ಭಾರತದಿಂದ 40 ಶತಕೋಟಿ ಡಾಲರ್ ನಷ್ಟ ಮಾಡಿಕೊಂಡ ಪಾಕಿಸ್ತಾನ: ವಿಶ್ವಸಂಸ್ಥೆಯಲ್ಲಿ ಪಾಕ್ ನಿರ್ಣಯಕ್ಕೆ ಇಂಡಿಯಾ, ಇಸ್ರೇಲ್ ವಿರೋಧ
ಭಾರತದೊಂದಿಗಿನ ವಾಣಿಜ್ಯ ಸಂಬಂಧವನ್ನು ಕಡಿದುಕೊಂಡ ನಂತರ ಪಾಕಿಸ್ತಾನವು ಭಾರೀ ಸಂಕಷ್ಟಕ್ಕೆ ಸಿಲುಕಿದೆ. ಭಾರತದ ಪುಲ್ವಾಮಾ ಭಯೋತ್ಪಾದಕ ದಾಳಿ ಮತ್ತು ನಂತರದ ಘರ್ಷಣೆಗಳ ನಂತರ 2019 ರಲ್ಲಿ ಭಾರತದೊಂದಿಗಿನ ವಾಣಿಜ್ಯ ಸಂಬಂಧಗಳನ್ನು ಸ್ಥಗಿತಗೊಳಿಸಲಾಗಿದೆ. ಇದಾದ ನಂತರ ಪಾಕಿಸ್ತಾನವು ಅಂದಾಜು 40 ಶತಕೋಟಿ ಡಾಲರ್ ಆರ್ಥಿಕ ನಷ್ಟವನ್ನು ಅನುಭವಿಸಿದೆ ಎಂದು ಪಾಕ್-ಭಾರತ ವ್ಯವಹಾರ ಮಂಡಳಿಯ ಅಧ್ಯಕ್ಷ ನೂರ್ ಮುಹಮ್ಮದ್ ಕಸೂರಿ ಅವರು ಹೇಳಿದ್ದಾರೆ.
ಪಾಕಿಸ್ತಾನವು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದು, ಇದೀಗ ಭಾರತದೊಂದಿಗಿನ ವಾಣಿಜ್ಯ ಸಂಬಂಧವನ್ನು ಕಡಿದುಕೊಂಡ ನಂತರ ಭಾರೀ ಸಂಕಷ್ಟವನ್ನು ಅನುಭವಿಸಿದೆ. ಪಾಕಿಸ್ತಾನವು ಈಗಾಗಲೇ ಸಾಲದ ಶೂಲಕ್ಕೆ ಸಿಲುಕಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ ಮುಂದೇ ಪಾಕಿಸ್ತಾನವು ಯಾವಾಗಲೂ ಅಂಗಲಾಚುವ ಪರಿಸ್ಥಿತಿ ಮುಂದುವರಿದಿದೆ.

ದ್ವಿಪಕ್ಷೀಯ ವ್ಯಾಪಾರವನ್ನು ಮತ್ತೆ ಆರಂಭಿಸಬೇಕು ಎಂದು ಕಸೂರಿ ಅವರು ಹೇಳಿದ್ದಾರೆ. ವ್ಯಾಪಾರ ಸ್ಥಗಿತಗೊಂಡಿರುವುದರಿಂದ ಪಾಕಿಸ್ತಾನದ ಉದ್ಯಮಗಳಿಗೆ ವೆಚ್ಚ ಹೆಚ್ಚಾಗಿದೆ. ಅಗತ್ಯ ಕಚ್ಚಾ ವಸ್ತುಗಳು ಮತ್ತು ಇತರ ಸರಕುಗಳನ್ನು ದೂರದ ದೇಶಗಳಿಂದ ಖರೀದಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಎರಡೂ ದೇಶಗಳ ನಡುವಿನ ವ್ಯಾಪಾರ ಮತ್ತೆ ಆರಂಭವಾದರೆ ಸಾಗಣೆ ವೆಚ್ಚ ಕಡಿಮೆಯಾಗಲಿದೆ. ಸರಕುಗಳ ಪೂರೈಕೆ ಸುಧಾರಿಸುವುದರ ಜೊತೆಗೆ ಹೂಡಿಕೆ, ಪ್ರವಾಸೋದ್ಯಮ ಮತ್ತು ಪ್ರಾದೇಶಿಕ ಸಹಕಾರಕ್ಕೂ ಹೊಸ ಅವಕಾಶಗಳು ಸಿಗಲಿವೆ ಎಂದು ಹೇಳಲಾಗಿದೆ.
ಭಾರತದೊಂದಿಗಿನ ವ್ಯಾಪಾರ ಸ್ಥಗಿತಗೊಂಡಿರುವುದರಿಂದ ಪಾಕಿಸ್ತಾನದ ಔಷಧ ಮತ್ತು ಜವಳಿ ಉದ್ಯಮಗಳಿಗೆ ಹೆಚ್ಚಿನ ಹೊಡೆತ ಬಿದ್ದಿದೆ. ಅಲ್ಲದೆ, ಕೃಷಿ ಮತ್ತು ಕೈಗಾರಿಕಾ ಉತ್ಪನ್ನಗಳನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳಲು ಹೆಚ್ಚಿನ ಹಣ ಖರ್ಚಾಗುತ್ತಿದೆ ಎಂದು ಹೇಳಲಾಗಿದೆ.
