Sunita Williams: ಭೂಮಿಯತ್ತ ಸುನೀತಾ ವಿಲಿಯಮ್ಸ್; ಹೇಗಿದೆ ರೋಚಕ ಕಾರ್ಯಾಚರಣೆ
ಭಾರತೀಯ ಮೂಲದ ಗಗನಯಾತ್ರಿ, ವಿಜ್ಞಾನಿ ಸುನೀತಾ ವಿಲಿಯಮ್ಸ್ ಸುದೀರ್ಘ ಕಾಯುವಿಕೆ ಬಳಿಕ ಕೊನೆಗೂ ಬಾಹ್ಯಾಕಾಶದಿಂದ ಭೂಮಿಗೆ ಮರಳುತ್ತಿದ್ದಾರೆ. ಎಲಾನ್ ಮಸ್ಕ್‌ರ ಸ್ಪೇಸ್ ಎಕ್ಸ್ ಸುನೀತಾ ವಿಲಿಯಮ್ಸ್‌ರನ್ನು ಭೂಮಿಗೆ ಕರೆತರುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಅವರು ಸ್ಪೇಸ್‌ಎಕ್ಸ್ ಕ್ರೂ ಡ್ರಾಗನ್ ಕ್ಯಾಪ್ಸುಲ್‌ನಿಲ್ಲಿ ಸಿಬ್ಬಂದಿ ಜೊತೆ ಭೂಮಿಗೆ ವಾಪಸಾಗಲಿದ್ದಾರೆ.
ಮಾರ್ಚ್ 15 ಶುಕ್ರವಾರ ನಾಸಾ ಕ್ರೂ-10 ಮಿಷನ್ ಅನ್ನು ಉಡಾವಣೆ ಮಾಡಿತು, ಬದಲಿ ಸಿಬ್ಬಂದಿಯನ್ನು ಐಎಸ್‌ಎಸ್‌ಗೆ ಕಳಿಸಲು ಫಾಲ್ಕನ್ 9 ರಾಕೆಟ್ ಬಳಸಿತು. ಇದು ವಿಲಿಯಮ್ಸ್ ಮತ್ತು ಅವರ ತಂಡವು ಭೂಮಿಗೆ ಹಿಂತಿರುಗುವ ಪ್ರಯಾಣಕ್ಕಾಗಿ ಹಿಂದಿರುಗುವ ಕ್ರೂ ಡ್ರ್ಯಾಗನ್ ಬಳಸಲು ಅವಕಾಶ ಮಾಡಿಕೊಟ್ಟಿತು.

ಎಷ್ಟು ಗಂಟೆಗೆ ಸ್ಪ್ಲಾಶ್‌ಡೌನ್?
ಸೋಮವಾರ ಸಂಜೆ ಕ್ರೂ ಡ್ರ್ಯಾಗನ್‌ನ ಹ್ಯಾಚ್ ಮುಚ್ಚಿದಾಗ ಹಿಂತಿರುಗುವ ಪ್ರಕ್ರಿಯೆಯು ಪ್ರಾರಂಭವಾಯಿತು. ಬಾಹ್ಯಾಕಾಶ ನೌಕೆ ಸ್ಪೇಸ್ ಸ್ಟೇಷನ್‌ನಿಂದ ಅನ್‌ಡಾಕ್ ಮಾಡಿ ಭೂಮಿಗೆ ತನ್ನ ಪ್ರಯಾಣವನ್ನು ಆರಂಭಿಸಿದೆ. ಅಮೆರಿಕ ಕಾಲಮಾನ ಮಂಗಳವಾರ ಸಂಜೆ 5.57ಕ್ಕೆ ಸ್ಪ್ಲಾಶ್‌ಡೌನ್‌ಗೆ ಸಮಯ ನಿಗದಿ ಮಾಡಲಾಗಿದೆ. ಅಂದರೆ ಭಾರತೀಯ ಕಾಲಮಾನ ಬುಧವಾರ ಮುಂಜಾನೆ 3.27ಕ್ಕೆ ಸರಿಯಾಗಿ ಇಳಿಯಲಿದ್ದಾರೆ.
