Imran Khan Arrest: ಪಾಕಿಸ್ತಾನ ಮಾಜಿ ಪ್ರಧಾನಿಗೆ 3 ವರ್ಷ ಜೈಲು!
ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪಿಎಂ ಇಮ್ರಾನ್ ಖಾನ್ ಮತ್ತೆ ಕಂಬಿ ಎಣಿಸೋದು ಗ್ಯಾರಂಟಿ ಆಗಿದೆ. ತೋಷಾಖಾನಾ ಹಗರಣದಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‍ಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಇಮ್ರಾನ್ ಖಾನ್ ಸಂಸತ್ ಸ್ಥಾನವನ್ನು 5 ವರ್ಷ ಕಾಲ ಅನರ್ಹಗೊಳಿಸಿ ಪಾಕಿಸ್ತಾನದ ಕೋರ್ಟ್ ಆದೇಶ ಹೊರಡಿಸಿದೆ.
ಹೌದು, ಪಾಕಿಸ್ತಾನದ ಸ್ಥಳೀಯ ಜಿಲ್ಲಾ ನ್ಯಾಯಾಲಯ ಈ ಮಹತ್ವದ ತೀರ್ಪನ್ನ ನೀಡಿದೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಕೂಡ ಆಗಿರುವ ಇಮ್ರಾನ್‌ಗೆ ಈ ತೀರ್ಪು ದೊಡ್ಡ ಆಘಾತ ನೀಡಿದೆ. 3 ವರ್ಷ ಜೈಲು ವಾಸ ಹಾಗೂ 1 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ. ನ್ಯಾಯಾಲಯದ ತೀರ್ಪಿನಿಂದ ಇಮ್ರಾನ್ ಖಾನ್ ಮುಂದಿನ ಐದು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಾರೆ. ಅಧಿಕಾರದಲ್ಲಿದ್ದಾಗ ಖಾನ್ ದುಬಾರಿ ಉಡುಗೊರೆಗಳನ್ನ ಮಾರಾಟ ಮಾಡುವ ಮೂಲಕ ಲಾಭ ಪಡೆದಿದ್ದಾರೆಂಬ ಆರೋಪ ಇದಾಗಿತ್ತು. ಭ್ರಷ್ಟಾಚಾರ ಕೇಸ್‌ನ ಮರು ವಿಚಾರಣೆ ನಡೆಸಲು ಕೆಳ ನ್ಯಾಯಾಲಯದ ತೀರ್ಪನ್ನ ಪಾಕಿಸ್ತಾನ ಹೈಕೋರ್ಟ್ ನಿನ್ನೆ ತಳ್ಳಿಹಾಕಿತ್ತು. ಆ ಬಳಿಕ ನಡೆದ ಪ್ರಮುಖ ಘಟನೆ ಇದಾಗಿದೆ.

ಅರ್ಜಿ ವಜಾಗೊಳಿಸಿದ್ದ ಸುಪ್ರೀಂಕೋರ್ಟ್
ನಿನ್ನೆ ತೋಶಾಖಾನಾ ಭ್ರಷ್ಟಾಚಾರ ಕೇಸ್‌ನ ವಿಚಾರಣೆಯನ್ನು ಪ್ರಶ್ನಿಸಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು. ಪಾಕಿಸ್ತಾನದ ಸುಪ್ರೀಂ ಕೋರ್ಟ್ ನಿನ್ನೆ ಇಮ್ರಾನ್ ಖಾನ್ ಅರ್ಜಿ ವಜಾಗೊಳಿಸಿತ್ತು. ಉಡುಗೊರೆಗಳ ವಿವರಗಳನ್ನು ತಮ್ಮ ಬಳಿಯೇ ಇಟ್ಟುಕೊಟ್ಟಿಕೊಂಡಿದ್ದ ಆರೋಪ ಮತ್ತು ವಿದೇಶಕ್ಕೆ ಭೇಟಿ ನೀಡಿದಾಗ ಗಿಫ್ಟ್ ಆಗಿ ಬಂದಿದ್ದ ವಸ್ತುಗಳ ಖರೀದಿ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿದ್ದ ಆರೋಪವೂ ಖಾನ್ ಮೇಲಿದೆ. ಇದೀಗ ಅಂತಿಮವಾಗಿ ಮೂರು ವರ್ಷ ಜೈಲು ಶಿಕ್ಷೆಗೆ ಇಮ್ರಾನ್ ಖಾನ್ ಗುರಿಯಾಗಿದ್ದಾರೆ.
ಪಾಕ್ ಸುಪ್ರೀಂಕೋರ್ಟ್ ಹೇಳಿದ್ದೇನು?
