ನೋ ಕನ್ಫ್ಯೂಷನ್.. ಓನ್ಲಿ ಕನ್‌ಕ್ಲೂಷನ್.. ಪಾಕಿಸ್ತಾನ ಚುನಾವಣೆಗೆ ಮುಹೂರ್ತ ಫೈನಲ್!
ಪಾಕಿಸ್ತಾನದ ರಾಜಕೀಯ ಬದಲಾಗಲ್ಲ, ಅಲ್ಲಿನ ಪರಿಸ್ಥಿತಿ ಹಿಂಗೆ ಇರುತ್ತೆ ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ. ಅಲ್ಲಿ ಚುನಾವಣೆ ಸಮಯ ಹತ್ತಿರ ಬರ್ತಿದ್ದಂತೆ ಭಾರಿ ಕುತೂಹಲವು ಸೃಷ್ಟಿ ಆಗುತ್ತಿದೆ. ಚುನಾವಣಾ ಆಯೋಗದ ಕ್ರಮದ ವಿರುದ್ಧ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಪರಿಣಾಮ ಚುನಾವಣೆ ಮುಂದೂಡಿಕೆ ಆಗುವ ನಿರೀಕ್ಷೆ ಇತ್ತು. ಇದೀಗ ಪಾಕಿಸ್ತಾನ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡಿದ ಪರಿಣಾಮ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ.
ಯೆಸ್ ಲಾಹೋರ್ ನ್ಯಾಯಾಲಯದ ಆದೇಶವನ್ನ ಪಾಕ್ ಸುಪ್ರೀಂ ಕೋರ್ಟ್ ರದ್ದು ಪಡಿಸಿದೆ. ಈ ಹಿನ್ನೆಲೆ ಪಾಕಿಸ್ತಾನದ ಚುನಾವಣಾ ಆಯೋಗ ಈಗ, ಸಾರ್ವತ್ರಿಕ ಚುನಾವಣೆಗೆ ವೇಳಾಪಟ್ಟಿ ಪ್ರಕಟ ಮಾಡಿದೆ. ಚುನಾವಣೆ ಮೇಲ್ವಿಚಾರಣೆಗಾಗಿ, ಚುನಾವಣಾ ಆಯೋಗಕ್ಕೆ ಸರ್ಕಾರದಿಂದ ಅಧಿಕಾರಿಗಳ ನೇಮಕ ಮಾಡಲು ತಡೆ ನೀಡುವ ತೀರ್ಪನ್ನ ಲಾಹೋರ್ ಹೈಕೋರ್ಟ್ ನೀಡಿತ್ತು. ಇದರ ಪರಿಣಾಮ ಪಾಕಿಸ್ತಾನದ ಚುನಾವಣಾ ಪ್ರಕ್ರಿಯೆ ವಿಳಂಬವಾಗಲಿದೆ ಅಂತಾ ಪರಿಗಣಿಸಿ, ಪಾಕಿಸ್ತಾನ ಸುಪ್ರೀಂ ಕೋರ್ಟ್ ಕುತೂಹಲಕಾರಿ ತೀರ್ಪು ನೀಡಿದೆ.

