ಜನರನ್ನು ಗಲಿಬಿಲಿಗೊಳಿಸಿದ ಭೂಕಂಪದ ಸುಳ್ಳು ಸುದ್ದಿ
ಲಾಸ್ ಏಂಜಲಿಸ್, ಜೂನ್ 22 : ಹೆಚ್ಚಾಗಿ ಭಾರತೀಯರು ವಾಸಿಸುತ್ತಿರುವ ಸಾಂತಾ ಬಾರ್ಬರಾದಲ್ಲಿ 6.8 ಪ್ರಮಾಣದ ಭಾರೀ ಭೂಕಂಪ ಸಂಭವಿಸಿದೆ ಎಂದು ಎಚ್ಚರಿಕೆಯ ಸಂದೇಶ ರವಾನೆಯಾದಾಗ ಜನರೆಲ್ಲರೂ ಸಹಜವಾಗಿ ಗಾಬರಿಯಾದರು.
ಹೌದಾ, ಯಾವಾಗಾಯ್ತು, ನನಗೇನೂ ಗೊತ್ತಾಗಲೇ ಇಲ್ಲ ಎಂಬಿತ್ಯಾದಿ ಮಾತುಗಳು ಜನರಿಂದ ಹರಿದಾಡಲು ಪ್ರಾರಂಭಿಸಿದವು. ಆದರೆ, ಆಗಿದ್ದೇನೆಂದರೆ, ನಿಜವಾಗಿಯೂ ಆ ಪ್ರಮಾಣದ ಭೂಕಂಪ ಸಂಭವಿಸಿಯೇ ಇಲ್ಲ.
ಈ ಭೂಕಂಪ ಸಂಭವಿಸಿದ್ದು 92 ವರ್ಷಗಳ ಹಿಂದೆ, 1925ರಲ್ಲಿ, ಅದೇ ಸಾಂತಾ ಬಾರ್ಬರಾದಲ್ಲಿ. ಆದರೆ, ಈಗೇಕೆ ಎಚ್ಚರಿಕೆಯ ಸಂದೇಶ ರವಾನೆಯಾಯಿತು ಎಂಬುದರ ಹಿಂದೆ ಸ್ವಾರಸ್ಯಕರ ಸಂಗತಿಯಿದೆ.

1925ರಲ್ಲಿ ಸಾಂತಾ ಬಾರ್ಬರಾದಲ್ಲಿ 6.8 ಪ್ರಮಾಣದ ಭೂಕಂಪವಾಗಿದ್ದೇನೋ ನಿಜ. ಆಗ ಸಾಕಷ್ಟು ಹಾನಿಯೂ ಸಂಭವಿಸಿತ್ತು. ಆದರೆ, ದಾಖಲಾಗಿದ್ದ ಭೂಕಂಪನ ಕೇಂದ್ರಬಿಂದು ನಿಖರವಾಗಿ ಅದೇ ಆಗಿರಲಿಲ್ಲ. ದಾಖಲಾಗಿದ್ದ ಸ್ಥಳದಿಂದ 6 ಮೈಲಿ ದೂರದಲ್ಲಿತ್ತು.
ಈ ತಪ್ಪನ್ನು ಸರಿಮಾಡುವ ಉದ್ದೇಶದಿಂದ ಕ್ಯಾಲ್ ಟೆಕ್ ಉದ್ಯೋಗಿಯೊಬ್ಬರು ಯತ್ನಿಸುತ್ತಿದ್ದಾಗ, 92 ವರ್ಷದ ಹಿಂದೆ ಸಂಭವಿಸಿದ್ದ ಭೂಕಂಪದ ಎಚ್ಚರಿಕೆಯ ಸಂದೇಶ ಅಕಸ್ಮಾತಾಗಿ ಅಲ್ಲಿಯ ಕಾಲಮಾನ ಬುಧವಾರ ಸಂಜೆ 4.51ಕ್ಕೆ ರವಾನೆಯಾಗಿದೆ.
ಇಂಥ ಪ್ರಮಾದ ಸಂಭವಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಸಿಬ್ಬಂದಿ, ಇದು ಕಣ್ತಪ್ಪಿನಿಂದ ಆದದ್ದು ಎಂದು ಸ್ಪಷ್ಟೀಕರಣ ನೀಡಿದೆ. ಸಿಬ್ಬಂದಿ ಕಳಿಸಿದ ಈಮೇಲ್ ಅಮೆರಿಕ ಭೂಗರ್ಭಶಾಸ್ತ್ರ ಇಲಾಖೆಗೆ ಹೋಗಿದೆ. ಅದರಲ್ಲಿ ಕೂಡ ತಪ್ಪಿದೆ. 2025ರಲ್ಲಿ ಭೂಕಂಪ ಸಂಭವಿಸಿದೆ ಎಂದಿದೆ. ಸಾಫ್ಟ್ ವೇರ್ ಕೈಕೊಟ್ಟರೆ ಏನೇನು ಅನಾಹುತಗಳಾಗುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.












Click it and Unblock the Notifications