10 ಸಾವಿರಕ್ಕೂ ಹೆಚ್ಚು ಇಮ್ರಾನ್ ಖಾನ್ ಬೆಂಬಲಿಗರು ಅಂದರ್: ಯಾಕೆ?
ಅದೇನೋ ಇಮ್ರಾನ್ ಖಾನ್ ಹಣೆಬರಹ ಸರಿ ಇಲ್ಲ ಅಂತಾ ಕಾಣುತ್ತೆ, ಯಾಕಂದ್ರೆ ಒಂದು ಕಾಲದಲ್ಲಿ ಇಡೀ ಜಾಗತಿಕ ಕ್ರಿಕೆಟ್ ಸ್ಟಾರ್ ಆಗಿ ಮೆರೆದಿದ್ದ ಈ ಆಟಗಾರ ಈಗ ಕಂಬಿಯನ್ನ ಎಣಿಸುತ್ತಿದ್ದಾರೆ. ಪಾಕಿಸ್ತಾನ ಪ್ರಧಾನಿ ಆಗಿದ್ದವರು ಆ ಪಟ್ಟ ಕಳೆದುಕೊಂಡು ನರಳಿದ್ದಾರೆ. ಇದು ಸಾಲದು ಎಂಬಂತೆ ಈಗ ಇಮ್ರಾನ್ ಬೆಂಬಲಿಗರ ಹಣೆಬರಹ ಬದಲಾಗಿ ಹೋಗಿದ್ದು, ದಿಢೀರ್ 60ಕ್ಕೂ ಹೆಚ್ಚು ಇಮ್ರಾನ್ ಖಾನ್ ಬೆಂಬಲಿಗರನ್ನ ಜೈಲಿಗೆ ತಳ್ಳಿದ್ದಾರೆ ಪೊಲೀಸರು.
ಮೇ 9ರಂದು ಇಮ್ರಾನ್ ಅರೆಸ್ಟ್ ಆದ ನಂತರ ಪಾಕ್ ಸೇನಾ ನೆಲೆಗಳ ಮೇಲೆ ದಾಳಿ ಆಗಿತ್ತು. ಆಗ ಪಾಕಿಸ್ತಾನ ಸೇನೆಗೆ ಸೇರಿದ್ದ ಕಂಪ್ಯೂಟರ್, ಡಾಟಾ ಹಾಗೇ ಸೇನಾ ವಸ್ತುಗಳನ್ನ ನಾಶ ಮಾಡಿದ ಆರೋಪ ಹಿನ್ನೆಲೆ ಇಮ್ರಾನ್ ಖಾನ್ ಬೆಂಬಲಿಗರು ಅರೆಸ್ಟ್ ಆಗಿದ್ದಾರೆ. ಗಲಾಟೆ ಮಾಡಿದವರಿಗು ಉಗ್ರರ ಪಟ್ಟವನ್ನು ಕಟ್ಟಲಾಗಿದೆ. ಇದೇ ಆರೋಪದ ಹಿನ್ನೆಲೆ ಇಮ್ರಾನ್ ಖಾನ್ ಪಕ್ಷದ ಹಲವು ನಾಯಕರು ಅರೆಸ್ಟ್ ಆಗಿದ್ದಾರೆ. ಇದರ ಜೊತೆಗೆ ದಿಢೀರ್ ಮತ್ತಷ್ಟು ಜನರನ್ನು ಒಳಗೆ ತಳ್ಳಿ ಶಾಕ್ ಕೊಟ್ಟಿದೆ ಪಾಕಿಸ್ತಾನದ ಹಂಗಾಮಿ ಸರ್ಕಾರ.

ಚುನಾವಣೆ ಸಮಯದಲ್ಲಿ ಖೆಡ್ಡಾ?
ಇಮ್ರಾನ್ ಖಾನ್‌ಗೆ ಸಿಕ್ಕಾಪಟ್ಟೆ ಬೆಂಬಲಿಗರು ಇದ್ದು ಹೀಗಾಗಿ ಮತ್ತೊಮ್ಮೆ ಇಮ್ರಾನ್ ಆಯ್ಕೆ ಆಗಿ, ಅಧಿಕಾರಕ್ಕೆ ಬಂದ್ರೆ ಶತ್ರುಗಳ ಕಥೆ ಮುಗಿದಂತೆ. ಇದೆ ಕಾರಣಕ್ಕೆ ಇಮ್ರಾನ್ ಅವರನ್ನ ಹೊರಗೆ ಬರದಂತೆ ಏನು ಬೇಕೋ ಅದನ್ನ ಮಾಡ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಇಮ್ರಾನ್ ಮಾತ್ರವಲ್ಲ, ಇಮ್ರಾನ್ ಖಾನ್ ಕಟ್ಟಿದ್ದ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ)ನ ಕಾರ್ಯಕರ್ತರು ಕೂಡ ಜೈಲು ಸೇರಿದ್ದಾರೆ. ಇನ್ನು ಇದೀಗ ದಿಢೀರ್, 60ಕ್ಕೂ ಹೆಚ್ಚು ಪಿಟಿಐ ಕಾರ್ಯಕರ್ತರನ್ನು ಪೊಲೀಸ್ ಪಡೆ ಬಂಧಿಸಿದೆ. ಇವರೂ ಸೇರಿ, ಸಾವಿರಾರು ಪಿಟಿಐ ಕಾರ್ಯಕರ್ತರು ಇದೀಗ ಕಂಬಿ ಎಣಿಸುತ್ತಿದ್ದಾರೆ.
ಪಿಟಿಐ ನಾಯಕರ ಆರೋಪ ಏನು?
ಪಾಕಿಸ್ತಾನದಲ್ಲಿ ಇಮ್ರಾನ್ ಬೆಂಬಲಿಗರು ಮೊದಲ ಟಾರ್ಗೆಟ್, ಅದರಲ್ಲೂ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆ ನಂತರ ಪಿಟಿಐ ನಾಯಕರು ಮತ್ತು ಕಾರ್ಯಕರ್ತರ ವಿರುದ್ಧ ಪೊಲೀಸ್ ಕ್ರಮ ಹೆಚ್ಚಾಗಿದೆ ಎಂಬ ಆರೋಪ ಕೇಳಿಬಂದಿದೆ. ಮೇ ತಿಂಗಳಿಂದ ಇಲ್ಲಿಯವರೆಗೆ ಪಿಟಿಐನ ಮುಖಂಡರೂ ಸೇರಿ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಕಂಬಿ ಹಿಂದೆ ಬಿದ್ದು ಒದ್ದಾಡುತ್ತಿದ್ದಾರೆ. ಮತ್ತೊಂದ್ಕಡೆ 2024ರ ಫೆಬ್ರವರಿ 8 ಕ್ಕೆ ಪಾಕಿಸ್ತಾನ ಸಂಸತ್‌ಗೆ ಚುನಾವಣೆ ಫಿಕ್ಸ್ ಆಗಿದೆ.

ಸಂಸತ್ ಚುನಾವಣೆ ಯಾವಾಗ ನಡೆಯುತ್ತೆ?
ಪಾಕಿಸ್ತಾನ ಲೋಕಸಭೆ ಸದಸ್ಯ ಬಲ 342, ಭಾರತದಂತೆ ಪಾಕ್‌ನಲ್ಲೂ 5 ವರ್ಷ ಅಧಿಕಾರವಧಿ ಇರುತ್ತದೆ. ಈ ಅವಧಿ ಇದೇ ಆಗಸ್ಟ್ 12ಕ್ಕೆ ಕೊನೆಯಾಗಿತ್ತು. ಆದರೆ ಈ ಅವಧಿ ಪೂರ್ಣವಾಗುವ ಮೊದಲು ಅಂದರೆ, ಆಗಸ್ಟ್ 9ಕ್ಕೆ ಪಾಕ್ ಸಂಸತ್ ವಿಸರ್ಜನೆಗೆ ಶಿಫಾರಸು ಕಳುಹಿಸಿದ್ದರು ಪಾಕ್‌ನ ಅಂದಿನ ಪ್ರಧಾನಿ. ಹೀಗೆ ಪ್ರಧಾನಿ ಶಿಫಾರಸು ಹಿನ್ನೆಲೆ ಪಾಕ್ ಸಂಸತ್ ವಿಸರ್ಜನೆ ಮಾಡ್ಲಾಗಿತ್ತು. ಇದೀಗ ಚುನಾವಣೆಗೆ ಸಕಲ ಸಿದ್ಧತೆ ನಡೆಸಲಾಗಿದ್ದು, 2024ರ ಫೆಬ್ರವರಿ 8 ಕ್ಕೆ ಮತದಾನ ಕೂಡ ನಡೆಯಲಿದೆ. ಈ ಸಮಯದಲ್ಲಿ ಇಮ್ರಾನ್ ಖಾನ್ ಭವಿಷ್ಯದ ಬಗ್ಗೆ ಅವರ ಬೆಂಬಲಿಗರಲ್ಲೇ ಗೊಂದಲ ಶುರುವಾಗಿದೆ.
ಮೈತ್ರಿ ಮಾಡಿಕೊಂಡ ಮಾಜಿ ಪ್ರಧಾನಿ!
ಒಂದು ಕಡೆ ಇಮ್ರಾನ್ ಜೈಲಿನಲ್ಲಿ ಒದ್ದಾಡುವ ಸಮಯದಲ್ಲೇ, ಮತ್ತೊಂದ್ಕಡೆ ಪಾಕ್ ಈಗ ಹಲವು ಬದಲಾವಣೆಗೆ ಸಾಕ್ಷಿಯಾಗಿದೆ. ಜೊತೆಗೆ ಮೈತ್ರಿ ರಾಜಕೀಯ ಬಲು ಜೋರಾಗುತ್ತಿದೆ. ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ & ಮುತ್ತಾಹಿದಾ ಕೌಮಿ ಮೂವ್‌ಮೆಂಟ್ ಪಾಕಿಸ್ತಾನ್ ಮಧ್ಯೆ ಮೈತ್ರಿಗೆ ಮೊದಲು ಹಲವು ಸುತ್ತಿನ ಚರ್ಚೆ ನಡೆದು, ಎರಡೂ ಪಕ್ಷಗಳು ಒಂದಾಗಿವೆ. ಮಾಜಿ ಪ್ರಧಾನಿ ನವಾಜ್ ಷರೀಫ್ & ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮಧ್ಯೆ ಫೋನ್ ಮೂಲಕ ಈ ಬಗ್ಗೆ ಚರ್ಚೆ ನಡೆದಿತ್ತು.
ಹೀಗೆ ಮಾತುಕತೆ ನಡೆದ ನಂತರ, ಪಿಎಂಎಲ್-ಎನ್ & ಎಂಕ್ಯುಎಂ-ಪಿ ವರಿಷ್ಠರಾದ ನವಾಜ್ ಷರೀಫ್ & ಆಸಿಫ್ ಅಲಿ ಜರ್ದಾರಿ ಮೈತ್ರಿ ಕುರಿತು ಅಧಿಕೃತ ಘೋಷಣೆ ಮಾಡಿದ್ದಾರೆ. ಒಂದ್ಕಡೆ ಇಮ್ರಾನ್ ಕಂಬಿ ಎಣಿಸುವಾಗ ಅವರ ಬೆಂಬಲಿಗರು ಕೂಡ ಕಂಬಿ ಹಿಂದೆ ಬೀಳುತ್ತಿದ್ದು, ಈ ಘಟನೆಗಳು ಸಹಜವಾಗಿ ಪಿಟಿಐ ಪಕ್ಷದ ಒಳಗೆ ಕಿಚ್ಚು ಹೊತ್ತಿಸಿದೆ. ಪಾಕಿಸ್ತಾನದ ಚುನಾವಣೆ ಸಮಯದಲ್ಲಿ ಹಿಂಸಾಚಾರ ಕೂಡ ಭುಗಿಲೇಳುವ ಮುನ್ಸೂಚನೆ ಸಿಗುತ್ತಿದೆ.












Click it and Unblock the Notifications