ಪಾಕಿಸ್ತಾನದ ಔಷಧ ಉದ್ಯಮವು ಭಾರತದಲ್ಲಿ ಲಭ್ಯವಿರುವ ಕಚ್ಚಾ ವಸ್ತುಗಳ ಮೇಲೆ ಅವಲಂಬಿತವಾಗಿದೆ. ಭಾರತದಿಂದ ಕಚ್ಚಾ ವಸ್ತುಗಳ ಆಮದು ಪುನರಾರಂಭಿ ಸುವುದರಿಂದ ಈ ವಲಯವು ವಾರ್ಷಿಕವಾಗಿ 2 ಬಿಲಿಯನ್‌ನಿಂದ 3 ಬಿಲಿಯನ್ ನಡುವೆ ಉಳಿತಾಯ ಕಾಣಲಿದೆ. ಎರಡು ದೇಶಗಳ ನಡುವಿನ ವಾಣಿಜ್ಯ ವಿನಿಮಯಗಳು ನಿಂತುಹೋದ ನಂತರ ವ್ಯವಹಾರಗಳು ದೂರದ ಮಾರುಕಟ್ಟೆಗಳಲ್ಲಿ ಪರ್ಯಾಯ ಪೂರೈಕೆದಾರರನ್ನು ಹುಡುಕುವಂತಾಗಿದೆ. ಇದು ಸರಕು ಮತ್ತು ಸಾರಿಗೆ ವೆಚ್ಚಗಳನ್ನು ಹೆಚ್ಚಿಸಿತು ಮತ್ತು ವಿತರಣಾ ಸಮಯವನ್ನು ಸಹ ಹೆಚ್ಚಿಸಿದೆ ಎಂದಿದ್ದಾರೆ.
India Pakistan Trade: ಪಾಕಿಸ್ತಾನ ನಿರ್ಧಾರಕ್ಕೆ ಭಾರತ, ಇಸ್ರೇಲ್ ವಿರೋಧ
ಪ್ರಾದೇಶಿಕ ಮತ್ತು ಉಪಪ್ರಾದೇಶಿಕ ಮಟ್ಟದಲ್ಲಿ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮತ್ತು ಬೆಲಾರಸ್ ವಿಶ್ವಸಂಸ್ಥೆಯಲ್ಲಿ ಕರಡು ನಿರ್ಣಯವೊಂದನ್ನು ಮಂಡಿಸಿದ್ದವು. ಈ ನಿರ್ಣಯದ ವಿರುದ್ಧ ಭಾರತ ಮತ್ತು ಇಸ್ರೇಲ್ ಮತ ಚಲಾಯಿಸಿವೆ ಎಂದು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿದೆ.
ಈ ನಿರ್ಣಯದ ಕುರಿತು ತನ್ನ ನಿಲುವು ತಿಳಿಸಿರುವ ಭಾರತ, ದೇಶಗಳ ಭದ್ರತೆಗೆ ಸಂಬಂಧಿಸಿದ ಕಾಳಜಿಗಳು ಕೇವಲ ಅವುಗಳ ಪ್ರಾದೇಶಿಕ ಗಡಿಗಳಿಗೆ ಸೀಮಿತ ಆಗಿರುವುದಿಲ್ಲ ಎಂದು ಹೇಳಿದೆ. ಶಸ್ತ್ರಾಸ್ತ್ರ ನಿಯಂತ್ರಣದಂತಹ ವಿಷಯಗಳನ್ನು ಚರ್ಚಿಸುವಾಗ ಪ್ರತಿಯೊಂದು ದೇಶದ ಭದ್ರತಾ ಅಗತ್ಯಗಳು ಮತ್ತು ಕಾಳಜಿಗಳನ್ನು ಸಮಗ್ರವಾಗಿ ಪರಿಗಣಿಸಬೇಕು ಎಂಬ ನಿಲುವನ್ನು ಭಾರತ ವ್ಯಕ್ತಪಡಿಸಿದೆ. ಇದಕ್ಕೆ ಇರಾನ್ ಸಹಮತ ವ್ಯಕ್ತಪಡಿಸಿದೆ.
ಸಾಮಾನ್ಯ ಮತ್ತು ಸಂಪೂರ್ಣ ನಿಶ್ಯಸ್ತ್ರೀಕರಣ: ಪ್ರಾದೇಶಿಕ ಮತ್ತು ಉಪಪ್ರಾದೇಶಿಕ ಮಟ್ಟದಲ್ಲಿ ಸಾಂಪ್ರದಾಯಿಕ ಶಸ್ತ್ರಾಸ್ತ್ರ ನಿಯಂತ್ರಣ ಎಂಬ ಶೀರ್ಷಿಕೆಯ ಕರಡು ನಿರ್ಣಯವನ್ನು ಸೋಮವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮೊದಲ ಸಮಿತಿಯು ಪರವಾಗಿ 180 ಮತಗಳು, ವಿರುದ್ಧ ಎರಡು ಮತಗಳು ಚಲಾವಣೆ ಆಗಿವೆ. 193 ಸದಸ್ಯರಿರುವ ವಿಶ್ವಸಂಸ್ಥೆಯ ಭಾರತ ಮತ್ತು ಇಸ್ರೇಲ್ ಮಾತ್ರ ಈ ನಿರ್ಣಯವನ್ನು ವಿರೋಧಿಸಿವೆ.


Click it and Unblock the Notifications
