ಲಡಾಖ್ ಆಯ್ತು ಈಗ ಜಪಾನ್‌ನಲ್ಲಿ ಚೀನಾ ಸೇನೆಯ ವರಸೆ ಶುರು
ನವದೆಹಲಿ, ಜುಲೈ 20: ಲಡಾಖ್ ಆಯ್ತು ಇದೀಗ ಜಪಾನ್‌ನಲ್ಲಿ ಚೀನಾ ಸೇನೆ ತನ್ನ ವರಸೆ ಆರಂಭಿಸಿದೆ. ಪೂರ್ವ ಚೀನಾ ಮಹಾಸಾಗರದ ಸೆಂಕಾಕು ದ್ವೀಪ ಪ್ರದೇಶದಲ್ಲಿ ಜಪಾನ್ ಮೀನುಗಾರರ ಬೋಟುಗಳು ಅತಿಕ್ರಮಣ ಮಾಡುತ್ತಿರುವುದಾಗಿ ಆರೋಪಿಸುವ ಮೂಲಕ ಈ ಪ್ರದೇಶದಲ್ಲಿ ಅತಿಕ್ರಮಣ ನಡೆಸಲು ಚೀನಾ ಮುಂದಾಗಿದೆ.
ಸೆಂಕಾಕು ದ್ವೀಪ ಸಮೂಹದ ಸುತ್ತ 5ಕ್ಕೂ ಹೆಚ್ಚು ಜನವಸತಿ ಇಲ್ಲದ ದ್ವೀಪಗಳಿವೆ. ಇದರ ಸುತ್ತ 7 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಮೂರು ಬೃಹತ್ ಬಂಡೆಗಳಿವೆ. ಇವೆಲ್ಲವನ್ನೂ ತನ್ನದಾಗಿಸಿಕೊಳ್ಳುವುದು ಚೀನಾದ ಗುರಿಯಾಗಿದೆ.
ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಜಪಾನ್ನ ಮಿಲಿಟರಿ ಉಪಸ್ಥಿತಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಚೀನಾ, ಇದೀಗ ಮೀನುಗಾರಿಕಾ ಬೋಟುಗಳ ಸಂಚಾರಕ್ಕೂ ಆಕ್ಷೇಪ ವ್ಯಕ್ತಪಡಿಸಲಾರಂಭಿಸಿದೆ.

ಸೆಂಕಾಕು ಜಪಾನ್ನ ಭಾಗವಾಗಿದ್ದು ಈ ಪ್ರದೇಶಕ್ಕೆ ಟೊನೊಶಿರೊ ಸೆಂಕಾಕು ಎಂದು ದ್ವೀಪ ಸಮೂಹಕ್ಕೆ ಮರುನಾಮಕರಣ ಮಾಡಲು ಇಶಿಗಾಕಿ ನಗರಾಡಳಿತ ನಿರ್ಣಯ ಕೈಗೊಂಡಿತ್ತು. ಇದಕ್ಕೂ ಆಕ್ಷೇಪ ವ್ಯಕ್ತಪಡಿಸಿರುವ ಚೀನಾ, ಆ ನಿರ್ಣಯವನ್ನು ಕೈಬಿಡುವಂತೆ ಇಶಿಗಾಕಿ ನಗರಾಡಳಿತಕ್ಕೆ ಸೂಚಿಸುವಂತೆ ಜಪಾನ್ ಸರ್ಕಾರಕ್ಕೆ ಸೂಚಿಸಿತ್ತು. ಆದರೆ ಅದಕ್ಕೆ ಕವಡೆಕಾಸಿನ ಕಿಮ್ಮತ್ತೂ ಕೊಡದ ಜಪಾನ್ ಆ ಸೂಚನೆಯನ್ನು ಕಸದಬುಟ್ಟಿಗೆ ರವಾನಿಸಿದೆ.
