ಆಲೂಗಡ್ಡೆಯಂತಿದ್ದ ವಸ್ತು ಕೋಟಿ ಬಾಳುವ ಖಜಾನೆ : ಮಣ್ಣಡಿಯಲ್ಲಿ ಸಿಕ್ಕಿತ್ತು ಕೆಜಿ ತೂಕದ ಅಪ್ಪಟ ಚಿನ್ನ; ಇದೇ ಅಲ್ವಾ ಲಕ್
ನಮ್ಮ ಜೀವನದಲ್ಲಿ ಏನೇ ಕೆಟ್ಟದಾಗಲಿ ನಾವು ದೂಷಿಸುವುದು ಹಣೆ ಬರಹವನ್ನ. ಎಲ್ಲದಕ್ಕೂ ಹಣೆ ಬರಹ ಕಾರಣ, ಹಣೆಬರಹಕ್ಕೆ ಹೊಣೆ ಯಾರು ಹೀಗೆ ಏನೇ ಆಗಲಿ ಆ ತಪ್ಪು ಹಣೆ ಬರಹದ್ದೇ. ಹಣೆ ಬರಹ ಅಂದರೆ ಅದೃಷ್ಟ ದುರಾದೃಷ್ಟ. ಒಳ್ಳೆಯದಾದರೆ ಹಣೆಬರಹ ಚೆನ್ನಾಗಿತ್ತು, ಇಲ್ಲಾ ಎಂದಾದರೆ ಕೆಟ್ಟದ್ದು ಅಷ್ಟೇ. ಆದ್ರೆ, ಈ ಹಣೆ ಬರಹ ಬದಲಾಗುವುದಕ್ಕೆ ಹೆಚ್ಚು ಹೊತ್ತು ಬೇಕಿಲ್ಲ. ಅರೆ ಕ್ಷಣ ಸಾಕು. ಕಣ್ಣು ಮಿಟುಕಿಸುವುದರೊಳಗೆ ಎಲ್ಲವೂ ಬದಲಾಗಿ ಬಿಡಬಹುದು.

Gold Nugget ಕ್ಕಾಗಿ ಹುಡುಕಾಟ :
ಇದು ಆಸ್ಟ್ರೇಲಿಯಾದ (australia) ಔಟ್ ಬ್ಯಾಕಿನ ವ್ಯಕ್ತಿಯ ಕತೆ. ಇವನೊಬ್ಬ ಅನ್ವೇಷಕ. ಇಲ್ಲಿ ಅವರ ಅದೃಷ್ಟ ಕೂಡಾ ಅಷ್ಟೇ ಅರೆ ಕ್ಷಣದಲ್ಲಿ ಬದಲಾಗಿದೆ. ಈ ವ್ಯಕ್ತಿ ಮೆಟಲ್ ಡಿಟೆಕ್ಟರ್ ಹಿಡಿದುಕೊಂಡು ಬಹಳ ದಿನಗಳಿಂದ ಅಲೆದಾಡುತ್ತಿದ್ದ. ಸುಡು ಬಿಸಿಲು, ಗಾಳಿ, ಮಳೆ ಯಾವುದನ್ನೂ ಲೆಕ್ಕಿಸದೆ ತನ್ನ ಹುಡುಕಾಟ ಮುಂದುವರೆಸಿದ್ದ. ತಾನು ಹುಡುಕುತ್ತಿರುವ ವಸ್ತು ಸಿಗುತ್ತಿಲ್ಲ ಎಂದು ಭರವಸೆ ಕಳೆದುಕೊಳ್ಳುವ ಹೊತ್ತಿಗೆ ಹೊಸ ಆಶಾಕಿರಣ ಮೂಡಿದೆ. ಕೆಂಪು ಮಣ್ಣಿನ ಕೆಳಗೆ ಒಂದು ಸಣ್ಣ ಹಳದಿ ತುಂಡು ಕಣ್ಣಿಗೆ ಬಿದ್ದಿದೆ. ಈ ಹಳದಿ ತುಂಡು ಆತನ ಇಡೀ ಜಗತ್ತನ್ನು ಬದಲಾಯಿಸಿತು. ಈ ವಸ್ತುಒಂದು ಆಲುಗಡ್ಡೆ ಗಾತ್ರದಲ್ಲಿತ್ತು. ಅಂದ ಹಾಗೆ ಈತ ಹುಡುಕುತ್ತಿದ್ದದ್ದು, ಇವನಿಗೆ ಸಿಕ್ಕಿದ್ದು ಯಾವುದೋ ಮಾಮೂಲಿ ವಸ್ತುವಲ್ಲ ಅಪ್ಪಟ ಚಿನ್ನ.
ಛಲ ಬಿಡದೆ ನಡೆದ ಶೋಧ ಕಾರ್ಯ :
ಮಾಹಿತಿಯ ಪ್ರಕಾರ, ಈ ವ್ಯಕ್ತಿ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ನ ಮೌಂಟ್ ಸ್ಟುವರ್ಟ್ ನಿಲ್ದಾಣದ ಬಳಿ ತುಂಬಾ ದಿನಗಳಿಂದ ಚಿನ್ನ (gold) ಹುಡುಕುತ್ತಾ ಇದ್ದ. ಚಿನ್ನ ಹುಡಕಿದ ತಕ್ಷಣ ಸಿಕ್ಕಿ ಬಿಡುವುದೇ? ಈ ವ್ಯಕ್ತಿ ಕೂಡಾ ಹಠ ಬಿಡಲಿಲ್ಲ. ಹತಾಶೆ ಕಾಡಿತ್ತು ಇಲ್ಲಾ ಎಂದಲ್ಲ. ಆದರೆ ಮನಸ್ಸಿನ ಮೂಲೆಯಲ್ಲಿ ಭರವಸೆ ಕೂಡಾ ಇತ್ತು. ಇವತ್ತಲ್ಲ ನಾಳೆ ತಾನು ಹುಡುಕುವ ಆ ಚಿನ್ನದ ಗಟ್ಟಿ ಸಿಕ್ಕೇ ಸಿಗುತ್ತದೆ ಎನ್ನುವ ಭರಸೆ ಗಟ್ಟಿಯಾಗಿ ಮನೆ ಮಾಡಿತ್ತು. ಕೆಲವೊಮ್ಮೆ ಸೀಸ ಗುಂಡು, ಕೆಲವೊಮ್ಮೆ ಹಳೆಯ ಮೊಳೆ, ಕುದುರೆ ಲಾಳದ ತ್ಯಾಜ್ಯ ಹೀಗೆ ಏನೇನೋ ಸಿಗುತ್ತಿತ್ತು.
