷತೆ ಹೊಂದಿದೆ. ಕಾಂಗ್ರೆಸ್ ಜಂಟಿ ಅಧಿವೇಶನದ ನಂತರ ಜೂನ್ 23ರಂದು ಪ್ರಧಾನಿ ಮೋದಿ, ವಾಷಿಂಗ್ಟನ್‌ನಲ್ಲಿರುವ ರೊನಾಲ್ಡ್ ರೇಗನ್ ಕಟ್ಟಡದಲ್ಲಿ ಅನಿವಾಸಿ ಭಾರತೀಯರ ಜೊತೆ ಭಾರತದ ಅಭಿವೃದ್ಧಿಯ ಕುರಿತು ಚರ್ಚೆ ನಡೆಸಲಿದ್ದಾರೆ.
ಪ್ರಧಾನಿ ಮೋದಿ ಮಾತುಕತೆ ವಿವರ
ಪ್ರಧಾನಿ ಮೋದಿ ಅವರ ಕಾರ್ಯಕ್ರಮ ಜೂನ್ 23ರಂದು ಸ್ಥಳೀಯ ಕಾಲಮಾನದ ಪ್ರಕಾರ ಸಂಜೆ 7ರಿಂದ 9 ಗಂಟೆ ತನಕ ನಡೆಯಲಿದೆ. ಹಾಗೇ ಅಂತರಾಷ್ಟ್ರೀಯ ಗಾಯಕಿಯಾದ ಮೇರಿ ಮಿಲ್ಬೆನ್ ಅವರಿಂದ ರೊನಾಲ್ಡ್ ರೇಗನ್ ಕಟ್ಟಡದಲ್ಲಿ ವಿಶೇಷ ಗಾಯನ ಪ್ರದರ್ಶನ ಕೂಡ ನಡೆಯಲಿದೆ. ಆದರೆ 1,000 ಜನರಿಗೆ ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗ ಅವಕಾಶ ಕೊಡಲಾಗಿದೆ. ಏಕೆಂದರೆ ಪ್ರಧಾನಿ ಮೋದಿ ಸಾಕಷ್ಟು ಕಾರ್ಯಕ್ರಮದಲ್ಲಿ ಭಾಗಿ ಆಗಬೇಕಾದ ಕಾರಣ, 2 ಗಂಟೆ ಕಾಲ ಮಾತ್ರ ಸಮಾರಂಭ ನಡೆಯಲಿದೆ. ಹೀಗಾಗಿ ಆಯ್ದ 1,000 ಜನರಿಗೆ ಅವಕಾಶ ನೀಡಲಾಗಿದೆ.

ಉಕ್ರೇನ್ ಯುದ್ಧದ ವಿಚಾರ ಪ್ರಸ್ತಾಪ?
ಪ್ರಧಾನಿ ಮೋದಿ ಅವರ ಅಮೆರಿಕದ ಪ್ರವಾಸ ಸಂದರ್ಭದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಪ್ರಮುಖವಾಗಿ ಈ ಭೇಟಿ ವೇಳೆ ರಷ್ಯಾ, ಉಕ್ರೇನ್ ಕದನ ವಿಚಾರ ಕೂಡ ಪ್ರಸ್ತಾಪ ಆಗಲಿದೆ. ಹೀಗಾಗಿ ಭಾರತ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯನ್ನ ಮಾಡಿಕೊಳ್ಳುವ ಸಾಧ್ಯತೆ ಇಲ್ಲ. ಅದರಲ್ಲೂ ಪ್ರಧಾನಿ ಮೋದಿ ಈ ಹಿಂದೆ ಕೂಡ ರಷ್ಯಾ & ಉಕ್ರೇನ್ ಯುದ್ಧದ ಬಗ್ಗೆ ಸ್ಪಷ್ಟನೆ ನಿಡಿದ್ದಾರೆ. ಇದು ಯುದ್ಧ ಮಾಡುವ ಕಾಲಘಟ್ಟ ಅಲ್ಲ ಎಂಬುದನ್ನೂ ಪ್ರಧಾನಿ ಮೋದಿ ಅವರು ಹೇಳಿದ್ದರು. ಹೀಗಾಗಿ ಅಮೆರಿಕ ಅಧ್ಯಕ್ಷರು ಭಾರತಕ್ಕೆ ನ್ಯಾಟೋ ಸೇರುವ ಆಫರ್ ಕೊಟ್ಟರೂ ಅದನ್ನ ಭಾರತ ಒಪ್ಪುವ ಸಾಧ್ಯತೆ ಇಲ್ಲ.
ವೆಪನ್ಸ್ ಟೆಕ್ನಾಲಜಿ ಕೊಡುತ್ತಾ ಅಮೆರಿಕ?
ಭಾರತದ ವಿಚಾರದಲ್ಲಿ ಅಮೆರಿಕ ಯಾವಾಗಲೂ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬರುತ್ತೆ. ಅದ್ರಲ್ಲೂ ಅಮೆರಿಕ & ಇತರ ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತದ ಜೊತೆ ತಂತ್ರಜ್ಞಾನ ಹಂಚಿಕೊಳ್ಳುತ್ತಿಲ್ಲ. ಮಿಲಿಟರಿ ಹಾರ್ಡ್‌ವೇರ್ ಸೇರಿದಂತೆ ನಿರ್ಣಾಯಕ ತಂತ್ರಜ್ಞಾನ ನೀಡುತ್ತಿಲ್ಲ ಎಂಬ ಆರೋಪ ಮೊದಲಿಂದಲೂ ಇತ್ತು. ಹಾಗೇ ಭಾರತ ಕೂಡ ಈ ಕಾರಣಕ್ಕೆ ರಷ್ಯಾ ದೇಶವನ್ನ ಅವಲಂಬಿಸುವ ಸ್ಥಿತಿ ಸೃಷ್ಟಿಯಾಗಿತ್ತು. ಭಾರತ ಸರ್ಕಾರ ಕೂಡ ಸಮಯ ಬಂದಾಗೆಲ್ಲಾ ಅಮೆರಿಕಗೆ ಈ ವಿಚಾರ ತಿಳಿಸುತ್ತಿದೆ. ಹೀಗಾಗಿ ಅಮೆರಿಕದ ಬೈಡನ್ ಆಡಳಿತ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿ, ಭಾರತಕ್ಕೆ ಬೇಕಾದ ಮಿಲಿಟರಿ ತಂತ್ರಜ್ಞಾನ ಕೊಡುವ ನಿರೀಕ್ಷೆ ಇದೆ.












Click it and Unblock the Notifications