ಫ್ರೋರಿಡಾದ ಕರಾವಳಿಯಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಲಾಗುತ್ತದೆ. ಇಳಿದ ನಂತರ, ವಿಲಿಯಮ್ಸ್ ಮತ್ತು ಸಿಬ್ಬಂದಿಯನ್ನು ಟೆಕ್ಸಾಸ್‌ನ ಹೂಸ್ಟನ್‌ನಲ್ಲಿರುವ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ಸಾಗಿಸಲಾಗುತ್ತದೆ. ಅಲ್ಲಿ, ಅವರು ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಸಹಾಯ ಮಾಡಲು ವೈದ್ಯಕೀಯ ಮೌಲ್ಯಮಾಪನಗಳು, ಕಾರ್ಯಾಚರಣೆಯ ನಂತರದ ವಿವರಣೆಗಳು ಮತ್ತು ಚೇತರಿಕೆ ಪ್ರೋಟೋಕಾಲ್‌ಗಳಿಗೆ ಒಳಗಾಗಲಿದ್ದಾರೆ.
9 ತಿಂಗಳ ಬಾಹ್ಯಾಕಾಶ ವಾಸ
ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕಳೆದ 9 ತಿಂಗಳಿನಿಂದ ಬಾಹ್ಯಾಕಾಶದಲ್ಲಿದ್ದರು. 8 ದಿನಗಳ ಕಾರ್ಯಾಚರಣೆಗಾಗಿ ತೆರಳಿದ್ದ ಅವರು ತಾಂತ್ರಿಕ ಸಮಸ್ಯೆಗಳಿಂದ ಬರೋಬ್ಬರಿ 9 ತಿಂಗಳು ಬಾಹ್ಯಾಕಾಶದಲ್ಲಿ ಕಳೆಯುವಂತಾಯಿತು. ಅಂದಿನಿಂದಲೂ ಅವರನ್ನು ವಾಪಸ್ ಭೂಮಿಗೆ ಕರೆತರಲು ನಾಸಾ ಪ್ರಯತ್ನ ಮಾಡುತ್ತಲೇ ಇತ್ತು, ಫೆಬ್ರವರಿಯಲ್ಲೇ ಅವರು ಭೂಮಿಗೆ ಬರುತ್ತಾರೆ ಎನ್ನಲಾಗಿತ್ತಾದರೂ ತಾಂತ್ರಿಕ ಸಮಸ್ಯೆಯಿಂದ ಅದನ್ನು ಮುಂದೂಡಲಾಗಿತ್ತು ಅಂತಿಮವಾಗಿ ಬುಧವಾರ ಅವರು ಮನೆಗೆ ಮರಳುತ್ತಿದ್ದಾರೆ.
ಸುನೀತಾ ವಿಲಿಯಮ್ಸ್ ವಿಚಾರದಲ್ಲಿ ರಾಜಕೀಯ ಕೆಸರೆರೆಚಾಟ ಕೂಡ ನಡೆದಿತ್ತು. ಅಮೆರಿಕದ ಹಿಂದಿನ ಜೈ ಬಿಡೆನ್ ಸರ್ಕಾರ ಸುನೀತಾ ವಿಲಿಯನ್ಸ್‌ರನ್ನು ಕೈಬಿಟ್ಟಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಸುನೀತಾ ಅವರನ್ನು ವಾಪಸ್ ಭೂಮಿಗೆ ಕರೆತರಲು ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ನಾಸಾ ಜೊತೆ ಕೈಜೋಡಿಸಿದೆ. ಶನಿವಾರ ಫಾಲ್ಕನ್ 9 ರಾಕೆಟ್‌ನಲ್ಲಿ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಉಡಾಯಿಸಿದೆ.
ನೌಕಾಪಡೆಯ ಮಾಜಿ ಪೈಲಟ್‌ಗಳಾದ ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಕಳೆದ ವರ್ಷ ಜೂನ್ 5 ರಂದು ಕಕ್ಷೆಯ ಪ್ರಯೋಗಾಲಯಕ್ಕೆ ಎಂಟು ದಿನಗಳ ಕಾರ್ಯಾಚರಣೆಗಾಗಿ ಬಾಹ್ಯಾಕಾಶಕ್ಕೆ ಹಾರಿದ್ದರು. ಸ್ಟಾರ್‌ಲೈನರ್ ಕ್ಯಾಪ್ಸುಲ್ ಪ್ರೊಪಲ್ಷನ್ ಸಮಸ್ಯೆಗಳನ್ನು ಅನುಭವಿಸಿದ ನಂತರ ಅವರು ಅಲ್ಲೆ ಸಿಕ್ಕಿಹಾಕಿಕೊಂಡರು. ಹಾರಲು ಅನರ್ಹವೆಂದು ಪರಿಗಣಿಸಲ್ಪಟ್ಟ ಸೆಪ್ಟೆಂಬರ್‌ನಲ್ಲಿ ಸಿಬ್ಬಂದಿ ಇಲ್ಲದೆ ಬಾಹ್ಯಾಕಾಶ ನೌಕೆ ಹಿಂತಿರುಗಿತು.
