ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅರೆಸ್ಟ್ ಆಗೋದ್ರೆ ಮುಂದೇನು?
ನ್ಯೂಯಾರ್ಕ್: ಅಂತೂ ಇಂತೂ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರೋಧಿಗಳು ಬಯಸಿದ್ದ ದಿನ ಬಂದೇಬಿಟ್ಟಿದೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ ಟ್ರಂಪ್ ಮಾಡಿದ ತಪ್ಪಿಗೆ ಕಂಬಿ ಎಣಿಸುವ ಸಂಕಷ್ಟ ಎದುರಾಗಿದೆ. ನೀಲಿ ಚಿತ್ರತಾರೆ ಸ್ಟಾರ್ಮಿ ಡೇನಿಯಲ್ಸ್ ಬಾಯಿ ಮುಚ್ಚಿಸಲು 1 ಲಕ್ಷ 30 ಸಾವಿರ ಡಾಲರ್ ಹಣವನ್ನು ಅಕ್ರಮವಾಗಿ ನೀಡಿದ್ದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಟ್ರಂಪ್ ವಿರುದ್ಧ ವಿಚಾರಣೆ ನಡೆಯುತ್ತಿದೆ.
ವಿಚಾರಣೆ ಸಂಬಂಧ ಮ್ಯಾನ್‌ಹಟನ್ ಕೋರ್ಟ್‌ಗೆ ಡೊನಾಲ್ಡ್ ಟ್ರಂಪ್ ಇಂದು ಹಾಜರಾಗಲಿದ್ದಾರೆ. ಇದೇ ಕಾರಣಕ್ಕೆ ಟ್ರಂಪ್ ತಮ್ಮ ಖಾಸಗಿ ಜೆಟ್ ಮೂಲಕ ನ್ಯೂಯಾರ್ಕ್ ನಗರಕ್ಕೆ ಬಂದಿಳಿದಿದ್ದಾರೆ. ಆದರೆ ಈಗ ಮೂಡಿರುವ ಟ್ರಿಲಿಯನ್ ಡಾಲರ್ ಪ್ರಶ್ನೆ ಏನೆಂದರೆ, ಟ್ರಂಪ್ ಅರೆಸ್ಟ್ ಆಗೋದ್ರೆ ಮುಂದೇನು? ಎಂಬುದು. ಆ ಪ್ರಶ್ನೆಗೆ ಉತ್ತರ ಇಲ್ಲಿ ಹುಡುಕೋಣ.

ಟ್ರಂಪ್ ಬಂಧನದ ಬಳಿಕ ಅಮೆರಿಕದಲ್ಲಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ದಟ್ಟವಾಗಿದ್ದು, ಈಗಾಗಲೇ ಪರಿಸ್ಥಿತಿ ನಿಭಾಯಿಸಲು ನ್ಯೂಯಾರ್ಕ್ ನಗರ ಸೇರಿದಂತೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಹೆಚ್ಚಾಗಿರುವ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇಷ್ಟಾದರೂ ಹಿಂಸಾಚಾರದ ಭಯ ಅಮೆರಿಕನ್ನರನ್ನು ಕಾಡುತ್ತಿದೆ. ಏಕೆಂದರೆ ಇದೇ ಮಹಾಶಯನ ಬೆಂಬಲಿಗರು 2021ರ ಜನವರಿಯಲ್ಲಿ ಅಮೆರಿಕದ ಸಂಸತ್ ಭವನಕ್ಕೆ ನುಗ್ಗಿ ಮಾಡಬಾರದ್ದನ್ನೆಲ್ಲ ಮಾಡಿದ್ದರು. ಈಗ ಮತ್ತೊಮ್ಮೆ ಅಂತಹದ್ದೇ ದುರಂತ ನಡೆಯುವ ಭಯ ಎಲ್ಲೆಲ್ಲೂ ಆವರಿಸಿದೆ.
ಟ್ರಂಪ್ ಗೆ ಜೈಲೂಟ?: ಅಮೆರಿಕ ಅಧ್ಯಕ್ಷರಾಗಿದ್ದ ಟ್ರಂಪ್ 2006ರಲ್ಲಿ ಸ್ಟಾರ್ಮಿ ಡೇನಿಯಲ್ಸ್ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದರು ಎಂದು ಆರೋಪಿಸಲಾಗಿತ್ತು. ಈ ಆರೋಪ ಅವರಿಗೆ 2016ರ ಚುನಾವಣೆ ಹೊತ್ತಲ್ಲಿ ಮುಳುವಾಗುವ ಸಾಧ್ಯತೆ ದಟ್ಟವಾಗಿತ್ತು. ಆಗ ಸ್ಟಾರ್ಮಿ ಬಾಯಿ ಮುಚ್ಚಿಸಲು ಟ್ರಂಪ್ ಸುಮಾರು 1 ಕೋಟಿ ರೂಪಾಯಿಗೂ ಹೆಚ್ಚು ಹಣ ನೀಡಿದ್ದರು ಎನ್ನಲಾಗಿತ್ತು. ಅಮೆರಿಕದ ಕಾನೂನಿನಲ್ಲಿ ಈ ರೀತಿ ಹಣ ಪಾವತಿ ಕಾನೂನು ಬದ್ಧ ಎನ್ನಲಾಗಿದೆಯಾದರೂ, ಟ್ರಂಪ್ ಹಣ ಪಾವತಿಸಿದ ರೀತಿ ಕಾನೂನು ಬದ್ಧವಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಈಗಾಗಲೇ ವಿಚಾರಣೆ ನಡೆದ್ದಿದ್ದು, ಟ್ರಂಪ್ ಒಳಗೆ ಹೋಗುವುದು ಬಹುತೇಕ ಪಕ್ಕ ಅಂತಿದ್ದಾರೆ ಅವರ ವಿರೋಧಿಗಳು.

