Gaza War: ಗಾಜಾ ಮೇಲೆ ದಾಳಿಗೆ ಪ್ರತಿಕಾರ, ಇಸ್ರೇಲ್ ವಿರುದ್ಧ ಹಮಾಸ್ ಕ್ಷಿಪಣಿ ಪ್ರಯೋಗ
ಹಮಾಸ್ & ಇಸ್ರೇಲ್ ನಡುವೆ ಸಂಧಾನ ನಡೆಸಿ, ಕದನ ವಿರಾಮ ಘೋಷಣೆ ಮಾಡಿದ ಬೆನ್ನಲ್ಲೇ ಯುದ್ಧ ನಿಂತು ಹೋಯ್ತು ಅಂತಾ ಇಡೀ ಜಗತ್ತು ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು. ಆದ್ರೆ ಇದೀಗ ದಿಢೀರ್ ಮತ್ತೆ ಅಸಮಾಧಾನದ ಹೊಗೆ ಭುಗಿಲೆದ್ದಿದ್ದು, ಹಮಾಸ್ & ಇಸ್ರೇಲ್ ಜಗಳ ಮತ್ತೆ ಆರಂಭವಾಗಿದೆ. ಇದರ ಪರಿಣಾಮ ಗಾಜಾ ಪಟ್ಟಿ ಜನರು ನಲುಗಿ ಹೋಗಿರುವ ವೇಳೆ ಇಸ್ರೇಲ್ ನೆಲದಲ್ಲೂ ಬೆಂಕಿ ಹೊತ್ತಿಕೊಂಡಿದೆ.
ಗಾಜಾ ಯುದ್ಧ & ಹಿಂಸಾಚಾರದ ಬೆಂಕಿಯಲ್ಲಿ ಈಗಾಗಲೇ ಅರ್ಧ ಲಕ್ಷಕ್ಕೂ ಹೆಚ್ಚು ಜನರು ಜೀವ ಬಿಟ್ಟಿದ್ದಾರೆ. ನೋಡ ನೋಡುತ್ತ ಲೆಕ್ಕವಿಲ್ಲದಷ್ಟು ಮಕ್ಕಳು ಊಟ & ನೀರು ಇಲ್ಲದೆ ಮೃತಪಟ್ಟು ನರಕ ರೂಪುಗೊಂಡಿದೆ. ಹೀಗಿದ್ದಾಗ ಕಳೆದ ಕೆಲವು ದಿನಗಳ ಹಿಂದಷ್ಟೇ ಯುದ್ಧ ನಿಲ್ಲಿಸಿದ್ದ ಹಮಾಸ್ & ಇಸ್ರೇಲ್, ಜನರಿಗೆ ಒಂದಷ್ಟು ನೆಮ್ಮದಿ ಕೊಡುವ ಸುದ್ದಿ ನೀಡಿದ್ದರು. ಆದರೆ ಈಗ ಮತ್ತೆ ಯುದ್ಧದ ಕಿಚ್ಚು ಹೊತ್ತಿಕೊಂಡು ಧಗಧಗಿಸುತ್ತಿದೆ. ಇದೇ ಸಮಯದಲ್ಲಿ ಹಮಾಸ್ ಕೂಡ ಕ್ಷಿಪಣಿ ದಾಳಿ ನಡೆಸಿ, ಇಸ್ರೇಲ್ ವಿರುದ್ಧ ತೊಡೆತಟ್ಟಿದೆ.

ಟೆಲ್ ಅವಿವ್ ಮೇಲೆ ಕ್ಷಿಪಣಿ ದಾಳಿ
ರಕ್ತ, ಹಿಂಸೆ, ಯುದ್ಧ, ಗಲಾಟೆ.. ಅಬ್ಬಬ್ಬಾ.. ಏನ್ ಗುರೂ ಬರೀ ಇದೇ ಆಗೋಯ್ತಾ? ಅಂತಾ ನಿಮಗೂ ಅನಿಸಿರಬಹುದು. ಯಾಕಂದ್ರೆ ಜಗತ್ತಿನ ಮೂಲೆ ಮೂಲೆಯಲ್ಲೂ ಇದೀಗ ಯುದ್ಧಗಳು ಶುರುವಾಗಿವೆ. ಅದರಲ್ಲೂ ಇಸ್ರೇಲ್ & ಗಾಜಾ ಪಟ್ಟಿಯ ನಡುವೆ ನಡೆಯುತ್ತಿರುವ ಘನಘೋರ ಯುದ್ಧ ಕ್ಷಣಕ್ಷಣಕ್ಕೂ ಮಾನವೀಯತೆ ಸಾಯಿಸುವ ಹಂತಕ್ಕೆ ಹೋಗುತ್ತಿದೆ. ಇದೇ ಸಮಯದಲ್ಲಿ ಹಮಾಸ್ ಕೂಡ ರಿವೇಂಜ್ ತೆಗೆದುಕೊಳ್ಳಲು ಸಜ್ಜಾಗಿದ್ದು, ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿರುವ ಹಠಾತ್ ದಾಳಿಗೆ ಪ್ರತೀಕಾರವಾಗಿ ವಾಣಿಜ್ಯ ನಗರಿ ಟೆಲ್ ಅವಿವ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಕ್ಷಿಪಣಿಗಳ ಅರ್ಭಟ ಮತ್ತೆ ಶುರು
ಇಸ್ರೇಲ್ ಕೈಗೆ ಹೊಸ ಅಸ್ತ್ರ ಸಿಕ್ಕಂತೆ ಆಗಿದ್ದು, ಡೊನಾಲ್ಡ್ ಟ್ರಂಪ್ ಬಂದ ನಂತರ ಮತ್ತೊಮ್ಮೆ ಭೀಕರ ಬಡಿದಾಟಕ್ಕೆ ಮುಂದಾಗಿದೆ. ಇದೇ ಕಾರಣಕ್ಕೆ ಯುದ್ಧ ನಿಂತ ನಂತರ ಕೂಡ ಮತ್ತೆ, ಮತ್ತೆ ದಾಳಿ ನಡೆಸುತ್ತಿದೆ ಇಸ್ರೇಲ್ ಸೇನೆ. ಅದರ ಭಾಗವಾಗಿ ಗಾಜಾ ಪಟ್ಟಿಯ ಉತ್ತರ & ದಕ್ಷಿಣ ಭಾಗದಲ್ಲಿ ಮತ್ತೆ ಗುಂಡಿನ ಸದ್ದು ಹಾಗೂ ಕ್ಷಿಪಣಿಗಳ ಅರ್ಭಟ ಮುಂದುವರಿದಿದೆ. ಹೀಗಾಗಿ ಮಧ್ಯಪ್ರಾಚ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮುಂದಿನ ಪರಿಸ್ಥಿತಿ ಏನಪ್ಪಾ? ಅನ್ನೋ ಚಿಂತೆ ಕೂಡ ಶುರುವಾಗಿದೆ.
ಇಷ್ಟೆಲ್ಲದರ ನಡುವೆ, ಹಮಾಸ್ ನಡೆಸಿರುವ ದಾಳಿಯಲ್ಲಿ ಒಂದು ಕ್ಷಿಪಣಿ ಹೊಡೆದು ಉರುಳಿಸಿದ ಬಗ್ಗೆ ಇಸ್ರೇಲ್ ಮಾಹಿತಿ ನೀಡಿದ್ದು, ಉಳಿದ ಎರಡು ಕ್ಷಿಪಣಿಗಳು ಜನವಸತಿ ಇಲ್ಲದ ಪ್ರದೇಶಕ್ಕೆ ಅಪ್ಪಳಿಸಿವೆ ಎಂದು ಇಸ್ರೇಲ್ ಸೇನೆ ಮಾಹಿತಿ ಕೊಟ್ಟಿದೆ. ಈ ಮೂಲಕ ಮತ್ತೊಮ್ಮೆ ಇಸ್ರೇಲ್ & ಹಮಾಸ್ ನಡುವೆ ತಿಕ್ಕಾಟ ಶುರುವಾಗಿದ್ದು, ಪರಿಸ್ಥಿತಿ ಕೈಮೀರಿ ಹೋಗುತ್ತಿದೆ.












Click it and Unblock the Notifications