Gaza War: ಗಾಜಾ ನೆಲದಲ್ಲಿ ಅತಿ ಶೀಘ್ರದಲ್ಲೇ ಮಹತ್ವದ ಬದಲಾವಣೆ ಸಾಧ್ಯತೆ
ಗಾಜಾ ಪಟ್ಟಿಯಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ನೋವಿನ ಘಟನೆಗಳು ಸಂಭವಿಸುತ್ತಿದ್ದು, ಇಸ್ರೇಲ್ & ಹಮಾಸ್ ನಡುವಿನ ಯುದ್ಧದಲ್ಲಿ ಗಾಜಾ ಬಡವಾಗಿ ಹೋಗಿದೆ ಎಂಬ ಆರೋಪ ಪದೇ ಪದೇ ಕೇಳಿ ಬರುತ್ತಲೇ ಇದೆ. ಆದರೆ ನಮ್ಮ ಮೇಲೆ ದಾಳಿಗೆ ಬಂದ ಹಮಾಸ್ ಉಗ್ರರಿಗೆ ಸರಿಯಾದ ಪಾಠವನ್ನೇ ನಾವು ಕಲಿಸುತ್ತಿದ್ದೇವೆ ಎಂದು ಇಸ್ರೇಲ್ ಹೇಳುತ್ತಿದೆ. ಹೀಗೆ ಎರಡೂ ಕಡೆ ಪದೇ ಪದೇ ಘರ್ಷಣೆ ನಡೆದು ಯುದ್ಧ ಇನ್ನಷ್ಟು ಜಟಿಲವಾಗುತ್ತಾ ಸಾಗುತ್ತಿದೆ. ಇದನ್ನು ಹೀಗೆ ಬಿಟ್ಟರೆ ಈ ಯುದ್ಧ ಇನ್ನೂ ಹಲವು ವರ್ಷಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂಬ ಆತಂಕ ಮಧ್ಯಪ್ರಾಚ್ಯದ ದೇಶಗಳಲ್ಲಿ ಆವರಿಸಿದೆ. ಆದರೆ ಈಗ ಗಾಜಾ ವಿಚಾರದಲ್ಲಿ ದೊಡ್ಡ ತಿರುವು ಸಿಕ್ಕಿದೆ.
ಗಾಜಾ ಪಟ್ಟಿ ಹಾಗೂ ಇಸ್ರೇಲ್ ನಡುವೆ ತಿಕ್ಕಾಟ ಹೊಸತು ಏನಲ್ಲ, ಹಲವು ವರ್ಷಗಳಿಂದ ಈ ಎರಡು ಕಡೆ ಜಗಳ ಆಗುತ್ತಲೇ ಇತ್ತು. ಆದರೆ ಯಾವಾಗ ಹಮಾಸ್ ಬಂಡುಕೋರರು ನೇರವಾಗಿ ಇಸ್ರೇಲ್ ಒಳಗೆ ನುಗ್ಗಿ ದಾಳಿ ಮಾಡಿದರೋ ಅಲ್ಲಿಂದ ಮುಂದೆ ಪರಿಸ್ಥಿತಿ ಕೈಮೀರಿ ಘೋರ ಯುದ್ಧ ಆರಂಭ ಆಗಿತ್ತು. ಹೀಗಿದ್ದಾಗ ಪರಿಸ್ಥಿತಿ ಸುಧಾರಿಸಲು ಎಲ್ಲಾ ರೀತಿಯ ಪ್ರಯತ್ನವನ್ನು ಅಮೆರಿಕ ಮಾಡುತ್ತಿದೆ. ಹೀಗಿದ್ದರೂ ಅದು ಹಿಡಿತಕ್ಕೆ ಸಿಗುತ್ತಿಲ್ಲ, ಆದರೆ ಈಗ ಎಲ್ಲದಕ್ಕೂ ಒಂದು ಅಂತ್ಯ ಬೀಳುವ ಲಕ್ಷಣ ಕಂಡುಬರುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಚಾರದಲ್ಲಿ ಗಟ್ಟಿ ನಿರ್ಧಾರ ಕೈಗೊಂಡಿದ್ದಾರೆ.