ಹಿಂದಿರುಗುವ ಪ್ರಯಾಣದ ಬಗ್ಗೆ ಅನಿಶ್ಚಿತತೆಯ ನಡುವೆ, ನಾಸಾ ಸ್ಪೇಸ್‌ಎಕ್ಸ್‌ನ ಕ್ರೂ-9 ಕಾರ್ಯಾಚರಣೆಗೆ ಮರು ನಿಯೋಜಿಸಿತು. ಸಿಕ್ಕಿಬಿದ್ದ ಗಗನಯಾತ್ರಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಸೆಪ್ಟೆಂಬರ್‌ನಲ್ಲಿ ಸಾಮಾನ್ಯ ನಾಲ್ವರು ಸದಸ್ಯರ ಬದಲಿಗೆ ಇಬ್ಬರು ಸದಸ್ಯರ ಸಿಬ್ಬಂದಿಯೊಂದಿಗೆ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಕಳುಹಿಸಲಾಗಿತ್ತು.
ಸಾಕಷ್ಟು ವಿಳಂಬದ ಬಳಿಕ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಭಾನುವಾರ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕಿಂಗ್ ಮಾಡಿದೆ. ಅನ್‌ಡಾಕಿಂಗ್ ಪೂರ್ಣಗೊಂಡಿದ್ದು ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್, ವಿಲ್ಮೋರ್, ನಿಕ್ ಹೇಗ್ ಮತ್ತು ರೋಸ್ಕೋಸ್ಮೋಸ್ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಅವರನ್ನು ಹೊತ್ತ ಬಾಹ್ಯಾಕಾಶ ನೌಕೆ ಭೂಮಿಯತ್ತ ಆಗಮಿಸುತ್ತಿದೆ.
ಗಗನಯಾತ್ರಿಗಳು ತಮ್ಮ ಬಾಹ್ಯಾಕಾಶ ಸೂಟ್‌ಗಳಿಂದ ಆರಾಮದಾಯಕ ಬಟ್ಟೆಗಳನ್ನು ಬದಲಾಯಿಸಲು ಅನುಮತಿ ನೀಡಲಾಗಿದೆ ಎಂದು ವರದಿಯಾಗಿದೆ. ಬಾಹ್ಯಾಕಾಶ ಕ್ಯಾಪ್ಸುಲ್ ಸಾಗರದಲ್ಲಿ ಇಳಿಯಲಿದ್ದು ಇಳಿಯಲು ಪ್ಯಾರಾಚೂಟ್‌ಗಳನ್ನು ಬಳಸುತ್ತದೆ. ಬಾಹ್ಯಾಕಾಶದಿಂದ ಭೂಮಿಗೆ ಸುಮಾರು 17 ಗಂಟೆಗಳ ಪ್ರಯಾಣದ ಸಮಯವಾಗಿದ್ದು ಭಾರತೀಯ ಕಾಲಮಾನ ಬುಧವಾರ ಬೆಳಗಿನ ಜಾವ 3.27ಕ್ಕೆ ಫ್ಲೋರಿಡಾ ಕರಾವಳಿ ಭಾಗದಲ್ಲಿ ಇಳಿಯಲಿದೆ. ಬಳಕ ಹಡಗಿನಲ್ಲಿ ಗಗನಯಾತ್ರಿಗಳನ್ನು ತೀರಕ್ಕೆ ಕರೆತರಲಾಗುತ್ತದೆ.
ಹೆಚ್ಚಿನ ದಿನ ಬಾಹ್ಯಾಕಾಶದಲ್ಲಿ ಇದ್ದವರು ಯಾರು?
ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರ ಒಂದೇ ಕಾರ್ಯಾಚರಣೆಗಾಗಿ ಒಂಬತ್ತು ತಿಂಗಳ ಬಾಹ್ಯಾಕಾಶ ವಾಸ್ತವ್ಯವು ಯುಎಸ್‌ನಲ್ಲಿ ಹೆಚ್ಚು ದಿನ ಬಾಹ್ಯಾಕಾಶದಲ್ಲಿದ್ದವರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. 2023 ರಲ್ಲಿ ಬಾಹ್ಯಾಕಾಶದಲ್ಲಿ 371 ದಿನಗಳನ್ನು ಕಳೆದಿದ್ದ ಫ್ಲೈಟ್ ಸರ್ಜನ್-ಆಫ್-ಗಗನಯಾತ್ರಿ ಫ್ರಾಂಕ್ ರುಬಿಯೊ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆದರೆ ಅತಿ ಹೆಚ್ಚಿನ ದಿನ ಬಾಹ್ಯಾಕಾಶದಲ್ಲಿ ಕಳೆದವರ ಪಟ್ಟಿಯಲ್ಲಿ ರಷ್ಯಾದ ಗಗನಯಾತ್ರಿ ವ್ಯಾಲೆರಿ ಪಾಲಿಯಕೋವ್ ಮೊದಲ ಸ್ಥಾನದಲ್ಲಿದ್ದಾರೆ ಅವರು ಬರೋಬ್ಬರಿ 437 ದಿನ ರಷ್ಯಾದ ಹಿಂದಿನ ಬಾಹ್ಯಾಕಾಶ ಕೇಂದ್ರವಾದ ಮಿರ್ ನಿಲ್ದಾಣದಲ್ಲಿ ಕಳೆದಿದ್ದರು.
ಗಗನಯಾತ್ರಿಗಳ ಊಟ ಏನು?
ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಏನು ಸೇವಿಸುತ್ತಾರೆ ಎನ್ನುವ ಕುತೂಹಲ ಇದ್ದೇ ಇರುತ್ತದೆ. ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿರುವ ಪ್ರಕಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ನಲ್ಲಿರುವ ನಾಸಾ ಗಗನಯಾತ್ರಿಗಳು ಪಿಜ್ಜಾ, ಹುರಿದ ಕೋಳಿಮಾಂಸ, ಸೀಗಡಿ ಕಾಕ್ಟೈಲ್‌ಗಳು ಮತ್ತು ಟುನಾ ಮೀನುಗಳ ಮಿಶ್ರಣವನ್ನು ತಿನ್ನುವ ಮೂಲಕ ಕಾಲ ಕಳೆದಿದ್ದಾರೆ.
ಗಗನಯಾತ್ರಿಗಳು ಹಾಲಿನ ಪುಡಿ, ಧಾನ್ಯಗಳು, ಬೇಯಿಸಿದ ಮಾಂಸ ಮತ್ತು ಮೊಟ್ಟೆಗಳು ಸೇರಿದಂತೆ ವಿವಿಧ ರೀತಿಯ ಸಂರಕ್ಷಿತ ಆಹಾರವನ್ನು ಹೊತ್ತೊಯ್ದಿದ್ದರು. ಆರಂಭದಲ್ಲಿ ಹಣ್ಣುಗಳು ಲಭ್ಯವಿದ್ದರೂ ಮೂರು ತಿಂಗಳಿನಲ್ಲಿ ಅವು ಖಾಲಿಯಾಗಿದ್ದವು, ಬಳಿಕ ಪ್ಯಾಕ್ ಮಾಡಿದ ಆಹಾರಗಳನ್ನು ತಿನ್ನಬೇಕಾಯಿತು. ಗಗನಯಾತ್ರಿಗಳು ಬಾಹ್ಯಾಕಾಶ ಕೇಂದ್ರದಲ್ಲಿ ಆಹಾರ ಸೇವಿಸುತ್ತಿರುವ ಚಿತ್ರಗಳನ್ನು ನಾಸಾ ಹಂಚಿಕೊಂಡಿತ್ತು.
ಆರೋಗ್ಯದ ಮೇಲೆ ಪರಿಣಾಮ
ಬಾಹ್ಯಾಕಾಶದಲ್ಲಿ ತಂಗುವುದು ಸುಲಭವಾದ ಕೆಲಸವಲ್ಲ, ಅದು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಮಾನಸಿಕ ಸ್ಥೈರ್ಯ ಹೆಚ್ಚಿನದಾಗಿ ಇರಬೇಕಾಗುತ್ತದೆ. ಹೆಚ್ಚಿನ ದಿನ ಬಾಹ್ಯಾಕಾಶದಲ್ಲಿ ತಂಗುವುದರಿಂದ ಸ್ನಾಯು ಮತ್ತು ಮೂಳೆ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ತಜ್ಞರು ಹೇಳಿದ್ದಾರೆ. ಹೆಚ್ಚಿನ ದಿನ ಬಾಹ್ಯಾಕಾಶದಲ್ಲಿ ತಂಗಿದರೆ ಮಾನಸಿಕ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.












Click it and Unblock the Notifications