ರಷ್ಯಾದಿಂದ ಉಕ್ರೇನ್ ಅಧಿಕಾರಿಗಳ ಫೇಸ್‌ಬುಕ್ ಖಾತೆ ಹ್ಯಾಕ್
ಮಾಸ್ಕೋ, ಫೆಬ್ರವರಿ 28: ರಷ್ಯಾವು ಉಕ್ರೇನ್ ಅಧಿಕಾರಿಗಳ ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿದೆ ಎನ್ನುವ ವಿಷಯ ತಿಳಿದುಬಂದಿದೆ.
ಇಂದು ಬಿಡುಗಡೆಯಾದ ಬ್ಲಾಗ್‌ನಲ್ಲಿ ಗೋಸ್ಟ್ ರೈಡರ್ಸ್ ಎಂಬ ಗುಂಪಿನಿಂದ ಹ್ಯಾಕಿಂಗ್ ಮಾಡಲು ಯತ್ನಿಸಲಾಗಿದೆ. ಈ ಗ್ರೂಪ್ ಸಾಮಾಜಿಕ ಮಾಧ್ಯಮ ಅಕೌಂಟ್ ಗಳಿಗೆ ಪ್ರವೇಶ ಪಡೆದುಕೊಂಡು ಉಕ್ರೇನಿಯನ್ ಸೇನೆ ದುರ್ಬಲವಾಗಿದೆ ಎಂದು ತೋರಿಸಲು ಪ್ರಯತ್ನಿಸಿದೆ.
ಇದಕ್ಕಾಗಿ ಉಕ್ರೇನ್ ಸೇನೆ ಕಾಡಿನಿಂದ ಹೊರಬರುತ್ತಿರುವ ಹಾಗೂ ಬಿಳಿ ಧ್ವಜಗಳನ್ನು ಪ್ರದರ್ಶನ ಮಾಡುತ್ತಿರುವ ಯ್ಯುಟ್ಯೂಬ್ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲು ಹ್ಯಾಕರ್ ಗಳು ಪ್ರಯತ್ನಿಸಿದರು ಎಂದು ಮೆಟಾ ತಿಳಿಸಿದೆ.

ಫೇಸ್ ಬುಕ್ ಅನ್ನು ಹ್ಯಾಕ್ ಮಾಡಲು ರಷ್ಯಾ ಪ್ರಯತ್ನಿಸುತ್ತಿದೆ ಮೆಟಾ ಪತ್ತೆ ಹಚ್ಚಿದೆ. ಉಕ್ರೇನಿಯನ್ ಮಿಲಿಟರಿ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಪತ್ರಕರ್ತರನ್ನು ಗುರಿಯಾಗಿಸಲು ಫೇಸ್‌ಬುಕ್ ಅನ್ನು ಬಳಸಲಾಗಿದೆ ಎಂದು ಮೆಟಾ ತಿಳಿಸಿದೆ.
ಈ ಖಾತೆಗಳು ರಷ್ಯಾ ಮತ್ತು ಉಕ್ರೇನ್‌ನಿಂದ ಕಾರ್ಯನಿರ್ವಹಿಸುತ್ತಿದ್ದು, ಉಕ್ರೇನಿಯನ್ ಮಿಲಿಟರಿ ವ್ಯಕ್ತಿಗಳು, ರಾಜಕಾರಣಿಗಳು ಮತ್ತು ಇತರ ಸಾರ್ವಜನಿಕ ವ್ಯಕ್ತಿಗಳಿಂದ ಮಾಹಿತಿ ಕದಿಯಲಾಗುತ್ತಿದೆ ಎಂದು ತಿಳಿಸಿದೆ.
ಕಳೆದ 48 ಗಂಟೆಗಳಲ್ಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಿಂದ 40 ನಕಲಿ ಖಾತೆ, ಗ್ರೂಪ್ ಮತ್ತು ಪೇಜ್‌ಗಳ ನೆಟ್‌ವರ್ಕ್‌ಗಳನ್ನು ತೆಗೆದುಹಾಕಲಾಗಿದೆ ಎಂದು ಫೇಸ್‌ಬುಕ್‌ನ ಮೂಲ ಕಂಪನಿ ಮೆಟಾ ಹೇಳಿದೆ.
ಬೆಲಾರಸ್‌ನ ಹ್ಯಾಕರ್‌ಗಳು ಉಕ್ರೇನಿಯನ್ ಮಿಲಿಟರಿ ಅಧಿಕಾರಿಗಳು ಮತ್ತು ಅವರೊಂದಿಗೆ ಸಂಪರ್ಕದಲ್ಲಿರುವ ಜನರ ವೈಯಕ್ತಿಕ ಇಮೇಲ್‌ಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಉಕ್ರೇನ್ ಸೈಬರ್ ಭದ್ರತಾ ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದರು. ಈ ಗುಂಪಿನ ಕೋಡ್ ಹೆಸರನ್ನು UNC1151 ಎಂದು ನೀಡಲಾಗಿದೆ.
ಟ್ವಿಟರ್ ಕೂಡ ಇಂತಹುದೇ ಹೆಜ್ಜೆ ಇರಿಸಿದ್ದು, ಸೋಷಿಯಲ್ ಮೀಡಿಯಾದ ನಿಯಮ ಅನುಸರಿಸದ ಸುಮಾರು ಒಂದು ಡಜನ್ ಖಾತೆಗಳನ್ನು ಟ್ವಿಟರ್‌ನಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದೆ.
ಈ ಎಲ್ಲಾ ಹ್ಯಾಕಿಂಗ್ ಖಾತೆಗಳು ರಷ್ಯಾದಿಂದ ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ, ಉಕ್ರೇನ್‌ನಲ್ಲಿ ಸಾರ್ವಜನಿಕ ಸಂಭಾಷಣೆಗಳನ್ನು ಅಡ್ಡಿಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಟ್ವಿಟ್ಟರ್ ವಕ್ತಾರರು ತಿಳಿಸಿದ್ದಾರೆ.
ಅಮೆರಿಕ ಸೈಬರ್ ಸೆಕ್ಯುರಿಟಿ ಸಂಸ್ಥೆ ಫೈರ್ ಐ, ತನಿಖೆ ವೇಳೆ ಈ ಗುಂಪನ್ನು ಗೋಸ್ಟ್ ರೈಡರ್ ನ ಚಟುವಟಿಕೆಗೆ ಲಿಂಕ್ ಮಾಡಿತ್ತು. ಮೆಟಾದ ಭದ್ರತಾ ತಂಡ ಉಕ್ರೇನ್ ಅಧಿಕಾರಿಗಳ ಖಾತೆ ಸುರಕ್ಷಿತಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಅಲ್ಲದೆ, ಫಿಶಿಂಗ್ ಡೊಮೇನ್‌ಗಳನ್ನು ನಿರ್ಬಂಧಿಸಿದ್ದಾರೆ ಎಂದು ತಿಳಿಸಿದ್ದು, ಯಾವುದೇ ಉದ್ದೇಶಿತ ಬಳಕೆದಾರರ ಮಾಹಿತಿಯನ್ನು ಮೆಟಾ ಹಂಚಿಕೊಂಡಿಲ್ಲ.











Click it and Unblock the Notifications