ಕೊನೆಗೂ ಹುಸಿಯಾಗಲಿಲ್ಲ ಭರವಸೆ :
ಆದರೆ ಅದೊಂದು ದಿನ ಅದೃಷ್ಟ ಈ ವ್ಯಕ್ತಿ ಕೈ ಹಿಡಿದಿತ್ತು. ತಮ್ಮ ಗೋಲ್ಡ್ ಮಾನ್ಸ್ಟರ್ 2000 ಮೆಟಲ್ ಡಿಟೆಕ್ಟರ್ ಮೂಲಕ ಸಿಗ್ನಲ್ ಪತ್ತೆಹಚ್ಚಿದಾಗ, ಆರಂಭದಲ್ಲಿ ಸಿಗ್ನಲ್ ಸಾಕಷ್ಟು ನಿಧಾನವಾಗಿತ್ತು. 100 ಮಿ.ಮೀ ಆಳಕ್ಕೆ ಅಗೆಯುತ್ತಾ ಇದ್ದ ಹಾಗೆಯೇ ಮೆಟಲ್ ಡಿಟೆಕ್ಟರ್ ಜೋರಾಗಿ ಬೀಪ್ ಮಾಡುವುದಕ್ಕೆ ಶುರು ಮಾಡುತ್ತದೆ. ಗುಂಡಿಯಲ್ಲಿ ಮಣ್ಣನ್ನು ತೆಗೆದ ತಕ್ಷಣ ಹಳದಿ ಹೊಳೆಯುವ ಗಟ್ಟಿ ಅವರ ಕಣ್ಣಿಗೆ ಬೀಳುತ್ತದೆ. ಆ ವ್ಯಕ್ತಿ ನಿಟ್ಟುಸಿರು ಬಿಟ್ಟು ತನ್ನ ಬೆರಳುಗಳಿಂದ ಕೆಂಪು ಜೇಡಿಮಣ್ಣನ್ನು ಕೆರೆಯುತ್ತಾನೆ. ಅಲ್ಲಿ ಆಲುಗಡ್ಡೆ ಆಕಾರದ ಹಳದಿ ತುಂಡನ್ನು ಹೊರ ತೆಗೆಯುತ್ತಾನೆ.
1.2 ಕೆಜಿ ತೂಕದ ಚಿನ್ನ :
400 ಮಿಮೀ ಸಾಧಾರಣ ಆಳದಲ್ಲಿ ಸಿಕ್ಕಿದ ಈ ತುಂಡು ಯಾವ ಪವಾಡಕ್ಕಿಂತಲೂ ಕಡಿಮೆಯಿರಲಿಲ್ಲ. ಈ ವ್ಯಕ್ತಿಗೆ ಸಿಕ್ಕಿರುವುದು 1.2 ಕೆಜಿ ತೂಕದ ಟಿಬುಬುರಾ ಸ್ಪಡ್. ಇದರಲ್ಲಿ 940 ಗ್ರಾಂ ಶುದ್ಧ ಚಿನ್ನವಿತ್ತು. ಇದು ಆಲೂಗಡ್ಡೆಯಂತೆ ಕಾಣುವ ಕಾರಣ ಇದನ್ನು ಟಿಬುಬುರಾ ಆಲೂಗಡ್ಡೆ ಎಂದು ಹೆಸರಿಸಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಇದರ ಬೆಲೆ 1.50 ಲಕ್ಷದಿಂದ 1.60 ಲಕ್ಷ ಡಾಲರ್. ಅಂದರೆ ಸುಮಾರು 1.43 ರಿಂದ 1.5 ಕೋಟಿ ರೂ. ಸ್ಥಳೀಯರ ಪ್ರಕಾರ ಆ ಜಾಗದಲ್ಲಿ 1 ಕೆಜಿಗಿಂತ ಹೆಚ್ಚು ತೂಕದ ಚಿನ್ನದ ಗಟ್ಟಿ ಸಿಗುವುದು ಅತ್ಯಂತ ಅಪರೂಪ. ಸಾಮಾನ್ಯವಾಗಿ, ಶೋಧನಾ ತಂಡಕ್ಕೆ ಕೆಲವು ಗ್ರಾಂ ಅಥವಾ ಔನ್ಸ್ ಗಳ ಸಣ್ಣ ಚಿನ್ನದ ಕಣ ಮಾತ್ರ ಇಲ್ಲಿ ಸಿಗುತ್ತದೆ. ಕಳೆದ 20 ವರ್ಷಗಳಲ್ಲಿ ಈ ಪ್ರದೇಶದಲ್ಲಿ 1 ಕೆಜಿಗಿಂತ ದೊಡ್ಡ ಚಿನ್ನದ ಗಟ್ಟಿ ಸಿಕ್ಕಿರುವ ಎರಡನೇ ಘಟನೆ ಇದಾಗಿದೆ.


Click it and Unblock the Notifications
