7000 ಕಾರ್ಯಕರ್ತರ ಬಂಧನ, 50 ಕೋಟಿ ರೂಪಾಯಿ ನಷ್ಟ!
ಇಸ್ಲಾಮಾಬಾದ್: ಉಗ್ರರ ಸ್ವರ್ಗ & ಪ್ರಜೆಗಳಿಗೆ ನರಕವಾಗಿರುವ ಪಾಕಿಸ್ತಾನದಲ್ಲಿ ಹಿಂಸಾಚಾರದ ಪರಿಣಾಮ 50 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ ಎಂಬ ವರದಿ ಸಿಕ್ಕಿದೆ. ಇದರ ಜೊತೆಗೆ ಪಾಕಿಸ್ತಾನ ಮಾಜಿ ಪಿಎಂ ಇಮ್ರಾನ್ ಹತ್ತಿಕ್ಕಲು ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್ ಪಕ್ಷದ 7000 ಸಾವಿರ ಕಾರ್ಯಕರ್ತರನ್ನ ಬಂಧಿಸಿರುವ ಆರೋಪವನ್ನ ಇಮ್ರಾನ್ ಖಾನ್ ಮಾಡಿದ್ದಾರೆ.
ಇಮ್ರಾನ್ ಖಾನ್ ಅರೆಸ್ಟ್ ಆದ ಬಳಿಕ ರೊಚ್ಚಿಗೆದ್ದಿದ್ದ ಬೆಂಬಲಿಗರು ಹಿಂಸೆಗೆ ಇಳಿದಿದ್ದರು. ಹಿಂಸೆ ನಿಯಂತ್ರಿಸಲು ಆಗದ ಪಾಕಿಸ್ತಾನದ ಸೇನೆ ಕಂಡಲ್ಲಿ ಗುಂಡು ಹೊಡೆಯುತ್ತಿತ್ತು. ಹೀಗಾಗಿ ಮತ್ತಷ್ಟು ರೊಚ್ಚಿಗೆದ್ದ ಜನ, ಪಾಕ್‌ನ ಮೂಲೆ ಮೂಲೆಯಲ್ಲೂ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಪೆಟ್ರೋಲ್ ಬಂಕ್, ಪಾಕಿಸ್ತಾನ ರೆಡಿಯೋ ಕೇಂದ್ರ ಕೊನೆಗೆ ಪಾಕ್ ಮಿಲಿಟರಿ ಕ್ಯಾಂಪಸ್‌ಗೂ ಬೆಂಕಿ ಇಟ್ಟುಬಿಟ್ರು. ಪರಿಣಾಮ 50 ಕೋಟಿ ರೂಪಾಯಿಗೂ ಹೆಚ್ಚು ನಷ್ಟವನ್ನ ಪಾಕಿಸ್ತಾನದ ಆರ್ಥಿಕತೆ ಎದುರಿಸುವಂತಾಗಿದೆ.

ಅಘೋಷಿತ ತುರ್ತು ಪರಿಸ್ಥಿತಿ!
ಪಾಕ್ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ಇಮ್ರಾನ್ ಖಾನ್ ಬಂಧಿಸಿದ ನಂತರ, ಹಿಂಸಾಚಾರ ಧಗಧಗಿಸಿದ ಪರಿಣಾಮ ಪಾಕಿಸ್ತಾನ ಸಂಪೂರ್ಣ ಸ್ತಬ್ಧವಾಗಿತ್ತು. ಅಲ್ಲದೆ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿತ್ತು. ಮತ್ತೊಂದ್ಕಡೆ ಗಲಾಟೆ ತೀವ್ರವಾಗಿ ಇಸ್ಲಾಮಾಬಾದ್ ಹೈಕೋರ್ಟ್ ಗೇಟ್ ಮುರಿದು, ಗಲಾಟೆ ನಡೆಸಿ ಹೈಕೋರ್ಟ್ ಒಳಗೆ ನುಗ್ಗುವುದಕ್ಕೂ ಖಾನ್ ಬೆಂಬಲಿಗರು ಯತ್ನಿಸಿದ್ದರು. ಪರಿಣಾಮ 7000 ಸಾವಿರಕ್ಕೂ ಹೆಚ್ಚು ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್ ಪಕ್ಷದ ಕಾರ್ಯಕರ್ತರನ್ನ ಬಂಧಿಸಿದ್ದಾರೆ ಎಂದು ಇಮ್ರಾನ್ ಹೇಳಿದ್ದಾರೆ.
ಮಾಜಿ ಪ್ರಧಾನಿ ತಲೆಗೆ ಏಟು?
ಇಮ್ರಾನ್ ಬಂಧನದ ದಿನ ಇಸ್ಲಾಮಾಬಾದ್ ಹೈಕೋರ್ಟ್ ರಣರಂಗವಾಗಿತ್ತು. ಎಷ್ಟರಮಟ್ಟಿಗೆ ಅಂದ್ರೆ ಕೋರ್ಟ್ ಹೊರ ಭಾಗದಲ್ಲಿ ಗೇಟ್, ಕಾಂಪೌಂಡ್ ಹೊಡೆದು ಹಾಕುತ್ತಿದ್ದರು ಇಮ್ರಾನ್ ಫ್ಯಾನ್ಸ್. ಒಳಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಹಲ್ಲೆ ನಡೆದಿತ್ತು, ಅದರಲ್ಲೂ ಇಮ್ರಾನ್ ತಲೆಗೆ ಪಾಕಿಸ್ತಾನ ಅರೆಸೇನಾ ಪಡೆ ಯೋಧರು ಜೋರಾಗಿ ಹೊಡೆದಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪಾಕಿಸ್ತಾನದ ಕಿಚ್ಚಿಗೆ ಪೆಟ್ರೋಲ್ ಸುರಿದಂತಾಗಿ, ಸೀದಾ ಸೀದಾ ಪಾಕಿಸ್ತಾನ ಮಿಲಿಟರಿ ಕಮಾಂಡರ್ ಮನೆಗೆ ಖಾನ್ ಬೆಂಬಲಿಗರು ನುಗ್ಗಿದ್ದರು.