ಶಾಂತಿ ಮಂಡಳಿ ಮೂಲಕ ಪರಿಹಾರ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ ಗಾಜಾ ಯುದ್ಧ ನಿಲ್ಲಿಸಲು ಶಾಂತಿ ಮಂಡಳಿಯ ಸ್ಥಾಪನೆಗೆ ಮುಂದಾಗಿದ್ದಾರೆ. ಇದು ಗಾಜಾ ನೆಲದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವಂತೆ ಮಾಡಲು & ಯುದ್ಧ ನಿಲ್ಲಿಸಲು ಸಹಾಯ ಮಾಡುವ ನಿರೀಕ್ಷೆ ಮೂಡಿಸಿದೆ. ಏಕೆಂದರೆ ಗಾಜಾ ಯುದ್ಧ ಶುರುವಾದ ನಂತರ ಮಧ್ಯಪ್ರಾಚ್ಯ ಮಾತ್ರವಲ್ಲ ಜಗತ್ತಿನಾದ್ಯಂತ ನೆಮ್ಮದಿ ಕೆಡಿಸುವ ಕೆಲಸಗಳು ಆಗುತ್ತಿವೆ. ಗಾಜಾ ಯುದ್ಧ ನಿಲ್ಲಬೇಕು ಎಂಬ ಆಗ್ರಹ ಪದೇ ಪದೇ ಕೇಳಿಬರುತ್ತಲೇ ಇದೆ. ಹೀಗಿದ್ದಾಗ ಟ್ರಂಪ್ ಅವರು, ಶಾಂತಿ ಮಂಡಳಿಯಲ್ಲಿ ಜಗತ್ತಿನ ಘಟಾನುಘಟಿ ದೇಶಗಳನ್ನು ಮುಂದೆ ಇಟ್ಟುಕೊಂಡು ಯುದ್ಧವನ್ನು ನಿಲ್ಲಿಸಲು ಸಜ್ಜಾಗಿದ್ದಾರೆ. ರಷ್ಯಾ ಮತ್ತು ಉಕ್ರೇನ್ ದೇಶಗಳನ್ನು ಕೂಡ ಈ ಮಂಡಳಿಗೆ ಆಹ್ವಾನಿಸಿರುವುದು ಗಮನ ಸೆಳೆಯುತ್ತಿದೆ.
ಜಗತ್ತಿನ ಹಲವು ದೇಶಗಳಿಗೆ ಮಂಡಳಿಯಲ್ಲಿ ಜಾಗ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 'ಗಾಜಾ ಶಾಂತಿ ಮಂಡಳಿ'ಗೆ ಸೇರಲು ಭಾರತವೂ ಸೇರಿ ಅಲ್ಬೇನಿಯಾ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬಹ್ರೇನ್, ಬೆಲಾರಸ್, ಬ್ರೆಜಿಲ್ & ಕೆನಡಾ, ಚೀನಾ, ಸೈಪ್ರಸ್ ಈಜಿಪ್ಟ್, ಯುರೋಪ್ ಒಕ್ಕೂಟ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಹಂಗೇರಿ, ಇಂಡೋನೇಷ್ಯಾ, ಐರ್ಲೆಂಡ್, ಇಸ್ರೇಲ್, ಇಟಲಿ, ಜಪಾನ್, ಜೋರ್ಡಾನ್ ಹಾಗೂ ಕಝಕ್ ದೇಶಗಳ ನಾಯಕರಿಗೆ ಆಹ್ವಾನ ನೀಡಿದ್ದಾರೆ. ಮೊರಾಕೊ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ನಾರ್ವೆ, ಓಮನ್, ಪಾಕಿಸ್ತಾನ, ಪರಾಗ್ವೆ, ಪೋಲೆಂಡ್, ಪೋರ್ಚುಗಲ್, ಕತಾರ್, ರೊಮೇನಿಯಾ, ಸೌದಿ ಅರೇಬಿಯಾ, ಸ್ಲೊವೇನಿಯಾ ದೇಶಗಳನ್ನೂ ಆಹ್ವಾನಿಸಲಾಗಿದೆ. ಇದರ ಜೊತೆ ಇನ್ನೂ ಹಲವು ದೇಶಗಳು ಪಟ್ಟಿಯಲ್ಲಿ ಇವೆ.












Click it and Unblock the Notifications