Israel War: ಕದನ ವಿರಾಮ ಜಾರಿಗೆ; ಗಾಜಾದಲ್ಲಿ ನಿಂತಿತು ಬಾಂಬ್, ಬಂದೂಕು ಸದ್ದು
ಕೊನೆಗೂ ಗಾಜಾದಲ್ಲಿ ಬಂದೂಕು, ಬಾಂಬ್ ಶಬ್ದ ನಿಂತಿದೆ. ಇಸ್ರೇಲ್ ಹಮಾಸ್ ಕದನ ವಿರಾಮ ಘೋಷಣೆಯಾಗಿದ್ದರೂ, ಹಮಾಸ್ ಇಸ್ರೇಲ್‌ನ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ವಿಳಂಬ ಮಾಡಿದ್ದರಿಂದ ಇಸ್ರೇಲ್ ದಾಳಿಯನ್ನು ಮುಂದುವರೆಸಿತ್ತು, ಹಮಾಸ್ ತಡವಾಗಿ ಮೂವರು ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದು ಸದ್ಯ ಕದನ ವಿರಾಮ ಜಾರಿಗೆ ಬಂದಿದೆ.
15 ತಿಂಗಳ ಯುದ್ಧಕ್ಕೆ ಇದೀಗ ವಿರಾಮ ಸಿಕ್ಕಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆದೇಶದ ಮೇರೆಗೆ ಮೂರು ಗಂಟೆಗಳು ತಡವಾಗಿ ಕದನ ವಿರಾಮ ಆರಂಭವಾಗಿದೆ ಎಂದು ಇಸ್ರೇಲ್ ಮಾಹಿತಿ ನೀಡಿದೆ.

ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ತಡ ಮಾಡಿದ್ದರಿಂದ ಇಸ್ರೇಲ್ ಪ್ರಧಾನಿ ನೆತನ್ಯಾಹು ಸಿಟ್ಟಾಗಿದ್ದರು. ಕದನ ವಿರಾಮ ನಿಯಮ ಅವರು ಪಾಲಿಸುವವರೆಗೂ ನಾವು ದಾಳಿ ಮುಂದುವರೆಸುತ್ತೇವೆ ಎಂದು ಹೇಳಿದ್ದರು. ನೆತನ್ಯಾಹು ನಿರ್ದೇಶನದ ಮೇರೆಗೆ ಕದನ ವಿರಾಮದ ಸಮಯದಲ್ಲಿ ಇಸ್ರೇಲ್ ಗಾಜಾದಲ್ಲಿ ತನ್ನ ದಾಳಿಯನ್ನು ಮುಂದುವರೆಸಿತ್ತು.
ಸ್ಥಳೀಯ ಕಾಲಮಾನ ಭಾನುವಾರ ಬೆಳಿಗ್ಗೆ 8.30 ರಿಂದ ಕದನ ವಿರಾಮ ಪ್ರಾರಂಭವಾಗಬೇಕಿತ್ತು. ಕದನ ವಿರಾಮದ ಸಮಯದಲ್ಲೇ ಇಸ್ರೇಲ್ ವೈಮಾನಿಕ ಮತ್ತು ಫಿರಂಗಿ ದಾಳಿ ನಡೆಸಿದ್ದು 13 ಪ್ಯಾಲೆಸ್ತೇನ್ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ಅಲ್ಲಿನ ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.
ತಡವಾದ ಒಪ್ಪಂದ ಅನುಷ್ಠಾನ
ಕದನ ವಿರಾಮ ಪ್ರಾರಂಭವಾಗಲಿ ಒಂದು ಗಂಟೆಗಿಂತ ಕಡಿಮೆ ಸಮಯ ಇರುವಾಗ ಹೇಳಿಕೆ ನೀಡಿದ ಇಸ್ರೇಲ್ ಪ್ರಧಾನಿ ಕಚೇರಿ, ಹಮಾಸ್ ಬಿಡುಗಡೆ ಮಾಡುತ್ತಿರುವ ಒತ್ತೆಯಾಳುಗಳ ಪಟ್ಟಿಯನ್ನು ಸ್ವೀಕರಿಸುವವರೆಗೆ ಕದನ ವಿರಾಮ ಪ್ರಾರಂಭವಾಗುವುದಿಲ್ಲ ಎಂದು ರಕ್ಷಣಾ ಪಡೆಗಳಿಗೆ ಸೂಚಿಸಿದ್ದಾರೆ ಎಂದು ತಿಳಿಸಿತು.
ಇಸ್ರೇಲ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಹಮಾಸ್, ಪಟ್ಟಿಯನ್ನು ಹಂಚಿಕೊಳ್ಳಲು ತಡವಾಗಲು ತಾಂತ್ರಿಕ ಕಾರಣಗಳನ್ನು ನೀಡಿದ್ದಲ್ಲದೆ, ಪ್ರದೇಶದಲ್ಲಿ ಪರಿಸ್ಥಿತಿಗಳು ಮತ್ತು ಇಸ್ರೇಲ್ ದಾಳಿ ಮುಂದುವರೆಸಿದ್ದು ಕಾರಣ ಎಂದು ಹೇಳಿದೆ. ಕದನ ವಿರಾಮ ಆರಂಭದ ಎರಡು ಗಂಟೆಗಳ ಬಳಿಕ ಹಮಾಸ್ ಬಿಡುಗಡೆ ಮಾಡಬೇಕಾದ ಮೂವರು ಇಸ್ರೇಲ್ ಮಹಿಳೆಯರ ಹೆಸರನ್ನು ಪ್ರಕಟಿಸಿತು.
ಗಡುವು ಮುಗಿದ ಎರಡು ಗಂಟೆಗಳ ಬಳಿಕ ಇಸ್ರೇಲ್ ಬಿಡುಗಡೆಯಾಗುತ್ತಿರುವ ಒತ್ತೆಯಾಳುಗಳ ಪಟ್ಟಿಯನ್ನು ಸ್ವೀಕರಿಸಿದ ಬಗ್ಗೆ ದೃಢಪಡಿಸಿತು. ವಿವರಗಳನ್ನು ಪರಿಶೀಲನೆ ಮಾಡಿದ್ದು, ಬೆಳಿಗ್ಗೆ 11.15ಕ್ಕೆ ಕದನ ವಿರಾರ ಪ್ರಾರಂಭವಾಗಲಿದೆ ಎಂದು ದೃಢಪಡಿಸಿತು.
ಹಮಾಸ್ ಭಾನುವಾರ ಬಿಡುಗಡೆ ಮಾಡಬೇಕಿದ್ದ ಒತ್ತೆಯಾಳುಗಳನ್ನು ರೋಮಿ ಗೊನೆನ್, ಡೊರೊನ್ ಸ್ಟೈನ್ಬ್ರೆಚರ್ ಮತ್ತು ಎಮಿಲಿ ಡಮರಿ ಎಂದು ಗುರುತಿಸಿರುವುದಾಗಿ ವರದಿಯಾಗಿದೆ.
ಹಮಾಸ್ ಉಗ್ರರು ಅಕ್ಟೋಬರ್ 7, 2023ರಂದು ಇಸ್ರೇಲ್‌ನ ಮೇಲೆ ದಾಳಿ ಮಾಡಿ 1,200 ಜನರನ್ನು ಗುಂಡಿಕ್ಕಿ ಕೊಂದ ಬಳಿಕ ಯುದ್ಧ ಆರಂಭವಾಯಿತು. ತನ್ನ ದೇಶದ ಜನರ ಸಾವಿನಿಂದ ಕೆರಳಿದ ಇಸ್ರೇಲ್, ಇಡೀ ಗಾಜಾ ಪಟ್ಟಿಯನ್ನು ಇದೀಗ ಅಕ್ಷರಶಃ ಸ್ಮಶಾನದಂತೆ ಮಾಡಿದೆ. ಈವರೆಗೂ ಯುದ್ಧದಲ್ಲಿ ಸುಮಾರು 47,000 ಪ್ಯಾಲೆಸ್ತೀನ್ ಜನರನ್ನು ಕೊಂದಿದೆ ಎಂದು ವರದಿಯಾಗಿದೆ.
ಗಾಜಾ ಇಸ್ರೇಲ್ ನಡುವಿನ ಯುದ್ಧ ಬಳಿಕ ಅಕ್ಕ ಪಕ್ಕದ ಪ್ರದೇಶಗಳಿಗೂ ವ್ಯಾಪಿಸಿತು. ಇರಾನ್, ಹೆಜ್ಬುಲ್ಲಾ ಪಡೆಗಳು, ಹಮಾಸ್‌ಗೆ ಬೆಂಬಲ ನೀಡಿದರೆ, ಅಮೆರಿಕ ಇಸ್ರೇಲ್ ಪರವಾಗಿ ಕಣಕ್ಕಿಳಿಯಿತು. ಕತಾರ್, ಯುನೈಟೆಡ್ ಸ್ಟೇಟ್ಸ್ ಮತ್ತು ಈಜಿಪ್ಟ್ ಮಧ್ಯವರ್ತಿಗಳಾಗಿ ಕೆಲಸ ಮಾಡಿದ್ದು ಕದನ ವಿರಾಮ ಘೋಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆರು ವಾರಗಳು ಕದನ ವಿರಾಮ ಜಾರಿಯಲ್ಲಿರಲಿದೆ.












Click it and Unblock the Notifications