ಇಮ್ರಾನ್ ಬೆಂಬಲಿಗರು ಕಂಬಿ ಹಿಂದೆ!
ಪಾಕಿಸ್ತಾನದ ಸೇನೆ ಅದೆಷ್ಟು ಕ್ರೂರವಾಗಿ ಪರಿಸ್ಥಿತಿ ನಿಭಾಯಿಸುತ್ತಿದೆ ಅಂದ್ರೆ ಮುಲಾಜು ನೋಡದೆ ಕಂಡಲ್ಲಿ ಗುಂಡು ಹೊಡೆಯುತ್ತಿತ್ತು. 10ಕ್ಕೂ ಹೆಚ್ಚು ಜನ ಸೇನೆ ಬುಲೆಟ್‌ಗೆ ಬಲಿಯಾದ್ರು. ಇನ್ನು ಪ್ರತಿಭಟನೆ ಜೋರಾಗುತ್ತಿದ್ದಂತೆ ಎಲ್ಲೆಡೆ ಹೈಅಲರ್ಟ್ ಘೋಷಣೆ ಮಾಡಿ, ಇಮ್ರಾನ್ ಖಾನ್ ಬೆಂಬಲಿಗರನ್ನ ಒಳಗೆ ಹಾಕಲಾಗಿತ್ತು. ಈಗ ಕೂಡ ಇಮ್ರಾನ್ ಬೆಂಬಲಿಗರನ್ನ ಹುಡುಕಿ ಹುಡುಕಿ ಒಳಗೆ ಹಾಕುತ್ತಿರುವ ಆರೋಪ ಕೇಳಿಬಂದಿದೆ. ಇಮ್ರಾನ್ ಖಾನ್ ಈ ಕುರಿತು ಅಳಲು ತೋಡಿಕೊಂಡಿದ್ದಾರೆ. ಆದರೆ ಹೋರಾಟ ಮಾತ್ರ ನಿಲ್ಲಲ್ಲ ಎಂದು ಘೋಷಿಸಿದ್ದಾರೆ.
ಮಹಿಳೆಯರ ಮೇಲೆ ಪಾಕ್ ಸೇನೆ ಪೌರುಷ
ಇಮ್ರಾನ್ ಅರೆಸ್ಟ್ ಆಗಿ ಜೈಲು ಸೇರುತ್ತಿದ್ದಂತೆ ಪಾಕಿಸ್ತಾನ ಮಿಲಿಟರಿ & ಐಎಸ್‌ಐ ಹೊಸ ಆಟ ಶುರುಮಾಡಿದೆ ಎಂಬ ಆರೋಪದ ನಡುವೆ, ಲಾಹೋರ್‌ನ ಇಮ್ರಾನ್ ಮನೆ ಮೇಲೆ ನಿರಂತರ ಶೆಲ್ ದಾಳಿ ನಡೆಸಲಾಗಿತ್ತು. ಇದರ ಹಿಂದೆ ಪಾಕಿಸ್ತಾನಿ ಸೇನೆ & ಐಎಸ್‌ಐ ಕೈವಾಡವಿದೆ ಎಂದು ಖಾನ್ ಬೆಂಬಲಿಗರು ರೊಚ್ಚಿದ್ದರು. ಪರಿಣಾಮ ಪಾಕಿಸ್ತಾನದಲ್ಲಿ ಬೀದಿ ಬೀದಿಗಳಲ್ಲಿ ಇನ್ನಷ್ಟು ರಕ್ತ ಹರಿದಿತ್ತು. ಬಂಧಿತ ಇಮ್ರಾನ್ ಖಾನ್ ಹೆಂಡತಿ ಜೀವ ಭಯದಲ್ಲೇ ಒಂಟಿಯಾಗಿ ಮನೆಯಲ್ಲಿ ನರಳುತ್ತಿದ್ದ ಸಂಗತಿ ಇಡೀ ಜಗತ್ತಿಗೇ ತಲುಪಿತ್ತು. ಈ ಮೂಲಕ ಪಾಕಿಸ್ತಾನದ ಸೇನೆಯ ಮಾನ & ಮರ್ಯಾದಿ ಬೀದಿಯಲ್ಲಿ ಹರಾಜಾಗಿತ್ತು.
ಒಟ್ನಲ್ಲಿ ಪಾಕಿಸ್ತಾನ ಸೇನೆ ತಾನು ಮಾಡಿದ ತಪ್ಪಿಗೆ ಮಾನ ಕಳೆದುಕೊಂಡಿದೆ. ಇದರ ಜೊತೆಗೆ ಹಿಂಸಾಚಾರದ ಪರಿಣಾಮ 50 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ. ಇಮ್ರಾನ್ ಬೆಂಬಲಿಗರೂ ಸೇರಿ ಇಮ್ರಾನ್ ಪಕ್ಷದ 7000ಕ್ಕೂ ಹೆಚ್ಚು ಕಂಬಿಹಿಂದೆ ಬಿದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಮುಂದೆ ಇದೆಲ್ಲವೂ ಎಲ್ಲಿಗೆ ಬಂದು ನಿಲ್ಲುತ್ತೆ, ಇಮ್ರಾನ್ ಯಾವ ರೀತಿ ನಿರ್ಧಾರ ಕೈಗೊಳ್ಳಲಿದ್ದಾರೆ? ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications