ಇಮ್ರಾನ್ ಖಾನ್ ರಿಲೀಸ್: ಬೆಂಕಿಯಿಂದ ಕೆಂಡಕ್ಕೆ ಬಿದ್ದ ಖಾನ್?
ಇಸ್ಲಾಮಾಬಾದ್: ಅಂತೂ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಿಂದ ಹೊರ ಬಂದಿದ್ದಾರೆ. 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲಿಂಗ್ ಹಗರಣದ ಆರೋಪದಡಿ ಜೈಲುಹಕ್ಕಿಯಾಗಿದ್ದ ಇಮ್ರಾನ್ ಖಾನ್‌ಗೆ ಜಾಮೀನು ನೀಡಿದೆ ಇಸ್ಲಾಮಾಬಾದ್. ಹಾಗಾದ್ರೆ ಈಗ ಎಲ್ಲಿದ್ದಾರೆ ಇಮ್ರಾನ್? ಈಗ ಖಾನ್ ಜೀವಕ್ಕೆ ಅಪಾಯ ಇಲ್ವಾ? ತಿಳಿಯೋಣ ಬನ್ನಿ.
ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ 3 ದಿನದ ಹಿಂದೆ ದಿಢೀರ್ ಇಮ್ರಾನ್ ಖಾನ್ ಬಂಧನವಾಗಿತ್ತು. ಮೊದಲೇ ಪಾಕಿಸ್ತಾನ ಸೇನೆ ಮತ್ತು ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್‌ಐ ವಿರುದ್ಧ ಮಾತನಾಡಿ ಟಾರ್ಗೆಟ್ ಆಗಿದ್ದರು ಇಮ್ರಾನ್. ಈ ಎಲ್ಲಾ ಕಾರಣಗಳಿಂದ ದಿಢೀರ್ ಕಂಬಿಹಿಂದೆ ತಳ್ಳಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ನಿನ್ನೆ ಪಾಕಿಸ್ತಾನ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಮರು ವಿಚಾರಣೆಗೆ ಆದೇಶಿಸಿತ್ತು. ಇದೇ ಸಮಯಕ್ಕೆ ಅಲ್ಲಿ ದೊಡ್ಡ ಹೈಡ್ರಾಮ ನಡೆದು ಹೋಯಿತು.

ಖಾನ್ ಬಂದಾಗ ಕೋರ್ಟ್ ಗೇಟ್ ಪೀಸ್
3 ದಿನದ ವಿಚಾರಣೆಗಾಗಿ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಬಂದಿದ್ದ ವೇಳೆ ಇಮ್ರಾನ್ (Imran Khan) ಬಂಧನವಾಗಿತ್ತು. ಪಾಕಿಸ್ತಾನಿ ಅರೆಸೈನಿಕ ಪಡೆ ಇಮ್ರಾನ್‌ನ ಅರೆಸ್ಟ್ ಮಾಡಿತ್ತು. ಈ ಘಟನೆ ಇಡೀ ಪಾಕಿಸ್ತಾನದ ನೆಮ್ಮದಿ ಕೆಡಿಸಿತ್ತು. ಬಂಧನದ ಬಗ್ಗೆ ಇಸ್ಲಾಮಾಬಾದ್ ಹೈಕೋರ್ಟ್ ತೀರ್ಪು ನೀಡಿ ಸರಿಯಾಗಿದೆ ಎಂದಿತ್ತು. ಆದರೆ ಪಾಕಿಸ್ತಾನ ಸುಪ್ರೀಂಕೋರ್ಟ್ ಉಲ್ಟಾ ತೀರ್ಪು ನೀಡಿ, ಬಂಧನ ಕಾನೂನು ಬಾಹೀರ ಎಂದಿತ್ತು. ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಮರು ವಿಚಾರಣೆ ನಡೆಸಲು ಆದೇಶ ನೀಡಲಾಗಿತ್ತು. ಈಗ ಅದರ ತೀರ್ಪು ಹೊರಬಿದ್ದಿದೆ.
ಪಾಕ್ ಮಾಜಿ ಪ್ರಧಾನಿ ಬಂಧನಕ್ಕೆ ತಡೆ
ಇಸ್ಲಾಮಾಬಾದ್ ಹೈಕೋರ್ಟ್‌ಗೆ ಇಂದು ಮತ್ತೊಂದು ಹಂತದ ವಿಚಾರಣೆಗೆ ಇಮ್ರಾನ್ ಖಾನ್ ಬಂದಿದ್ದರು. ಆ ವೇಳೆ ಹೈಕೋರ್ಟ್ ವಿರುದ್ಧ ರೊಚ್ಚಿಗೆದ್ದ ಇಮ್ರಾನ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಹಿಂಸಾಚಾರ ಭುಗಿಲೆದ್ದು, ಗಲಾಟೆ ತೀವ್ರವಾಗಿದೆ. ಇಸ್ಲಾಮಾಬಾದ್ ಹೈಕೋರ್ಟ್ ಗೇಟ್ ಮುರಿದು, ಗಲಾಟೆ ನಡೆಸಿದ ಇಮ್ರಾನ್ ಬೆಂಬಲಿಗರು ಹೈಕೋರ್ಟ್ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಕಡೆಗೆ ಭದ್ರತಾ ಪಡೆ ಪರಿಸ್ಥಿತಿಯನ್ನ ನಿಯಂತ್ರಿಸಿ, ವಿಚಾರಣೆಗೆ ಅನುವು ಮಾಡಿಕೊಟ್ಟಿತ್ತು. ಅಂತಿಮವಾಗಿ ಮೇ 17ರ ತನಕ ಇಮ್ರಾನ್ ಖಾನ್ ಬಂಧನಕ್ಕೆ ತಡೆ ನೀಡಲಾಗಿದೆ.
ಯಾವಾಗ ಹೊರಗೆ ಬರ್ತಾರೆ ಇಮ್ರಾನ್?
ಈಗ ತಾನೆ ಇಸ್ಲಾಮಾಬಾದ್ ಹೈಕೋರ್ಟ್ ಇಮ್ರಾನ್ ಖಾನ್ ಬಿಡುಗಡೆಗೆ ಆದೇಶ ನೀಡಿದೆ. ಹೀಗಾಗಿ ಇಮ್ರಾನ್ ಎಲ್ಲಾ ನಿಯಮ ಪಾಲಿಸಿ, ರಿಲೀಸ್ ಆಗಬೇಕಿದೆ. ನಾಳೆಯ ಒಳಗೆ ಇಮ್ರಾನ್ ಹೊರಗೆ ಬರುವ ಸಾಧ್ಯತೆ ಇದೆ. ಆದರೆ ವಿಚಾರ ಅದಲ್ಲ, ಈಗಾಗಲೇ ಗುಂಡೇಟು ತಿಂದಿರುವ ಇಮ್ರಾನ್ ಖಾನ್ ಹೊರ ಬಂದರೆ ಅವರ ಜೀವಕ್ಕೆ ಅಪಾಯ ಇಲ್ವಾ? ಎಂಬುದು. ಯಾಕಂದ್ರೆ ಯಾವುದೇ ಸಂದರ್ಭದಲ್ಲಿ ಇಮ್ರಾನ್ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಇಮ್ರಾನ್ ಖಾನ್ ಅಭಿಮಾನಿಗಳಲ್ಲಿ ಭಯ ಶುರುವಾಗಿದೆ.

