ಯುದ್ಧ ನಿಲ್ಲಿಸಲು ಯಾರೂ ರೆಡಿ ಇಲ್ಲ: ಹಾಗಾದರೆ ಜನರ ಪರಿಸ್ಥಿತಿ?
ಈ ಯುದ್ಧ ಅನ್ನೋದನ್ನ ಮನುಷ್ಯ ಯಾವಾಗ ಕಂಡು ಹಿಡಿದನೋ ಗೊತ್ತಿಲ್ಲ, ಈವರೆಗೆ ಇಡೀ ಜಗತ್ತಿನಲ್ಲಿ ಅತಿಹೆಚ್ಚು ಜನರು ಬಲಿಯಾಗಿದ್ದು ಇದೇ ಯುದ್ಧದ ಕಾರಣಕ್ಕೆ. ಹಂಗೆ ನೋಡಿದರೆ, ಈವರೆಗೂ ಭೂಮಿ ಮೇಲೆ ಪ್ರಳಯ ಆದಾಗಲೂ ಇಷ್ಟು ಜನರು ಮೃತಪಟ್ಟಿಲ್ಲ. ಅಷ್ಟು ಜನರು ಬರೀ ಮನುಷ್ಯನ ಯುದ್ಧ ದಾಹಕ್ಕೆ ಬಲಿಯಾಗಿದ್ದಾರೆ. ಅದ್ರಲ್ಲೂ ಹಮಾಸ್ & ಇಸ್ರೇಲ್ ಮಧ್ಯೆ ಕೊತ ಕೊತ ಕುದಿಯುತ್ತಿರುವ ಯುದ್ಧದ ಬೆಂಕಿ ಇದೀಗ 3ನೇ ಮಹಾಯುದ್ಧದ ಭೀತಿ ಸೃಷ್ಟಿಸಿದೆ. ಈ ಭಯದ ನಡುವೆ ಹಮಾಸ್ ಮಹತ್ವದ ಹೇಳಿಕೆ ನೀಡಿದೆ.
ಮಧ್ಯಪ್ರಾಚ್ಯ ಈಗ ಬೆಂಕಿಯಲ್ಲಿ ಬಿದ್ದ ಹಪ್ಪಳವಾಗಿ ಹೋಗಿದೆ. ಅಲ್ಲಿನ ಜನರಿಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ, ಯಾವ ಸಮಯದಲ್ಲಿ ಏನಾಗುತ್ತೆ? ಅನ್ನೋದು ಕೂಡ ಗೊತ್ತಿಲ್ಲ. ಹೀಗಿದ್ದಾಗ ಸದ್ಯ ಮಹತ್ವದ ಹೇಳಿಕೆ ನೀಡಿರುವ ಹಮಾಸ್, ಇಸ್ರೇಲ್ ವಿರುದ್ಧದ ಯುದ್ಧದ ಬಗ್ಗೆ ತನ್ನ ನಿಲುವನ್ನು ತಿಳಿಸಿದೆ. ಹಾಗಾದರೆ ಹಮಾಸ್ ಈಗ ಇಸ್ರೇಲ್ ಜೊತೆಗೆ ರಾಜಿ ಮಾಡಿಕೊಳ್ಳುತ್ತಾ? ಗಾಜಾಪಟ್ಟಿಯ ಭಾಗದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿ ನಿಂತು ಹೋಗುತ್ತಾ? ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.

ಯುದ್ಧ ನಿಲ್ಲುತ್ತಾ? ಯುದ್ಧ ನಿಲ್ಲೋದಿಲ್ವಾ?
ತಕ್ಷಣ ಯುದ್ಧ ನಿಲ್ಲಿಸುವುದು & ಗಾಜಾದಿಂದ ಸಂಪೂರ್ಣ ಸೇನೆ ವಾಪಸ್ ಪಡೆಯುವುದು ಸೇರಿದಂತೆ ತನ್ನ ಬೇಡಿಕೆಗಳ ಬಗ್ಗೆ ಇಸ್ರೇಲ್ ನಿರ್ಲಕ್ಷ್ಯ ವಹಿಸಿದೆ ಅಂತಾ ಈಗ ಹಮಾಸ್ ಆಕ್ರೋಶ ಹೊರಹಾಕಿ, ಕದನ ವಿರಾಮಕ್ಕೆ ನಾವು ಒಪ್ಪುವುದಿಲ್ಲ ಎಂದಿದೆ. ಈ ಮೂಲಕ ಗಾಜಾಪಟ್ಟಿಯಲ್ಲಿ ಸದ್ಯಕ್ಕೆ ಈಗ ಯುದ್ಧ & ರಕ್ತಪಾತ ನಿಲ್ಲುವುದಿಲ್ಲ ಎನ್ನುವುದು ಪಕ್ಕಾ ಆಗಿದೆ. ಅಲ್ಲದೆ ಸ್ಥಳೀಯರಲ್ಲಿ ಹೀಗಾಗಿ ಭಯ ಕೂಡ ಹೆಚ್ಚಾಗಿದೆ. 2023ರ ಅಕ್ಟೋಬರ್ ತಿಂಗಳಿಂದಲೂ ಹಮಾಸ್ & ಇಸ್ರೇಲ್ ಯುದ್ಧ ನಡೆಸುತ್ತಿವೆ. ಆದರೆ ಯುದ್ಧ ಈಗ ನಿಲ್ಲುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದ ಜನರಿಗೆ ನಿರಾಸೆಯೇ ಎದುರಾಗಿದೆ.
32,000ಕ್ಕೂ ಹೆಚ್ಚು ಜನ ಜೀವ...
ಮತ್ತೊಂದು ಕಡೆ ಈ ಘೋರ ಯುದ್ಧ ಆರಂಭವಾಗಿ ಇನ್ನೇನು 6 ತಿಂಗಳು ತುಂಬಲಿದೆ. ಹೀಗಾಗಿ 6 ತಿಂಗಳು ತುಂಬುವ ಮೊದಲು ಹಮಾಸ್ & ಇಸ್ರೇಲ್ ಯುದ್ಧ ನಿಲ್ಲಬಹುದು ಎಂಬ ನೀರಿಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಆದ್ರೆ ಅದು ಕೂಡ ಈಗ ಹುಸಿಯಾಗಿ ಹೋಗಿದೆ. ಇನ್ನು ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ಶುರುವಾದ ನಂತರ ಗಾಜಾ ಪಟ್ಟಿಯಲ್ಲಿ 32,000ಕ್ಕೂ ಹೆಚ್ಚು ಜನ ಜೀವ ಬಿಟ್ಟು 74,000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಮತ್ತೊಂದು ಆತಂಕದ ಸಂಗತಿಯೆಂದರೆ, ಹೀಗೆ ಮೃತಪಟ್ಟ 32,000ಕ್ಕೂ ಹೆಚ್ಚು ಜನರಲ್ಲಿ ಮಕ್ಕಳು & ಮಹಿಳೆಯರೇ ಹೆಚ್ಚಾಗಿದ್ದಾರೆ.
ಒಟ್ನಲ್ಲಿ ಯುದ್ಧ ನಿಲ್ಲಬೇಕು, ಯುದ್ಧ ಮಾಡಿದರೆ ಮನುಷ್ಯನ ಹೊಟ್ಟೆ ತುಂಬುತ್ತಾ..? ಅನ್ನೋ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ. ಹೀಗಾಗಿಯೇ ವಿಶ್ವಸಂಸ್ಥೆ ಕೂಡ ಈ ಯುದ್ಧ ನಿಲ್ಲಿಸೋದಕ್ಕೆ ಸಾಕಷ್ಟು ಪ್ರಯತ್ನ ಮಾಡಿದೆ. ಹೀಗಿದ್ರೂ ಅದ್ಯಾವುದೂ ವರ್ಕೌಟ್ ಆಗುತ್ತಿಲ್ಲ. ಹೀಗಾಗಿ ಮುಂದೆ ಏನಾಗುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications