ಇನ್ಮುಂದೆ 16 ವರ್ಷದ ಒಳಗಿನ ಮಕ್ಕಳು ಸೋಷಿಯಲ್ ಮೀಡಿಯಾ ಬಳಸುವಂತಿಲ್ಲ!
Social Media Ban for under-16s: ಇತ್ತೀಚಿನ ದಿನಗಳಲ್ಲಿ ಮಕ್ಕಳು ಸೋಷಿಯಲ್ ಮೀಡಿಯಾ ಬಳಸುವುದು ಹೆಚ್ಚಾಗುತ್ತಿದೆ. ಕೆಲವು ಸಣ್ಣ ಮಕ್ಕಳು ಮೊಬೈಲ್ ಕೊಡದೆ ಇದ್ದರೆ, ಊಟ ಮಾಡುವುದಿಲ್ಲ ಎಂದು ಹಠ ಹಿಡಿಯುವುದು ಇದೆ. ಮಕ್ಕಳ ಕೈಯಿಂದ ಮೊಬೈಲ್ ಕಸಿದುಕೊಂಡರಂತೂ ರಂಪಾಟ ನಡೆಸುತ್ತಾರೆ. ಶಾಲೆಗೆ ಹೋಗುವ ಮಕ್ಕಳು ಬಿಡಿ, ತೊದಲು ನುಡಿ ಕಲಿಯುತ್ತಿರು ಮಕ್ಕಳು ಸಹ ಮೊಬೈಲ್ ಅಡಿಕ್ಷನ್‌ಗೆ ಒಳಗಾಗುತ್ತಿದ್ದು, ಇದನ್ನು ತಪ್ಪಿಸಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ.
16 ವರ್ಷದ ಒಳಗಿನ ಮಕ್ಕಳು ಸೋಷಿಯಲ್ ಮೀಡಿಯಾ ಬಳಸುವಂತಿಲ್ಲ ಎನ್ನುವ ಪ್ರಮುಖ ಕಾನೂನನ್ನು ಜಾರಿ ಮಾಡಲು ಆಸ್ಟ್ರೇಲಿಯಾ ಮುಂದಾಗಿದೆ. ಆಸ್ಟ್ರೇಲಿಯಾದ ಈ ನಿರ್ಧಾರ ವಿಶ್ವದಲ್ಲೇ ಮೊದಲು ಎನ್ನಲಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಎಲ್ಲಾ 16 ವರ್ಷಕ್ಕಿಂತ ಕಡಿಮೆ ಇರವ ಮಕ್ಕಳು ಯಾವುದೇ ಸೋಷಿಯಲ್ ಮೀಡಿಯಾ ಬಳಸುವಂತಿಲ್ಲ ಎನ್ನುವ ಕಾನೂನನ್ನು ಜಾರಿ ಮಾಡಲಾಗ್ತಿದೆ.

16 ವರ್ಷದೊಳಗಿನ ಎಲ್ಲಾ ಮಕ್ಕಳು ಸಾಮಾಜಿಕ ಮಾಧ್ಯಮ (ಸೋಷಿಯಲ್ ಮೀಡಿಯಾ) ಬಳಕೆಯನ್ನು ನಿಷೇಧಿಸುವ ನಿಟ್ಟಿನಲ್ಲಿ ಕಾನೂನು ಜಾರಿ ಮಾಡ್ತಿದೆ ಆಸ್ಟ್ರೇಲಿಯಾ. ಆಸ್ಟ್ರೇಲಿಯಾದಲ್ಲಿ ಇನ್ಮುಂದೆ ಎಲ್ಲಾ ಮಾದರಿಯ ಸೋಷಿಯಲ್ ಮೀಡಿಯಾ ಬಳಕೆ 16 ವರ್ಷದ ಒಳಗಿನ ಮಕ್ಕಳಿಗೆ ಬ್ಯಾನ್ ಆಗಲಿದೆ. ಅದರಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಟಿಕ್‌ಟಾಕ್‌ನಂತಹ ಪ್ಲಾಟ್‌ಫಾರ್ಮ್‌ಗಳು ಸೇರಿವೆ. ಒಂದೊಮ್ಮೆ 16 ವರ್ಷದ ಒಳಗಿನ ಮಕ್ಕಳು ಇದನ್ನು ಬಳಸಿದರೆ, ದಂಡ ಪಾವತಿ ಮಾಡಬೇಕಾಗುತ್ತದೆ ಎನ್ನುವ ಅಂಶವೂ ಇದರಲ್ಲಿ ಇರಲಿದೆ ಎನ್ನಲಾಗಿದೆ.
16 ವರ್ಷದ ಒಳಗಿನ ಮಕ್ಕಳು ಸೋಷಿಯಲ್ ಮೀಡಿಯಾವನ್ನು ಬಳಸುವುದರಿಂದ ಅವರ ದೈಹಿಕ ಹಾಗೂ ಮಾಸಿಕ ಆರೋಗ್ಯದ ಮೇಲೆ ಹೆಚ್ಚು ನೆಗೆಟಿವ್ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವುದಾಗಿ ಆಸ್ಟ್ರೇಲಿಯಾ ಸರ್ಕಾರ ಹೇಳಿದೆ. ಮುಂದಿನ ವಾರ ಈ ಪ್ರಸ್ತಾವಿತ ಕಾನೂನನ್ನು ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಮಂಡಿಸುವುದಾಗಿ ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಟೋನಿ ಆಲ್ಬನೀಸ್ ಅವರು ಹೇಳಿದ್ದಾರೆ.
ಆಸ್ಟ್ರೇಲಿಯಾದ ಮಕ್ಕಳ ಮೇಲೆ ಸೋಷಿಯಲ್ ಮೀಡಿಯಾಗಳ ಬಳಕೆಯಿಂದ ಆಗುವ ಹಾನಿಯನ್ನು ತಪ್ಪಿಸುವ ಉದ್ದೇಶದಿಂದ ಈ ಕಾನೂನನ್ನು ಜಾರಿ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ. ಈ ನಿರ್ಧಾರ ಆಸ್ಟ್ರೇಲಿಯಾದ ಅಪ್ಪ ಹಾಗೂ ಅಮ್ಮಂದಿರಿಗಾಗಿ, ಅವರು ಸಹ ನನ್ನಂತೆಯೇ ಆನ್‌ಲೈನ್‌ನಲ್ಲಿ ನಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಚಿಂತಿಸುತ್ತಾರೆ. ನಮ್ಮ ಸರ್ಕಾರವು ಮಕ್ಕಳ ಪರವಾಗಿ ಚಿಂತಿಸುತ್ತಿದೆ. ಆಸ್ಟ್ರೇಲಿಯಾದ ಕುಟುಂಬಗಳು ಈ ಕಾಳಜಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಇನ್ನು ಆಸ್ಟ್ರೇಲಿಯಾದ ನೂತನ ಕಾನೂನು ಜಾರಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಹೀಗಾಗಿ, ಈಗಾಗಲೇ ಯಾರಾದರೂ 16 ವರ್ಷದ ಒಳಗಿನ ಮಕ್ಕಳು ಸೋಷಿಯಲ್ ಮೀಡಿಯಾ ಬಳಕೆ ಮಾಡುತ್ತಿದ್ದರೆ ಈ ಕಾನೂನು ಅವರಿಗೆ ಅನ್ವಯಿಸುವುದಿಲ್ಲ ಎಂದು ಹೇಳಲಾಗಿದೆ. ಆಸ್ಟ್ರೇಲಿಯಾದ ಈ ನಿರ್ಧಾರಕ್ಕೆ ವಿಶ್ವದ ಎಲ್ಲಾ ದೇಶಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಮಿಶ್ರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಭಾರತದಲ್ಲೂ ಈ ರೀತಿಯ ಕಾನೂನು ಜಾರಿಯಾಗಬೇಕು ಎಂದು ಹಲವು ಭಾರತೀಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications