Hurricane: ಹೆಲೆನ್ ಚಂಡಮಾರುತದ ಆರ್ಭಟಕ್ಕೆ ತತ್ತರಿಸಿದ ಅಮೆರಿಕ– 33 ಮಂದಿ ಸಾವು!
ನ್ಯೂಯಾರ್ಕ್ ಸೆಪ್ಟೆಂಬರ್ 28: ಅಮೆರಿಕಾದಲ್ಲಿ ಹೆಲೆನ್ ಚಂಡಮಾರುತಕ್ಕೆ 33 ಜನರು ಸಾವನ್ನಪ್ಪಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ರಸ್ತೆಗಳಲ್ಲಿ ವಾಹನಗಳು ಮುಳುಗಿ ಹೋಗಿದ್ದು ಮನೆಗಳಿಗೆ ಮಳೆ ನೀರು ನುಗ್ಗಿ ಕತ್ತಲಲ್ಲಿ ಕಾಲ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಮುದ್ರದಲ್ಲಿ ಎದ್ದ ಚಂಡಮಾರುತ ಭೂಮಿಗೆ ಅಪ್ಪಳಿಸಿ ಲಕ್ಷಾಂತರ ಜನರ ಜೀವನ ಬೀದಿಪಾಲಾಗಿದೆ.
ಹೆಲೆನ್ ಚಂಡಮಾರುತ ಫ್ಲೋರಿಡಾ ಮತ್ತು ಅಮೆರಿಕದ ಇತರ ಹಲವು ಆಗ್ನೇಯ ರಾಜ್ಯಗಳಲ್ಲಿ ಅಪ್ಪಳಿಸಿತು. ಇದರಿಂದಾಗಿ 40 ಲಕ್ಷ ಮನೆಗಳು ಮತ್ತು ಅಂಗಡಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಚಂಡಮಾರುತದಿಂದಾಗಿ ಒಟ್ಟು 33 ಜನ ಪ್ರಾಣ ಕಳೆದುಕೊಂಡಿದ್ದಾರೆ.

ಸುದ್ದಿ ಸಂಸ್ಥೆ AFP ವರದಿ ಪ್ರಕಾರ ಫ್ಲೋರಿಡಾದಲ್ಲಿ ಏಳು ಸಾವುಗಳು ಸಂಭವಿಸಿವೆ. ಅದರ ನೆರೆಯ ಜಾರ್ಜಿಯಾದಲ್ಲಿ 11 ಸಾವುಗಳು ದಾಖಲಾಗಿವೆ ಮತ್ತು ದಕ್ಷಿಣ ಕೆರೊಲಿನಾದಲ್ಲಿ ಇಬ್ಬರು ಅಗ್ನಿಶಾಮಕ ಇಲಾಖೆ ನೌಕರರು ಸೇರಿದಂತೆ 14 ಜನರು ಸಾವನ್ನಪ್ಪಿದ್ದಾರೆ. ಉತ್ತರ ಕೆರೊಲಿನಾದಲ್ಲಿ ಒಂದು ಸಾವು ವರದಿಯಾಗಿದೆ.
ಹೆಲೆನ್ ಚಂಡಮಾರುತದಿಂದ ಅನೇಕ ರಾಜ್ಯಗಳು ತತ್ತರ
ಹೆಲೆನ್ ಚಂಡಮಾರುತ ಗುರುವಾರ ರಾತ್ರಿ 11:10ಕ್ಕೆ ಫ್ಲೋರಿಡಾ ಪ್ರದೇಶವನ್ನು ತಲುಪಿತು. ಈ ಪ್ರಬಲ ಚಂಡಮಾರುತಕ್ಕೆ ಸಾವಿರಾರು ಮರಗಳು ನೆಲಕ್ಕಚ್ಚಿವೆ. ಹಲವಾರು ದೋಣಿಗಳು ಹಾಗೂ ವಾಹನಗಳು ಮುಳುಗಿ ಹೋಗಿವೆ. ರಸ್ತೆಗಳು ಪ್ರವಾಹದಿಂದಾಗಿ ಜಲಾವೃತಗೊಂಡಿವೆ.