ಅಂದಹಾಗೆ ಇಮ್ರಾನ್ ಅರ್ಜಿಯನ್ನ ವಜಾಗೊಳಿಸುವ ವೇಳೆ ಸುಪ್ರೀಂಕೋರ್ಟ್ ಸ್ಪಷ್ಟನೆಯನ್ನ ನೀಡಿತ್ತು. ಪ್ರಕರಣವನ್ನು ಮತ್ತೊಂದು ನ್ಯಾಯಾಲಯಕ್ಕೆ ವರ್ಗಾಯಿಸಲು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ ಎಂಬುದನ್ನು ಸುಪ್ರೀಂ ಮನಗಂಡಿತ್ತು. ವಿಚಾರಣಾ ನ್ಯಾಯಾಲಯ ಮತ್ತು ಇಸ್ಲಾಮಾಬಾದ್ ಹೈಕೋರ್ಟ್ ಕಾನೂನಿನ ಪ್ರಕಾರ ನಿರ್ಧಾರ ತೆಗೆದುಕೊಳ್ಳುತ್ತವೆ ಎಂಬ ಭರವಸೆಯನ್ನ ಪಾಕ್ ಸುಪ್ರೀಂ ನ್ಯಾಯಮೂರ್ತಿ ಯಾಹ್ಯಾ ಆಫ್ರಿದಿ, ಮುಸರತ್ ಹಿಲಾಲಿ, ಮಜಹರ್ ಅಲಿ ಅಕ್ಬರ್ ನಖ್ವಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ವ್ಯಕ್ತಪಡಿಸಿತ್ತು. ಇದೀಗ ದಿಢೀರ್ ಇಮ್ರಾನ್ ವಿರುದ್ಧ ಕೆಳಹಂತದ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಇಮ್ರಾನ್ ಖಾನ್ ಮೈತುಂಬಾ ಕೇಸ್!
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ವಿರುದ್ಧ 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲ್ ಹಗರಣವಿದೆ. ಕೇಸ್ ಸಂಬಂಧ ಇಮ್ರಾನ್ ಖಾನ್ ಜೈಲು ಸೇರಿದ್ದರು. ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ಖಾನ್‌ನ ಅರೆಸ್ಟ್ ಮಾಡಿತ್ತು. ಆದರೆ ಪಾಕ್ ಸುಪ್ರೀಂಕೋರ್ಟ್ ಮಧ್ಯಪ್ರವೇಶದ ನಂತರ ಇಮ್ರಾನ್ ಖಾನ್ ಬಿಡುಗಡೆ ಆಗಿದ್ದರು. ಈ ಪ್ರಕರಣವೂ ಸೇರಿದಂತೆ ಇಮ್ರಾನ್ ಖಾನ್ ವಿರುದ್ಧ ನೂರಕ್ಕೂ ಹೆಚ್ಚು ಕೇಸ್‌ಗಳು ಇವೆ. ಇಮ್ರಾನ್ ಖಾನ್ ಎಲ್ಲಾ ಪ್ರಕರಣಗಳಲ್ಲಿ ಸಿಲುಕಿ ನರಳುವಾಗಲೇ ಜೈಲು ಶಿಕ್ಷೆ ಬೇರೆ ಪ್ರಕಟವಾಗಿದೆ.
ಪಾಕ್ ಸೇನೆ ಮತ್ತು ಪಾಕಿಸ್ತಾನ ಕೇಂದ್ರ ಸರ್ಕಾರ ಇಮ್ರಾನ್ ಖಾನ್ ಅರೆಸ್ಟ್ ಮಾಡಲು ಪಿತೂರಿ ಮಾಡಿದೆ. ಉಗ್ರನ ಪಟ್ಟವನ್ನೂ ಕಟ್ಟಲು ಕೂಡ ಯತ್ನಿಸಲಾಗಿತ್ತೆಂದು ಆರೋಪಿಸಲಾಗಿತ್ತು. ಇಮ್ರಾನ್ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಿ ಒಳಗೆ ಹಾಕಿದ್ರೆ ಹತ್ತಾರು ವರ್ಷ ಅಲ್ಲೇ ಲಾಕ್ ಮಾಡಬಹುದು. ಪಾಕ್ ಸೇನೆ, ISI ಬಗ್ಗೆ ಮಾತಾಡಿದ ಖಾನ್‌ಗೆ ಪಾಠ ಕಲಿಸಬಹುದು ಎಂಬ ಕುತಂತ್ರದಿಂದ, ಖಾನ್ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಇದೆಲ್ಲ ವರ್ಕೌಟ್ ಆಗದೇ ಇರುವ ಕಾರಣ ಈಗ ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್‌ಗೆ ಜೈಲು ಶಿಕ್ಷೆ ಕೊಡಿಸಲಾಗಿದೆ ಎಂದು ಖಾನ್ ಬೆಂಬಲಿಗರು ಆರೋಪಿಸುತ್ತಿದ್ದಾರೆ.












Click it and Unblock the Notifications