ಸ್ಲೇಟು ಕೊಟ್ಟು ಫೋಟೋ?: ಈಗಾಗಲೇ ತಿಳಿದಿರುವಂತೆ ಕ್ರಿಮಿನಲ್ ಕೇಸ್ ಎದುರಿಸುತ್ತಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಟ್ರಂಪ್. ಬರೀ ಕ್ರಿಮಿನಲ್ ಕೇಸ್ ಅಲ್ಲ ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಟ್ರಂಪ್ ಜೈಲೂಟ ತಿನ್ನೋದು ಬಹುತೇಕ ಗ್ಯಾರಂಟಿ. ಆದ್ರೆ ಟ್ರಂಪ್ ಬಂಧನ ಆಗಿದ್ದೇ ಆದಲ್ಲಿ ಮುಂದಿನ ಕ್ರಮ ಏನು? ಎಂಬ ಪ್ರಶ್ನೆ ಎದುರಾಗಿದೆ. ಎಲ್ಲಾ ಖೈದಿಗಳಿಗೂ ಮಾಡಿದಂತೆ ಟ್ರಂಪ್ ಅನ್ನೂ ಗೋಡೆಯ ಎದುರಿಗೆ ನಿಲ್ಲಿಸಿ 3 ಆ್ಯ೦ಗಲ್ ನಲ್ಲಿ ಫೋಟೋ ತೆಗೆಯುತ್ತಾರಾ? ಹಾಗೇ ಟ್ರಂಪ್ ಫಿಂಗರ್ ಪ್ರಿಂಟ್ ಕೂಡ ಪಡೆಯುತ್ತಾರಾ? ಅನ್ನೋ ಪ್ರಶ್ನೆಗೆ ಸಧ್ಯಕ್ಕೆ ಉತ್ತರ ಸಿಗುತ್ತಿಲ್ಲ. ಆದ್ರೆ ಅಮೆರಿಕದ ಕಾನೂನಿನಲ್ಲಿ ಮಾಜಿ ಅಧ್ಯಕ್ಷರಿಗೆ ಅಂತಹ ದೊಡ್ಡ ವಿನಾಯಿತಿಯೇನು ಇಲ್ಲ. ಹೀಗಾಗಿ ಟ್ರಂಪ್ ಸ್ಲೇಟು ಹಿಡಿಯೋದು ಪಕ್ಕಾ.
ಚಕ್ರವ್ಯೂಹದಲ್ಲಿ ಟ್ರಂಪ್: ಈಗಿನ ಪರಿಸ್ಥಿತಿಯಲ್ಲಿ ಟ್ರಂಪ್ ಹೆಚ್ಚು ಕೆಮ್ಮಲು ಆಗಲ್ಲ. ಸೂಕ್ತ ಸಾಕ್ಷಿ ಸಮೇತ ಟ್ರಂಪ್ ಅವರನ್ನ ಜೈಲಿಗೆ ಕಳುಹಿಸಲು ಮ್ಯಾನ್‌ಹಟನ್ ಕೋರ್ಟ್ ಸಜ್ಜಾಗಿದೆ. ಈಗೇನಿದ್ದರೂ ಅಂತಿಮವಾಗಿ ಟ್ರಂಪ್ ವಿಚಾರಣೆ ನಡೆಸಿ ಕೈಗೆ ಕೋಳ ಹಾಕಬೇಕಿದೆ ಅಷ್ಟೇ. ಇದಾದ ಬಳಿಕ ಟ್ರಂಪ್ ತಮ್ಮ ತಪ್ಪು ಒಪ್ಪಿಕೊಂಡರೆ ಶಿಕ್ಷೆಯ ಪ್ರಮಾಣ ಕಡಿಮೆ ಆಗಬಹುದು. ಇಲ್ಲವಾದರೆ ಅಮೆರಿಕದ ಮಾಜಿ ಅಧ್ಯಕ್ಷರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.












Click it and Unblock the Notifications