ಇದು ಜೋಕ್ಸ್ ಅಲ್ಲ: ತಮ್ಮದೇ ಸರಕಾರ ಟೀಕಿಸಲು ಪಾಕಿಸ್ತಾನಿಗಳಿಂದ ಪಿಎಂ ಮೋದಿ ಹಳೇ ವಿಡಿಯೋ ಬಳಕೆ!
ಇಸ್ಲಾಮಾಬಾದ್, ಜ 16: ಪ್ರಧಾನಿ ನರೇಂದ್ರ ಮೋದಿಯವರ ಹಳೆಯ ವಿಡಿಯೋ ಒಂದು ಪಾಕಿಸ್ತಾನದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಇಮ್ರಾನ್ ಖಾನ್ ನೇತೃತ್ವದ ಪಿಟಿಐ (ತೆಹ್ರಿಕ್-ಇ-ಇನ್ಸಾಫ್) ಪಕ್ಷದ ಬೆಂಬಲಿಗರು ಮತ್ತು ಮುಖಂಡರು.
ಪಾಕಿಸ್ತಾನದ ಸದ್ಯದ ಆರ್ಥಿಕ ಬಿಕ್ಕಟ್ಟು ಮತ್ತು ಪ್ರಧಾನಮಂತ್ರಿ ಶೆಬಾಜ್ ಷರೀಫ್ ಅವರ ಕಾರ್ಯವೈಖರಿಯನ್ನು ಟೀಕಿಸಲು ಇಮ್ರಾನ್ ಬೆಂಬಲಿಗರು ಮೋದಿಯ ಹಳೆಯ ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿ ಮೋದಿ, ಪಾಕಿಸ್ತಾನವನ್ನು ಕಟು ಶಬ್ದದಲ್ಲಿ ಟೀಕಿಸಿದ್ದರು.
"I compelled Pakistan to go around the globe with a begging bowl."
— Naila Inayat (@nailainayat) January 15, 2023
The funniest part, PTI sharing this to tell current govt, look what Modi is saying about you. While the clip is from April 2019 when Imran Khan was in govt. pic.twitter.com/dgbHqMorrl
2019ರಲ್ಲಿ ರಾಜಸ್ಥಾನದ ಬರ್ಮಾರ್ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ಪಾಕಿಸ್ತಾನದ ದುರಹಂಕಾರವನ್ನು ನಾವು ಮೆಟ್ಟಿ ನಿಂತಿದ್ದೇವೆ. ಅವರನ್ನು ಭಿಕ್ಷಾಚಟನೆಯ ತಟ್ಟೆ ಹಿಡಿದು ಜಗತ್ತಿನ ದೇಶಗಳ ಮುಂದೆ ಕೈಯೊಡ್ಡುವಂತೆ ಮಾಡಿದ್ದೇವೆ ಎಂದು ಈ ವಿಡಿಯೋ ತುಣುಕಿನಲ್ಲಿ ಪಿಎಂ ಮೋದಿ ಹೇಳಿದ್ದರು.

ಆ ವೇಳೆ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಪ್ರಧಾನಮಂತ್ರಿಯಾಗಿದ್ದರು. ಪಾಕಿಸ್ತಾನದವರು ತಮ್ಮ ಬಳಿ ಪರಮಾಣು ಅಸ್ತ್ರವಿದೆ ಎಂದು ಹೇಳುತ್ತಾರೆ. ಅವರ ಬೆದರಿಕೆಗೆ ನಾವು ಸೊಪ್ಪು ಹಾಕುವುದಿಲ್ಲ, ನಮ್ಮಲ್ಲಿರುವ ನ್ಯೂಕ್ಲಿಯರ್ ಶಸ್ತಾಸ್ತ್ರಗಳನ್ನು ನಾವು ದೀಪಾವಳಿ ಹಬ್ಬಕ್ಕಾಗಿ ಕಾಯ್ದಿರಿಸಿಲ್ಲ ಎಂದು ಮೋದಿ ಅಂದು ತಮ್ಮ ರ‍್ಯಾಲಿಯಲ್ಲಿ ಹೇಳಿದ್ದರು.
ಸದ್ಯ ಪಾಕಿಸ್ತಾನವು ಗಂಭೀರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಹಳೆಯ ವಿಡಿಯೋ ಪಾಕಿಸ್ತಾನದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಕಳೆದ ವರ್ಷ ಅವಿಶ್ವಾಸ ನಿರ್ಣಯದಲ್ಲಿ ಸೋಲಾದ ನಂತರ ಇಮ್ರಾನ್ ಖಾನ್ ಅವರು ಪ್ರಧಾನಿ ಸ್ಥಾನದಿಂದ ಪದಚ್ಯುತಗೊಂಡಿದ್ದರು.
ಪಾಕಿಸ್ತಾನವನ್ನು ಪ್ರಧಾನಿ ಮೋದಿಯವರು ತರಾಟೆಗೆ ತೆಗೆದುಕೊಳ್ಳುತ್ತಿರುವ ವಿಡಿಯೋವನ್ನು ಪಿಟಿಐ ಪಕ್ಷದವರು ಹೆಮ್ಮೆಯಿಂದ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವುದು ಸ್ವಾಭಿಮಾನ, ದೇಶಾಭಿಮಾನ ಇಲ್ಲದವರು ಎಂದು ಆಡಳಿತ ಪಕ್ಷದ ಮುಖಂಡರು ಲೇವಡಿ ಮಾಡುತ್ತಿದ್ದಾರೆ.
"ಪಾಕಿಸ್ತಾನವನ್ನು ಭಿಕ್ಷೆ ಬೇಡುವಂತೆ ಮಾಡಿದ್ದೇನೆ ಎಂದು ಮೋದಿ ಹೇಳುತ್ತಿರುವುದು 2019ರಲ್ಲಿ. ಆ ವೇಳೆ ಇಮ್ರಾನ್ ಖಾನ್ ಅವರ ಸರಕಾರ ಪಾಕ್ ನಲ್ಲಿ ಅಸ್ತಿತ್ವದಲ್ಲಿತ್ತು. ಪಿಟಿಐ ಬೆಂಬಲಿಗರು ಈ ವಿಡಿಯೋ ಬಳಸಿಕೊಳ್ಳುತ್ತಿರುವುದು ಹಾಸ್ಯಾಸ್ಪದ"ಎಂದು ಪತ್ರಕರ್ತೆ ನೈಲಾ ಇನಾಯತ್ ಲೇವಡಿ ಮಾಡಿದ್ದಾರೆ.












Click it and Unblock the Notifications