ಇದರ ಪ್ರಭಾವ ಜಾರ್ಜಿಯಾ, ದಕ್ಷಿಣ ಕೆರೊಲಿನಾ, ಉತ್ತರ ಕೆರೊಲಿನಾ, ಟೆನ್ನೆಸ್ಸೀ ಮತ್ತು ವರ್ಜೀನಿಯಾ ರಾಜ್ಯಗಳವರೆಗೂ ವಿಸ್ತರಿಸಿದೆ. ಕೆಲವೆಡೆ ಎಂಟು ಅಡಿಗಳಷ್ಟು ಮಳೆ ನೀರು ನಿಂತುಕೊಂಡಿದೆ. ಆದರೆ ಫ್ಲೋರಿಡಾದ ಹಲವು ಪ್ರದೇಶದಲ್ಲಿ 15 ಅಡಿಗಿಂತ ಹೆಚ್ಚು ಮಳೆ ನೀರು ಆವೃತವಾಗಿದೆ.
ವಿದ್ಯುತ್ ಸಂಪರ್ಕ ಕಡಿತ
ದೇಶದಾದ್ಯಂತ ವಿದ್ಯುತ್ ಕಡಿತವನ್ನು ಮೇಲ್ವಿಚಾರಣೆ ಮಾಡುವ ಮತ್ತು ದಾಖಲಿಸುವ ಕಂಪನಿಯಾದ PowerOutage.US ಪ್ರಕಾರ, ಅಮೆರಿಕಾದಾದ್ಯಂತ ಸುಮಾರು 4 ಮಿಲಿಯನ್ ಜನರಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಯಾವಾಗ ಮರುಸ್ಥಾಪಿಸಲಾಗುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ.
ಉತ್ತರ ಕೆರೊಲಿನಾದಲ್ಲಿ 290 ರಸ್ತೆಗಳು ಬಂದ್
ಇನ್ನೂ ಟೆನ್ನೆಸ್ಸಿಯ 50 ಜನರು ಪ್ರವಾಹದಿಂದಾಗಿ ಯುನಿಕೋಯ್ ಕೌಂಟಿ ಆಸ್ಪತ್ರೆಯ ಛಾವಣಿಯ ಮೇಲೆ ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ತೀವ್ರ ಪ್ರವಾಹ ಮತ್ತು ಭೂಕುಸಿತದಿಂದಾಗಿ ಉತ್ತರ ಕೆರೊಲಿನಾದಲ್ಲಿ 290 ರಸ್ತೆಗಳನ್ನು ಬಂದ್ ಮಾಡಲಾಗಿದೆ. ಮಾತ್ರವಲ್ಲದೆ ಚಂಡಮಾರುತದಿಂದಾಗಿ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ಪ್ರಸ್ತುತ ಕಟ್ಟಡಗಳು ಮತ್ತು ಕಾಲ್ನಡಿಗೆಯಲ್ಲಿ ಪ್ರವೇಶಿಸಲಾಗದ ಪ್ರದೇಶಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ. ರಾಜ್ಯ ಗಸ್ತು ಸಿಬ್ಬಂದಿ ಹಾಗೂ ಜಲ ರಕ್ಷಣಾ ತಂಡಗಳು ದೋಣಿಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಕಳುಹಿಸುತ್ತಿದ್ದಾರೆ. ಸಹಾಯಕ್ಕಾಗಿ ನ್ಯಾಷನಲ್ ಗಾರ್ಡ್ ಫ್ಲೋರಿಡಾಕ್ಕೆ ಹೆಚ್ಚುವರಿ ರಕ್ಷಣಾ ತಂಡಗಳನ್ನು ನಿಯೋಜಿಸಿದೆ.
ಹೆಲೆನ್ ಚಂಡಮಾರುತದ ಆಗಮನದ ಮುಂಚೆಯೇ ಫ್ಲೋರಿಡಾ, ಜಾರ್ಜಿಯಾ, ಉತ್ತರ ಕೆರೊಲಿನಾ, ದಕ್ಷಿಣ ಕೆರೊಲಿನಾ ಮತ್ತು ಅಲಬಾಮಾದಲ್ಲಿ ಎಚ್ಚರ ವಹಿಸುವಂತೆ ಯುಎಸ್ ಅಧ್ಯಕ್ಷ ಜೋ ಬಿಡೆನ್ ತುರ್ತು ಘೋಷಣೆ ಮಾಡಿದ್ದಾರೆ.












Click it and Unblock the Notifications