ಮಾಜಿ ಪ್ರಧಾನಿ ತಲೆಗೆ ಹೊಡೆದ ಸೇನೆ?
ಇಸ್ಲಾಮಾಬಾದ್ ಹೈಕೋರ್ಟ್ ಇಂದು ರಣರಂಗವಾಗಿತ್ತು. ಅದು ಎಷ್ಟರಮಟ್ಟಿಗೆ ಅಂದ್ರೆ ಹೈಕೋರ್ಟ್ ಹೊರ ಭಾಗದಲ್ಲಿ ಗೇಟ್, ಕಾಂಪೌಂಡ್ ಹೊಡೆದು ಹಾಕುತ್ತಿದ್ದರು ಇಮ್ರಾನ್ ಫ್ಯಾನ್ಸ್. ಇನ್ನು ಒಳಗೆ ಇಮ್ರಾನ್ ಖಾನ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. 3 ದಿನಗಳ ಹಿಂದೆ ಅರೆಸ್ಟ್ ಮಾಡುವಾಗ ಅರೆಸೇನಾ ಪಡೆಯ ಯೋಧರು ತಲೆಗೆ ಜೋರಾಗಿ ಹೊಡೆದರು ಎಂದು ಇಮ್ರಾನ್ ದೂರಿದ್ದಾರೆ. ಈ ಮೂಲಕ ಪಾಕಿಸ್ತಾನದ ಕಿಚ್ಚಿಗೆ ಪೆಟ್ರೋಲ್ ಸುರಿದಂತಾಗಿದೆ. ಮಾಜಿ ಪ್ರಧಾನಿ ಮೇಲೆ ಹಲ್ಲೆ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಒಟ್ನಲ್ಲಿ ಪಾಕ್ ಮಾಜಿ ಪಿಎಂ ಬಿಡುಗಡೆಗೆ ಆದೇಶ ಹೊರಬಿದ್ದಿದೆ. ಇನ್ನೊಂದ್ಕಡೆ ಪಾಕಿಸ್ತಾನ ಸರ್ಕಾರ ಕೂಡ ಈ ತೀರ್ಪಿನ ಬಗ್ಗೆ ಅಸಮಾಧಾನ ಹೊರಹಾಕುತ್ತಿದೆ. ಇಷ್ಟೆಲ್ಲಾ ಘರ್ಷಣೆ ನಡುವೆ ಇಮ್ರಾನ್ ಹೊರ ಬಂದರೆ ಅವರ ಜೀವಕ್ಕೆ ಅಪಾಯ ಇಲ್ವಾ? ಎಂಬ ಭಯ ಇಮ್ರಾನ್ ಬೆಂಬಲಿಗರನ್ನ ಕಾಡುತ್ತಿದೆ. ಇಂತಹ ಘಟನೆಗಳ ಮೂಲಕ ಜಾಗತಿಕವಾಗಿ ಮತ್ತೆ ಪಾಕಿಸ್ತಾನ ತನ್ನ ಮಾನ, ಮರ್ಯಾದಿ ಕಳೆದುಕೊಳ್ಳುತ್ತಿರುವುದು ಸುಳ್ಳಲ್ಲ.












Click it and Unblock the Notifications