ಇದೇ ಮೊದಲ ಬಾರಿಗೆ ತಾಲಿಬಾನ್ ಜತೆ ಭಾರತ ಮಾತುಕತೆ, ಅಧಿಕೃತವಲ್ಲ
ನವದೆಹಲಿ, ನವೆಂಬರ್ 8: ಇದೇ ಮೊದಲ ಬಾರಿಗೆ ಭಾರತವು ತಾಲಿಬಾನ್ ಜತೆಗೆ ಮಾತುಕತೆ ನಡೆಸಲಿದೆ. ರಷ್ಯಾದ ಮಾಸ್ಕೋದಲ್ಲಿ ಶುಕ್ರವಾರ ನಡೆಯಲಿರುವ ಸಭೆಯಲ್ಲಿ ಮಾತುಕತೆ ನಡೆಸಲಿದ್ದು, 'ಇದು ಅಧಿಕೃತವಾಗಲ್ಲ' ಎಂಬುದು ಗಮನಾರ್ಹವಾದುದು.
ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ಮಾಡುವ ಉದ್ದೇಶದಿಂದ ರಷ್ಯಾವು ಭಾರತ, ಅಮೆರಿಕ, ಪಾಕಿಸ್ತಾನ ಮತ್ತು ಚೀನಾ ಸೇರಿದಂತೆ ಹಲವು ದೇಶಗಳನ್ನು ಈ ಸಭೆಗೆ ಆಹ್ವಾನ ನೀಡಿದೆ. "ನವೆಂಬರ್ ಒಂಬತ್ತರಂದು ಮಾಸ್ಕೋದಲ್ಲಿ ರಷ್ಯಾ ಒಕ್ಕೂಟವು ಸಭೆ ಆಯೋಜಿಸಿದ್ದು, ಆ ಬಗ್ಗೆ ನಮಗೆ ತಿಳಿದಿದೆ" ಎಂದು ಭಾರತ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಧಿಕೃತ ಅಲ್ಲದ ಈ ಮಾತುಕತೆಯಲ್ಲಿ ಭಾರತ ಭಾಗವಹಿಸಲಿದ್ದು, ಅಮರ್ ಸಿನ್ಹಾ ಪ್ರತಿನಿಧಿಸಲಿದ್ದಾರೆ. ಅವರು ಅಫ್ಘಾನಿಸ್ತಾನದಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಇನ್ನು ಪಾಕಿಸ್ತಾನದಲ್ಲಿ ಭಾರತದ ಹೈ ಕಮಿಷನ್ ಆಗಿದ್ದ ಟಿ.ಸಿ.ಎ.ರಾಘವನ್ ಕೂಡ ಪಾಲ್ಗೊಳ್ಳಲಿದ್ದಾರೆ.

ಕಳೆದ ತಿಂಗಳು ರಷ್ಯಾದ ವ್ಲಾಡ್ಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಜತೆಗೆ ವಾರ್ಷಿಕ ದ್ವಿಪಕ್ಷೀಯ ಚರ್ಚೆಯಲ್ಲಿ ಭಾಗವಹಿಸಿದ್ದರು. ಆ ನಂತರ ದೇಶವು ಈಗಿನ ನಡೆ ಇರಿಸಿದೆ. ಅಫ್ಘಾನಿಸ್ತಾನದಲ್ಲಿ ಮತ್ತೆ ಶಾಂತಿ ಸ್ಥಾಪನೆ ಆಗಲು ಭಾರತ ಪ್ರಯತ್ನಿಸುತ್ತದೆ ಎಂದು ರವೀಶ್ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗಾಗಿ ನಡೆಸುತ್ತಿರುವ ಮಾತುಕತೆಯಲ್ಲಿ ಇದೇ ಮೊದಲ ಬಾರಿಗೆ ಭಾರತ ಪಾಲ್ಗೊಳ್ಳುತ್ತಿದೆ. ಇರಾನ್, ಕಜಕಿಸ್ತಾನ್, ಕೈರ್ಗಿಸ್ತಾನ್, ತಜಿಕಿಸ್ತಾನ್, ತುರ್ಕ್ ಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಗಳಿಗೂ ಆಹ್ವಾನ ನೀಡಲಾಗಿದೆ.












Click it and Unblock the Notifications