ಯಾವಾಗ ನಡೆಯುತ್ತೆ ಪಾಕ್ ಎಲೆಕ್ಷನ್?
ಪಾಕಿಸ್ತಾನದಲ್ಲಿ ಸರ್ಕಾರದ ಅವಧಿ ಮುಗಿದಿದ್ದು, ಇದೀಗ ಹಂಗಾಮಿ ಸರ್ಕಾರ ಆಡಳಿತವನ್ನು ನೋಡಿಕೊಳ್ಳುತ್ತಿದೆ. ಹೀಗಾಗಿ ಹೊಸ ಸರ್ಕಾರದ ಆಯ್ಕೆಗೆ 2024ರ ಫೆಬ್ರುವರಿ 8 ಕ್ಕೆ ಸಾರ್ವತ್ರಿಕ ಚುನಾವಣೆ ನಡೆಸುವ ಬಗ್ಗೆ ಕಳೆದ ತಿಂಗಳಷ್ಟೇ, ಪಾಕಿಸ್ತಾನ ಚುನಾವಣೆ ಆಯೋಗ ಪಾಕಿಸ್ತಾನ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿತ್ತು. ಆದರೆ ಹೈಕೋರ್ಟ್ ಮಧ್ಯಪ್ರವೇಶ ಹಿನ್ನೆಲೆಯಲ್ಲಿ ಮತ್ತೆ ಗೊಂದಲ ಏರ್ಪಟ್ಟಿತ್ತು. ಹೀಗಿದ್ದಾಗ ಮತ್ತೊಮ್ಮೆ ಪಾಕ್ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡಿ ಚುನಾವಣೆ ನಡೆಯಲು ಬೇಕಾದ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದೆ.
ಹೀಗಾಗಿ ಪಾಕ್ ಚುನಾವಣಾ ಆಯೋಗ ಬಿಡುಗಡೆ ಮಾಡಿದ ವೇಳಾಪಟ್ಟಿ ಪ್ರಕಾರ, ಡಿಸೆಂಬರ್ 20 ರಿಂದ 22ರ ವರೆಗೂ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಬಹುದು. ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಹೆಸರು ಡಿಸೆಂಬರ್ 23 ಕ್ಕೆ ಪ್ರಕಟಿಸಲಾಗುತ್ತದೆ. ಡಿಸೆಂಬರ್ 24 ರಿಂದ 30 ರವರೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಹಾಗೇ ಅಕಸ್ಮಾತ್ ನಾಮಪತ್ರ ತಿರಸ್ಕೃತ ಆಗಿರುವ ಬಗ್ಗೆ ಮೇಲ್ಮನವಿ ಸಲ್ಲಿಸಲು ಇಷ್ಟವಿದ್ದರೆ, 2024ರ ಜನವರಿ 3 ರೊಳಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ಪಾಕಿಸ್ತಾನದ ನ್ಯಾಯ ಮಂಡಳಿ, ಈ ಬಗ್ಗೆ ಜನವರಿ 10 ರ ಒಳಗೆ ತೀರ್ಮಾನ ಕೈಗೊಳ್ಳಲಿದೆ.
ವೋಟಿಂಗ್ ನಡೆಯುವ ದಿನಾಂಕ ಇಲ್ಲಿದೆ
ಇಷ್ಟೆಲ್ಲದರ ಮಧ್ಯೆ 2024ರ ಜನವರಿ 11ಕ್ಕೆ ಅಭ್ಯರ್ಥಿಗಳ ಪರಿಷ್ಕೃತ ಪಟ್ಟಿ ಪ್ರಕಟಿಸಲಾಗುತ್ತೆ. ಹಾಗೆಯೇ ನಾಮಪತ್ರ ವಾಪಸ್ ಪಡೆಯಲು ಜನವರಿ 12 ಕೊನೆಯ ದಿನವಾಗಲಿದೆ. ರಾಜಕೀಯ ಪಕ್ಷಗಳಿಗೆ ಜನವರಿ 13 ರಂದು ಚುನಾವಣಾ ಚಿಹ್ನೆ ನಿಗದಿ ಪಡಿಸಲಾಗುತ್ತದೆ. ಫೆಬ್ರುವರಿ 8 ಕ್ಕೆ ಪಾಕಿಸ್ತಾನದಲ್ಲಿ ಮತದಾನ ನಡೆಯುತ್ತೆ ಅಂತ ಚುನಾವಣೆ ಆಯೋಗ ಮಾಹಿತಿ ನೀಡಿದೆ. ಈ ಮೂಲಕ ಕಗ್ಗಂಟಾಗಿರುವ ಪಾಕಿಸ್ತಾನ ಚುನಾವಣೆ ಒಂದು ಹಂತಕ್ಕೆ ಬಂದು ನಿಂತಿದ್ದು, ಈ ಮಧ್ಯೆ ರಾಜಕೀಯ ಪಕ್ಷಗಳು & ರಾಜಕಾರಣಿಗಳು ಚುನಾವಣೆ ಗೆಲ್ಲಲು ಅಲರ್ಟ್ ಆಗಿದ್ದಾರೆ.

ಮಾಜಿ ಪ್ರಧಾನಿಗಳ ಕಾಳಗ ಶುರು!
ಭಯೋತ್ಪಾದಕರ ತವರು ಎಂಬ ಕುಖ್ಯಾತಿ ಪಡೆದ ಪಾಕ್, ಇದೀಗ ತನ್ನ ಸಂಸತ್ ಚುನಾವಣೆಗೆ ಅಂತಿಮ ಸಿದ್ಧತೆ ನಡೆಸಿದೆ. ಈಗಾಗಲೇ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲು ಸೇರಿದ ವೇಳೆಗೆ ಮತ್ತೊಬ್ಬ ಮಾಜಿ ಪಿಎಂ ನವಾಜ್ ಷರೀಫ್ ಪಾಕಿಸ್ತಾನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗೆ ನವಾಜ್ ತವರಿಗೆ ಮರಳಿದ ಕೆಲವು ದಿನದಲ್ಲಿ ಪಾಕಿಸ್ತಾನ ಸಂಸತ್ ಚುನಾವಣೆ ಬಗ್ಗೆ ಮಹತ್ವದ ಘೋಷಣೆ ಮೊಳಗಿದೆ. 2024ರ ಫೆಬ್ರುವರಿ 8 ಕ್ಕೆ ಮತದಾನ ನಡೆಯಲಿದೆ ಅಂತಾ, ಪಾಕಿಸ್ತಾನ ಚುನಾವಣೆ ಆಯೋಗ ಖಚಿತಪಡಿಸಿದೆ.












Click it and Unblock the Notifications