ಲಡಾಖ್ ವಿಷಯದಲ್ಲೂ ಚೀನಾ 20 ವರ್ಷಗಳಿಂದಲೂ ಇದೇ ತಂತ್ರಗಾರಿಕೆಯನ್ನು ಅನುಸರಿಸುತ್ತಿದೆ. ಆದರೆ, ಕೆಲದಿನಗಳ ಹಿಂದೆ ಮತ್ತೊಮ್ಮೆ ಆ ನಿಟ್ಟಿನಲ್ಲಿ ಅದು ಮಾಡಿದ ಪ್ರಯತ್ನಕ್ಕೆ ಜಾಗತಿಕವಾಗಿ ವಿರೋಧ ವ್ಯಕ್ತವಾಗಿದ್ದರಿಂದ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಈ ವಿಷಯವಾಗಿ ಅಮೆರಿಕವಂತೂ ಚೀನಾವನ್ನು ಲೇವಡಿ ಮಾಡಿದೆ.
2002ರ ಜೂನ್ 17ರಂದು ಭಾರತ ಮತ್ತು ಚೀನಾದ ತಜ್ಞರ ಸಮೂಹದ ಸಭೆ ನಡೆದಿತ್ತು. ಈ ಸಭೆಯಲ್ಲಿ ವಾಸ್ತವ ಗಡಿರೇಖೆ ಕುರಿತ ನಕ್ಷೆಯನ್ನು ಮಂಡಿಸಿದ್ದ ಭಾರತ, ಎಲ್ಎಸಿ ಕುರಿತು ಚೀನಾಕ್ಕಿರುವ ತಪ್ಪುಕಲ್ಪನೆಯನ್ನು ಪರಿಹರಿಸಲು ಮುಂದಾಗಿತ್ತು.
ಈ ನಕ್ಷೆಯನ್ನು ಸ್ವೀಕರಿಸಲು ನಿರಾಕರಿಸಿದ್ದ ಚೀನಾದ ತಜ್ಞರು ತಕರಾರನ್ನು ಮುಂದುವರಿಸಿದ್ದರು. ಅಲ್ಲದೆ, ಈ ಕುರಿತು ತಮ್ಮದೇ ಆದ ವಾದವನ್ನು ಮಂಡಿಸಿದ್ದರು. ಅಲ್ಲದೆ, ಆ ಸಂದರ್ಭದಲ್ಲಿ ಗೋಗ್ರಾ ಮತ್ತು ಪ್ಯಾಂಗಾಂಗ್ ಸರೋವರದ ಏಣುಗಳ ಬಗ್ಗೆ ಚೀನಾ ಯಾವುದೇ ಬೇಡಿಕೆ ಇಟ್ಟಿರಲಿಲ್ಲ ಎನ್ನಲಾಗಿದೆ.
ಆದರೆ ಮುಂದಿನ 18 ವರ್ಷಗಳಲ್ಲಿ ಅದು ಇಂಚಿಂಚಾಗಿ ಭಾರತದ ಭೂಮಿಯನ್ನು ಅತಿಕ್ರಮಿಸುತ್ತಾ, ಇದೀಗ ಗೋಗ್ರಾ ಮತ್ತು ಪ್ಯಾಂಗಾಂಗ್ ಸರೋವರದ ಏಣುಗಳವರೆಗಿನ ಪ್ರದೇಶ ತನ್ನದೆಂದು ಪ್ರತಿಪಾದಿಸಲು ಆರಂಭಿಸಿದೆ.
ವಾಸ್ತವ ಗಡಿರೇಖೆ ಸುತ್ತ ಭಾರತ ಮೂಲಸೌಕರ್ಯ ಸುಧಾರಣೆಗೆ ಮುಂದಾಗುತ್ತಿರುವಂತೆ ಎಚ್ಚೆತ್ತುಕೊಂಡ ಚೀನಾ, ಆಯಕಟ್ಟಿನ ಭಾಗ ಭಾರತದ ಪಾಲಾದರೆ, ಅದಕ್ಕೆ ಮೇಲುಗೈ ಒದಗುತ್ತದೆ ಎಂಬ ಕಾರಣ ಇಟ್ಟುಕೊಂಡು ಈ ಪ್ರದೇಶಗಳನ್ನು ತನ್ನದೆಂದು ಪ್ರತಿಪಾದಿಸಲು ಆರಂಭಿಸಿದೆ.












Click it and Unblock the Notifications